ADVERTISEMENT

ಅರ್ಹರಿಗೆ ಸಿಗದ ಸರ್ಕಾರದ ಸೂರು

ಉಳ್ಳವರ ಪಾಲಾದ ಬಸವ, ಅಂಬೇಡ್ಕರ್ ಆವಾಸ್‌ ಯೋಜನೆಗಳು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 9:03 IST
Last Updated 22 ಮಾರ್ಚ್ 2018, 9:03 IST
ಅರ್ಹರಿಗೆ ಸಿಗದ ಸರ್ಕಾರದ ಸೂರು
ಅರ್ಹರಿಗೆ ಸಿಗದ ಸರ್ಕಾರದ ಸೂರು   

ಯಾದಗಿರಿ: ‘ಒಂದ್ ಮನಿ ಕೊಡ್ರಪಾ ಅಂತ ಗ್ರಾಮ ಪಂಚಾಯಿತಿಗೆ ಓಡಾಡಿ ಸಾಕುಬೇಕಾತ್ರಿ. ಊರಾಗಿನ ಮೆಂಬರ್‌ ಮಂದಿಗೂ ಬೇಡ್ಕಂಡ್ರೂ ಒಂದ್ ಮನಿ ಹಾಕ್ಕೊಡ್ಲಿಲ್ಲ. ಮನೆ ಇದ್ದೋರಿಗೆ ಮನಿ ಕೊಟ್ಟಾರ್‌ ನೋಡ್ರಿ..’

ಯಾದಗಿರಿ ತಾಲ್ಲೂಕಿನ ವರ್ಕನ ಹಳ್ಳಿಯಲ್ಲಿ ಈಗಲೋ ಆಗಲೋ ಕುಸಿ ಯುವಂತಿರುವ ಶಿಥಿಲ ಮನೆಯಲ್ಲಿ ಕುಳಿತ ಮರಿಲಿಂಗಮ್ಮ ಸರ್ಕಾರದ ಸೂರಿ ಗಾಗಿ ಪಟ್ಟ ಪಾಡನ್ನು ವಿವರಿಸಿದ್ದು ಹೀಗೆ.

ಗುಡಿಸಲು ಮುಕ್ತ ರಾಜ್ಯ ನಿರ್ಮಾಣ ಉದ್ದೇಶ ಹೊಂದಿರುವ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಸವ, ಅಂಬೇಡ್ಕರ್ ಆವಾಸ್‌ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆದರೆ, ಸರ್ಕಾರದ ಸೂರು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬ ಆರೋಪ ವರ್ಕನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿದೆ.

ADVERTISEMENT

ವರ್ಕನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಪ್ರಸಕ್ತ ವರ್ಷದಲ್ಲಿ ಅಂಬೇ ಡ್ಕರ್ ಯೋಜನೆಯಡಿ 300 ಹಾಗೂ ಬಸವ ಯೋಜನೆಯಡಿ 35 ಮನೆ ಗಳನ್ನು ಸರ್ಕಾರ ಮಂಜೂರು ಮಾಡಿದೆ. ಎರಡೂ ಯೋಜನೆಗಳಡಿ ಫಲಾನುಭವಿ ಗಳನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಆದರೆ, ಗ್ರಾಮ ಸಭೆಗಳಲ್ಲಿ ನಡೆಯುವ ಆಯ್ಕೆ ಪಾರ ದರ್ಶಕವಾಗಿಲ್ಲ ಎಂಬುದಾಗಿ ಸರ್ಕಾರದ ಸೂರು ವಂಚಿತರು ದೂರುತ್ತಾರೆ.

‘ಬಸವ ಯೋಜನೆಯಡಿ ಆಯ್ಕೆಯಾದ ಫಲಾನುಭವಿ 20X30 ಅಳತೆಯ ನಿವೇಶನದಲ್ಲಿ ಮನೆ ಕಟ್ಟಬೇಕಾಗುತ್ತದೆ. ಪರಿಶಿಷ್ಟ ಸಮುದಾಯದ ಫಲಾನುಭವಿಯಾಗಿ ದ್ದರೆ ₹1.68 ಲಕ್ಷ ಸಹಾಯಧನ ಒಗಿಸಲಾಗುತ್ತದೆ. ಸಾಮಾನ್ಯ ವರ್ಗದ ಫಲಾನುಭವಿಯಾಗಿದ್ದರೆ ₹1.31 ಲಕ್ಷ ಸಹಾಯಧನ ನೀಡಲಾಗುತ್ತದೆ. ಒಟ್ಟು ನಾಲ್ಕು ಕಂತುಗಳಲ್ಲಿ ಫಲಾನುಭಗಳಿಗೆ ಹಣ ಒದಗಿಸಲಾಗುತ್ತದೆ. ಆದರೆ, ಗ್ರಾಮ ಪಂಚಾಯಿತಿಗಳಲ್ಲಿ ಪಾರದರ್ಶ ಕತೆ ಇಲ್ಲದೇ ಇರುವುದರಿಂದ ಸರ್ಕಾರದ ಸೂರು ಉಳ್ಳವರ ಪಾಲಾಗು ತ್ತಿದೆ’ ಎಂಬುದಾಗಿ ಮರಿಲಿಂಗಮ್ಮ ಅಸಮಾಧಾನ ಹೊರ ಹಾಕುತ್ತಾರೆ.

ಲಂಚ ನೀಡಿದವರಿಗೆ ಸೂರು: ‘ಗ್ರಾಮ ಸಭೆಗೂ ಮುಂಚಿತವಾಗಿಯೇ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಲಂಚ ನೀಡಿದರೆ ಸಾಕು ಎಷ್ಟು ಬಾರಿ ಬೇಕಾದರೂ ಸೂರು ಮಂಜೂರು ಮಾಡುತ್ತಾರೆ. ಗ್ರಾಮಸಭೆ ನೋಡಲ್‌ ಅಧಿಕಾರಿಯ ಸಮ್ಮುಖದಲ್ಲಿ ನಡೆದರೂ ಲಂಚ ನೀಡಿದವರಿಗೆ ಆಯ್ಕೆ ಪಟ್ಟಿಯಲ್ಲಿ ಸ್ಥಾನ ನೀಡಲಾಗುತ್ತದೆ. ಉದ್ಯೋಗ ಖಾತ್ರಿಯಲ್ಲಿ ಇದೇ ತೆರನಾದ ಅಕ್ರಮಗಳು ನಡೆದಿವೆ. ಸೂಕ್ತ ತನಿಖೆ ಕೈಗೊಂಡರೆ ಅಕ್ರಮಗಳು ಬಯಲಿಗೆ ಬರಲಿವೆ’ ಎಂಬುದಾಗಿ ಗ್ರಾಮ ಪಂಚಾಯಿತಿಯ ಹೆಸರು ಹೇಳಲು ಇಚ್ಛಿಸದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅರ್ಹರು ಅರ್ಜಿ ಸಲ್ಲಿಸಲಿ: ಪಿಡಿಒ
‘ಸೂರಿಗಾಗಿ ಅರ್ಜಿ ಸಲ್ಲಿಸಿದ ನಂತರ ಗ್ರಾಮ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಂಚ ಆರೋಪ ಸತ್ಯಕ್ಕೆ ದೂರವಾದುದು. ಸೂರು ಸಿಗದ ಮರಿಲಿಂಗಮ್ಮ ಸೂರು ಬೇಡಿಕೆ ಅರ್ಜಿ ಸಲ್ಲಿಸಿದರೆ ಗ್ರಾಮ ಸಭೆಯಲ್ಲಿ ಪರಿಶೀಲಿಸಲಾಗುವುದು. ಅವರು ಅರ್ಜಿ ಸಲ್ಲಿಸದೇ ಇರುವುದರಿಂದ ಮನೆ ಸಿಕ್ಕಿರಲಿಕ್ಕಿಲ್ಲ’ ಎಂದು ವರ್ಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ತಿಳಿಸಿದರು.

**

14 ವರ್ಷಗಳಿಂದ ಸೂರಿಗಾಗಿ ಗ್ರಾಮ ಪಂಚಾಯಿತಿಗೆ ಅಲೆಯುತ್ತಿದ್ದೇನೆ. ಓದು ಬರಹ ಇಲ್ಲದ ನಮಗೆ ಏನಾದರೂ ಒಂದು ಸಬೂಬು ಹೇಳಿ ಕಳುಹಿಸುತ್ತಾರೆ.
- ಮರಿಲಿಂಗಮ್ಮ, ಸೂರು ವಂಚಿತ ಮಹಿಳೆ, ವರ್ಕನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.