ADVERTISEMENT

ಆಸ್ಪತ್ರೆ–ಜೆಸ್ಕಾಂ ಮಧ್ಯೆ ನಲುಗಿದ ರೋಗಿ

ಕದ ಮುಚ್ಚಿರುವ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಘಟಕ

ಮಲ್ಲೇಶ್ ನಾಯಕನಹಟ್ಟಿ
Published 16 ಜನವರಿ 2017, 6:58 IST
Last Updated 16 ಜನವರಿ 2017, 6:58 IST
ಆಸ್ಪತ್ರೆ–ಜೆಸ್ಕಾಂ ಮಧ್ಯೆ ನಲುಗಿದ ರೋಗಿ
ಆಸ್ಪತ್ರೆ–ಜೆಸ್ಕಾಂ ಮಧ್ಯೆ ನಲುಗಿದ ರೋಗಿ   

ಯಾದಗಿರಿ: ಜಿಲ್ಲಾ ಆಸ್ಪತ್ರೆಯಲ್ಲಿನ ಡಯಾಲಿಸಿಸ್‌ ಘಟಕ ಕದಮುಚ್ಚಿ ಮೂರು ತಿಂಗಳಾಗಿದೆ. ಇದರಿಂದ ಗ್ರಾಮೀಣ ಭಾಗದ ರೋಗಿಗಳು ಚಿಕಿತ್ಸೆಗಾಗಿ ದೂರದ ಕಲಬುರ್ಗಿಯನ್ನೇ ಆಶ್ರಯಿಸುವಂತಾಗಿದೆ.

ವಾರ ಇಲ್ಲವೇ ಎರಡು ವಾರಗಳಿಗೊಮ್ಮೆ ಡಯಾಲಿಸಿಸ್‌ ಚಿಕಿತ್ಸೆ ಪಡೆಯುವ ರೋಗಿಗಳು ಜಿಲ್ಲೆಯಲ್ಲಿ ನೂರಾರು ಮಂದಿ ಇದ್ದಾರೆ. ಡಯಾಲಿಸಿಸ್‌ ಮಾಡಿಸದಿದ್ದರೆ ಪ್ರಾಣಕ್ಕೆ ಕಂಟಕವಾಗುವ ಸಂಭವ ಇರುವ ಗಂಭೀರ ಪರಿಸ್ಥಿತಿಯಲ್ಲಿನ ರೋಗಿಗಳೂ ಸಹ ಇದ್ದಾರೆ. ಅಂತಹ ರೋಗಿಗಳಿಗೆ ಘಟಕ ಕದಮುಚ್ಚಿರುವುದು ದಿಕ್ಕುತೋಚದಂತಾಗಿದೆ ಎನ್ನುತ್ತಾರೆ ಸುರಪುರ ತಾಲ್ಲೂಕಿನ ರೋಗಿಯ ಸಂಬಂಧಿ ವೆಂಕಟೇಶ್.

‘ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಮಾಡಿಸಬೇಕೆಂದರೆ ಒಬ್ಬ ರೋಗಿಗೆ ಕನಿಷ್ಠ ₹2,000 ವೆಚ್ಚ ತಗುಲುತ್ತದೆ. ಅದರ ಜತೆಗೆ ಮಾತ್ರೆ ₹1,000 ವೆಚ್ಚ ಒಟ್ಟಾರೆ ₹ 3ರಿಂದ 4 ಸಾವಿರ ವೆಚ್ಚ ತಗುತ್ತದೆ’ ಎನ್ನುತ್ತಾರೆ ವೆಂಕಟೇಶ್.

‘ಕಲಬುರ್ಗಿಯ ಸರ್ಕಾರಿ ಆಸ್ಪತ್ರೆಗೆ ಹೋದರೂ ಅಲ್ಲಿ ಬಹಳ ಮಂದಿ ರೋಗಿಗಳಿರುತ್ತಾರೆ. ಅಲ್ಲದೇ ದಿನಕ್ಕೆ ಕನಿಷ್ಠ 10ರಿಂದ 15 ಮಂದಿಗಷ್ಟೇ ಚಿಕಿತ್ಸೆ ನೀಡಲಾಗುತ್ತದೆ. ನಮ್ಮ ಸರದಿ ಬರಲಿಲ್ಲ ಅಂದ್ರೆ ಮರುದಿನದವರೆಗೆ ಕಾಯುವಂತಹ ಪರಿಸ್ಥಿತಿ ಇರುತ್ತದೆ. ಹಾಗಾಗಿ, ರೋಗಿಯ ಜತೆಗೆ ನಾವು ಕೂಡ ಇರಬೇಕಾಗುತ್ತದೆ. ನಮ್ಮ ಖರ್ಚು ಸಹ ಇರುತ್ತದೆ’ ಎನ್ನುತ್ತಾರೆ ಅವರು.

‘ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಚಿಕಿತ್ಸೆ ಕನಿಷ್ಠ ₹ 300 ತಗುಲುತ್ತದೆ. ಬಿಪಿಎಲ್‌ ಇದ್ದರೆ ಅದಲ್ಲೂ ರಿಯಾಯ್ತಿ ಇರುತ್ತದೆ. ಅಲ್ಲದೇ ವಾಪಸ್‌ ಊರು ಸೇರಿಕೊಳ್ಳಬಹುದು. ಆದರೆ. ಮೂರು ತಿಂಗಳಿಂದ ಇಲ್ಲಿನ ಡಯಾಲಿಸಿಸ್ ಘಟಕ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ದೂರಿದರು.

‘ಡಯಾಲಿಸಿಸ್‌ ಚಿಕಿತ್ಸೆ ನೀಡುವ ಯಾವುದೇ ಯಂತ್ರೋಪಕರಣಗಳು ಹಾಳಾಗಿಲ್ಲ. ಆದರೆ, ಘಟಕಕ್ಕೆ ವಿದ್ಯುತ್‌ ಪೂರೈಕೆ ಇಲ್ಲದ ಕಾರಣ ಸ್ಥಗಿತಗೊಂಡಿದೆ. ಕಲಬುರ್ಗಿಯಿಂದ ವಿದ್ಯುತ್‌ ಪರಿವರ್ತಕ ತರಿಸಿ ನಾಲ್ಕು ತಿಂಗಳು ಕಳೆದಿದೆ. ಪರಿವರ್ತಕ ಅಳವಡಿಸಿಕೊಡುವಂತೆ ಜೆಸ್ಕಾಂನ ಎಇಇ ಅವರಿಗೆ ಮನವಿ ಮಾಡಿದ್ದರೂ ಅವರು ನಿರ್ಲಕ್ಷಿಸಿದ್ದಾರೆ’ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಪಾಟೀಲ್‌ ಹೇಳುತ್ತಾರೆ.

ಮೊದಲು ಕೇಬಲ್‌ ಅಳವಡಿಸಲಿ: ‘ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯ 200 ಕಿಲೋವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ ಇದೆ. ಜಿಲ್ಲಾ ಆಸ್ಪತ್ರೆಗೆ ಅಷ್ಟು ಸಾಕು ಅನಿಸುತ್ತದೆ. ಆದರೆ, ಅವರು 350 ಕಿಲೊವ್ಯಾಟ್‌ ಸಾಮರ್ಥ್ಯದ ಪರಿವರ್ತಕ ತರಿಸಿದ್ದಾರೆ. ಅದನ್ನು ಅಳವಡಿಸಬೇಕು ಎಂದರೆ ಇಡೀ ಆಸ್ಪತ್ರೆಯಲ್ಲಿನ ಕೇಬಲ್‌ಗಳನ್ನು ಬದಲಾಯಿಸಬೇಕು. ಅದನ್ನು ಮೊದಲು ಮಾಡಿ ನಂತರ ಜೆಸ್ಕಾಂನಿಂದ ಪರವಾನಗಿ ಪಡೆದುಕೊಳ್ಳಬೇಕು.

ಯಾವುದೇ ಪೂರ್ವಸಿದ್ಧತೆ ಇಲ್ಲದೇ ನೇರಾನೇರ ಹೆಚ್ಚು ಸಾಮರ್ಥ್ಯದ ಪರಿವರ್ತಕ ಅಳವಡಿಸಲು ಸಾಧ್ಯ ಇಲ್ಲ. ಅಷ್ಟಕ್ಕೂ ಅದು ಎಚ್‌ಪಿ ಸಾಮರ್ಥ್ಯದ ಪರಿವರ್ತಕ ನಮ್ಮ ಇಲಾಖೆ ವ್ಯಾಪ್ತಿಗೆ ಒಳಪಡಲ್ಲ. ಅದನ್ನು ಖರೀದಿಸಿದ ಗ್ರಾಹಕನೇ ಅಥವಾ ವಿತರಿಸಿದ ಗುತ್ತಿಗೆದಾರ ಪರಿವರ್ತಕ ಅಳವಡಿಸಿಕೊಡಬೇಕು. ನಮ್ಮದೇನಿದ್ದರೂ ಪರಿವರ್ತಕಕ್ಕೆ ವಿದ್ಯುತ್‌ ಪೂರೈಕೆ ಮಾರ್ಗ ಸಂಪರ್ಕ ಕಲ್ಪಿಸುವುದಷ್ಟೇ ಕೆಲಸ’ ಎನ್ನುತ್ತಾರೆ ಜೆಸ್ಕಾಂ ಯಾದಗಿರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಘವೇಂದ್ರ. ಒಟ್ಟಾರೆ ಆಸ್ಪತ್ರೆ ಆಡಳಿತ ವ್ಯವಸ್ಥೆ ಹಾಗೂ ಜೆಸ್ಕಾಂ ಇಲಾಖೆ ಮಧ್ಯೆ ರೋಗಿಗಳು ನಲುಗುವಂತಾಗಿದೆ

*
ಜಿಲ್ಲಾ ಆಸ್ಪತ್ರೆ ಇದ್ದರೂ ಜನರಿಗೆ ಉಪಯೋಗ ಆಗುತ್ತಿಲ್ಲ. ಜಿಲ್ಲಾಧಿಕಾರಿ ಕನಿಷ್ಠ ಆಸ್ಪತ್ರೆಯತ್ತ ಒಮ್ಮೆ ತಿರುಗಿ ನೋಡಿದರೆ ಜನರು ಅನುಭವಿಸುತ್ತಿರುವ ನೋವು ಎಂಥದ್ದು ಎಂಬುದು ಗೊತ್ತಾಗುತ್ತದೆ.
-ರವಿ, ಡಯಾಲಿಸಿಸ್ ರೋಗಿ, ಸುರಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.