ADVERTISEMENT

ಒಂದೂವರೆ ಲಕ್ಷಕ್ಕೆ ಜತೆ ಎತ್ತು ಮಾರಾಟ!

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:09 IST
Last Updated 19 ಜನವರಿ 2017, 5:09 IST
ಒಂದೂವರೆ ಲಕ್ಷಕ್ಕೆ ಜತೆ ಎತ್ತು ಮಾರಾಟ!
ಒಂದೂವರೆ ಲಕ್ಷಕ್ಕೆ ಜತೆ ಎತ್ತು ಮಾರಾಟ!   

ಕಕ್ಕೇರಾ: ಸುರಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಸೌರಾಷ್ಟ್ರ ಅಧಿಪತಿ ಸೋಮನಾಥ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಜ.17 ರಿಂದ ಜಾನುವಾರಗಳ ಜಾತ್ರೆ ಆರಂಭವಾಗಿದೆ.

ಆಕಳುಗಳು ಸೇರಿದಂತೆ ಕಿಲಾರಿ, ಜವಾರಿ, ದೊಡ್ಡ ಪಡಿ, ಕಂಬಿರಪಡಿ, ಮಾಳಿಪಡಿ, ಮೈಸೂರು ಕಿಲಾರಿ, ಡೆವಣಿ ಹೀಗೆ ವಿವಿಧ ತಳಿಗಳ ಎತ್ತುಗಳು ಇಲ್ಲಿ ಮಾರಾಟವಾಗುತ್ತಿವೆ.

ಒಂದೊಂದು ಎತ್ತಿನ ಬೆಲೆ ಸುಮಾರು ₹ 80,000 ಸಾವಿರ ಇದೆ. ಎರಡು ಹಲ್ಲುಗಳುಳ್ಳ ಕಿಲಾರಿ ಎತ್ತು ಸುಮಾರು ₹1 ಲಕ್ಷಕ್ಕೆ ಮಾರಾಟವಾಗುತ್ತವೆ ಎಂದು ರೈತರು ಹೇಳುತ್ತಾರೆ.

ರಾಯಚೂರ ಜಿಲ್ಲೆಯ ಕರಡಿಗುಡ್ಡ ಗ್ರಾಮದ ರೈತ ಗೊವೀಂದರಾಜ್ ನಾಯಕ, ‘12 ವರ್ಷಗಳಿಂದ ಜಾತ್ರೆಯಲ್ಲಿ ನಮ್ಮ ಹಳೆಯ ಎತ್ತುಗಳನ್ನು ಮಾರಾಟ ಮಾಡಿ, ಮತ್ತೆ ಎರಡು ಹೊಸ ಎತ್ತುಗಳನ್ನು ಲಕ್ಷ ರೂಪಾಯಿಗೆ ಖರೀದಿ ಮಾಡುತ್ತೇನೆ’ ಎಂದು ಹೇಳಿದರು.

ಸುಮಾರು 50 ಎಕರೆ ಇರುವ ಸೋಮನಾಥ ದೇವಸ್ಥಾನದ ಬಯಲಿನಲ್ಲಿ ಜಾನುವಾರಗಳ ಮಾರಾಟದ್ದೇ ಕಾರುಬಾರು. ಜಾನುವಾರು ಜಾತ್ರೆಯಲ್ಲಿ ಎತ್ತುಗಳಿಗೆ ಕಟ್ಟುವ ಕೋಡಿನ ರಿಬ್ಬನ್, ವಿವಿಧ ಕಲಾಕೃತಿಗಳ ಗೆಜ್ಜೆಗಳು, ಎತ್ತುಗಳ ಮೇಲೆ ಹಾಕುವ ವಿವಿಧ ಬಣ್ಣಗಳ ಹೊದಿಕೆಗಳು ಹಾಗೂ ಇನ್ನಿತರ ವಸ್ತುಗಳು ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತವೆ ಎನ್ನುತ್ತಾರೆ ಜಾತ್ರೆಯಲ್ಲಿ ಅಂಗಡಿ ಇಟ್ಟಿರುವ ದಾದಾ.

ಜಾತ್ರೆಯಲ್ಲಿ ಕಟ್ಟಿಗೆಯಿಂದ ನಿಸಿದ ಹೊಸ ಚಕ್ಕಡಿವೊಂದಕ್ಕೆ ₹ 40 ಸಾವಿರ ಲೆಯಿದ್ದರೆ,  ಕಬ್ಬಿಣದ ಚಕ್ಕಡಿಗಳು ₹ 26 ಸಾವಿರಕ್ಕೆ ಮಾರಾಟವಾಗುತ್ತವೆ
ಎಂದು ತಾಳೀಕೋಟಿ ಸಮೀಪದ ಗುತ್ತಿಹಾಳ ಗ್ರಾಮದ ಚಕ್ಕಡಿ ತಯಾರಕ ಹೇಳಿದರು.

ಈ ವರ್ಷ ಉತ್ತಮವಾಗಿ ಮಳೆ, ಬೆಳೆ ಆಗಿದೆ.  ಹೀಗಾಗಿ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ಬಂದಿವೆ ಎಂದು ರೈತರು ಹೇಳಿದರು.

**
–ಮಹಾಂತೇಶ ಹೊಗರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.