ADVERTISEMENT

‘ಕಲಿಯುವ ಶಿಕ್ಷಣ ಜೀವನ ಕ್ರಮವಾಗಲಿ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 8:23 IST
Last Updated 23 ಮಾರ್ಚ್ 2017, 8:23 IST

ಯಾದಗಿರಿ: ‘ಈಗಾಗಲೇ ನಾವು ಕಲಿತ ಶಿಕ್ಷಣದಲ್ಲಿನ ಜ್ಞಾನ ನಮ್ಮ ಜೀವನ ಕ್ರಮವಾಗಬೇಕು. ಅಂದಾಗ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯ’ ಎಂದು ಮುಖ್ಯಶಿಕ್ಷಕ ಶರಣಪ್ಪ ಸಜ್ಜನ್ ಅಭಿಪ್ರಾಯಪಟ್ಟರು.

ಸಮೀಪದ ಸೈದಾಪುರದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ವಿದ್ಯಾರ್ಥಿ ಗುರಿಯೊಂದಿಗೆ ಅಭ್ಯಾಸ ಮಾಡಬೇಕು. ಅಂದಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಅದಕ್ಕೆ ತಕ್ಕಂತೆ ಪ್ರಯತ್ನ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

‘ಪಠ್ಯದ ಪ್ರತಿ ವಿಷಯವು ಅತಿ ಮುಖ್ಯವಾಗಿದೆ. ಅದು ಬದುಕನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಈ ಕಾರಣ ಸರ್ಕಾರ ಉಚಿತ ಕಡ್ಡಾಯ ಶಿಕ್ಷಣಕ್ಕೆ ಮಹತ್ವ ನೀಡುತ್ತಿದೆ’ ಎಂದು ಹೇಳಿದರು.

ಶಿಕ್ಷಕ ಸಿದ್ರಾಮ್ ತೋಗಟವೀರ್ ಮಾತನಾಡಿ, ‘ಕಲಿತ ಶಾಲೆ ಹಾಗೂ ಗುರುಗಳ ಬಗ್ಗೆ ಅಭಿಮಾನ ಹೊಂದಿರಬೇಕು. 7ನೇ ತರಗತಿಯಿಂದ 8ನೇ ತರಗತಿಗೆ ಹೋಗುತ್ತಿರುವುದು ಸಂತೋಷವನ್ನುಂಟು ಮಾಡಿದೆ. ನಿಮ್ಮ ಮುಂದಿನ ಶೈಕ್ಷಣಿಕ ಕಲಿಕೆ ಉತ್ತಮವಾಗಿರಲಿ’ ಎಂದು ಹಾರೈಸಿದರು.

‘ನಯ, ವಿನಯ, ಸನ್ನಡೆತೆ ಗುಣಗಳನ್ನು ಬೆಳೆಸಿಕೊಂಡು ಜೀವನ ಸಾಗಿಸಬೇಕು. ಇದು ವ್ಯಕ್ತಿಯ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವು ನೀಡುವ ಮೌಲ್ಯಗಳಾಗಿವೆ. ಭಾರತದಂತಹ ದೇಶಕ್ಕೆ ಈ ವಿಧದ ಬೆಳವಣಿಗೆ ಅತಿ ಮುಖ್ಯ’ ಎಂದರು. ವರ್ಗಾವಣೆಗೊಂಡ ಅಥಿತಿ ಶಿಕ್ಷಕಿ ಶ್ರೀದೇವಿ ತಾಂಬೂಳ್ಕರ್ ಅವರನ್ನು ಬೀಳ್ಕೊಡಲಾಯಿತು.

ಶಿಕ್ಷಕರಾದ ಹಣಮಂತ, ಸೋಮರಡ್ಡಿ, ಶಿವಕಾಂತಮ್ಮ, ರತ್ನಕ್ಕ ಜಾಲಿಗಿಡ, ಶ್ರೀದೇವಿ ಪಡಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಮಹಿಪಾಲರಡ್ಡಿ, ಆಥಿತಿ ಶಿಕ್ಷಕಿ ಶ್ರೀದೇವಿ ತಾಂಬೂಳ್ಕರ್ ಇದ್ದರು. ಶರಣಪ್ಪ ಸ್ವಾಗತಿಸಿದರು. ಲಕ್ಷ್ಮಿರಡ್ಡಿ ನಿರೂಪಿಸಿದರು. ಅಶ್ವಿನಿ ವಂದಿಸಿದರು.  ವಿದ್ಯಾರ್ಥಿ ರೇಣುಕಾ ಸಂಗಡಿಗರ ಗಾಯನ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.