ADVERTISEMENT

ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತ ಜನರು

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:43 IST
Last Updated 17 ಮೇ 2017, 6:43 IST

ಯಾದಗಿರಿ: ‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ದುರಾಡಳಿತ ಹಾಗೂ ಪೊಳ್ಳು  ಭರವಸೆಯಿಂದ ಬೇಸತ್ತಿರುವ ರಾಜ್ಯದ ಜನರು ಬದಲಾವಣೆ ಬಯಸುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು. ‘ಬಿಜೆಪಿ ಶಿಸ್ತಿಗೆ ಹೆಸರಾಗಿದೆ. ಇದರಿಂದಾಗಿ ರಾಜ್ಯದ ಎಲ್ಲೆಡೆ ಬೆಳೆದು ನಿಂತಿದೆ. ಉತ್ತಮ ನಾಯಕತ್ವದಿಂದ ಮುನ್ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಅಮಿತ್ ಷಾ ಅವರ ನೇತೃತ್ವದಲ್ಲಿ ಬಲಿಷ್ಠ ಸಂಘಟನೆ ಹೊಂದಿದ ರಾಷ್ಟ್ರೀಯ ಪಕ್ಷವಾಗಿದೆ’ ಎಂದರು.

‘ಪ್ರತಿಯೊಬ್ಬ ಕಾರ್ಯಕರ್ತರೂ ಪ್ರಧಾನಿಯವರ ಮಾರ್ಗದರ್ಶನ, ಅವರ ಆದರ್ಶಗಳು ಅಮಿತ್ ಷಾ ಅವರ ಆದೇಶದಂತೆ ನಡೆದುಕೊಂಡಲ್ಲಿ ದೇಶ ಕಾಂಗ್ರೆಸ್ ಮುಕ್ತವಾಗಿ ಬಿಜೆಪಿಯ ರಾಜ್ಯ ನಡೆಯಲಿದೆ’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸರ್ಕಾರದ ಯೋಜನೆಗಳನ್ನು ಜನತೆಗೆ ತಿಳಿಸುವ ಜೊತೆಗೆ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಹಾಗೂ ರೈತರಿಗೆ ಮಾರಕವಾಗಿ ವರ್ತಿಸುತ್ತಿರುವುದನ್ನು ಜನರ ಮುಂದಿಡಬೇಕು’ ಎಂದು ಕಿವಿಮಾತು ಹೇಳಿದರು.

ಬಿಜೆಪಿ ಯಾದಗಿರಿ ಜಿಲ್ಲಾ ಉಸ್ತುವಾರಿ ಎನ್‌.ಶಂಕ್ರಪ್ಪ ಮಾತನಾಡಿ, ‘ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಕಾರ್ಯದ ಬಗ್ಗೆ ಅವಲೋಕನ ಅರಿವು ಮತ್ತು ಆ ಕಾರ್ಯದಲ್ಲಿ ಮಗ್ನರಾಗಬೇಕು. ಕಾಟಾಚಾರಕ್ಕೆ ಕೆಲಸ ಮಾಡದೇ ಪಕ್ಷ ನೀಡಿದ ಜವಾಬ್ದಾರಿ ಅರಿತು ಪಕ್ಷಕ್ಕೆ ಸೇವೆ ಸಮರ್ಪಿಸಬೇಕು’ ಎಂದು ಸಲಹೆ ನೀಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲಮನ್ನಾ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಕಡೆ ಬೆರಳು ಮಾಡುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.
ಮಾಜಿ ಸಚಿವ ರೇವು ನಾಯಕ ಬೆಳಮಗಿ ಮಾತನಾಡಿದರು. ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಮೋದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.