ADVERTISEMENT

ಗುರುವಿನ ಸ್ಥಾನ ಪಡೆಯುವುದು ಪುಣ್ಯದ ಕೆಲಸ: ನಾಗನಗೌಡ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 7:42 IST
Last Updated 11 ಜುಲೈ 2017, 7:42 IST

ಯಾದಗಿರಿ: ‘ಆರ್ಯ ಈಡಿಗ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ₹10 ಲಕ್ಷ ಅನುದಾನ ಮಂಜೂರು ಮಾಡಲಾಗುವುದು’ ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಚಿಂಚನಸೂರ ಹೇಳಿದರು. 

ಸಮೀಪದ ಸೈದಾಪುರ ಪಟ್ಟಣದ ವಿಶ್ವನಾಥ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆರ್ಯ ಈಡಿಗ ಸಮಾಜದ ವ್ಯಕ್ತಿಗಳನ್ನು ಮುಖ್ಯಮಂತ್ರಿ, ಸಚಿವ, ಶಾಸಕರನ್ನಾಗಿ ಮಾಡಿದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ. ಒಂಬತ್ತು ವರ್ಷಗಳಿಂದ ಗುರುಮಠಕಲ್ ಮತಕ್ಷೇತ್ರದಲ್ಲಿನ ಎಲ್ಲಾ ಸಮುದಾಯದ ಅಭಿವೃದ್ಧಿ ಕೈಗೊಳ್ಳಲಾಗಿದೆ’ ಎಂದರು.

ADVERTISEMENT

ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ನಾಗನಗೌಡ ಕಂದಕೂರ ಮಾತನಾಡಿ,‘ ಗುರು ಪೂರ್ಣಿಮೆಯಂದು ಗುರುವಿನ ಆರಾಧನೆ ಮಾಡುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಗುರುವಿನ ಸ್ಥಾನ ಪಡೆಯುವುದು ಪುಣ್ಯದ ಕೆಲಸ. ಗುರುಗಳಾದವರು ಬ್ರಹ್ಮಶ್ರೀ ನಾರಾಯಣ ಗುರುಗಳಂತೆ ಪ್ರಾವೀಣ್ಯತೆ ಹಾಗೂ ಗೌರವವನ್ನು ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ’ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದ್ದ ಕಾರ್ಮಿಕರ ಸಂಘಟನೆ ರಾಜ್ಯ ಘಟಕ ಅಧ್ಯಕ್ಷ ಸೈದಪ್ಪ ಗುತ್ತೇದಾರ ಮಾತನಾಡಿ,‘ಆರ್ಯ ಈಡಿಗ ಸಮಾಜ ಎಲ್ಲಾ ರಂಗದಲ್ಲೂ ಹಿಂದುಳಿದಿದೆ. ಕೇವಲ ಮತಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ನಮ್ಮನ್ನು ಬಳಸಿಕೊಳ್ಳುತ್ತಿವೆ. ಆದರೆ, ನಮ್ಮ ಅಭಿವೃದ್ಧಿ ಬಯಸುತ್ತಿಲ್ಲ’ ಎಂದು ವಿಷಾದಿಸಿದರು.

‘ಆರ್ಯ ಈಡಿಗ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಸಮುದಾಯ ಭವನ ಹಾಗೂ ರುದ್ರಭೂಮಿ ನೀಡುವಂತೆ ಒತ್ತಾಯಿಸಿದರು. ಬಿಎಸ್‌ಎನ್‌ಡಿಪಿ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಕಲಾಲ್ ಅಧ್ಯಕ್ಷತೆ ವಹಿಸಿದ್ದರು. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ ವಾರದ, ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಾರೆಡ್ಡಿಗೌಡ, ಹೊಸಗೌಡರ ಕೂಡ್ಲೂರು, ಎಪಿಎಂಸಿ ನಿರ್ದೇಶಕ ಪ್ರಭುಲಿಂಗ ವಾರದ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಂದಪ್ಪ ಕಾವಲಿ ಬಾಲಚೇಡ, ಯಲ್ಲಯ್ಯ ಕಲಾಲ್ ಇದ್ದರು.

ಬಸವಲಿಂಗಪ್ಪ ಕಲಾಲ್ ಕೂಡ್ಲೂರು ನಿರೂಪಿಸಿದರು. ಬಾಲಗೌಡ ಬದ್ದೇಪಲ್ಲಿ ಸ್ವಾಗತಿಸಿದರು, ಮಲ್ಲಯ್ಯ ಕಲಾಲ್ ವಂದಿಸಿದರು.

***

ಗುರುವಿನ ಆರಾಧನೆ ಮಾಡುವುದು ಭಾರತೀಯ ಸಂಸ್ಕೃತಿಯ ಪ್ರತೀಕ. ಸಂಸ್ಕೃತಿ ಮತ್ತು ಸಂಸ್ಕಾರವನ್ನು ಜೀವನದಲ್ಲಿ ರೂಢಿಸಿಕೊಂಡಾಗ ಬದುಕಿನಲ್ಲಿ ಯಶಸ್ಸು ಸಾಧ್ಯ.
ನಾಗನಗೌಡ ಕಂದಕೂರ, ಅಧ್ಯಕ್ಷ, ಜೆಡಿಎಸ್ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.