ADVERTISEMENT

‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಆರಂಭ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 10:40 IST
Last Updated 20 ಮಾರ್ಚ್ 2018, 10:40 IST

ಸುರಪುರ: ‘ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವಿವಿಧ ಸೌಲಭ್ಯಗಳನ್ನು ಒದಗಿಸಲು ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕವನ್ನು ತಾಲ್ಲೂಕು ಕೇಂದ್ರದಲ್ಲಿ ಪ್ರಾರಂಭಿಸಲಾಗಿದೆ’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಮೀನಾಕ್ಷಿ ಪಾಟೀಲ ಹೇಳಿದರು.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2017–18ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ವೈದ್ಯಕಿಯ ಚಿಕಿತ್ಸೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ರಾಜ್ಯದ 145 ತಾಲ್ಲೂಕುಗಳಲ್ಲಿ ಈ ಘಟಕಗಳನ್ನು ಪ್ರಾರಂಭಿಸಲು ಸರ್ಕಾರ ಆದೇಶಿಸಿದೆ. ಈ ಮುಂಚೆ ಇದ್ದ ಮಹಿಳಾ ವಿಶೇಷ ಚಿಕಿತ್ಸಾ ಘಟಕ ಶಿರೋನಾಮೆ ಬದಲಾಯಿಸಿ ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಎಂದು ಮಾರ್ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ’ ಎಂದರು.

ADVERTISEMENT

‘ಆಸ್ಪತ್ರೆಯಲ್ಲಿ ಘಟಕ ಸ್ಥಾಪಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು. ಯಾವುದಾದರೂ ತೀವ್ರತರದ ದೌರ್ಜನ್ಯ ಪ್ರಕರಣ ದಾಖಲಾದಲ್ಲಿ, ಸ್ಥಳೀಯ ಸಾಂತ್ವನ ಕೇಂದ್ರದ ಸಮಾಲೋಚಕರಿಂದ ಸಮಾಲೋಚನೆ ಯನ್ನು ಕೈಗೊಂಡು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಘಟಕದಲ್ಲಿ ನೀಡಲಾಗು ವುದು’ ಎಂದು ತಿಳಿಸಿದರು.

ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸೂಗುರೇಶ ವಾರದ ಘಟಕ ಉದ್ಘಾಟಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ. ನಾಯಕ, ವಕೀಲರಾದ ಛಾಯಾ ಕುಂಟೋಜಿ ಮಾತನಾಡಿದರು.

ಮೇಲ್ವಿಚಾರಕಿಯರಾದ ಪದ್ಮಾವತಿ ನಾಯಕ, ಎಸ್.ಎಸ್.ಜಾನಕಿ, ಪಾರ್ವತಿ ಕಡಿ, ಭೀಮಾಶಂಕರ ಇದ್ದರು. ಗುರುದೇವಿ ಹಿರೇಮಠ ನಿರೂಪಿಸಿದರು.
**

2017–18ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ

‘ಮಹಿಳಾ’ ವಿಶೇಷ ಚಿಕಿತ್ಸಾ ಘಟಕ ಇದ್ದ ಶಿರೋನಾಮೆ ಈಗ ‘ಗೆಳತಿ’

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಘಟಕ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.