ADVERTISEMENT

ಜಾತ್ರೆ ಮುಗಿದು ಹೋದ ಮೇಲೆ...

ಹೊನ್ನಕೆರೆಯ ಒಡಲು ಸೇರಿದ ಮಹಾತ್ಯಾಜ್ಯ,

ಮಲ್ಲೇಶ್ ನಾಯಕನಹಟ್ಟಿ
Published 19 ಜನವರಿ 2017, 5:21 IST
Last Updated 19 ಜನವರಿ 2017, 5:21 IST
ಜಾತ್ರೆ ಮುಗಿದು ಹೋದ ಮೇಲೆ...
ಜಾತ್ರೆ ಮುಗಿದು ಹೋದ ಮೇಲೆ...   

ಯಾದಗಿರಿ: ಮೈಲಾಪುರದ ನಿವಾಸಿಗಳ ದಾಹ ತಣಿಸುವ ಏಕೈಕ ಜಲಮೂಲ ಹೊನ್ನಕೆರೆ. ಇದರ ಒಡಲು ಈಗ ಕಲ್ಮಶಗಳಿಂದ ತುಂಬಿಹೋಗಿದೆ!
ಊದುಬತ್ತಿ, ಕರ್ಪೂರ, ಭಂಡಾರದಿಂದ ಹಿಡಿದು ಭಕ್ತರ ತಂದಿದ್ದ ವಿವಿಧ ಬಗೆಯ ವಸ್ತುಗಳು, ಚಪ್ಪಲಿ ಸಹ ಕೆರೆಯ ಗರ್ಭ ಸೇರಿದೆ.

ಎರಡೂವರೆ ಕಿಲೋ ಮೀಟರ್‌ ವಿಸ್ತೀರ್ಣ ಹೊಂದಿರುವ ಕೆರೆ ಅಂಗಳದ ತುಂಬೆಲ್ಲಾ ಭಕ್ತರು ಕಳಚಿರುವ ಬಟ್ಟೆ ರಾಶಿಯೇ ಬಿದ್ದಿದೆ. ಇದರೊಂದಿಗೆ ಸ್ನಾನದ ಸಾಬೂನು, ಬಟ್ಟೆ ತೊಳೆದ ಡಿಟರ್ಜೆಂಟ್‌ಗಳನ್ನು ಅಲ್ಲಿಯೇ ಬಿಸಾಕಿರುವುದರಿಂದ ಅವು ನಿಧಾನವಾಗಿ ಕೆರೆಯಲ್ಲಿ ಕರಗುತ್ತಿದ್ದು, ಇಡೀ ಹೊನ್ನಕೆರೆ ರಾಸಾಯನಿಕಗಳಿಂದ ಭರ್ತಿಯಾಗುತ್ತಿದೆ.

ತಿಳಿನೀರ ಅಲೆಹೊತ್ತು ಆಕರ್ಷಣೆ ಗಳಿಸಿದ್ದ ಹೊನ್ನಕೆರೆ ಜ.14ರಿಂದ ಮೂರು ದಿನ ವಿಜೃಂಭಣೆಯಿಂದ ನಡೆದ ಮೈಲಾಲಿಂಗೇಶ್ವರಸ್ವಾಮಿ ಜಾತ್ರಾ ವೈಭವದ ನಂತರ ಅದರ ಸ್ಥಿತಿ ತೀರಾ ಹದಗೆಟ್ಟಿದೆ.

ಜಾತ್ರೆಯಲ್ಲಿ ಮೈಲಾರಲಿಂಗಸ್ವಾಮಿ ಪ್ರಭಾವಳಿಗೆ ಕೆರೆಯಲ್ಲಿ ಗಂಗಾಸ್ನಾನ ಮಾಡಿಸುವ ಆಚರಣೆ ರೂಢಿಯಲ್ಲಿದೆ. ಭಕ್ತರೂ ಸಹ ಗಂಗಾಸ್ನಾನ ಪದ್ಧತಿ ರೂಢಿಸಿಕೊಂಡಿರುವುದರಿಂದ ಈ ಕೆರೆ ಸ್ಥಿತಿ ಹದಗೆಡಲು ಕಾರಣವಾಗಿದೆ.

‘ಯಾವುದೇ ಅಡೆತಡೆ ಇಲ್ಲದ ಕಾರಣ ಭಕ್ತರು ಕೆರೆಯಲ್ಲಿ ಬೇಕಾಬಿಟ್ಟಿ ತ್ಯಾಜ್ಯವನ್ನು ಸುರಿದು ಹೋಗುತ್ತಾರೆ. ಪ್ರತಿವರ್ಷ ಜಾತ್ರೆಯಲ್ಲಿ ನಡೆಯುವ ಇಂಥಾ ಪದ್ಧತಿಯಿಂದಾಗಿ ಕೆರೆ ಒಡಲು ತ್ಯಾಜ್ಯ ತುಂಬಿದ ತಿಪ್ಪೆಯಂತಾಗಿದೆ’ ಎನ್ನುತ್ತಾರೆ ಗ್ರಾಮದ ಯುವಕ ಯಮನಪ್ಪ.

ಜಿಲ್ಲಾಡಳಿತ ಹೊಣೆ ಹೊರಲಿ: ಜಾತ್ರೆ ಮುಂಚೆ ಪೂರ್ವಸಿದ್ಧತೆ ಅಂತೆಲ್ಲಾ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಭಕ್ತರಿಗೆ ಬೇಕಾಗುವ ಸೌಕರ್ಯಗಳ ಬಗ್ಗೆ ಯೋಚಿಸುತ್ತಾರೆ. ಅದನ್ನು ಪೂರೈಸುವಲ್ಲಿ ಕ್ರಮ ತೆಗೆದುಕೊಳ್ಳುವ ಅವರು ಜಾತ್ರೆ ಮುಗಿದ ಹೋದ ಮೇಲೆ ಇತ್ತ ತಿರುಗಿಯೂ ನೋಡುವುದಿಲ್ಲ.
‘ಶೌಚಾಲಯಗಳ ವ್ಯವಸ್ಥೆ ಕೊರತೆಯಿಂದಾಗಿ ಲಕ್ಷಾಂತರ ಭಕ್ತರಿಂದ ಇಡೀ ಊರು ಹೊಸಲು ನಾರುತ್ತಿದೆ. ಕೆರೆಯತ್ತ ಹೆಜ್ಜೆ ಹಾಕುವುದೇ ಬೇಡ. ಅಲ್ಲೂ ವಾಕರಿಕೆ ಬರಿಸುವಂತಹ ದುರ್ನಾತ ಹೊಮ್ಮುತ್ತಿದೆ.

ಜಾತ್ರೆ ಮುಗಿದು ಹೋದ ಮೇಲೆ ಸ್ಥಳೀಯ ನಿವಾಸಿಗಳು ಅನುಭವಿಸುವ ಸಂಕಷ್ಟ ಎಂಥದ್ದು ಎಂಬುದು ಅವರಿಗೆ ಗೊತ್ತಿಲ್ಲ. ಕೆ.ಅರಕೇರಾ ಗ್ರಾಮ ಪಂಚಾಯಿತಿ ಸಿಬ್ಬಂದಿ ಇತ್ತ ಕಣ್ಣೆತ್ತಿಯೂ ನೋಡಲ್ಲ. ಇಂಥ ಅಸಹನೀಯ ವಾತಾವರಣದಿಂದಾಗಿ ಊರಲ್ಲಿ ಕಾಲರಾ, ಮಲೇರಿಯಾ, ಡೆಂಗಿ ಹರಡುವ ಸಂಭವ ಹೆಚ್ಚಿದೆ’ ಎಂದು ಗ್ರಾಮದ ಮುಖಂಡರಾದ ಶರಣಪ್ಪ, ಶಿವಣ್ಣ ಆತಂಕ ವ್ಯಕ್ತಪಡಿಸುತ್ತಾರೆ.
 

ಅನುದಾನ ಇಲ್ಲ
‘ಇದ್ದ ಅನುದಾನದಲ್ಲಿ ಜಾತ್ರೆಗೂ ಮುಂಚೆ ಮೋರಿ ಸ್ವಚ್ಛತೆ, ಬೀದಿದೀಪ ಅಳವಡಿಕೆ, ಕುಡಿಯುವ ನೀರಿಗೆ ವೆಚ್ಚ ಮಾಡಲಾಗಿದೆ. ಈಗ ಪುನಃ ಗ್ರಾಮ, ಕೆರೆ ಸ್ವಚ್ಛಗೊಳಿಸುವಷ್ಟು ಹಣ ಪಂಚಾಯಿತಿಯಲ್ಲಿ ಇಲ್ಲ. ಜಾತ್ರೆಯ ಎಲ್ಲಾ ಜವಾಬ್ದಾರಿಯನ್ನು ತಹಶೀಲ್ದಾರ್ ಅವರಿಗೆ ಜಿಲ್ಲಾಡಳಿತ ವಹಿಸಿಕೊಟ್ಟಿದೆ. ಅವರೇ ಏನಾದರೂ ಮಾಡಬೇಕು’ ಎಂದು ಕೆ.ಅರಕೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋನಮ್ಮ ತಿಳಿಸಿದರು.

ಗ್ರಾಮಸ್ಥರ ಹೆಗಲಿಗೆ ಕಸ ವಿಲೇವಾರಿ
ಮಲ್ಲಾಪುರ ಗ್ರಾಮ ನಿವಾಸಿಗಳ ಸಂಖ್ಯೆ ಇರುವುದು ಒಂದು ಸಾವಿರ. ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಬರೋಬ್ಬರಿ ಮೂರು ಲಕ್ಷ. ಇಷ್ಟೊಂದು ಮಂದಿ ಮೂರು ದಿನ ಹಾಕಿ ಹೋಗುವ ತ್ಯಾಜ್ಯವನ್ನು ಯಾವ ಇಲಾಖೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯೂ ವಿಲೇವಾರಿ ಮಾಡುವುದಿಲ್ಲ. ಬದಲಾಗಿ ಪ್ರತಿವರ್ಷ ಗ್ರಾಮಸ್ಥರೇ ತ್ಯಾಜ್ಯವನ್ನು ಸುಟ್ಟು ಹಾಕುತ್ತಾರೆ. ಇಲ್ಲವೇ ಸ್ವಚ್ಛಗೊಳಿಸಿ ತಿಪ್ಪೆಗೆ ಹಾಕುತ್ತಾರೆ.

‘ಭಕ್ತರು ಜವಳ ತೆಗೆಸಿಕೊಂಡ ಕೂದಲನ್ನೂ ಸಹ ಯಾರೂ ಸ್ವಚ್ಛ ಮಾಡುವುದಿಲ್ಲ. ಗಾಳಿಗೆ ಕೂದಲು ಹಾರಿಕೊಂಡು ಊರಲ್ಲಿ ಅಸಹನೀಯ ವಾತಾವರಣ ಸೃಷ್ಟಿಸುತ್ತದೆ. ಈ ಕಿರಿಕಿರಿಯನ್ನು ಮಳೆಗಾಲದವರೆಗೂ ನಾವು ಅನುಭವಿಸಬೇಕಾಗುತ್ತದೆ’ ಎಂದು ಗ್ರಾಮದ ಹಿರಿಯರಾದ ಬಸವರಾಜ ಪೂಜಾರಿ ಹೇಳುತ್ತಾರೆ.

ADVERTISEMENT

**

ಜಾತ್ರೆಯ ವಿವಿಧ ಬಾಬತ್ತಿನಿಂದ ಒಟ್ಟು ₹ 37 ಲಕ್ಷ ಆದಾಯ ಬಂದಿದೆ. ದೇಗುಲದ ಹುಂಡಿ ಎಣಿಕೆ ಇನ್ನೂ ಆಗಿಲ್ಲ. ಸದ್ಯ ಜಾತ್ರೆ ಮುಗಿದಿದ್ದು ಗ್ರಾಮ ಮತ್ತು ಕೆರೆ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ.
- ಚನ್ನಮಲ್ಲಪ್ಪ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.