ADVERTISEMENT

ಜಿಲ್ಲೆಯಲ್ಲಿ ಅತಿಥಿ ಶಿಕ್ಷಕರ ನೌಕರಿಗೆ ನಿರುತ್ಸಾಹ

ಪ್ರಸಕ್ತ ವರ್ಷವೂ ಕಾಡಲಿದೆ ಬೋಧಕರ ಕೊರತೆ *ಕನಕಪುರ ತಾಲ್ಲೂಕಿನಲ್ಲಿ ಅತಿಹೆಚ್ಚು ಹುದ್ದೆ ಖಾಲಿ

ಆರ್.ಜಿತೇಂದ್ರ
Published 18 ಜುಲೈ 2017, 7:32 IST
Last Updated 18 ಜುಲೈ 2017, 7:32 IST

ರಾಮನಗರ: ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಸಾರ್ವ ಜನಿಕ ಶಿಕ್ಷಣ ಇಲಾಖೆಯ ಕ್ರಮಕ್ಕೆ ಉದ್ಯೋಗಾಕಾಂಕ್ಷಿಗಳಿಂದ ನೀರಸ ಪ್ರತಿಕ್ರಿಯೆ ದೊರೆತಿದೆ. ಜಿಲ್ಲೆಯಲ್ಲಿ ಈ ವರ್ಷಕ್ಕೆ 260 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶ ಇದ್ದು, ಕೇವಲ 170 ಮಂದಿಯಷ್ಟೇ ಮುಂದೆ ಬಂದಿದ್ದಾರೆ.

ಶಾಲೆಗಳಿಗೆ ಅವಶ್ಯವಾದ ಪೂರ್ಣಾ ವಧಿ ಶಿಕ್ಷಕರನ್ನು ನೇಮಿಸಿಕೊಳ್ಳುವವರೆಗೆ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ಸರ್ಕಾರವು ಪ್ರತಿ ವರ್ಷ ಅರೆಕಾಲಿಕ ಬೋಧಕರ ನೇಮಕಕ್ಕೆ ಅವಕಾಶ ನೀಡುತ್ತಿದೆ. ಆಯಾ ಜಿಲ್ಲೆಗಳ ಡಿಡಿಪಿಐಗೆ ಈ ಅಧಿಕಾರ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಅವಶ್ಯ ಶಿಕ್ಷಕರ ತಾತ್ಕಾಲಿಕ ನೇಮಕಕ್ಕೆ ಇಲಾಖೆ ಮುಂದಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿಲ್ಲ.

ಕಡಿಮೆ ವೇತನ ಕಾರಣ: ಅತಿಥಿ ಶಿಕ್ಷಕರಿಗೆ ಈ ಹಿಂದೆ ಮಾಸಿಕ ₹ 5500 ಗೌರವ ಧನ ನೀಡಲಾಗುತ್ತಿದ್ದು, ಈ ವರ್ಷದಿಂದ ಇದನ್ನು ₹7500ಕ್ಕೆ ಹೆಚ್ಚಿಸಲಾಗಿದೆ. ಆದಾಗ್ಯೂ ಕಾಯಂ ಬೋಧಕ ಸಿಬ್ಬಂದಿ ಯ ವೇತನಕ್ಕೂ ಇದಕ್ಕೂ ಭಾರಿ ಅಂತರ ಇರುವ ಕಾರಣ ಹೆಚ್ಚಿನ ಮಂದಿ ಒಲವು ತೋರಿಲ್ಲ.

ADVERTISEMENT

‘ಅತಿಥಿ ಶಿಕ್ಷಕರಿಗೆ ನೀಡುವ ಗೌರವ ಧನ ಕಡಿಮೆಯೇ. ಆದರೆ ಕೆಲವು ಖಾಸಗಿ ಶಾಲೆಗಳಲ್ಲಿ ಪಾಠ ಮಾಡುವವರಿಗೂ ಹೆಚ್ಚು ಕಡಿಮೆ ಇದೇ ಪ್ರಮಾಣದ ವೇತನ ನೀಡಲಾಗುತ್ತಿದೆ’ ಎನ್ನುತ್ತಾರೆ ಇಲಾಖೆ ಯ ಅಧಿಕಾರಿಗಳು.

ಇನ್ನೂ 458 ಶಿಕ್ಷಕರು ಬೇಕು: ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪ್ರಸ್ತುತ 4,252 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಪ್ರಾಥಮಿಕ ಶಾಲೆ ಗಳಿಗೆ 258 ಹಾಗೂ ಪ್ರೌಢಶಾಲೆಗಳಿಗೆ 200 ಶಿಕ್ಷಕರ ಅವಶ್ಯಕತೆ ಇದೆ,  ಕನಕಪುರ ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದೆ. ಅಲ್ಲಿ ಇನ್ನೂ 201 ಪ್ರಾಥಮಿಕ ಶಾಲಾ ಹಾಗೂ 73 ಪ್ರೌಢಶಾಲಾ ಬೋಧಕರ ಅವಶ್ಯಕತೆ ಇದೆ. ರಾಮನಗರಕ್ಕೆ 53 ಪ್ರಾಥಮಿಕ ಶಾಲಾ ಹಾಗೂ 34 ಪ್ರೌ.ಶಾ. ಶಿಕ್ಷಕರು ಬೇಕಾಗಿದ್ದಾರೆ. ಮಾಗಡಿ ತಾಲ್ಲೂಕಿಗೆ 32 ಹಾಗೂ ಚನ್ನಪಟ್ಟಣಕ್ಕೆ 61 ಹೈಸ್ಕೂಲ್‌ ಶಿಕ್ಷಕರ ಅವಶ್ಯಕತೆ ಇದೆ.

**

39 ಹೊಸ ಶಿಕ್ಷಕರು

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಗೆ 39 ಹೊಸ ಶಿಕ್ಷಕರು ಸೇರ್ಪಡೆ ಆಗುತ್ತಿದ್ದಾರೆ.

ಒಟ್ಟು 41 ಹುದ್ದೆಗಳ ಭರ್ತಿಗೆ ಇಲಾಖೆ ಮುಂದಾಗಿದ್ದು, ಇದರಲ್ಲಿ 39 ಮಂದಿ ಮಾತ್ರ ಕೌನ್ಸೆಲಿಂಗ್‌ಗೆ ಹಾಜರಾಗಿದ್ದು, ಶೀಘ್ರ ಕೆಲಸಕ್ಕೆ ಬರಲಿದ್ದಾರೆ. ಇವರಲ್ಲಿ ಚನ್ನಪಟ್ಟಣ–10, ಕನಕಪುರ–24, ಮಾಗಡಿ–3 ಹಾಗೂ ರಾಮನಗರದಲ್ಲಿ ಇಬ್ಬರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಡಿಡಿಪಿಐ ಗಂಗಮಾರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

**

ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗ, ಗೌರವ ಧನದ ಹೆಚ್ಚಳದ ನಡುವೆಯೂ ಅತಿಥಿ ಶಿಕ್ಷಕ ಹುದ್ದೆಗೆ ಅವಶ್ಯವಾದಷ್ಟು ಅಭ್ಯರ್ಥಿಗಳು ಸಿಗಲಿಲ್ಲ. ಇನ್ನೂ 90 ಹುದ್ದೆ ಖಾಲಿ ಇವೆ.
-ಗಂಗಮಾರೇಗೌಡ, ಡಿಡಿಪಿಐ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.