ADVERTISEMENT

ದೇವರಲ್ಲಿ ನಂಬಿಕೆ ಇರಲಿ, ಮೌಢ್ಯ ಆಚರಣೆ ಬೇಡ

ಪ್ರಗತಿಪರ ಚಿಂತಕ ಅಹ್ಮದ ಪಠಾಣ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 9:48 IST
Last Updated 2 ಜನವರಿ 2017, 9:48 IST

ಸುರಪುರ: ‘ದೇವರ ಬಗ್ಗೆ ನಂಬಿಕೆ ಇರಲಿ. ಇದರ ಜೊತೆಗೆ ಮೌಢ್ಯತೆ ಬೆಳೆಸಿಕೊಂಡರೆ ಆಗುವ ಅನಾಹುತವೇ ಹೆಚ್ಚು. ದೇವರ ಹೆಸರಲ್ಲಿ ಹಣ ದುಂದು ವೆಚ್ಚ ಮಾಡುವುದು, ಪ್ರಾಣಿ ಬಲಿ, ಇವೆಲ್ಲ ಮೌಢ್ಯತೆಯ ಪರಮಾವಧಿ’ ಎಂದು ಪ್ರಗತಿಪರ ಚಿಂತಕ ಅಹ್ಮದ ಪಠಾಣ ಪ್ರತಿಪಾದಿಸಿದರು.

ತಾಲ್ಲೂಕಿನ ತಳವಾರಗೇರಿ ಗ್ರಾಮದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಭೀಮವಾದ) ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶೇಷವಾಗಿ ಅಲ್ಪಸಂಖ್ಯಾತ, ಹಿಂದುಳಿದ, ದಲಿತ (ಅಹಿಂದ) ಜನಾಂಗದಲ್ಲಿ ಕಂದಾಚಾರ, ಮೌಢ್ಯತೆ ಪರಂಪರಾಗತವಾಗಿ ಹಾಸುಹೊಕ್ಕಾಗಿವೆ. ಅನಕ್ಷರತೆ, ತಿಳಿವಳಿಕೆಯ ಕೊರತೆ, ಮುಖ್ಯವಾಗಿ ಶೋಷಣೆ ಇದಕ್ಕೆ ಪ್ರಮುಖ ಕಾರಣ. ಸಂಪೂರ್ಣ ಸಾಕ್ಷರತೆ ಇದಕ್ಕೆ ಪರಿಹಾರ’ ಎಂದು ಅಭಿಪ್ರಾಯಪಟ್ಟರು.

‘ಈ ದಿಸೆಯಲ್ಲಿ ದಲಿತ ಸಂಘಟನೆಗಳೂ ಸೇರಿದಂತೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಂಘಟನೆಗಳ ಜವಾಬ್ದಾರಿ ಹೆಚ್ಚಾಗಿದೆ. ಮೌಢ್ಯತೆ ಆಚರಣೆ ಕೈಬಿಡಬೇಕು. ಅನಿಷ್ಟ ಆಚರಣೆಗೆ ಅನಗತ್ಯವಾಗಿ ಖರ್ಚು ಮಾಡುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವ್ಯಯಿಸಿ’ ಎಂದು ಸಲಹೆ ನೀಡಿದರು.

‘ಶೋಷಣೆ ಮತ್ತು ಗುಲಾಮಗಿರಿಯಿಂದ ಮುಕ್ತರಾಗಬೇಕಿದ್ದರೆ ಮೊದಲು ನಾವು ಅತಿಯಾದ ದೈವ ನಂಬಿಕೆಯಿಂದ ಹೊರಬರಬೇಕು. ಅಂದಾಗ ಮಾತ್ರ ಅಹಿಂದ ಸಮುದಾಯಗಳ ಅಭಿವೃದ್ದಿ ಸಾಧ್ಯ. ಇವರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಂಘಟನೆಗಳು ಮಾಡಬೇಕು’ ಎಂದು ಕರೆ ನೀಡಿದರು.

‘ದೇವರು ಎಂದಾಕ್ಷಣ ಮಾನಸಿಕವಾಗಿ ಸೋತು ಹೋಗುತ್ತೇವೆ. ಅರಿವಿಲ್ಲದಂತೆ ಶರಣಾಗುತ್ತೇವೆ. ದೇವರು ಮತ್ತು ದೈವಿನಂಬಿಕೆ ನಮ್ಮನ್ನು ಶೋಷಣೆಗೆ ಗುರಿಪಡಿಸಿ ಇನ್ನಷ್ಟು ಗುಲಾಮಗಿರಿಗೆ ತಳ್ಳುತ್ತಿದೆ. ಇವೆಲ್ಲ ಮೋಸಗೊಳಿಸುವ ಸರಳ ಉಪಾಯಗಳು’ ಎಂದು ಎಚ್ಚರಿಸಿದರು.

ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಈರಣ್ಣ ಕಸನ್, ಭೀಮರಾಯ ಸಿಂದಗೇರಿ, ಡಿಎಸ್ಎಸ್‌ ರಾಜ್ಯ ಸಮಿತಿ ಸಂಘಟನಾ ಸಂಚಾಲಕ ರಮೇಶ ಬಡಿಗೇರ, ಜಿಲ್ಲಾ ಸಮಿತಿ ಸಂಚಾಲಕ ರಾಹುಲ ಹುಲಿಮನಿ, ಮಾತನಾಡಿದರು.ಗ್ರಾಪಂ ಪಂಚಾಯಿತಿ ಅಧ್ಯಕ್ಷೆ ಯಲ್ಲಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಸಮಿತಿ ಸಂಚಾಲಕ ಲಕ್ಷ್ಮಣ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.

ಶೇಖರ್ ಮಂಗಳೂರು ಸ್ವಾಗತಿಸಿದರು. ಬಸ್ಸು ಶಹಾಪುರಕರ್ ನಿರೂಪಿಸಿದರು. ಪಾರಪ್ಪ ದೇವತ್ಕಲ್ ವಂದಿಸಿದರು. ಗ್ರಾಮ ಘಟಕದ ಪದಾಧಿಕಾರಿಗಳು: ವಿವೇಕ ಕಂಬಾರ (ಸಂಚಾಲಕ), ಮುತ್ತಣ್ಣ ಕಂಬಾರ, ಜಗದೀಶ ಕಂಬಾರ, ಕಾಶಿನಾಥ ಗೋವಾ (ಸಂಘಟನಾ ಸಂಚಾಲಕರು), ಪರಶುರಾಮ ಗೋವಾ (ಖಜಾಂಚಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.