ADVERTISEMENT

ಬೀಸುತ್ತಿದೆ ಬಿಸಿಗಾಳಿ: ಬಸಿಯುತ್ತಿದೆ ಬೆವರು

ಬಿಸಿಲೂರಿನಲ್ಲಿ ಹೆಚ್ಚಿದ ಬಿಸಿಲಿನ ಪ್ರಖರತೆ: ಮಳೆಗಾಗಿ ಕಾತರಿಸುತ್ತಿರುವ ಜನ

​ಪ್ರಜಾವಾಣಿ ವಾರ್ತೆ
Published 28 ಮೇ 2015, 7:28 IST
Last Updated 28 ಮೇ 2015, 7:28 IST

ಯಾದಗಿರಿ: ‘ನಮ್ಮ ಊರಾಗ ಇಂಥಾ ಬಿಸಲ ನೋಡಿದ್ದಿಲ್ಲ. ಬೆಳಿಗ್ಗೆ 7 ಗಂಟೆಕ ಬಿಸಲ ಚಾಲೂ ಆಕ್ಕೇತಿ. ಮನಿಂದ ಹೊರಗ ಬರೂದ ಆಗಾಣ ಇಲ್ಲ. ಏನ್‌ ಮಾಡೋದ್ರಿ, ನಮ್ಮ ಹಳ್ಯಾಗ ಕರಂಟು ಇರುದುಲ್ಲ. ಗಿಡದ ನೆಳ್ಳಿಗೆ ಕುಂತರೂ ಸಮಾಧಾನ ಆಗಾಣ ಇಲ್ಲ. ನಿದ್ದಿ ಅಂತೂ ದೂರದ ಮಾತು’

ವಾರವಿಡೀ ಬಿಸಿಲಿನ ಝಳದಿಂದ ತತ್ತರಿಸಿರುವ ಜನರು ಹೇಳುತ್ತಿರುವ ಮಾತಿದು. ಕಳೆದ ಒಂದು ವಾರದಿಂದ ಜಿಲ್ಲೆಯ ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. ಜಿಲ್ಲೆಯಲ್ಲಿ 44 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಕಳೆದ ನಾಲ್ಕು ದಿನಗಳ ಹಿಂದೆ ದಾಖಲಾಗಿತ್ತು. ಇದೀಗ ಉಷ್ಣಾಂಶ ಕಡಿಮೆ ಆಗಿದ್ದರೂ, ಝಳ ಮಾತ್ರ ಸ್ವಲ್ಪವೂ ಇಳಿದಿಲ್ಲ.

ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಬೆವರಿನ ಹನಿಗಳು ಆರಂಭವಾಗುತ್ತವೆ. ಮಧ್ಯಾಹ್ನವಂತೂ ಮನೆಯಿಂದ ಹೊರಗೆ ಹೋಗುವುದು ಇರಲಿ, ಗಿಡದ ನೆರಳಿಗೂ ಕುಳಿತುಕೊಳ್ಳಲು ಆಗದಂತಹ ಸ್ಥಿತಿ. ಮನೆಗಳಲ್ಲಿನ ಫ್ಯಾನ್, ಎಸಿಗಳು ಬಿಡುವಿಲ್ಲದೇ ತಿರುಗುತ್ತಿದ್ದರೆ, ಹಳ್ಳಿಯ ಜನರು ಮಾತ್ರ ಗಾಳಿಯನ್ನೇ ನಂಬಿ ಜೀವನ ಸಾಗಿಸುವುದು ಅನಿವಾರ್ಯವಾಗಿದೆ.

‘ಮೇ ಮುಗಿಯುತ್ತ ಬಂದಿದ್ದು, ಇನ್ನೂ ಮಳೆ ಬರುತ್ತಿಲ್ಲ. ಬಂದರೂ ಅಲ್ಪ ಪ್ರಮಾಣದಲ್ಲಿ ಸುರಿಯುತ್ತಿದ್ದು, ಧಗೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಇದರಿಂದ ಇನ್ನೊಂದು ರೀತಿಯ ತಳಮಳ ಅನುಭವಿಸುವಂತಾಗಿದೆ. ಒಂದೆಡೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದರೆ, ಕುಡಿಯುವ ನೀರಿಗೂ ತೊಂದರೆ ಅನುಭವಿಸುವಂತಾಗಿದೆ’ ಎಂದು ಹಳಿಗೇರಾದ ಸಾಬಯ್ಯ ಹೇಳುತ್ತಾರೆ.

‘ಸದ್ಯಕ್ಕೆ ಹೊಲವನ್ನು ಹದ ಮಾಡಬೇಕಾಗಿದೆ. ಮಣ್ಣನ್ನು ತಿರುವಿ ಹಾಕುವ ಕೆಲಸ ಆಗಬೇಕು. ಮುಂಗಾರು ಆರಂಭವಾಗುವ ಹೊತ್ತಿಗೆ, ಹೊಲ ಬಿತ್ತನೆಗೆ ಸಿದ್ಧವಾಗಬೇಕು. ಆದರೆ, ಬಿಸಿಲಿನ ಪ್ರಖರತೆಯಿಂದಾಗಿ ಜನರು ಇರಲಿ, ಜಾನುವಾರುಗಳೂ ಬಸವಳಿಯುತ್ತಿವೆ. ಇದರಿಂದ ಹೊಲದಲ್ಲಿ ಕೆಲಸ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ’ ಎಂದು ನಾಯ್ಕಲ್‌ನ ರೈತ ಶಿವಶರಣಪ್ಪ ಹೇಳುತ್ತಾರೆ.

ಇನ್ನೊಂದೆಡೆ ಮೇಯಿಸಲು ತೆಗೆದುಕೊಂಡು ಬರುವ ಜಾನುವಾರುಗಳೂ ಬಿಸಿಲಿನಿಂದ ತತ್ತರಿಸುತ್ತಿವೆ. ಗೋಮಾಳದಲ್ಲಿ ಓಡಾಡಲು ಆಗದೇ, ಗಿಡದ ನೆರಳನ್ನು ಅರಸಿ, ಕುಳಿತುಕೊಳ್ಳುತ್ತವೆ. ನೀರು ಕುಡಿಯುವುದಕ್ಕೆ ಕೊಳವೆಬಾವಿಗಳಿಗೆ ಮುಗಿ ಬೀಳುತ್ತಿವೆ. ಇನ್ನು ಮೇವಿನ ಕೊರತೆಯೂ ಎದುರಾಗಿದೆ ಎಂದು ರೈತರು ಹೇಳುತ್ತಾರೆ.

ಹೆಚ್ಚಿದ ಬಿಸಿಗಾಳಿ: ಜಿಲ್ಲೆಯ ಬಹುತೇಕ ಭಾಗದಲ್ಲಿ ಬಿಸಿಗಾಳಿ ಹೆಚ್ಚಾಗುತ್ತಿದೆ. ಗುರುಮಠಕಲ್‌ ಭಾಗದಲ್ಲಿ ಮಾತ್ರ ಸ್ವಲ್ಪ ಬಿಸಿಲಿನ ಪ್ರಖರತೆ ಕಡಿಮೆ ಇದ್ದು, ಜಿಲ್ಲಾ ಕೇಂದ್ರವಾದ ಯಾದಗಿರಿ ಸುಡುವ ಕೆಂಡವಾಗಿದೆ. ನಗರದ ಸುತ್ತಲೂ ಕಲ್ಲಿನ ಬೆಟ್ಟಗಳಿದ್ದು, ಹಗಲಿನಲ್ಲಿ ಕಾಯುತ್ತವೆ.

ರಾತ್ರಿ ಈ ಬೆಟ್ಟಗಳಿಂದ ಉಷ್ಣಾಂಶ ಬರುತ್ತದೆ. ಹೀಗಾಗಿ ನಗರದಲ್ಲಿ ಹಗಲು–ರಾತ್ರಿ ಬಿಸಿಲಿನ ಝಳವನ್ನು ಜನರು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕೆಂಭಾವಿ, ಹುಣಸಗಿ, ಶಹಾಪುರ, ಸುರಪುರ ಭಾಗದಲ್ಲಿಯೂ ಬಿಸಿಲಿನ ಝಳ ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಬಿಸಿಲಿನ ಪ್ರಮಾಣ ಕಡಿಮೆ ಆಗಿದ್ದರೂ, ಬಿಸಿಗಾಳಿ ತತ್ತರಿಸುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.