ADVERTISEMENT

ಭೂ ಒಡೆತನ ಯೋಜನೆ ಉಳ್ಳವರ ಪಾಲು: ಆರೋಪ

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:15 IST
Last Updated 19 ಮೇ 2017, 6:15 IST

ಶಹಾಪುರ: ‘ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಭೂ ರಹಿತ ಕೃಷಿ ಕಾರ್ಮಿಕ ರೈತ ಮಹಿಳೆಯರಿಗೆ ಜಮೀನು ಖರೀದಿಯಲ್ಲಿ ವಂಚನೆಯಾಗಿದೆ.

ಗ್ರಾಮ ಸಭೆಯಲ್ಲಿ ಆಯ್ಕೆಯಾದ ಪರಿಶಿಷ್ಟ ಜಾತಿ ಮಹಿಳೆಯರಿಗೆ ಮತ್ತು ಅವರ ಕುಟುಂಬದ ಸದಸ್ಯರು ಜಮೀನು ಹೊಂದಿದ್ದರೂ ಸಹ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ’ ಎಂದು ಕೃಷ್ಣಾ ಮರಳು ಉಳಿಸಿ ಹೋರಾಟ ಸಮಿತಿ ಸಂಚಾಲಕ ಹಣಮಂತ ಭಂಗಿ ಆರೋಪಿಸಿದ್ದರೆ.

‘ಅಕ್ರಮದಲ್ಲಿ ಶಾಮೀಲಾಗಿರುವ ಕಂದಾಯ ನಿರೀಕ್ಷಕರು ಹಾಗೂ ಅಂಬೇಡ್ಕರ ಅಭಿವೃದ್ಧಿ ನಿಗಮದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು’ ಎಂದು ಅವರು ಪ್ರಾದೇಶಿಕ ಆಯುಕ್ತರಿಗೆ ದಾಖಲೆಗಳ ಸಮೇತ ಪತ್ರ ಬರೆದು ಮನವಿ ಮಾಡಿದ್ದಾರೆ.

ADVERTISEMENT

‘ತಾಲ್ಲೂಕಿನ ಕನ್ಯಾಕೊಳ್ಳೂರ ಗ್ರಾಮದ  ಅಮರೇಶಗೌಡ ಬಾಪುಗೌಡ  ದರ್ಶನಾಪುರ ಅವರ ಸರ್ವೆ ನಂಬರ 89/2ರ  12ಎಕರೆ 15 ಗುಂಟೆ ಹಾಗೂ ವಿಜಯಲಕ್ಷ್ಮಿ ಅಮರೇಶಗೌಡ ದರ್ಶನಾಪುರ ಸರ್ವೆ ನಂಬರ 89/3ರ 6 ಎಕರೆ 10 ಗುಂಟೆ ಜಮೀನು ಸೇರಿದಂತೆ  ಹೀಗೆ 12 ರೈತರ 70 ಎಕರೆ ಜಮೀನನ್ನು ಪ್ರತಿ ಎಕರೆಗೆ ₹8 ಲಕ್ಷದಂತೆ  ಅಂಬೇಡ್ಕರ  ಅಭಿವೃದ್ಧಿ ನಿಗಮ ಖರೀದಿ ಸಿದೆ’ ಎಂದು ಅವರು ತಿಳಿಸಿದ್ದಾರೆ.

‘ಭೂ  ಒಡೆತನ ಯೋಜನೆಯಡಿ ಮುಖ್ಯ ಉದ್ದೇಶ  ಭೂರಹಿತ ಕೃಷಿ ಕಾರ್ಮಿಕ ಅರ್ಹ ರೈತ ಮಹಿಳೆಯರಿಗೆ  ತಲಾ ಒಂದು ಎಕರೆಯಂತೆ 70 ಫಲಾನುಭವಿಗಳಿಗೆ ಒದಗಿಸಬೇಕು. ಗ್ರಾಮ ಸಭೆಯಲ್ಲಿ ಆಯ್ಕೆಯಾದ ಮಹಿಳೆ ಯರಿಗೆ, ಅವರ ಕುಟುಂಬದ ಸದಸ್ಯರು ಜಮೀನು ಹೊಂದಿರಬಾರದು ಎಂಬ ಕಟ್ಟಪ್ಪಣೆಯಿದೆ’ ಎಂದು ಅವರು ತಿಳಿಸಿದ್ದಾರೆ.

2016 ಅಕ್ಟೋಬರ್ 13ರಂದು ಡಾ.ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಶಹಾಪುರದ ತಹಶೀಲ್ದಾರ ಅವರಿಗೆ ಪತ್ರ ಬರೆದು ಆಯ್ಕೆಯಾದ ಫಲಾನುಭವಿಗಳ ಪಟ್ಟಿ ಯನ್ನು ಲಗತ್ತಿಸಿ ಜಮೀನು ಇಲ್ಲದಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಕೋರಿದ್ದರು.

‘ಆದರೆ ಗ್ರಾಮ ಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರು  ಆಯ್ಕೆ ಯಾದ 50ಕ್ಕೂ ಹೆಚ್ಚು ಫಲಾನುಭವಿ ಗಳು ಅವರ ಕುಟುಂಬದ ಸದಸ್ಯರು ಜಮೀನು ಹೊಂದಿದ್ದರೂ ಸಹ ಸರಿಯಾಗಿ ತನಿಖೆ ಮಾಡದೆ  ಡಾ. ಅಂಬೇಡ್ಕರ ಅಭಿವೃದ್ಧಿ ನಿಗಮಕ್ಕೆ ತಪ್ಪು ವರದಿ ನೀಡಿದ್ದಾರೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

‘ಈಗಾಗಲೇ  15  ಫಲಾನುಭವಿಗಳ ಹೆಸರಿನಲ್ಲಿ ಉಪ ನೋಂದಣಿ ಕಚೇರಿ ಯಲ್ಲಿ  ಖರೀದಿ ನೊಂದಣಿ ಮಾಡಿಸಿ ದ್ದಾರೆ. ಸಾರ್ವಜನಿಕರಿಂದ ವ್ಯಾಪಕ  ವಿರೋಧ ವ್ಯಕ್ತವಾದ ಕಾರಣ ತಾತ್ಕಾಲಿಕ ವಾಗಿ ನೋಂದಣಿ ಕಾರ್ಯ ಸ್ಥಗಿತ ಗೊಂಡಿದೆ’ ಎಂದು ಅವರು ತಿಳಿಸಿದ್ದಾರೆ.

‘ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

*

ಭೂ ಒಡೆತನ ಯೋಜನೆಯಡಿ 70 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ 60 ಮಂದಿಗೆ  ಜಮೀನು ಇಲ್ಲ. ಈ ಕುರಿತು  ತಹಶೀಲ್ದಾರ್‌ಗೆ ವರದಿ ಸಲ್ಲಿಸಲಾಗಿದೆ.
ಸಂಗಮೇಶ ದೇಸಾಯಿ
ಕಂದಾಯ ನಿರೀಕ್ಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.