ADVERTISEMENT

ರಾಜೀ ಮೂಲಕ 116 ಪ್ರಕರಣ ಇತ್ಯರ್ಥ

ಸುರಪುರ: ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 11:56 IST
Last Updated 12 ಫೆಬ್ರುವರಿ 2017, 11:56 IST
ಸುರಪುರದ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜು ಮತ್ತು ಕಿರಿಯ ಸಿವಿಲ್ ನ್ಯಾಯಾಧೀಶ ವಿನೋಧ ಬಾಳನಾಯ್ಕ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಜರುಗಿತು
ಸುರಪುರದ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜು ಮತ್ತು ಕಿರಿಯ ಸಿವಿಲ್ ನ್ಯಾಯಾಧೀಶ ವಿನೋಧ ಬಾಳನಾಯ್ಕ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಜರುಗಿತು   

ಸುರಪುರ: ಅಪಘಾತ, ಕ್ರಿಮಿನಲ್, ಸಿವಿಲ್ ಮತ್ತು ಲಘು ಪ್ರಕರಣ ಸೇರಿದಂತೆ ಕಿರಿಯ ಮತ್ತು ಹಿರಿಯ ನ್ಯಾಯಾಲದಲ್ಲಿನ 116 ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜು ತಿಳಿಸಿದರು.

ಇಲ್ಲಿಯ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನೇತೃತ್ವ ವಹಿಸಿ ಅವರು ಮಾತನಾಡಿದರು. ಸುಪ್ರೀಂಕೋರ್ಟ್‌ ಆದೇಶದಂತೆ ಪ್ರತಿ ತಿಂಗಳು ಎರಡನೇ ಶನಿವಾರ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಏರ್ಪಡಿಸಲಾಗುತ್ತಿದೆ. ಮಧ್ಯಸ್ಥಿಕೆದಾರರ ಮೂಲಕ ಎರಡು ಪಕ್ಷಗಳ ಕಕ್ಷಿದಾರರ ನಡುವೆ ರಾಜೀ ಸಂಧಾನ ನಡೆಸಿ ಪ್ರಕರಣ ಇತ್ಯರ್ಥ ಪಡಿಸಲಾಗಿದೆ.

ಇತ್ಯರ್ಥಗೊಂಡಿರುವ ಕಟ್ಲೆಗಳ ಆರೋಪಿತರಿಂದ ₹3,87,765  ವಸೂಲಿ ಮಾಡಿ ನಷ್ಟಕ್ಕೊಳಗಾದವರಿಗೆ ಕೊಡಲಾಗಿದೆ ಎಂದು ವಿವರಿಸಿದರು. ರಾಜೀ ಸಂಧಾನದಲ್ಲಿ ಇಬ್ಬರಿಗೂ ನ್ಯಾಯ ಸಿಗುತ್ತದೆ. ಎರಡು ಕಡೆಯ ಕಕ್ಷಿದಾರರಿಗೆ ಅನುಕೂಲವಾಗುವಂತೆ ಪ್ರಕರಣ ಇತ್ಯರ್ಥ ಪಡಿಸಲು ಸುಪ್ರೀಂ ಕೋರ್ಟ್‌ ಉತ್ತಮ ಸೂತ್ರ ಜಾರಿಗೆ ತಂದಿದೆ. ಎರಡು ಕಡೆಯ ಕಕ್ಷಿದಾರರು ಧ್ವೇಷ ಅಸೂಯೆ  ಮರೆತು ಸಮಾಜದಲ್ಲಿ ಮತ್ತೆ ಪರಸ್ಪರ ಬಾಂಧವ್ಯದ ಬದುಕು ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸಿಕೊಡುವುದೇ ಈ ರಾಷ್ಟ್ರೀಯ ಅದಾಲತ್‌ನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಕಿರಿಯ ಸಿವಿಲ್ ನ್ಯಾಯಾಧೀಶ ವಿನೋದ ಭಾಳನಾಯ್ಕ ಮಾತನಾಡಿ, ನ್ಯಾಯಾಲಯದಲ್ಲಿನ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು ರಾಷ್ಟ್ರೀಯ ಅದಾಲತ್ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ವಕೀಲ ನಾಗರಡ್ಡೆಪ್ಪ ಗೌಡಪಗೋಳ ಮಧ್ಯಸ್ಥಿಕೆ ವಹಿಸಿದ್ದರು. ವಕೀಲರಾದ ಜಿ.ಎಸ್. ಪಾಟೀಲ. ಎಸ್. ಸಿದ್ರಾಮಪ್ಪ, ಬಿ.ಕೆ. ದೇಸಾಯಿ. ಮಂಜುನಾಥ ಹುದ್ದಾರ, ವಿ.ಎಸ್. ಬೈಚಬಾಳ, ವಿಕ್ರಮ, ಶರಣಗೌಡ ಪಾಟೀಲ, ಮಲ್ಲಿಕಾಜರ್ುನ ಬೋಯಿ, ಚವ್ಹಾಲಕ್ಷ್ಮೀ ಪದ್ಮಾವತಿ, ಆದಪ್ಪ ಹೊಸ್ಮನಿ, ಜಯಲಲಿತಾ ಪಾಟೀಲ ಮಂಜುನಾಥ ಗುಡುಗುಂಟಿ. ಮಾಳಪ್ಪ ಒಂಟೂರ, ಚನ್ನಪ್ಪ ಹೂಗಾರ ಇತರರಿದ್ದರು.

‌ಗ್ರೇಡ್-2 ತಹಸೀಲ್ದಾರ ಸೋಫಿಯಾಸುಲ್ತಾನ, ನಗರಸಭೆ ಕಂದಾಯ ಅಧಿಕಾರಿ ಜೀವನಕುಮಾರ ಮತ್ತು ಕಕ್ಕೇರಿ, ಕೆಂಭಾವಿ ಪುರಸಭೆ ಅಧಿಕಾರಿಗಳು ಅದಾಲತ್‌ನಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT