ADVERTISEMENT

ಶೌಚಾಲಯ ಅಪೂರ್ಣ: ವಿದ್ಯುತ್‌ ಕಡಿತ!

ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 12:36 IST
Last Updated 26 ಮೇ 2018, 12:36 IST

ಯಾದಗಿರಿ: ‘ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯ ನಿರ್ಮಲ ಭಾರತ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಪಡೆದವರು ಶೌಚಾಲಯ ನಿರ್ಮಾಣ ಮಾಡಿಕೊಂಡಿಲ್ಲದಿರುವ ಬಗ್ಗೆ ವರದಿ ಬಂದಿದೆ. ಅಂತಹವರು ಒಂದು ವಾರದಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಳಿಸಿಕೊಳ್ಳದಿದ್ದರೆ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಆದೇಶಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅನುದಾನ ಒದಗಿಸಿದ್ದರೂ ಶೌಚಾಲಯ ಅಪೂರ್ಣಗೊಳಿಸಿರುವ ಫಲಾನುಭವಿಗಳಿಗೆ ಈಗಾಗಲೇ ನಗರಸಭೆ ಪೌರಾಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ಶೌಚಾಲಯ ನಿರ್ಮಿಸಿಕೊಳ್ಳದೇ ವಿಳಂಬ ನೀತಿ ಅನುಸರಿಸಿದ್ದಾರೆ. ಇನ್ನು ಮುಂದೆ ಅಂತಹವರನ್ನು ಗುರುತಿಸುವ ಕಾರ್ಯ ನಡೆಯಲಿದೆ. ವಾರದ ಗಡುವು ಮುಗಿದ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದರು.

ADVERTISEMENT

30ರೊಳಗೆ ಮಳಿಗೆ ಖಾಲಿ ಮಾಡಲು ಸೂಚನೆ: ಜಿಲ್ಲೆಯ ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಐಡಿಎಸ್‌ಎಂಟಿ ಯೋಜನೆಯಡಿ ನಿರ್ಮಿಸಲಾದ ಮಳಿಗೆಗಳ ಬಾಡಿಗೆ ಅವಧಿ ಮುಗಿದ ಮಳಿಗೆಗಳನ್ನು ಮೇ 30ರೊಳಗೆ ಖಾಲಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಮಳಿಗೆಗಳ ಬಾಡಿಗೆಯ ಅವಧಿ ಮುಗಿದಿದ್ದರೂ ಮತ್ತು ಅನೇಕ ಬಾರಿ ನೋಟಿಸ್‌ ಜಾರಿ ಮಾಡಿದ್ದರೂ ಖಾಲಿ ಮಾಡದೇ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಲಾಗಿದೆ. ಅಲ್ಲದೇ, ನಗರಾಭಿವೃದ್ಧಿ ಪ್ರಾಧಿಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಮಳಿಗೆ ಪಡೆದವರು ಬಾಕಿ ಬಾಡಿಗೆ ನೀಡಿ, ಮಳಿಗೆಗಳನ್ನು ತಕ್ಷಣ ಖಾಲಿ ಮಾಡಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಯಾವುದೇ ನೋಟಿಸ್ ನೀಡದೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ನಗರಸಭೆ ಪೌರಾಯುಕ್ತರು ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಬೇಕು. ಅವಧಿ ಮುಗಿದ ಮಳಿಗೆಗಳಿಗೆ ಬೀಗ ಹಾಕಿ ತಮ್ಮ ಸುಪರ್ದಿಗೆ ಪಡೆಯಬೇಕು’ ಎಂದು ಸೂಚಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್‌ ಮಲ್ಲಿಕಾರ್ಜುನ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಂಡೆಪ್ಪ ಆಕಳ, ಯಾದಗಿರಿ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಇತರರು ಸಭೆಯಲ್ಲಿ ಇದ್ದರು.

‘ಜಿಲ್ಲೆಯ ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳುವ ಜೊತೆಗೆ ನೀರಿನ ಬಾಕಿ ಕರ ವಸೂಲಿ ಮಾಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಸಂಬಳ ತಡೆ ಹಿಡಿಯಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಎಚ್ಚರಿಕೆ ನೀಡಿದರು.

ಸರ್ಕಾರ ಕುಡಿಯುವ ನೀರಿನ ಸಂಬಂಧ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಳಸಿ ಸೌಕರ್ಯಗಳನ್ನು ನೀಡುತ್ತಿದ್ದು, ಅವುಗಳ ನಿರ್ವಹಣೆಗಾಗಿ ತಿಂಗಳಿಗೆ ಕೇವಲ ಗೃಹೋಪಯೋಗಿ ಬಳಕೆಗೆ ₹ 120 ಹಾಗೂ ವಾಣಿಜ್ಯ ಬಳಕೆಗೆ ₹ 240 ನಿಗದಿಗೊಳಿಸಿದ್ದು, ಬಹುತೇಕ ಜನರು ಇದನ್ನು ಸಕಾಲದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಪಾವತಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಹ ಇದನ್ನು ವಸೂಲು ಮಾಡಲು ಕ್ರಮವಹಿಸದಿರುವುದು ಕಂಡುಬಂದಿದೆ. ಈ ತಿಂಗಳ ಕೊನೆಯಲ್ಲಿ ಮತ್ತೊಮ್ಮೆ ನಗರ ಸ್ಥಳೀಯ ಸಂಸ್ಥೆಗಳ ಸಭೆ ಕರೆಯಲಾಗುವುದು. ಅಲ್ಲಿಯವರೆಗೆ ಶೇ 90ರಷ್ಟು ಬಾಕಿ ಕರ ವಸೂಲಿ ಮಾಡಿರಬೇಕು ಎಂದು ನಗರಸಭೆ ಪೌರಾಯುಕ್ತರು ಮತ್ತು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಯಾದಗಿರಿ, ಶಹಾಪುರ, ಸುರಪುರ ನಗರಸಭೆ ಹಾಗೂ ಗುರುಮಠಕಲ್, ಕೆಂಭಾವಿ, ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಗುತ್ತಿಗೆದಾರರು ಗುತ್ತಿಗೆ ಪಡೆದು ಕಾಮಗಾರಿ ನಿರ್ವಹಿಸದಿದ್ದಲ್ಲಿ ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಆ ಕಾಮಗಾರಿಗಳನ್ನು ರದ್ದುಪಡಿಸುವ ಜತೆಗೆ ಹೊಸ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಬೇಕು. ಅಲ್ಲದೇ, ವಿವಿಧ ಕುಡಿಯುವ ನೀರಿನ ಯೋಜನೆ, ಘನತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆ, ಇತ್ಯಾದಿ ಕಾಮಗಾರಿಗಳಿಗಾಗಿ ಭೂ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ನಗರಸಭೆ ಪೌರಾಯುಕ್ತರು ಮತ್ತು ಪುರಸಭೆ ಮುಖ್ಯಾಧಿಕಾರಿಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ, ಹಲವು ಯೋಜನೆಗಳ ಪ್ರಗತಿ, ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.

**
ಶೌಚಾಲಯ ನಿರ್ಮಾಣ ವಿಚಾರದಲ್ಲಿ ಜನರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಶೌಚಾಲಯ ಬಳಕೆಯನ್ನು ರೂಢಿಸಿಕೊಳ್ಳಬೇಕು
ಜೆ.ಮಂಜುನಾಥ್, ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.