ADVERTISEMENT

ಹುಣಸಗಿ: ಎಳನೀರಿಗೆ ಭಾರಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2016, 11:30 IST
Last Updated 4 ಮೇ 2016, 11:30 IST
ಹುಣಸಗಿ ಪಟ್ಟಣದಲ್ಲಿ ಎಳನೀರು ಮಾರಾಟದಲ್ಲಿ ನಿರತನಾಗಿರುವ ಅಂಗಡಿ ಮಾಲೀಕ
ಹುಣಸಗಿ ಪಟ್ಟಣದಲ್ಲಿ ಎಳನೀರು ಮಾರಾಟದಲ್ಲಿ ನಿರತನಾಗಿರುವ ಅಂಗಡಿ ಮಾಲೀಕ   

ಹುಣಸಗಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಲೇ ಇದೆ. ಇದರಿಂದ ಎಳನೀರಿಗೆ ಭಾರಿ ಬೇಡಿಕೆ ಉಂಟಾಗಿದೆ.
ಬೆಳಿಗ್ಗೆ ಏಳುತ್ತಲೇ ಸೂರ್ಯನ ಬಿಸಿಲು ಚುರ್‌ ಎನ್ನುವಂತಾಗಿದೆ. ಬೆಳಿಗ್ಗೆ 10 ಗಂಟೆ ಹೊತ್ತಿಗೆ ಬಿಸಿಲ ಝಳ ತೀವ್ರ ಏರುಮುಖವಾಗುತ್ತಿದ್ದು, ಬೈಕ್ ಸವಾರರು ಪರದಾಡುವಂತಾಗಿದೆ.

‘ಇಷ್ಟೊಂದು ಬಿಸಿಲು ಈ ಹಿಂದೆ ಅನುಭವಕ್ಕೆ ಬಂದಿರಲಿಲ್ಲ. ಬಿಸಿಲಲ್ಲಿ ಸುತ್ತಾಡಿದರೆ, ಚರ್ಮ ಸುಟ್ಟ ಅನುಭವ ವಾಗುತ್ತಿದೆ. ಹೀಗಾಗಿ, ಮಧ್ಯಾಹ್ನದ ಹೊತ್ತು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ’ ಎಂದು ಉಪನ್ಯಾಸಕ ಹಳ್ಳೆಪ್ಪ ಮುಕ್ಕಣ್ಣ ಹೇಳುತ್ತಾರೆ.

‘ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮನೆ ಯಲ್ಲಿ ಫ್ಯಾನ್ ಹಾಕಿದರೆ ಅದರಿಂದಲೂ ಬಿಸಿಗಾಳಿ ಸೂಸುತ್ತಿವೆ. ಇದರಿಂದಾಗಿ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ಅಲ್ಲದೆ, ಸಂಜೆಯವರೆಗೆ ಮನೆಬಿಟ್ಟು ಹೋರಹೋಹದಂತಾಗಿದೆ’ ಎಂದು ವಜ್ಜಲ ಗ್ರಾಮದ  ಸಂತೋಷ ಪಾಟೀಲ ಹೇಳುತ್ತಾರೆ.

ಹೆಚ್ಚಿದ ಎಳನೀರು ಬೇಡಿಕೆ: ಕಳೆದ ಒಂದು ತಿಂಗಳಿನಿಂದಲೂ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಸಿಲಿನಿಂದ ಬಸವಳಿದ ಜನತೆ ಎಳನೀರು ಮೊರೆ ಹೋಗುತ್ತಿದ್ದಾರೆ.

ಹುಣಸಗಿ ಪಟ್ಟಣ ಸೇರಿದಂತೆ ಕೊಡೇಕಲ್ಲ, ನಾರಾಯಣಪುರ, ರಾಜನಕೋಳೂರು ಮತ್ತಿತರ ಗ್ರಾಮಗ ಳಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಿಯೇ ಎಳನೀರ ಮಾರಾಟ ಜೋರಾಗಿದೆ. ಎಳನೀರ ಕಾಯಿಯೊಂದಕ್ಕೆ ₹25 ರಿಂದ ₹30 ಇದ್ದರೂ ಸಹ ಎಳನೀರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.

‘ಈ ಮೊದಲು ಜನತೆ ತಂಪು ಪಾನೀಯಗಳತ್ತ ಹೆಚ್ಚು ಒಲವು ತೋರಿಸುತ್ತಿದ್ದರು. ಆದರೆ, ಪ್ರತಿ ವರ್ಷಕ್ಕಿಂತ ಈ ವರ್ಷ ತಂಪು ಪಾನೀಯಗಳಿಗೆ ಗಣನೀಯವಾಗಿ ಬೇಡಿಕೆ ಕುಸಿದಿದೆ. ಆದರೆ, ತಂಪು ಮಜ್ಜಿಗೆ ಬೇಡಿಕೆ ಹೆಚ್ಚಾಗಿದ್ದು, ನಿತ್ಯ ಸಾಕಷ್ಟು ಪ್ರಮಾಣದಲ್ಲಿ ಮಜ್ಜಿಗೆ ಪ್ಯಾಕೆಟ್‌ಗಳನ್ನು ತರಿಸಲಾಗುತ್ತಿದೆ’ ಎಂದು ಹುಣಸಗಿಯ ವಿಶ್ವನಾಥ ಮಾರನಾಳ ಹೇಳುತ್ತಾರೆ.

‘ಪ್ರತಿ ವಾರವೂ ಕರ್ನಾಟಕದ ಚಳ್ಳಕೆರೆ ಹಾಗೂ ಇತರ ಭಾಗಗಳಿಂದ ಲಾರಿಗಳ ಮೂಲಕ ಎಳನೀರು ಬರುತ್ತದೆ’ ಎಂದು ಹುಣಸಗಿಯ ಎಳನೀರ ವ್ಯಾಪಾರಿ ಶರಮುದ್ದೀನ್ ಹೇಳುತ್ತಾರೆ.

15 ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಿದ್ದು, ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ರೈತರೂ ತೆಂಗಿನ ಮರಗಳನ್ನು ಬೆಳೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ರಾಜನಕೋಳೂರ ಗ್ರಾಮದ ಸೋಮನಗೌಡ ಗುಳಬಾಳ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.