ADVERTISEMENT

ಹೇಮರೆಡ್ಡಿ ಮಲ್ಲಮ್ಮ ಮಹಿಳೆಯರಿಗೆ ಮಾದರಿ

​ಪ್ರಜಾವಾಣಿ ವಾರ್ತೆ
Published 23 ಮೇ 2017, 7:27 IST
Last Updated 23 ಮೇ 2017, 7:27 IST
ಯಾದಗಿರಿ ಸಮೀಪದ ಹೆಡಗಿಮದ್ರಾ ಗ್ರಾಮದ ಮಠದಲ್ಲಿ ಭಾನುವಾರ ರಾತ್ರಿ ನಡೆದ ಮಠದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರ 27ನೇ ಜನ್ಮ ದಿನೋತ್ಸವ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಉದ್ಘಾಟಿಸಿದರು
ಯಾದಗಿರಿ ಸಮೀಪದ ಹೆಡಗಿಮದ್ರಾ ಗ್ರಾಮದ ಮಠದಲ್ಲಿ ಭಾನುವಾರ ರಾತ್ರಿ ನಡೆದ ಮಠದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರ 27ನೇ ಜನ್ಮ ದಿನೋತ್ಸವ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಉದ್ಘಾಟಿಸಿದರು   

ಯಾದಗಿರಿ: ‘ಕಷ್ಟದಲ್ಲೂ ಎಲ್ಲರ ಒಳಿತನ್ನೇ ಬಯಸಿದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ಆದರ್ಶ ಎಲ್ಲಾ ಮಹಿಳೆಯರಿಗೆ ಮಾದರಿಯಾಗಿದೆ’ ಎಂದು ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಹೇಳಿದರು.

ಸಮೀಪದ ಹೆಡಗಿಮದ್ರಾ ಗ್ರಾಮದ ಮಠದಲ್ಲಿ ಭಾನುವಾರ ರಾತ್ರಿ ನಡೆದ ಮಠದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರ 27ನೇ ಜನ್ಮ ದಿನೋತ್ಸವ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಗಹಿಸಿ ಅವರು ಮಾತನಾಡಿದರು.

‘ಮಹಿಳೆ ಸಹನ ಮೂರ್ತಿ. ಭೂಮಿಗೆ ಮಹಿಳೆಯನ್ನು ಹೋಲಿಸಲಾಗುತ್ತದೆ. ಕರುಣಾಮಯಿ ಹೆಣ್ಣು ವಿಶ್ವವನ್ನು ಪೊರೆಯುವ ತಾಯಂತೆ. ಅಂತಹ ಸ್ವರೂಪಿಯಾಗಿ ಮಲ್ಲಮ್ಮ ಅವತರಿಸಿದ್ದರು. ಸಮಾಜ ಸುಧಾರಣೆಯನ್ನು ಮಾಡುವುದು ಅಷ್ಟು ಸುಲಭವಲ್ಲ.

ADVERTISEMENT

ಅದರಲ್ಲೂ ಮಹಿಳೆ ಸಮಾಜ ಸುಧಾರಣೆ ಮಾಡಲು ಮುಂದುಬರದ ಕಾಲದಲ್ಲಿ ಹೇಮರಡ್ಡಿ ಮಲ್ಲಮ್ಮ ಮಹಿಳೆಯರ ಪ್ರತಿನಿಧಿಯಾಗಿ ನಿಲ್ಲುತ್ತಾರೆ. ಅವರ ಆತ್ಮಬಲವನ್ನು ಎಲ್ಲಾ ಮಹಿಳೆಯರು ಹೊಂದಬೇಕು’ ಎಂದು ಸಲಹೆ ನೀಡಿದರು.

ಮಠದ ವಸತಿ ಸಹಿತ ಶಾಲೆ ಆರಂಭಿಸಲು ₹ 10 ಲಕ್ಷ ಧನ ಸಹಾಯ ಚೆಕ್‌ ವಿತರಿಸಿ ಮಾತನಾಡಿದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ, ‘ಶ್ರೀಮಠವು ಹಿಂದುಳಿದ ಗಡಿಭಾಗದಲ್ಲಿರುವ ಗ್ರಾಮೀಣ ಪ್ರದೇಶದ ಶೈಕ್ಷಣಿಕ ಏಳಿಗೆಗೆ ತನ್ನ ಕೊಡುಗೆ ನೀಡಲಿ.

ತುಮಕೂರಿನ ಸಿದ್ಧಗಂಗಾ ಮಠದಂತೆ ಅನ್ನ ಹಾಗೂ ಜ್ಞಾನ ದಾಸೋಹ ನೀಡಲಿ.  ಮಠದ ಅಭಿವೃದ್ಧಿಗಾಗಿ ಬೇಕಾದ 10 ಎಕರೆ ಜಮೀನನ್ನು ಸಹ ಒದಗಿಸಲು ಧನ ಸಹಾಯ ನೀಡುತ್ತೇನೆ’ ಎಂದು ಭರವಸೆ ನೀಡಿದರು.

‘ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಸಂಕಷ್ಟ ಅನುಭವಿಸಿಯೂ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದಂತೆ ನಾವೂ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು. ಹೇಮರೆಡ್ಡಿ ಮಲ್ಲಮ್ಮ ಅವರ ಆದರ್ಶಗಳು ಪ್ರಚುರ ಪಡಿಸಬೇಕು’ ಎಂದರು.

ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಮಹಾತ್ಮರ ಜಯಂತಿ ಆಚರಿಸುವ ಮೂಲಕ ಅವರ ತತ್ವಸಿದ್ಧಾಂತ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ’ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ವೆಂಕಟರೆಡ್ಡಿ ಮುದ್ನಾಳ, ರೆಡ್ಡಿ ಜಾಗೃತಿ ದಕ್ಷಿಣ ಭಾರತ ಘಟಕದ ಅಧ್ಯಕ್ಷ ಲಲ್ಲೇಶರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಮರೆಡ್ಡೆಪ್ಪ ತಂಗಡಗಿ, ಪ್ರಥಮ ದರ್ಜೆ ಗುತ್ತಿಗೆದಾರ ರಾಚಣ್ಣಗೌಡ ಮುದ್ನಾಳ, ಜೆಡಿಎಸ್ ಮುಖಂಡ ಹಣಮೇಗೌಡ ಬಿರನಕಲ್ಲ, ಚಿಕ್ಕಮಗಳೂರು ಜಿಲ್ಲಾ ರೆಡ್ಡಿ ಸಮಾಜದ ಪ್ರಧಾನ ಕಾರ್ಯದರ್ಶಿ ಶಾಂತರೆಡ್ಡಿ, ಎಸ್.ಬಿ. ಪಾಟೀಲ, ಕಿಶನರಾವ ಮಾಲಿಪಾಟೀಲ, ಡಾ.ಸಿ.ಎಂ.ಪಾಟೀಲ, ಮಲ್ಲಣ್ಣಗೌಡ ಉಕ್ಕನಾಳ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಭೀಮಣ್ಣಗೌಡ ಕ್ಯಾತನಾಳ ಸೇರಿದಂತೆ ಸಾವಿರಾರು ಭಕ್ತರು ಇದ್ದರು. ಮಲ್ಲಿಕಾರ್ಜುನ ನಾಯಕ ಕಟಕಟಿ ಸ್ವಾಗತಿಸಿದರು. ಅಮರಯ್ಯಸ್ವಾಮಿ ಚಾಲಿಬೆಂಚಿ ಕಾರ್ಯಕ್ರಮ ನಿರೂಪಿಸಿದರು.

* * 

ಹೈದರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಮಾಡಲು ಮಠಮಾನ್ಯಗಳು ಕೊಡುಗೆ ನೀಡಿವೆ. ಈ ಮಾರ್ಗದಲ್ಲಿ ಹೆಡಗಿಮದ್ರಾ ಮಠವು ಸಾಗಲಿ.
ಗಾಲಿ ಜನಾರ್ದನರೆಡ್ಡಿ
ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.