ADVERTISEMENT

‘ಖರ್ಗೆ ಮಾತು ಕೇಳಿ ನನಗೆ ಸಚಿವ ಸ್ಥಾನ ನೀಡಲಿಲ್ಲ’

ಸಿದ್ದರಾಮಯ್ಯ, ಖರ್ಗೆ ವಿರುದ್ಧ ಶಾಸಕ ಮಾಲಕರಡ್ಡಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 10:29 IST
Last Updated 25 ಜೂನ್ 2016, 10:29 IST
ಶಾಸಕ ಮಾಲಕರಡ್ಡಿ ಅವರಿಗೆ ಸಚಿವ ಸ್ಥಾನ ಸಿಗದ ಕಾರಣ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಶಾಸಕ ಮಾಲಕರಡ್ಡಿ ಅವರಿಗೆ ಶುಕ್ರವಾರ ನೀಡಿದರು
ಶಾಸಕ ಮಾಲಕರಡ್ಡಿ ಅವರಿಗೆ ಸಚಿವ ಸ್ಥಾನ ಸಿಗದ ಕಾರಣ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಶಾಸಕ ಮಾಲಕರಡ್ಡಿ ಅವರಿಗೆ ಶುಕ್ರವಾರ ನೀಡಿದರು   

ಯಾದಗಿರಿ: ‘ಮುಖ್ಯಮಂತ್ರಿ ಸಿದ್ದರಾಮ ಯ್ಯ ಅಂಜುಬುರುಕ. ಖರ್ಗೆ ಮಾತು ಕೇಳಿ ನನಗೆ ಸಚಿವ ಸ್ಥಾನ ನೀಡಲಿಲ್ಲ. ಮಗನನ್ನು ಮಂತ್ರಿ ಮಾಡಲು ಸಚಿವ ಸಂಪುಟ ವಿಸ್ತರಣೆ ಹೆಸರಲ್ಲಿ ಪ್ರಜಾಪ್ರ ಭುತ್ವದ ಕಗ್ಗೊಲೆ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಎಂ ವಿರುದ್ಧ ಶಾಸಕ ಡಾ. ಎ.ಬಿ.ಮಾಲಕರಡ್ಡಿ ವಾಗ್ದಾಳಿ ನಡೆಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವ ಪಕ್ಷ ಹಿರಿಯರಿಗೆ ಗೌರವ ನೀಡುವುದಿಲ್ಲವೋ ಆ ಪಕ್ಷ ಅಭಿವೃದ್ಧಿಯಾಗುವುದಿಲ್ಲ. ಇದೇ ರೀತಿ ಪಕ್ಷದಲ್ಲಿ ಗೊಂದಲ ಮುಂದುವರೆದರೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವುದು ಕಷ್ಟ’ ಎಂದು ಎಚ್ಚರಿಕೆ ನೀಡಿದರು.

‘ಮಲ್ಲಿಕಾರ್ಜುನ ಖರ್ಗೆ ಕಂಡರೆ ನಡುಗುವ ಮುಖ್ಯಮಂತ್ರಿಯಿಂದ ಯಾವುದೇ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಮಾಡುತ್ತೇನೆ ಎನ್ನುತ್ತಿರುವ ಇಲ್ಲಿಯ ಹಿರಿಯ ನಾಯಕರು ಮಗನಿಗೆ ಮಂತ್ರಿ ಸ್ಥಾನ ಕೊಡಿಸುವಲ್ಲಿ ಮಾತ್ರ ಶ್ರಮಿಸಿದ್ದಾರೆ. ಇದೊಂದೇ ದೊಡ್ಡ ಸಾಧನೆ’ ಎಂದು ಖರ್ಗೆ ವಿರುದ್ಧ ನೇರ ಆರೋಪ ಮಾಡಿದರು.

‘ನಾನೆಂದೂ ಖರ್ಗೆ ಮನೆ ಮುಂದೆ ಹೋಗಿಲ್ಲ. ಸಚಿವ ಸ್ಥಾನ ಕೊಡಿಸಿ ಎಂದು ಕೂಡ ಕೇಳಿಲ್ಲ. ಆದರೆ, ಈ ಭಾಗದಲ್ಲಿ ನಾನು, ಮಾಲೀಕಯ್ಯ ಗುತ್ತೇದಾರ,  ಖಮರುಲ್ ಇಸ್ಲಾಂ ಎಲ್ಲರೂ ಆರು ಬಾರಿ ಗೆದ್ದಿದ್ದೇವೆ. ಆದರೆ ಖರ್ಗೆ ಹಿರಿಯರನ್ನು ಕೈಬಿಟ್ಟು ಮಗನಿಗೆ ಮಣೆ ಹಾಕಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನನಗೆ ಸಚಿವ ಸ್ಥಾನ ಏಕೆ ನೀಡಲಿಲ್ಲ ಎಂದು ಮುಖ್ಯಮಂತ್ರಿಗೆ ಕೇಳಿದರೆ, ಇದಕ್ಕೆ ನಿಮ್ಮ ಭಾಗದ ಲೀಡರ್(ಖರ್ಗೆ) ಮನಸ್ಸು ಮಾಡಬೇಕು ಎನ್ನುತ್ತಾರೆ. ನನಗೆ ಟಿಕೆಟ್‌ ತಪ್ಪಿಸಬೇಕು ಎಂದು ಪ್ರಯತ್ನಿಸಿದ್ದ ಖರ್ಗೆ, ಸಚಿವ ಸ್ಥಾನ ಕೊಡಿಸಲು ಹೇಗೆ ಶಿಫಾರಸು ಮಾಡುತ್ತಾರೆ’ ಎಂದು ಪ್ರಶ್ನಿಸಿದರು.

‘ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದರೆ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾರ ನ್ನೂ ಕೇಳದೆ, ವಿಚಾರಿಸದೆ ವಿಸ್ತರಣೆ ಮಾಡಿದ ಕಾರಣ ಪ್ರತಿಭಟನೆ, ಸಾರ್ವಜ ನಿಕ ಆಸ್ತಿಪಾಸ್ತಿ ಹಾನಿಯಾಗುತ್ತಿವೆ. ಇದಕ್ಕೆಲ್ಲ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರ ದ್ವಂದ್ವ ನಿಲುವುಗಳೇ ಕಾರಣ’ ಎಂದರು.

‘ಕಾಗೋಡು ತಿಮ್ಮಪ್ಪ ಮತ್ತು ರಮೇಶಕುಮಾರ ಅವರು ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ ಕಾರಣ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ಸರ್ಕಾರ ರಚನೆಗೆ ಉತ್ತರ ಕರ್ನಾಟದ ಶಾಸಕರು ಬೇಕು. ಆದರೆ ಸಚಿವ ಸ್ಥಾನ ನೀಡಬೇಕಾದಾಗ ಯಾರೂ ನೆನಪಿಗೆ ಬರಲ್ಲ. ಉತ್ತರ ಕಾರ್ನಾಟಕದ 96 ಕ್ಷೇತ್ರಗಳ ಪೈಕಿ 61 ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.

ಕನಿಷ್ಠ ಸಂಪುಟದ ಅರ್ಧದಷ್ಟು ಸಚಿವ ಸ್ಥಾನವನ್ನು ಈ ಭಾಗಕ್ಕೆ ನೀಡಬೇಕು ಎಂದು ಡಾ.ನಂಜುಂಡಪ್ಪ ವರದಿ ಹೇಳುತ್ತದೆ. ಆದರೆ ಮುಖ್ಯಮಂತ್ರಿ ನೀಡಿದ್ದು, ಕೇವಲ 12. ಹೀಗಾದರೆ ಈ ಭಾಗ ಹೇಗೆ ಅಭಿವೃದ್ಧಿ ಹೊಂದುತ್ತದೆ ಎಂದು ಡಾ. ಎ.ಬಿ.ಮಾಲಕರಡ್ಡಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.