ADVERTISEMENT

‘82 ಕೆರೆಗಳಿಗೆ ನೀರು ತುಂಬುವ ಗುರಿ’

​ಪ್ರಜಾವಾಣಿ ವಾರ್ತೆ
Published 27 ಮೇ 2017, 7:17 IST
Last Updated 27 ಮೇ 2017, 7:17 IST

ಯಾದಗಿರಿ: ‘ಕೆರೆಗಳಿಗೆ ನೀರು ತುಂಬುವ ಯೋಜನೆಯನ್ನು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿರುವುದರಿಂದ ಈ ಭಾಗದ ರೈತರ ಬಾಳು ಬಂಗಾರ ವಾಗಲಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಚಿಂಚನಸೂರ ಹೇಳಿದರು.

ಗುರುಮಠಕಲ್ ಕ್ಷೇತ್ರದ ಸನ್ನತಿ ಏತ ನೀರಾವರಿ ವ್ಯಾಪ್ತಿಯ ಯರಗೋಳ ದೊಡ್ಡ ಕೆರೆಗೆ ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದ ನಂತರ ಅವರು ಮಾತನಾಡಿದರು. ‘ಈ ಭಾಗದ ರಾಜಕೀಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆ ಅವರ ಬೇಡಿಕೆಯಂತೆ ಗುರುಮಠಕಲ್ ಕ್ಷೇತ್ರದ 35 ಕೆರೆಗಳಿಗೆ ನೀರು ತುಂಬುವ ಯೋಜನೆಯನ್ನು ರಾಜ್ಯದ ಮುಖ್ಯ ಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿ ದ್ದಾರೆ. ಇದರಿಂದ ಹಸಿರು ಕ್ರಾಂತಿಯಾಗಿ ನಮ್ಮ ಭಾಗದ ರೈತರು ಗುಳೆ ಹೋಗು ವುದು ತಪ್ಪಲಿದೆ’ ಎಂದರು.

‘₹440 ಕೋಟಿ ರೂಪಾಯಿಗಳಲ್ಲಿ ಭೀಮಾನದಿಯಿಂದ ನೀರು ತುಂಬಲು ಕೆಬಿಜೆಎನ್‌ಎಲ್‌ನಿಂದ ತಾಂತ್ರಿಕ ಒಪ್ಪಿಗೆ ನೀಡಲಾಗಿದೆ. ಕ್ಷೇತ್ರದ 35 ಕೆರೆಗಳಿಗೆ ನೀರು ತುಂಬುವುದರಿಂದ ಕಾಲುವೆ ಪಾತ್ರದಲ್ಲಿ ಬರುವ ಸುಮಾರು 20 ಕೆರೆಗಳಿಗೂ ನೀರು ತುಂಬುವುದಲ್ಲದೇ ಒಟ್ಟು 82 ಕೆರೆಗಳಿಗೆ ನೀರು ತುಂಬುವ ಗುರಿ ಹೊಂದಲಾಗಿದೆ. ಇದರಿಂದ ನಮ್ಮ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ತ ತಲಲಾಂತರಗಳವರೆಗೆ ಅನುಕೂಲ ವಾಗಲಿದೆ’ ಎಂದರು.

ADVERTISEMENT

ಅಂದಾಜು ₹70 ಕೋಟಿ ರೂಪಾಯಿಗಳಲ್ಲಿ ಸನ್ನತಿ ಏತ ನೀರಾವರಿ ವ್ಯಾಪ್ತಿಯ ಯರಗೋಳ ದೊಡ್ಡಕೆರೆ, ಠಾಣಗುಂದಿ, ಬಂದಳ್ಳಿ, ಯಡ್ಡಳ್ಳಿ, ಆಶನಾಳ, ಯಾದಗಿರಿ ಸೇರಿ ಒಟ್ಟು 6ಕೆರೆಗಳನ್ನು ತುಂಬುವ ಯೋಜನೆಗೆ ಕೇವಲ ಎರಡು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು. ಆರು ತಿಂಗಳಲ್ಲಿ ಪೂರ್ಣಗೊಳಿಸುವ ಕುರಿತು ಅಧಿಕಾರಿಗಳು ತಿಳಿಸಿರುವುದಾಗಿ ಮಾಹಿತಿ ನೀಡಿದರು.

ನಿರಂಜನ ಯರಗೋಳ, ವೆಂಕಾರೆಡ್ಡಿ ಮನೆಗಾರ್, ಲಿಂಗಪ್ಪ, ಸಾಹೇಬಗೌಡ, ಓಂನಮಃ ಶಿವಾಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಶರಣಪ್ಪ ಕೋಲ್ಕರ್ , ನೀರಾವರಿ ಅಧಿಕಾರಿ ಬೋಸ್ಕೆ, ಅರುಣ್ ಕುಮಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.