ADVERTISEMENT

ನಿಮ್ಮ ಪ್ರಶ್ನೆ ನಮ್ಮ ಉತ್ತರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2017, 19:30 IST
Last Updated 30 ಜುಲೈ 2017, 19:30 IST
ನಿಮ್ಮ ಪ್ರಶ್ನೆ ನಮ್ಮ ಉತ್ತರ
ನಿಮ್ಮ ಪ್ರಶ್ನೆ ನಮ್ಮ ಉತ್ತರ   

* ನನ್ನ ಹೆಸರು ರಿಚರ್ಡ್‌ ಫರ್ನಾಂಡೀಸ್‌. 10ನೇ ತರಗತಿ ಪೂರ್ಣಗೊಳಿಸಿ, ಆಟೊ ಮೊಬೈಲ್‌ ಡಿಪ್ಲೊಮೊ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿಕೊಂಡೆ. ಕೋರ್ಸ್‌ ಮುಗಿದಿದೆ. ಆದರೆ ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಲು ಇಷ್ಟವಿಲ್ಲ. ಡಿಸೈನ್‌ ಕ್ಷೇತ್ರದಲ್ಲಿ ನನಗೆ ಆಸಕ್ತಿ.ಮುಖ್ಯವಾಗಿ ಕಾರ್ ಡಿಸೈನಿಂಗ್ ಎಂದರೆ ನನಗೆ ತುಂಬ ಇಷ್ಟ. ಇದಕ್ಕೆ ಸಂಬಂಧಿಸಿದಂತೆ ಕೆಲವು ಪ್ರವೇಶ ಪರೀಕ್ಷೆಗಳನ್ನೂ ಬರೆದು ಉತ್ತಮ ಅಂಕ ಗಳಿಸಿದ್ದೇನೆ. ಈ ಬಗ್ಗೆ ಮನೆಯಲ್ಲೂ ತಿಳಿಸಿದ್ದೇನೆ. ಆದರೆ ನನ್ನ ಪೋಷಕರು ಈ ಕೋರ್ಸ್‌ ತುಂಬ ದುಬಾರಿ. ಹಣ ಹೊಂದಿಸಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಆದರೆ ನನಗೆ ಈ ಕ್ಷೇತ್ರವೇ ಹೆಚ್ಚು ಇಷ್ಟ. ನನ್ನ ಭವಿಷ್ಯಕ್ಕೆ ಉಪಯೋಗವಾಗುವಂತಹ ಸಲಹೆಗಳನ್ನು ತಿಳಿಸಿ.
ನೀವು ಎಂಜಿನಿಯರಿಂಗ್‌ ಪದವಿ ಮಾಡಿದ್ದರೆ ಚೆನ್ನಾಗಿತ್ತು. ನನಗೆ ಎಂಜಿನಿಯರಿಂಗ್‌ ಇಷ್ಟವಿಲ್ಲ ಎಂದು ತೀರ್ಮಾನಿಸುವುದು ಸರಿಯಲ್ಲ. ನಿಮಗೆ ಆಟೋಮೆಟಿವ್‌ ಅಥವಾ ಕಾರ್‌ ಡಿಸೈನ್‌ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಪದವಿ ಗಳಿಸುವುದು ಮುಖ್ಯ. ನಿಮ್ಮ ಪತ್ರದಲ್ಲಿ ಯಾವ ಕೋರ್ಸ್‌ಗೆ ಪ್ರವೇಶ ಸಿಕ್ಕಿದೆ, ಶುಲ್ಕ ಇತ್ಯಾದಿ ವಿವರಗಳಿಲ್ಲ.

ಶುಲ್ಕ ಕಟ್ಟಲು ಹಣದ ಕೊರತೆ ಇದ್ದಲ್ಲಿ ನೀವು ಎಚ್ಚರ ವಹಿಸಿ ಮುಂಚೆಯೇ ಸ್ಕಾಲರ್‌ಶಿಪ್ಸ್, ಬ್ಯಾಂಕ್‌ ಲೋನ್‌ ವಿವರಗಳನ್ನು ತಿಳಿಯಬೇಕಿತ್ತು. ನೀವೀಗ ಡಿಪ್ಲೊಮಾ ಸ್ಟೇಟಸ್ಸ್‌ನಿಂದ, ಹೆಚ್ಚು ಶಿಕ್ಷಣ ಪಡೆಯಬೇಕೆಂದರೆ CAD/CAM ಮಾಡಬಹುದು. ಇಲ್ಲಿ ಕಂಪ್ಯೂಟರ್‌ ಗೈಡೆಡ್‌ ಡಿಸೈನ್ಸ್‌ನಲ್ಲಿ ಪರಿಣತಿ ಪಡೆಯಬಹುದು.ಇದಕ್ಕಾಗಿ ಸರ್ಕಾರ, ಕೆಲವು ಸಂಸ್ಥೆಗಳು, ಸಮುದಾಯಗಳು ಸ್ಕಾಲರ್‌ಶಿಪ್‌ ನೀಡುತ್ತವೆ.

ಇದರಲ್ಲಿ ಮೆರಿಟ್‌ ಸ್ಕಾಲರ್‌ಶಿಫ್‌, ಮೆರಿಟ್‌ ಕಮ್ಯುನಿಕೇಶನ್‌ ಸ್ಕಾಲರ್‌ಶಿಪ್‌, ಲೋನ್‌ ಸ್ಕಾಲರ್‌ಶಿಪ್ ಸೌಲಭ್ಯವೂ ಇದೆ. ಜಾಮೀನು ಅಥವಾ ಭದ್ರತೆಯ ಅಗತ್ಯವಿಲ್ಲದೆ ಹಲವು ಬ್ಯಾಂಕ್‌ಗಳಲ್ಲಿ ₹4 ಲಕ್ಷದವರೆಗೂ ಸಾಲ ಸಿಗುತ್ತದೆ. ನೀವು ಪ್ರವೇಶ ಪಡೆದಿರುವ ಕೋರ್ಸ್‌ ಬಗ್ಗೆ ತಿಳಿಸಿದ್ದರೆ ಸಲಹೆ ಕೊಡಲು ಸುಲಭವಾಗುತ್ತಿತ್ತು. ನೀವು ನಿಮ್ಮ ಗುರಿ ಸಾಧಿಸಲೇಬೇಕು ಎಂದು ನಿರ್ಧರಿಸಿದ್ದರೆ ಆ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದುವರೆಯಿರಿ.

* ನನ್ನ ಹೆಸರು ಉದಯ ಕುಮಾರ್‌. ನಾನು ವಾಣಿಜ್ಯ ವಿಷಯದಲ್ಲಿ ದ್ವಿತೀಯ ಪಿಯು ಮುಗಿಸಿದ್ದೇನೆ. 2015ರಲ್ಲಿ ಬಿ.ಕಾಂಗೆ ಪ್ರವೇಶ ಪಡೆದೆ. ಒಂದು ವರ್ಷದ ನಂತರ ಮನೆಯ ಪರಿಸ್ಥಿತಿ ಬದಲಾಗಿ ಕೆಲಸಕ್ಕೆ ಸೇರಬೇಕಾಯಿತು. ಇದರಿಂದ ಓದಿನ ಕಡೆ ಗಮನ ಕೊಡಲು ಆಗಲಿಲ್ಲ. ಹೀಗಾಗಿ ಪ್ರಥಮ ಸೆಮಿಸ್ಟರ್‌ನಲ್ಲಿ ಕಡಿಮೆ ಅಂಕ ಗಳಿಸಿದೆ. ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆದರೂ ನಿತ್ಯ ಕಾಲೇಜಿಗೆ ಹಾಜರಾಗಲು ಆಗುತ್ತಿಲ್ಲ. ನನಗೆ ಓದು ಮುಂದುವರಿಸಬೇಕೆಂಬ ಆಸೆ ಇದೆ. ಈ ಬಗ್ಗೆ ಮಾರ್ಗದರ್ಶನ ನೀಡಿ.
ಮನೆಯಲ್ಲಿ ಸಂಕಷ್ಟದ ಸ್ಥಿತಿ ಇದ್ದರೂ ನಿಮ್ಮಲ್ಲಿರುವ ಓದುವ ಹಂಬಲವನ್ನು ಮೆಚ್ಚವಂಥದ್ದು; ಜೀವನದಲ್ಲಿ ಏನಾದರೂ ಸಾಧಿಸಲು ಛಲ ಇರಬೇಕು. ನೀವು ತೆಗೆದುಕೊಂಡಿರುವ ಕೋರ್ಸ್‌ ನಿಮಗೆ ಸರಿಯಾದದ್ದು ಎಂದು ನನಗೆ ಅನ್ನಿಸುತ್ತಿಲ್ಲ. ಮನೆಗೆ ಹಣ ಬೇಕಾದರೆ, ಕೆಲಸ ಮಾಡಿ. ನೀವು ದೂರಶಿಕ್ಷಣ. ಅಥವಾ ಓಪನ್‌ ಯೂನಿರ್ವಸಿಟಿ ಕೋರ್ಸ್‌ನ್ನು ಆಯ್ಕೆ ಮಾಡಿಕೊಳ್ಳಬಹುದು. ಪದವಿ ಗಳಿಸಿದರೆ ಮುಂದೆ ಜೀವನ ಚೆನ್ನಾಗಿರುತ್ತದೆ.

ADVERTISEMENT

* ನನ್ನ ಹೆಸರು ಚೇತನ್‌. ನಾನು ಬಿ.ಫಾರ್ಮಾ ಓದುತ್ತಿದ್ದೇನೆ. ಇದು ಐದು ವರ್ಷದ ಕೋರ್ಸ್‌. ಈ ಕೋರ್ಸ್‌ ಪೂರ್ಣಗೊಂಡ ನಂತರ ಮುಂದೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಗೊಂದಲದಲ್ಲಿದ್ದೇನೆ. ಉನ್ನತ ಶಿಕ್ಷಣ, ಉದ್ಯೋಗಾವಾಕಾಶದ ಬಗ್ಗೆ ಮಾಹಿತಿ ನೀಡಿ.
ಬಿ. ಫಾರ್ಮಾ ನಂತರ ಸ್ನಾತಕೋತ್ತರ ಪದವಿ ಪಡೆಯಬಹುದು. ಎಂ. ಫಾರ್ಮಾ, ಎಂ.ಟೆಕ್‌. ಫಾರ್ಮಾ, ಎಂ.ಎಸ್. ಫಾರ್ಮಾ, ಎಂ.ಬಿ.ಎ. ಫಾರ್ಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.

ನಮ್ಮ ದೇಶದಲ್ಲಿ ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಕೆಂದರೆ, ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆ ಮತ್ತು ಜಿಪ್ಯಾಟ್(ಗ್ರಾಜ್ಯುಯೇಟ್‌ ಫಾರ್ಮಾ ಆಪ್ಟಿಟ್ಯೂಡ್‌ ಟೆಸ್ಟ್‌)ಗಳಲ್ಲಿ ಉತ್ತೀರ್ಣರಾಗಬೇಕು. ಇದಲ್ಲದೆ ಕೆಲವು ವಿವಿಗಳು, ರಾಜ್ಯಮಟ್ಟದ ಕಾಲೇಜುಗಳಲ್ಲೂ ಪ್ರವೇಶಕ್ಕೆ ಅರ್ಹತಾ ಪರೀಕ್ಷೆ ಕಡ್ಡಾಯ. ಇದಕ್ಕೆಂದೇ ಪಿಜಿಸಿಇಟಿ ಮತ್ತು ಕೆಸಿಇಟಿ ಇತ್ಯಾದಿ ಪರೀಕ್ಷೆಗಳಿವೆ.\

ಪ್ರವೇಶಕ್ಕೆ ಜಿಪ್ಯಾಟ್‌ ರ್‍ಯಾಂಕ್‌ ಮತ್ತು ರಾಜ್ಯಮಟ್ಟದ ಅರ್ಹಾತಾ ಪರೀಕ್ಷೆಗಳಲ್ಲಿ ಗಳಿಸಿದ ರ್‍ಯಾಂಕ್‌ ಅನ್ನು ಪರಿಗಣಿಸಲಾಗುತ್ತದೆ. ಜಿಪ್ಯಾಟ್‌ ಪರೀಕ್ಷೆಯನ್ನು ಎಐಸಿಟಿಇ ಸಂಸ್ಥೆ ನಡೆಸುತ್ತದೆ. ಇದನ್ನು ಶಿಕ್ಷಣ ಸಂಸ್ಥೆಗಳಲ್ಲಿ, ವಿವಿಗಳಲ್ಲಿ, ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಸ್ನಾತಕೋತ್ತರ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ಈ ವರ್ಷ ಜನವರಿ 28 ಮತ್ತು 29ನೇ ತಾರೀಖು ಈ ಪರೀಕ್ಷೆ ನಡೆಯಿತು.

ಬಿಟ್ಸ್‌ ಪಿಲಾನಿ ಸಂಸ್ಥೆ ಆನ್‌ಲೈನ್‌ ಪ್ರವೇಶಾತಿ ಪರೀಕ್ಷೆಗಳನ್ನು ನಡೆಸುತ್ತದೆ. ಹೆಚ್ಚಿನ ಮಾಹಿತಿಗಾಗಿ www. bits-pi*ani.ac.in.mpharmaಗೆ ಭೇಟಿ ನೀಡಿ.

* ನನ್ನ ಹೆಸರು ಈಶ್ವರ ಪಾಟೀಲ್. ನಾನು ಎಂ.ಎ. ಪದವಿ ಗಳಿಸಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಯುವತಿಯೊಬ್ಬಳ ಪರಿಚಯವಾಯಿತು. ಆ ಪರಿಚಯ ಪ್ರೇಮವಾಗಿ, ಈಗ ವೈಷಮ್ಯಕ್ಕೆ ತಿರುಗಿದೆ. ಅವಳಿಂದಾಗಿ ಓದಿನ ಕಡೆ ಹೆಚ್ಚು ಗಮನ ಕೊಡಲಿಲ್ಲ. ಈಗ ಓದಲು ಶುರು ಮಾಡಿದರೂ ಮೊದಲಿನಂತೆ ಗಮನ ಕೊಡಲು ಆಗುತ್ತಿಲ್ಲ. ಪರಿಹಾರ ತಿಳಿಸಿ.
ನಿಮ್ಮ ತಪ್ಪನ್ನು ಅರಿತುಕೊಂಡಿರುವುದು ಸಂತೋಷ. ವಿದ್ಯಾರ್ಥಿಜೀವನದಲ್ಲಿ ಇವೆಲ್ಲಾ ಇದ್ದದ್ದೇ; ಪೂರ್ತಿ ಮುಗ್ಗರಿಸುವ ಮುನ್ನ ಎಚ್ಚೆತ್ತಿಕೊಂಡಿರುವುದು ಒಳ್ಳೆಯದು. ಮನಸ್ಸು ಎಲ್ಲಕ್ಕಿಂತ ಮುಖ್ಯ. ನಿಮ್ಮ ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿಟ್ಟರೆ, ಲವಲವಿಕೆ–ಏಕಾಗ್ರತೆಗಳು ಅವೇ ಬರುತ್ತವೆ.

ನಿತ್ಯ ವ್ಯಾಯಾಮ ಮಾಡಿ, ನೀವು ಸೇವಿಸುವ ಆಹಾರ ಕೂಡ ಮುಖ್ಯ. ತರಕಾರಿ, ಹಣ್ಣು, ಸಿಟ್ರಸ್‌ ಮತ್ತು ನಿಂಬೆ ಹಣ್ಣನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಿ. ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಹೆಚ್ಚು ಗಮನಕೊಡಿ ಜಯ ನಿಮ್ಮದೇ.

* ನನ್ನ ಹೆಸರು ಭವ್ಯ. ನಾನು ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದೇನೆ. ಶೇ 84ರಷ್ಟು ಅಂಕ ಗಳಿಸಿದ್ದೇನೆ. ನನಗೆ ಎಂಜಿನಿಯರಿಂಗ್ ಮಾಡಬೇಕೆಂಬ ಆಸೆ. ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಸರ್ಕಾರಿ ಕೋಟದಲ್ಲಿ ಸೀಟು ಕೂಡ ದೊರೆಯಿತು. ಆದರೆ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಶುಲ್ಕ ಪಾವತಿಸಲು ಹಣ ಹೊಂದಿಸುವುದು ಕಷ್ಟ. ಏನು ಮಾಡಲಿ?
‌ಮತ್ತೆ ಮತ್ತೆ ಎಲ್ಲ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ, ಹೇಳುವುದೇನೆಂದರೆ, ನೀವು ಯಾವುದೇ ಕೋರ್ಸ್‌ಗೆ ಸೇರುವ ಮುನ್ನ, ಪ್ರವೇಶ ಪಡೆಯಲು ಬಯಸುವ ವಿವಿ ಅಥವಾ ವಿದ್ಯಾಸಂಸ್ಥೆಯ ವೆಬ್‌ಸೈಟ್‌ಗೆ ಹೋಗಿ ಸ್ಕಾಲರ್‌ಶಿಪ್ ಮತ್ತು ಬ್ಯಾಂಕ್‌ಸಾಲದ ಮಾಹಿತಿ ಸಂಗ್ರಹಿಸಿ. ಇದರಿಂದ ನಿಮ್ಮ ಆತಂಕ ಕಡಿಮೆಯಾಗಿ, ಮುಂದಿನ ಮಾರ್ಗಗಳ ಬಗ್ಗೆ ದಾರಿ ತಿಳಿಯುತ್ತದೆ. CET Prospectusನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಆದಾಯ ಮಿತಿ ನಿಗದಿಪಡಿಸಿದ್ದು, ಪ್ರವೇಶದ ಸಮಯದಲ್ಲಿ ನಿಗದಿತ ಆದಾಯದ ಮಿತಿಯೊಳಗಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳಿಗೆ ನಿಗದಿಪಡಿಸಿರುವ ದರಗಳಂತೆ ಬೋಧನಾ ಶುಲ್ಕ, ಗ್ರಂಥಾಲಯ ಶುಲ್ಕ, ಕ್ರೀಡಾಶುಲ್ಕ, ಪ್ರಯೋಗಾಲಯದ ಶುಲ್ಕ, ಪರೀಕ್ಷಾ ಶುಲ್ಕಗಳಿಂದ ಸರ್ಕಾರ ವಿನಾಯಿತಿ ನೀಡುತ್ತದೆ. ಶೈಕ್ಷಣಿಕ ಸಾಲವೂ ದೊರೆಯುತ್ತದೆ. ಈ ಸಾಲದ ಮೇಲೆ ಶೇ 6 ರಿಯಾಯಿತಿ ಇದೆ. ಹೆಚ್ಚಿನ ಮಾಹಿತಿಗೆ, kea.kar.nic.in, kea.kar.nic.in/CET2005 ಅಥವಾ ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ. 

* ನನ್ನ ಹೆಸರು ಶಂಕರಯ್ಯ. ನಾನು 2011ರಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಗಳಿಸಿದ್ದೇನೆ. ನಂತರ ಮೂರು ವರ್ಷ ಯಾವುದೇ ಕೋರ್ಸ್‌ಗೆ ಸೇರಲಿಲ್ಲ. ಪ್ರಸ್ತುತ ನಾನು ಎಚ್‌ಜಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಎಂಬಿಎ ಮಾಡುವ ಉದ್ದೇಶವಿದೆ. ಎಂಬಿಎ ಮಾಡಿದರೆ ಸಾಕೆ? ಇದಕ್ಕಿಂತ ಉತ್ತಮ ಕೋರ್ಸ್‌ ಇದೆಯೆ?
ನೀವು ಈಗಾಗಲೆ ಆರು ವರ್ಷದ ಹಿಂದೆ ಪದವಿ ಪಡೆದಿದ್ದೀರಿ. 2014ರಿಂದ ಕೆಲಸ ಮಾಡುತ್ತಿದ್ದೀರಿ, ಅಲ್ಲೂ ಮೂರು ವರ್ಷದ ಅಂತರ!? ನೀವು ನಿಮ್ಮ ಆಸಕ್ತಿ, ಅರ್ಹತೆ, ಯಾವ ಕ್ಷೇತ್ರದಲ್ಲಿದೆ ಅನ್ನುವುದನ್ನು ಗುರುತಿಸಬೇಕು. ನೀವು ಕೆಲಸ ಮಾಡುತ್ತಿರುವ ಕಂಪೆನಿಯಲ್ಲಿ ಏನು ಮಾಡಿದರೂ ಭಡ್ತಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇದಕ್ಕಾಗಿ ಯಾವ ವಿಷಯದಲ್ಲಿ ಓದಿಕೊಂಡರೆ ಉತ್ತಮ ಎಂಬುದನ್ನು ನಿರ್ಧಿರಿಸಿ

* ನನ್ನ ಹೆಸರು ಲಿಪಿಕಾ. ನಾನು ಬೆಂಗಳೂರಿನ ಮೌಂಟ್‌ಕಾರ್ಮಲ್ ಕಾಲೇಜಿನಲ್ಲಿ ಬಿ.ಕಾಂಗೆ ಸೇರಿಕೊಂಡೆ. ಪದವಿಯ ಅವಧಿ ಮುಗಿದಿದೆ. ಆದರೆ ಕೆಲವು ವಿಷಯಗಳಲ್ಲಿ ಫೇಲ್‌ ಆಗಿದ್ದೇನೆ. ನಾನು ಅದೇ ಕೋರ್ಸ್‌ ಪೂರ್ಣಗೊಳಿಸಿದರೆ ಒಳ್ಳೆಯದೆ? ಅಥವಾ ಬೇರೆ ಮಾರ್ಗಗಳಿವೆಯೆ? ಕೆಲವು ವಿಷಯಗಳನ್ನು ಹಾಗೆ ಉಳಿಸಿಕೊಂಡಿರುವುದು ಸರಿಯಲ್ಲ. ನೀವು ಪದವಿ ಪೂರ್ಣಗೊಳಿಸಿ. ಪದವಿ ಗಳಿಸಿದರೆ ಅಡ್ವರ್ಟೈಸಿಂಗ್‌ ಅಂಡ್‌ ಪಬ್ಲಿಕ್‌ ರಿಲೇಶನ್ಸ್‌, ರಿಟೇಲ್ ಮ್ಯಾನೇಜ್‌ಮೆಂಟ್‌, ಈವೆಂಟ್‌ ಮ್ಯಾನೇಜ್‌ಮೆಂಟ್‌ – ಹೀಗೆ ಹಲವು ಕೋರ್ಸ್‌ಗಳನ್ನು ಮಾಡಬಹುದು. ಸ್ನಾತಕೋತ್ತರ ಪದವಿಗೂ ಪ್ರವೇಶ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.