ADVERTISEMENT

‘ಕನಸಿನ ಕನ್ಯೆ’ಯ ಕನಸು ನನಸಾದೀತೆ?

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST

ಮಥುರಾ: ‘ಬಸಂತಿ ಏಕ್‌ ಬಾರ್ ಬಾಹರ್‌ ಆಜಾವ್‌?’

ಇದು ‘ಶೋಲೆ’ ಚಿತ್ರದ ಡೈಲಾಗ್‌ ಅಲ್ಲ. ಆದರೆ, ಆಗ ಶೋಲೆ ಚಿತ್ರದ ‘ಬಸಂತಿ’ ನೋಡಿ ತಲೆ ಕೆಡಿಸಿಕೊಂಡಿ­ದ್ದ­ವರು ಆ  ಪಾತ್ರವನ್ನು ಇನ್ನೂ ಮರೆತಿಲ್ಲ. ಮಥುರಾದ ಹೊರ ವಲಯ­ದಲ್ಲಿರುವ ರಾಧಿಕಾ ವಿಹಾರಕ್ಕೆ ಕಳೆದ ವಾರ ಬಾಲಿ­ವುಡ್‌ ‘ಕನಸಿನ ಕನ್ಯೆ’ ಹೇಮಾ ಮಾಲಿನಿ ಬಂದಿದ್ದರು. ಅದನ್ನು ಕಂಡ ಹಿರಿ­ಯರೊಬ್ಬರು ಓಡಿ ಬಂದು,  ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಾಹೀ­ರಾತು ಫಲಕವನ್ನೇರಿ  ‘ಬಸಂತಿ ಏಕ್‌ ಬಾರ್ ಬಾಹರ್ ಆಜಾವ್‌’ ಎಂದು ಜೋರಾಗಿ ಕೂಗಿ ಕೈ ಬಿಸಿದಾಗ, ಅಲ್ಲಿ ಸೇರಿದ್ದ ನೂರಾರು ಜನ ಪುಳಕಿತಗೊಂಡಿ­ದ್ದರು.

‘62ವರ್ಷದ ಹಿರಿಯ ತನ್ನ ವಯಸ್ಸಿನ ಪರಿವೇ ಇಲ್ಲದೆ, ಚಿಗರೆಯಂತೆ ಹಾರಿ ಜಾಹೀರಾತು ಫಲಕವನ್ನೇರಿದ್ದ. ಆತ ಜಾಹೀರಾತು ಫಲಕವನ್ನೇರಿ ಹೇಮಾ ಮಾಲಿನಿ ಅವರಿಗೆ ಕೈಬೀಸಿದ ಕ್ಷಣಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದೇನೆ’ ಎಂದು ರಾಧಿಕಾ ವಿಹಾರದ ‘ಬಚ್ಚೂಲ್‌ ಫ್ಯಾಮಿಲಿ ಸೆಂಟರ್‌’ ಮಾಲೀಕ ಮಾಧವ್‌ ಗೌತಮ್‌ ಹೇಳಿದರು.

ಮಾಧವ್‌ಗೆ ಈಗ 35 ವರ್ಷ. ‘ಬಸಂತಿಯನ್ನು ಹತ್ತಿರದಿಂದ ನೋಡಿ ಕೈಕುಲುಕಬೇಕೆಂಬ ಹಂಬಲದಿಂದ ಬೈಕಿ­ನಲ್ಲಿ ಅವರ ಕಾರು ಹಿಂಬಾ­ಲಿಸಿದೆ. ಆದರೆ, ಸಾಧ್ಯವಾಗಲಿಲ್ಲ’ ಎಂದು ಬೇಸರ ಮಾಡಿ­ಕೊಂಡರು.

ಹೇಮಾಮಾಲಿನಿ ಮಾಜಿ ಕನಸಿನ ಕನ್ಯೆ. ಅವರ ಬಳಿಕ ಬಾಲಿವುಡ್‌ಗೆ ಅದೆಷ್ಟೋ ಕನಸಿನ ಕನ್ಯೆಯರ ಪ್ರವೇಶ­ವಾ­ಗಿದೆ. ಆದರೂ ಹೇಮಾ ಮಾಲಿನಿ ಅವರಿ­ಗೇನು ಬೇಡಿಕೆ ಕಡಿಮೆಯಾಗಿಲ್ಲ. ಅಭಿ­ಮಾ­ನಿಗಳ ಸಂಖ್ಯೆ ಇಳಿಮುಖ­ವಾಗಿಲ್ಲ. ಅವರನ್ನು ನೋಡಲು ಜನ ಹೇಗೆ ಮುಗಿ­ಬೀಳುತ್ತಾರೆ ಎನ್ನುವುದನ್ನು ಕಣ್ಣಾರೆ ನೋಡಲು ಮಥುರಾಗೆ ಬರಬೇಕು.

ಮಥುರಾ ಲೋಕಸಭೆ ಕ್ಷೇತ್ರದಿಂದ ಹೇಮಾ ಮಾಲಿನಿ ಬಿಜೆಪಿ ಅಭ್ಯರ್ಥಿ­ಯಾಗಿ ಸ್ಪರ್ಧಿಸಿದ್ದಾರೆ. ಬಾಲಿವುಡ್‌ ನಟಿ ಹೋದಲೆಲ್ಲ ಜನ ಜಾತ್ರೆ. ರಸ್ತೆ ಇಕ್ಕೆಲ್ಲಗಳಲ್ಲಿ, ಕಟ್ಟಡದ ಮಹಡಿ ಮೇಲೆ ಜನ ನಿಂತು ತಮ್ಮ ನೆಚ್ಚಿನ ನಟಿಗಾಗಿ ಗಂಟೆಗಟ್ಟಲೆ ಕಾಯುತ್ತಾರೆ. ಬಿಜೆಪಿ ಕಾರ್ಯ­ಕರ್ತರು, ಮುಖಂಡರು ಫೋ­ಟೋಗೆ ಪೋಸ್ ಕೊಡಲು ಪೈಪೋಟಿಗೆ  ಇಳಿಯುತ್ತಾರೆ.

ಐಷಾ­ರಾಮಿ ಕಾರಿನಲ್ಲಿ ಬರುವ ಚಿತ್ರತಾರೆ, ಕಾರಿನೊಳಗಿಂದಲೇ ಎದ್ದು ನಿಂತು ಕೈಬೀಸಿ ಮುಂದೆ ಹೋಗುತ್ತಾರೆ. ಅವರು ಹೊರ­ಬಂದು ಮಾತನಾಡದೆ ಹೋದಾಗ ಜನರ ಮುಖದ ಮೇಲೆ ನಿರಾಸೆ ಕಾರ್ಮೋಡ ಕವಿಯುತ್ತದೆ. ಕಾರಿ­ನಿಂದ ಇಳಿದರೆ ಗುಂಪು ತಮ್ಮನ್ನು ಸುತ್ತುವರಿದು ಎಳೆ­ದಾಡಿ ಬಿಡಬಹುದು ಎನ್ನುವ ಭಯ­ದಿಂದ ಹೇಮಾ ಮಾಲಿನಿ ಹಾಗೆ ಮಾಡು­ತ್ತಿದ್ದಾರೆ ಎಂದು ಸ್ಥಳೀಯ ಪತ್ರಕರ್ತ ಸುನಿಲ್‌ ಶರ್ಮ ವಿವರಿಸು­ತ್ತಾರೆ.

ಮಥುರಾದ ಲೋಕಸಭೆ ಚುನಾವಣೆ­ಯಲ್ಲಿ ಹೇಮಾ ಮಾಲಿನ ಹೆಸರಿನ ಮತ್ತೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ವಿರೋಧ ಪಕ್ಷಗಳು ಮತದಾರರಿಗೆ ಗೊಂದಲ ಉಂಟು­ಮಾಡುವ ಉದ್ದೇಶದಿಂದ ಅವರನ್ನು ಸ್ಪರ್ಧೆಗಿಳಿಸಿವೆ. ಈ ಪ್ರಯೋಗ ಯಶಸ್ವಿ­ಯಾಗುವುದಿಲ್ಲ. ಏಕೆಂದರೆ ಹೇಮಾ­ಮಾಲಿನಿ ಹೆಸರಾಂತ ಚಿತ್ರನಟಿ. ಅಲ್ಲದೆ, ಪಕ್ಷದ ಚಿಹ್ನೆ ಅವರ ಬೆಂಬಲಕ್ಕೆ ಇದೆ ಎನ್ನು­ವುದು ಸ್ಥಳೀಯ ಬಿಜೆಪಿ ಮುಖಂಡರ ಅಭಿಪ್ರಾಯ.

ಕೇಂದ್ರ ವಿಮಾನಯಾನ ಖಾತೆ ಸಚಿವ ಅಜಿತ್‌ ಸಿಂಗ್‌ ಅವರ ಪುತ್ರ ಜಯಂತ್‌ ಚೌಧರಿ ಆರ್‌ಎಲ್‌ಡಿ ಅಭ್ಯರ್ಥಿ­ಯಾಗಿದ್ದಾರೆ. ಇದು ಅವರಿಗೆ ಎರಡನೇ ಚುನಾವಣೆ. 2009ರಲ್ಲಿ ಇದೇ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಆಗ ಆರ್‌ಎಲ್‌ಡಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್‌ ಜತೆ ಮೈತ್ರಿ ಏರ್ಪಟ್ಟಿದೆ. ಬಿಎಸ್‌ಪಿ ಬ್ರಾಹ್ಮಣ ಸಮಾಜದ ಯೋಗೇಶ್‌ ದ್ವಿವೇದಿ ಅವರಿಗೆ ಟಿಕೆಟ್‌ ನೀಡಿದೆ. ಸಮಾಜವಾದಿ ಪಕ್ಷ ಠಾಕೂರ ಸಮುದಾಯದ ಚಂದನ್‌­ಸಿಂಗ್‌ ಅವರನ್ನು ಅಖಾಡಕ್ಕಿಳಿಸಿದೆ.

ಮಥುರಾದಲ್ಲಿ ಜಾಟರು ಅತಿದೊಡ್ಡ ಸಂಖ್ಯೆಯಲ್ಲಿದ್ದಾರೆ. 3.8 ಲಕ್ಷ ಮತ­ದಾರರಿದ್ದಾರೆ. ಬ್ರಾಹ್ಮಣರು 2.5 ಲಕ್ಷ, ಠಾಕೂರರು 3 ಲಕ್ಷ  ಮತ್ತು ಅಲ್ಪ­ಸಂಖ್ಯಾತ ಮುಸ್ಲಿಂ ಸಮುದಾಯದ ಸುಮಾರು ಒಂದು ಲಕ್ಷ ಮತದಾರ­ರಿದ್ದಾರೆ. ದೇವಸ್ಥಾನ ನಗರಿ ಮಥುರಾ­ದಲ್ಲೂ ಧರ್ಮದ ಹೆಸರಿನಲ್ಲಿ ಜನರನ್ನು ಸಂಘಟಿಸುವ ಪ್ರಯತ್ನ ನಡೆದಿದೆ. ಆದರೂ ಜಾತಿ ಚುನಾವಣೆಯಲ್ಲಿ ಮಹ­ತ್ವದ ಪಾತ್ರ ವಹಿಸಬಹುದು ಎಂದು ಪ್ರೇಂಪಾಲ್‌ ಅಭಿಪ್ರಾಯ ಪಡು­ತ್ತಾರೆ. ಮೇಲ್ನೋಟಕ್ಕೆ ಮಥುರಾದಲ್ಲಿ ಆರ್‌­ಎಲ್‌ಡಿ ಮತ್ತು ಬಿಜೆಪಿ ನಡುವೆ ಪೈಪೋಟಿ ಇದ್ದಂತಿದೆ.

ಬಹುತೇಕರು ಈ ಸಲ ಬದಲಾವಣೆ ಬಯಸಿದ್ದಾರೆ. ಆದರೆ, ಹೇಮಾ ಮಾಲಿನಿ ಹೊರಗಿನವರು ಎನ್ನುವ ಭಾವನೆ ಮತದಾರರಲ್ಲಿದೆ. ವೈಯಕ್ತಿಕ ವರ್ಚಸ್ಸು ಹಾಗೂ ಮೋದಿ ಬೆಂಬಲದ ಮೇಲೆ ಅವರ ಭವಿಷ್ಯ ನಿಂತಿದೆ.

ಜಾಟರು ಸಾರಾಸಗಟಾಗಿ ಆರ್‌­ಎಲ್‌ಡಿ ಬೆಂಬಲಿ­ಸಿದರೆ ಜಯಂತಿ ಚೌಧರಿ ಅವರನ್ನು ಸೋಲಿಸುವುದು ಕಷ್ಟ. ಹೊಸ ಪೀಳಿಗೆ ಜಾಟ್‌ ಮತ­ದಾರರು ಮೋದಿ ಕಡೆ ಒಲುವು ತೋರು­ತ್ತಿದ್ದಾರೆ. ಅಲ್ಲದೆ, ಚರಣ್‌ಸಿಂಗ್‌ ಪತ್ನಿ ಹಾಗೂ ಪುತ್ರಿ ಹಿಂದೆ ಇದೇ ಕ್ಷೇತ್ರದಿಂದ ಸೋತಿದ್ದಾರೆ.

  ಒಂದು ಲಕ್ಷದಷ್ಟಿರುವ ಮುಸ್ಲಿಮರು ಯಾರಿಗೆ ಬೆಂಬಲಿಸುತ್ತಾರೆ. ಬ್ರಾಹ್ಮಣರು ಮತ್ತು ದಲಿತರು ಬಿಎಸ್‌ಪಿ ಜತೆ ಕೈ ಜೋಡಿಸಲಿದ್ದಾರೆಯೇ ಎನ್ನು­ವುದರ ಮೇಲೆ ಈ ಕ್ಷೇತ್ರದ ಫಲಿತಾಂಶ ನಿಂತಿದೆ ಎನ್ನುತ್ತಾರೆ ಸುನಿಲ್‌ ಶರ್ಮ.

ಮಥುರಾದಲ್ಲಿ ಬೇಕಾದಷ್ಟು ಸಮಸ್ಯೆ­ಗಳಿವೆ. ಯಮುನೆ ಮಲೀನವಾಗಿದ್ದಾಳೆ. ಮಾಲಿನ್ಯದ ವಿರುದ್ಧ ಬೇಕಾದಷ್ಟು ಹೋರಾ­ಟಗಳು ನಡೆದಿವೆ. ಆದರೂ ಪ್ರಯೋಜನವಾಗಿಲ್ಲ. ರಸ್ತೆಗಳು ಹದ­ಗೆಟ್ಟಿವೆ. ಪದೇ ಪದೇ ವಾಹನಗಳಿಂದಾಗಿ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಇದು­ವರೆಗೆ ಯಾರೂ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಂದು ದಶಕದಿಂದ ಹೈಕೋರ್ಟ್‌ ಪೀಠಕ್ಕಾಗಿ ಹೋರಾಟ ನಡೆಯುತ್ತಿದೆ. ಪ್ರತಿ ಸೋಮವಾರ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸುತ್ತಿದ್ದಾರೆ. ಈಗ ಮಥುರಾದ ಜನ ಹೈಕೋರ್ಟ್‌ಗೆ ಅಲಹಾಬಾದ್‌ಗೆ ಹೋಗಬೇಕು. ಇದು ಕನಿಷ್ಠ ಹತ್ತು ಗಂಟೆ ಹಾದಿ ಎಂದು ಮಥುರಾದ ಜೈಕೃಷ್ಣ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾರೆ.

ಬಾಲಿವುಡ್‌ ಕನಸಿನ ಕನ್ಯೆ, ಮಥುರಾ­ದಲ್ಲಿ ಕನಸುಗಳನ್ನು ಬಿತ್ತಿದ್ದಾರೆ.

ಉಳಿದ ಅಭ್ಯರ್ಥಿಗಳು ಬೇಕಾದಷ್ಟು ಭರವಸೆ­ಗಳನ್ನು ನೀಡುತ್ತಿದ್ದಾರೆ.

ಅಂತಿಮವಾಗಿ ಮತದಾರರ ಯಾರ ಪರವಾಗಿ ನಿಲ್ಲುತ್ತಾರೆ ಎನ್ನುವುದು ಯಕ್ಷ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.