ADVERTISEMENT

ಮತದಾನದ ಮಧ್ಯ ವಿಧ್ವಂಸಕ ಕೃತ್ಯಗಳು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2014, 14:23 IST
Last Updated 10 ಏಪ್ರಿಲ್ 2014, 14:23 IST
- ಸಾಂದರ್ಭಿಕ ಚಿತ್ರ.
- ಸಾಂದರ್ಭಿಕ ಚಿತ್ರ.   

ನವದೆಹಲಿ (ಪಿಟಿಐ): ಭಾರಿ ಭದ್ರತೆಯ ನಡುವೆ ಗುರುವಾರ ಬೆಳಿಗ್ಗೆಯಿಂದ ಆರಂಭಗೊಂಡಿದ್ದ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ತಮ್ಮ ಪ್ರತಿರೋಧ ವ್ಯಕ್ತಪಡಿಸಿ ಮಾವೋವಾದಿಗಳು ಜಾರ್ಖಂಡ್ ಹಾಗೂ ಬಿಹಾರದಲ್ಲಿ ಸ್ಫೋಟಗಳನ್ನು ನಡೆಸುವ ಮೂಲಕ ಅಟ್ಟಹಾಸ ಮೆರೆದಿದ್ದು, ಬಿಹಾರದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಬಲಿತೆಗೆದುಕೊಂಡಿದ್ದಾರೆ.

ನಕ್ಸಲ್‌ರು ಜಾರ್ಖಂಡ್‌ನಲ್ಲಿ ಮತದಾನ ಆರಂಭಕ್ಕೂ ಮುನ್ನ ಸರಣಿ ನೆಲಬಾಂಬ್ ಸ್ಫೋಟಿಸಿ, ಭದ್ರತಾ ಸಿಬ್ಬಂದಿಗಳ ಜತೆ ಗುಂಡಿನ ಚಕಮಕಿ ನಡೆಸಿದ ಘಟನೆ ವರದಿಯಾಗಿದ್ದು, ಪಟ್ನಾದ ಮುಂಗರ್‍ ಜಿಲ್ಲೆಯಲ್ಲಿ ನಕ್ಸಲ್‌ರು ಹುದುಗಿಸಿಟ್ಟಿದ್ದ ನೆಲಬಾಂಬ್‌ಗೆ ಚುನಾವಣಾ ಭದ್ರತೆಯಲ್ಲಿ ತೊಡಗಿದ್ದ ಇಬ್ಬರು ಕೇಂದ್ರಿಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಯೋಧರು ಮೃತಪಟ್ಟಿದ್ದಾರೆ. ಸಿಆರ್‌ಪಿಎಫ್ ಯೋಧರು ಬಲಿಯಾದ ಹಿನ್ನೆಲೆಯಲ್ಲಿ ಜಮುಯಿ ಜಿಲ್ಲಾಡಳಿತವು 12 ಮತಗಟ್ಟೆಗಳಲ್ಲಿನ ಮತದಾನವನ್ನು ರದ್ದುಗೊಳಿಸಿತು.

ಬಳಿಕ ಭದ್ರತಾ ಪಡೆಗಳು ಘಟನಾ ಸ್ಥಳದಲ್ಲಿ ಹುದುಗಿಸಿಟ್ಟಿದ್ದ ಎರಡು ಸುಧಾರಿತ ಸ್ಫೋಟಕಗಳನ್ನು ವಶಪಡಿಸಿಕೊಂಡವು.
ಇಷ್ಟೇ ಅಲ್ಲದೇ, ಭದ್ರತಾ ಪಡೆಗಳು ಗಯಾದಲ್ಲಿ ಎರಡು ಮತ್ತು ಔರಂಗಾಬಾದ್‌ನಲ್ಲಿ ಮೂರು ಮತಗಟ್ಟೆಗಳಲ್ಲಿ ಬಳಿ ಇರಿಸಲಾಗಿದ್ದ ಬಾಂಬ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ಮತ್ತೊಂದು ಪ್ರಕರಣದಲ್ಲಿ ಮಾವೋವಾದಿಗಳು ಬಿಹಾರ್‌ನ ಲಖಿಸರಾಯ್ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯೊಂದನ್ನು ಸ್ಫೋಟಿಸಿದ್ದು, ಶಾಲೆಯ ಆವರಣದ ಪತ್ತೆಯಾದ ಮೂರು ಸಜೀವ ಬಾಂಬ್‌ಗಳನ್ನುನಿಷ್ಕ್ರೀಯಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದಲ್ಲಿ ಮತದಾನದ ಭದ್ರತೆಗಾಗಿ 22 ಸಾವಿರ ಗೃಹ ರಕ್ಷಕ ದಳದ ಸಿಬ್ಬಂದಿ, ಬಿಹಾರ್ ಮಿಲಿಟರಿ ಪೊಲೀಸ್‌ನ 72 ತುಕಡಿಗಳು ಮತ್ತು ಕೇಂದ್ರಿಯ ಅರೆ ಸೇನಾಪಡೆಯ 163 ತುಕಡಿಗಳು ಸೇರಿದಂತೆ ಒಟ್ಟು 46ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಎ.ಕೆ.ಸಿನ್ಹಾ ಹೇಳಿದರು.

ಅಷ್ಟೇ ಅಲ್ಲದೇ, ನಕ್ಸಲ್ ಪೀಡಿತ ಪ್ರದೇಶದಲ್ಲಿ ವೈಮಾನಿಕ ಕಣ್ಗಾವಲು ಏರ್ಪಡಿಸುವ ನಿಟ್ಟಿನಲ್ಲಿ ಸೈನ್ಯದ ಮೂರು  ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಿನ್ಹಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.