ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತದಾನದ ಅಂತಿಮ ಚಿತ್ರಣ ಲಭ್ಯವಾಗಿದ್ದು, ಒಟ್ಟಾರೆ ಶೇ 67.28 ರಷ್ಟು ಮಂದಿ ತಮ್ಮ ಮತ ಚಲಾಯಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಸಲ ಒಟ್ಟಾರೆ ಮತದಾನ ಪ್ರಮಾಣದಲ್ಲಿ ಶೇ 8.48ರಷ್ಟು ಹೆಚ್ಚಳವಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ತಿಳಿಸಿದರು. ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಅಂದರೆ ಶೇ 77.18, ಬೆಂಗಳೂರು ದಕ್ಷಿಣದಲ್ಲಿ ಅತಿ ಕಡಿಮೆ ಅಂದರೆ ಶೇ 55.69ರಷ್ಟು ಮತದಾನವಾಗಿದೆ.
ಅಲ್ಪ ಅಂತರ: 1989ರಲ್ಲಿ 67.53ರಷ್ಟು ಮತದಾನವಾಗಿತ್ತು. ಅದನ್ನು ಹೊರತುಪಡಿಸಿದರೆ ಉಳಿದೆಲ್ಲ ಚುನಾವಣೆಗಳಿಗಿಂತ ಈ ಸಲ ಅಧಿಕ ಮತದಾನವಾಗಿದೆ. 1989ಕ್ಕಿಂತ ಈ ಬಾರಿ ಶೇ 0.25ರಷ್ಟು ಕಡಿಮೆ ಮತದಾನವಾಗಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ 71.29ರಷ್ಟು ಮತದಾನವಾಗಿತ್ತು. ಅದಕ್ಕೆ ಹೋಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ಶೇ 4.01ರಷ್ಟು ಕಡಿಮೆ ಮತದಾನವಾಗಿದೆ.
ಸಾಮಾನ್ಯವಾಗಿ ಹಿಂದೆಲ್ಲ ವಿಧಾನಸಭೆಗೆ ಹೋಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗುತ್ತಿತ್ತು. ಅದು ಈ ಬಾರಿಯೂ ಪುನರಾವರ್ತನೆಯಾಗಿದೆ.
ರಾಜಧಾನಿಯಲ್ಲಿ ಗಣನೀಯ ಹೆಚ್ಚಳ: 2009ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.
ಮೋದಿ ಪ್ರೇರಣೆ?: ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅಲೆಯಿಂದಾಗಿ ಈ ಬಾರಿ ರಾಜಧಾನಿಯಲ್ಲಿ ಮತದಾನ ಪ್ರಮಾಣ ಹೆಚ್ಚಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಹೊಸ ಮತದಾರರು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಮತದಾನ ಪ್ರಮಾಣ ಹೆಚ್ಚಳದ ಲಾಭ, ನಷ್ಟದ ಬಗ್ಗೆ ರಾಜಕೀಯ ವಲಯದಲ್ಲಿ ಲೆಕ್ಕಾಚಾರ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.