ADVERTISEMENT

ನಾಮಪತ್ರಗಳ ಪರಿಶೀಲನೆ: ಮೂವರ ಹಣೆಬರಹ ಇಂದು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:17 IST
Last Updated 25 ಏಪ್ರಿಲ್ 2018, 19:17 IST
ನಾಮಪತ್ರಗಳ ಪರಿಶೀಲನೆ: ಮೂವರ ಹಣೆಬರಹ ಇಂದು
ನಾಮಪತ್ರಗಳ ಪರಿಶೀಲನೆ: ಮೂವರ ಹಣೆಬರಹ ಇಂದು   

ಬೆಂಗಳೂರು: ಜೆಡಿಎಸ್‌ ಶಾಸಕ ಪಿಳ್ಳಮುನಿಶಾಮಪ್ಪ ನಾಮಪತ್ರ ತಿರಸ್ಕೃತಗೊಂಡಿದ್ದು, ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳ ನಾಮಪತ್ರಗಳ ಹಣೆಬರಹ ಗುರುವಾರ ನಿರ್ಧಾರವಾಗಲಿದೆ.

ವಿಧಾನಸಭೆ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ರಾಜ್ಯದಾದ್ಯಂತ ಬುಧವಾರ ನಡೆಯಿತು. ದೇವನಹಳ್ಳಿ ಕ್ಷೇತ್ರದಿಂದ ಪಕ್ಷೇತ‌ರ ಮತ್ತು ಜೆಡಿಎಸ್‌ ಅಭ್ಯರ್ಥಿಯಾಗಿ ಪಿಳ್ಳಮುನಿಶಾಮಪ್ಪ ಸಲ್ಲಿಸಿದ್ದ ಎರಡೂ ನಾಮಪತ್ರಗಳು ತಿರಸ್ಕೃತವಾಗಿವೆ.

ಬೀದರ್‌ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಅಶೋಕ ಖೇಣಿ ಮತ್ತು ಮುಳಬಾಗಿಲು ಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಕೊತ್ತೂರು ಜಿ. ಮಂಜುನಾಥ್‌ ಸಲ್ಲಿಸಿದ್ದ ನಾಮಪತ್ರಗಳನ್ನು ಊರ್ಜಿತ ಮಾಡಬಾರದು ಎಂಬ ಆಕ್ಷೇಪ ವ್ಯಕ್ತವಾಗಿದೆ.

ADVERTISEMENT

ಎರಡು ಮತಕ್ಷೇತ್ರಗಳಲ್ಲಿ ಹೆಸರು ಹೊಂದಿದ್ದಾರೆ ಎಂಬ ಕಾರಣಕ್ಕೆ ಕೆಜಿಎಫ್‌ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಾ ಶಶಿಧರ್‌ ಅವರ ನಾಮಪತ್ರವನ್ನು ಅಂಗೀಕರಿಸುವ ತೀರ್ಮಾನವನ್ನು ಚುನಾವಣಾಧಿಕಾರಿ ಮುಂದೂಡಿದ್ದಾರೆ.

ಪಿಳ್ಳಮುನಿಶಾಮಪ್ಪ ಅವರಿಗೆ ನೀಡಿದ್ದ ಬಿ ಫಾರಂ ಅನ್ನು ಕೊನೆಕ್ಷಣದಲ್ಲಿ ಬದಲಿಸಿ ನಿಸರ್ಗ ಎಲ್.ಎನ್.ನಾರಾಯಣಸ್ವಾಮಿಗೆ ಜೆಡಿಎಸ್‌ ನೀಡಿತ್ತು. ಜೆಡಿಎಸ್ ಅಭ್ಯರ್ಥಿಯಾಗಿ ನಾರಾಯಣ ಸ್ವಾಮಿ ಅವರನ್ನು ಪರಿಗಣಿಸಲಾಗಿದೆ.

‘ಅಶೋಕ ಖೇಣಿ ಅವರು ಅಮೆರಿಕದಲ್ಲಿ ವಾಸವಾಗಿದ್ದು, ಭಾರತದ ನಾಗರಿಕತ್ವ ಹೊಂದಿಲ್ಲ. ನೈಸ್‌ ಕಂಪನಿ ಹೆಸರಲ್ಲಿ ಸರ್ಕಾರದೊಂದಿಗೆ ಗುತ್ತಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕಾರಣ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು’ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಆಕ್ಷೇಪ ವ್ಯಕ್ತಪಡಿಸಿದರು.

ಖೇಣಿಯವರ ನಾಮಪತ್ರ ಪರಿಶೀಲನೆಗೆ ತಡೆ ನೀಡಲಾಗಿದೆ. ಗುರುವಾರ ವಿವರಣೆ ಕೊಡುವಂತೆ ಖೇಣಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ತಿಳಿಸಿದರು.

ಕೊತ್ತೂರು ಜಿ. ಮಂಜುನಾಥ್‌ ಅವರ ಜಾತಿ ಪ್ರಮಾಣ ಪತ್ರವನ್ನು ಹೈಕೋರ್ಟ್‌ ಅಸಿಂಧುಗೊಳಿಸಿರುವುದರಿಂದ ಇತರ ಅಭ್ಯರ್ಥಿಗಳು ನಾಮಪತ್ರ ಅಂಗೀಕರಿಸದಂತೆ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ, ನಾಮಪತ್ರ ಅಂಗೀಕಾರಕ್ಕೆ ಸಂಬಂಧಿಸಿದ ನಿರ್ಣಯವನ್ನು ಮುಂದೂಡಲಾಗಿದೆ.

ಕೋರ್ಟ್‌ ಬುಧವಾರ ತೀರ್ಪು ಪ್ರಕಟಿಸುವ ಬಗ್ಗೆ ಮಾಹಿತಿ ಇದ್ದ ಮಂಜುನಾಥ್‌, ತೀರ್ಪು ವ್ಯತಿರಿಕ್ತವಾಗಿ ಬಂದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕೈತಪ್ಪಬಾರದು ಎಂಬ ಕಾರಣಕ್ಕೆ ಕೋಲಾರ ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿಯೂ ನಾಮಪತ್ರ ಸಲ್ಲಿಸಿದ್ದರು. ಆ ನಾಮಪತ್ರ ಊರ್ಜಿತವಾಗಿದೆ. ಹೀಗಾಗಿ, ಮುಳಬಾಗಿಲಿನಲ್ಲಿ ನಾಮಪತ್ರ ತಿರಸ್ಕೃತವಾದರೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಅವರು ನಿರ್ಧರಿಸಿದ್ದಾರೆ.

ತುಮಕೂರು ಮತ್ತು ಕೆಜಿಎಫ್‌ ತಾಲ್ಲೂಕಿನ ಬೇತಮಂಗಲ ಗ್ರಾಮ ಸೇರಿ ಎರಡು ಕಡೆ ಮತದಾರರ ಪಟ್ಟಿಯಲ್ಲಿ ರೂಪಾ ಹೆಸರು ಹೊಂದಿದ್ದಾರೆ ಎಂದು ಕೆಜೆಎಫ್‌ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆಕ್ಷೇಪ ವ್ಯಕ್ತಪಡಿಸಿದರು.

‘ತುಮಕೂರಿನ ಮತದಾರರ ಪಟ್ಟಿಯಿಂದ ನನ್ನ ಹೆಸರು ಕೈಬಿಡುವಂತೆ ಅಲ್ಲಿನ ಚುನಾವಣಾ ಶಾಖೆಗೆ ಈ ಹಿಂದೆಯೇ ಅರ್ಜಿ ಸಲ್ಲಿಸಿದ್ದೇನೆ. ಈ ಕುರಿತ ಸ್ವೀಕೃತಿ ಪತ್ರ ನನ್ನ ಬಳಿ ಇದೆ’ ಎಂದು ರೂಪಾ ಸ್ಪಷ್ಟನೆ ನೀಡಿದ್ದಾರೆ.

3,374 ಅಭ್ಯರ್ಥಿಗಳಿಂದ ನಾಮಪತ್ರ: ಎಲ್ಲ 224 ಕ್ಷೇತ್ರಗಳಿಗೆ ಒಟ್ಟು 3,374 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಮುಳಬಾಗಿಲು ಕ್ಷೇತ್ರದಲ್ಲಿ ಅತಿ ಹೆಚ್ಚು 60 ಅಭ್ಯರ್ಥಿಗಳ ಉಮೇದುವಾರಿಕೆ ಸಲ್ಲಿಕೆಯಾಗಿದೆ.

ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ನಾಮಪತ್ರ ಪರಿಶೀಲನೆ ಕಾರ್ಯ ಮುಂದುವರಿಸಿದೆ. ಕಣದಲ್ಲಿರುವ ಉಳಿಯುವ ಅಭ್ಯರ್ಥಿಗಳ ಸಂಖ್ಯೆ ಶುಕ್ರವಾರ (ಏ. 27) ಸ್ಪಷ್ಟವಾಗಲಿದೆ ಎಂದರು. ವರುಣಾದಲ್ಲಿ 35, ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ 32, ರಾಯಚೂರಿನಲ್ಲಿ 30 ನಾಮಪತ್ರಗಳು ಸಲ್ಲಿಕೆಯಾಗಿವೆ. 95 ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ ಎಂದೂ ಅವರು ವಿವರಿಸಿದರು.

80 ವರ್ಷ ದಾಟಿದ ಅಭ್ಯರ್ಥಿಗಳು: 80ರಿಂದ 90 ವಯೋಮಾನದ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ, ಕಾಂಗ್ರೆಸ್‌ನಿಂದ ಮೂವರು, ಬಿಜೆಪಿ ಮತ್ತು‌ ಜೆಡಿಎಸ್‌ನಿಂದ ತಲಾ ಒಬ್ಬ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಸಾಗರದಿಂದ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ (87) ಅತೀ ಹಿರಿಯ ಅಭ್ಯರ್ಥಿ. ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ (86) ಎರಡನೇ ಅತಿ ಹಿರಿಯ ಅಭ್ಯರ್ಥಿ. ಯಾದಗಿರಿಯ ಕಾಂಗ್ರೆಸ್‌ ಅಭ್ಯರ್ಥಿ ಎ.ಬಿ. ಮಾಲಕರಡ್ಡಿ (82), ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ (82), ಸಿಂದಗಿಯ ಜೆಡಿಎಸ್‌ ಅಭ್ಯರ್ಥಿ ಎಂ.ಸಿ. ಮನಗೊಳಿ (82) ಹಿರಿಯ ಅಭ್ಯರ್ಥಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.