ADVERTISEMENT

ಮಾತೆ ಮಹಾದೇವಿಗೆ ಹೊರಟ್ಟಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:44 IST
Last Updated 8 ಫೆಬ್ರುವರಿ 2018, 9:44 IST

ಹುಬ್ಬಳ್ಳಿ: ಕೂಡಲಸಂಗಮ ಬಸವ ಪೀಠದ ಮಾತೆ ಮಹಾದೇವಿ ಅವರು, ಹಾನಗಲ್‌ ಕುಮಾರ ಸ್ವಾಮೀಜಿ ಬಗ್ಗೆ ವಿನಾಕಾರಣ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಶಾಸಕ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

‘115 ವರ್ಷಗಳ ಹಿಂದಿನ ಕಥೆಯನ್ನು ತೆಗೆದು ಗೊಂದಲ ಎಬ್ಬಿಸುವುದರಿಂದ ನಿಮಗೆ ಆಗುವ ಲಾಭವಾದರೂ ಏನು? ನಿಮ್ಮ ಹೇಳಿಕೆ ಜನರ ಭಾವನೆಗೆ ಧಕ್ಕೆ ತರುವಂತೆ ಇದ್ದರೂ ನೀವು ಅರಿತುಕೊಳ್ಳುವುದಿಲ್ಲವೇಕೆ? ಯಾಕೆ ಹೀಗೆ ಮಾಡುತ್ತಿದ್ದೀರಿ? ಈ ವಿಷಯ ಮಾತನಾಡದಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮ್ಮ ಹೋರಾಟ ಹತ್ತಿಕ್ಕುವುದು ನಿಮ್ಮ ಉದ್ದೇಶವಾಗಿದೆಯೇ’ ಎಂದು ಹೊರಟ್ಟಿ ಪ್ರಶ್ನಿಸಿದ್ದಾರೆ.

‘ವೀರಶೈವ ಮಹಾಸಭಾ ಆರಂಭಿಸಿದಾಗ ನಾವು– ನೀವು ಹುಟ್ಟಿರಲಿಲ್ಲ. ಅದರ ಪ್ರಾರಂಭದ ಪತ್ರದಲ್ಲಿ ಓಂ ಬಸವಲಿಂಗಾಯ ನಮಃ ಎಂದು ಕುಮಾರಸ್ವಾಮೀಜಿ ನಮೂದಿಸಿದ್ದರು. ಅವರನ್ನು ಟೀಕೆ ಮಾಡಿದರೆ, ಅವರೇ ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ಶಿಕ್ಷಣ ಪಡೆದ ನಾಡಿನ ಸಾವಿರಾರು ಪೂಜ್ಯರಿಗೆ ನೋವಾಗುತ್ತದೆ’ ಎಂದು ಮಾತೆ ಮಹಾದೇವಿ ಅವರಿಗೆ ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ADVERTISEMENT

‘ಲಿಂಗಾನಂದ ಸ್ವಾಮೀಜಿ ಅವರನ್ನು ಯಾರಾದರೂ ಟೀಕಿಸಿದರೆ ನಮಗೆ, ನಿಮಗೆ ಹೇಗೆ ನೋವಾಗುವುದೋ ಹಾಗೆಯೇ ಉಳಿದವರು ಕೂಡ ನೊಂದುಕೊಳ್ಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಾಯಿ ಚಪಲಕ್ಕೆ ಮಾತನಾಡಿದರೆ ಆ ಎಲ್ಲ ಸ್ವಾಮೀಜಿಗಳು ನಿಮಗೆ ಹಾಗೂ ನಮಗೆ ಬಹಿಷ್ಕಾರ ಹಾಕುವ ದಿನ ದೂರವಿಲ್ಲ’ ಎಂದುಎಚ್ಚರಿಸಿದ್ದಾರೆ.

‘ಕೂಡಲೇ ಕುಮಾರ ಸ್ವಾಮೀಜಿ ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸುವುದು ಸೂಕ್ತ. ನಿಮ್ಮ ವಾದ ಮುಂದುವರಿಸಿದರೆ ತೊಂದರೆ ಯಾಗುವುದು ಯಾರಿಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

28ರಂದು ಮೈಸೂರಿನಲ್ಲಿ ಸಭೆ

ಮೈಸೂರು: ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಕುರಿತು ಜ. 28ರಂದು ಇಲ್ಲಿನ ಹೊಸಮಠದಲ್ಲಿ ಸಭೆ ಕರೆಯಲಾಗಿದೆ. ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲ ಸಭೆಯ ನೇತೃತ್ವ ವಹಿಸಲಿದ್ದಾರೆ. ಫೆಬ್ರುವರಿ ತಿಂಗಳಲ್ಲಿ ಮೈಸೂರು ಇಲ್ಲವೇ ಚಾಮರಾಜನಗರದಲ್ಲಿ ಬೃಹತ್ ಸಮಾವೇಶ ನಡೆಸಲು ಸಭೆಯಲ್ಲಿ ರೂಪರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಸವರಾಜಹೊರಟ್ಟಿ ಇಂದು ರಾಜೀನಾಮೆ: ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ಹಾಗೂ ಲಿಂಗಾಯತರ ವಿರುದ್ಧ ನಡೆಯುತ್ತಿರುವ ಟೀಕೆಯನ್ನು ವಿರೋಧಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ಸಲ್ಲಿಸುವುದಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಚಳವಳಿ ಹಾಳು ಮಾಡುವ ಮಾತು’

ಬೆಳಗಾವಿ: ಹಾನಗಲ್ಲಿನ ಕುಮಾರ ಸ್ವಾಮೀಜಿ ಬಗ್ಗೆ ಸಲ್ಲದ ಟೀಕೆ ಮಾಡುವ ಮೂಲಕ, ಮಾತೆ ಮಹಾದೇವಿ ಅವರು ಪರೋಕ್ಷವಾಗಿ ಲಿಂಗಾಯತ ಚಳವಳಿ
ಯನ್ನು ಹಾಳು ಮಾಡುತ್ತಿದ್ದಾರೆ ಎಂದು ನಾಗನೂರ ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲರನ್ನೂ ಜತೆಗೆ ಕರೆದುಕೊಂಡು ಲಿಂಗಾಯತ ಚಳವಳಿಗೆ ಬಲ ತುಂಬಬೇಕು. ಈ ನಿಟ್ಟಿನಲ್ಲಿ ನಡೆಸಿರುವ ತಮ್ಮ ಪ್ರಯತ್ನಕ್ಕೆ ವ್ಯಕ್ತಿನಿಂದನೆ ಹಾಗೂ ಕೀಳು ಅಭಿರುಚಿಯ ಮಾತುಗಳಿಂದ ಮಾತಾಜಿ ಅಡ್ಡಗಾಲು ಹಾಕುತ್ತಿರುವುದು ತಮ್ಮನ್ನು ಚಿಂತೆಗೀಡು ಮಾಡಿದೆ ಎಂದು ವಿಷಾದಿಸಿರುವ ಅವರು, ಈಗಿನ ವೀರಶೈವ ಮಹಾಸಭಾ ನಿರ್ಧಾರಗಳನ್ನು ಅಲ್ಲಗಳೆಯುವ ಭರದಲ್ಲಿ ಕುಮಾರಶ್ರೀಗಳ ನಿಂದನೆ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.