ADVERTISEMENT

ಅಭಿನೇತ್ರಿ ರಂಗ ಪ್ರವೇಶ

​ಪ್ರಜಾವಾಣಿ ವಾರ್ತೆ
Published 22 ಜನವರಿ 2015, 19:30 IST
Last Updated 22 ಜನವರಿ 2015, 19:30 IST
ಅಭಿನೇತ್ರಿ ರಂಗ ಪ್ರವೇಶ
ಅಭಿನೇತ್ರಿ ರಂಗ ಪ್ರವೇಶ   

ಮೊದಲ ಬಾರಿಗೆ ಪೂಜಾ ಗಾಂಧಿ ಮತ್ತು ಜ್ಯೋತಿ ಗಾಂಧಿ ಅವರು ನಿರ್ಮಾಣ ಮಾಡಿರುವ ಹಾಗೂ ಇದೇ ಮೊದಲ ಸಲ ಸತೀಶ್ ಪ್ರಧಾನ್ ಅವರ ನಿರ್ದೇಶನದ ಬಹು ವಿವಾದಿತ ಚಿತ್ರ ‘ಅಭಿನೇತ್ರಿ’ ಮುಂದಿನ ಶುಕ್ರವಾರ (ಜ. 30) ಅಭಿಮಾನಿಗಳ ಎದುರು ಪ್ರತ್ಯಕ್ಷವಾಗಲಿದೆ.

ಇದುವರೆಗೆ ನಟಿಯಾಗಿದ್ದ ಪೂಜಾ ಈಗ ನಿರ್ಮಾಣಕ್ಕೆ ಕೈ ಹಾಕಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಆರಂಭದಿಂದಲೂ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಿದ್ದ ಚಿತ್ರ ಅಂತೂ ಸಿದ್ಧವಾಗಿದೆ ಎಂಬುದೇ ಅವರಿಗೆ ನಂಬಲಸಾಧ್ಯವಾದ ವಿಚಾರವಾಗಿದೆ.

ಅದಕ್ಕಾಗಿಯೇ, ‘ಒಬ್ಬ ನಿರ್ಮಾಪಕರ ಕಷ್ಟ ನನಗೆ ಈಗ ಅರ್ಥವಾಯಿತು’ ಎನ್ನುತ್ತಾರೆ ಅವರು. ಇದೇ ಖುಷಿಯಲ್ಲಿ ಚಿತ್ರದ ನಾಲ್ಕಾರು ಸಂಭಾಷಣೆಗಳನ್ನೂ ಹೇಳುತ್ತ, ‘ಈ ಚಿತ್ರವು ನಟಿ ಕಲ್ಪನಾ ಅವರ ಜೀವನದಿಂದ ಪ್ರೇರಣೆ ಪಡೆದಿರುವಂಥದ್ದು’ ಎಂದು ಅವರು ಸಾರಿದರು. ಚಿತ್ರದ ಅಭಿನೇತ್ರಿಯಾಗಿರುವ ಪೂಜಾ ಅವರ ಪಾತ್ರದ ಹೆಸರು ನಂದಾ.

‘ಪೂಜಾ ಅವರು ಈ ಚಿತ್ರದಲ್ಲಿ ಬರಿಯ ಅಭಿನಯ ಮಾಡಿಲ್ಲ. ಪರಕಾಯ ಪ್ರವೇಶ ಮಾಡಿದ್ದಾರೆ’ ಎಂದು ಪೂಜಾ ಅಭಿನಯಕ್ಕೆ ಶಹಬ್ಬಾಸ್ ನೀಡಿದರು ನಿರ್ದೇಶಕ ಸತೀಶ್ ಪ್ರಧಾನ್. ತಮ್ಮ ಮೊದಲ ನಿರ್ದೇಶನಕ್ಕೇ ಅತ್ಯುತ್ತಮ ತಾರಾಗಣ ಸಿಕ್ಕಿದೆ ಎಂಬುದು ಅವರ ಖುಷಿ.

ಜಯಂತ್ ಕಾಯ್ಕಿಣಿ ನಾಲ್ಕು ಹಾಗೂ ಸತೀಶ್ ಪ್ರಧಾನ್ ಮತ್ತು ನಾಗೇಂದ್ರ ಪ್ರಸಾದ್ ಅವರು ಚಿತ್ರಕ್ಕೆ ತಲಾ ಒಂದೊಂದು ಹಾಡನ್ನು ಬರೆದಿದ್ದಾರೆ. ಮನೋಮೂರ್ತಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಚಿತ್ರ ಇದುವರೆಗೂ ಬಹುದೂರದ ಹಾದಿ ಸವೆಸಿದೆ. ಚಿತ್ರ ಬಿಡುಗಡೆಯಾದ ನಂತರ ನಿಜವಾದ ಪಯಣ ಆರಂಭವಾಗಲಿದೆ’ ಎಂದು ಮನೋಮೂರ್ತಿ ಹೇಳಿದರು.

ಉತ್ತರ ಕರ್ನಾಟಕ ಶೈಲಿಯ ಪಾತ್ರ ನಿರ್ವಹಿಸಿರುವ ರವಿಶಂಕರ್, ನಂದಾ ಅವರ ತಾಯಿಯ ಪಾತ್ರ ಮಾಡಿರುವ ಶೈಲಜಾ ಜೋಶಿ ಹಾಗೂ ನಂದಾ ಅವರ ಸಹಾಯಕಿ ಪಾತ್ರ ಪೋಷಣೆ ಮಾಡಿದ ಸುಧಾ ಬೆಳವಾಡಿ ಹಾಜರಿದ್ದರು. ಸುಮಾರು ನೂರೈವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಅಭಿನೇತ್ರಿ’ ಬಿಡುಗಡೆ ಕಾಣಲಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.