ADVERTISEMENT

ಅಭೇದ್ಯ ಜಾಡು ಹಿಡಿದು...

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:41 IST
Last Updated 26 ಮೇ 2016, 19:41 IST
ಕರ್ವ ಚಿತ್ರದಲ್ಲಿ ಅನಿಶಾ
ಕರ್ವ ಚಿತ್ರದಲ್ಲಿ ಅನಿಶಾ   

6–5=2 ಎಂಬ ಹಾರರ್ ಸಿನಿಮಾ ನಿರ್ಮಿಸಿ ಅಚ್ಚರಿಯ ಗೆಲುವು ಕಂಡಿದ್ದ ನಿರ್ಮಾಪಕ ಕೃಷ್ಣ ಚೈತನ್ಯ, ತಮ್ಮ ಎರಡನೇ ಪ್ರಯತ್ನದಲ್ಲಿಯೂ ಪ್ರೇಕ್ಷಕರನ್ನು ಹೆದರಿಸಲು ಮುಂದಾಗಿದ್ದಾರೆ.

ಈ ವಾರ (ಮೇ 27) ತೆರೆಕಾಣುತ್ತಿರುವ ‘ಕರ್ವ’ ಚಿತ್ರವೂ ‘6–5=2’ನಂತೆಯೇ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಅವರಲ್ಲಿದೆ. ನೈಜಘಟನೆ ಆಧರಿಸಿದ ಚಿತ್ರ ಎಂದೇ 6–5=2ಅನ್ನು ಬಿಂಬಿಸಲಾಗಿತ್ತು. ಅವರ ಲೆಕ್ಕಾಚಾರ ತಪ್ಪಾಗಿರಲಿಲ್ಲ. ಆರಂಭದಲ್ಲಿ ಜನರೂ ಅದನ್ನು ನಂಬಿದ್ದರು. ‘ಆ ಚಿತ್ರದಲ್ಲಿ ಮೋಸ ಮಾಡಿ ಹಣ ಗಳಿಸಿದಿರಿ ಎಂದು ತುಂಬಾ ಜನ ಕೇಳುತ್ತಿದ್ದಾರೆ. 

ನಾನು ಮೋಸ ಮಾಡಿಲ್ಲ. ಎರಡು ಗಂಟೆ ಮನರಂಜನೆ ನೀಡುವುದೇ ಸಿನಿಮಾದ ಕೆಲಸ. ಅದನ್ನು ಮಾಡಿದ್ದೇನೆ. ಹಾಗೂ ಬೇಸರವಾಗಿದ್ದರೆ ಕ್ಷಮಿಸಿ’ ಎಂದರು ಕೃಷ್ಣ ಚೈತನ್ಯ.

ಮತ್ತೆ ಹಾರರ್ ಸಿನಿಮಾ ಬೇಡ ಎಂದು ನಿರ್ಧರಿಸಿದ್ದ ಅವರಿಗೆ ನಿರ್ದೇಶಕ ನವನೀತ್‌, ಸಸ್ಪೆನ್ಸ್‌–ಥ್ರಿಲ್ಲರ್ ಮತ್ತು ಹಾರರ್‌ ಶೈಲಿಯ ಕಥೆ ತಂದಾಗ ಬೇಡ ಎನ್ನಲು ಸಾಧ್ಯವೇ ಆಗಲಿಲ್ಲವಂತೆ. ಕಥೆ ಅಷ್ಟು ಪ್ರಭಾವಿಸಿದ್ದಾಗಿ ಅವರು ಹೇಳಿದರು.

ಕಥೆಯಲ್ಲಿನ ಗಟ್ಟಿತನವನ್ನು ನಟರಾದ ತಿಲಕ್‌, ರೋಹಿತ್‌, ವಿಜಯ್ ಚೆಂಡೂರ್‌ ಸಹ ಮೆಚ್ಚಿಕೊಂಡರು. ತಿಲಕ್ ಇಲ್ಲಿ ಹಣದ ಮೌಲ್ಯ ತಿಳಿದಿಲ್ಲದ ಶ್ರೀಮಂತರ ಮನೆಯ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.

ತಮ್ಮ ಸ್ವಭಾವಕ್ಕೆ ತಕ್ಕುದಾದ ಪಾತ್ರದಲ್ಲಿ ನಟಿಸಿರುವುದಾಗಿ ಚಿತ್ರಕಥೆಯಲ್ಲೂ ಕೈ ಆಡಿಸಿರುವ ರೇಡಿಯೊ ಜಾಕಿ ರೋಹಿತ್‌ ಹೇಳಿಕೊಂಡರು. ‘6–5...’ ಚಿತ್ರದಲ್ಲಿ ನಗಿಸುವ ಕೆಲಸ ಮಾಡಿದ್ದ ವಿಜಯ್ ಚೆಂಡೂರ್‌, ಇಲ್ಲಿಯೂ ಆ ಹೊಣೆ ಹೊತ್ತುಕೊಂಡಿದ್ದಾರೆ. ಮೊದಲ ಬಾರಿ ರೋಪ್‌ ಹಾಕಿ ಆ್ಯಕ್ಷನ್ ಮಾಡಿದ ಅನುಭವವನ್ನು ಅವರು ಹಂಚಿಕೊಂಡರು.

ಇಬ್ಬರು ನಾಯಕಿಯರ ಪೈಕಿ ಹಾಜರಿದ್ದ ಅನು ಪೂವಯ್ಯ ಅವರಿಗಿದು ಎರಡನೇ ಸಿನಿಮಾ. ‘ಟಾಮ್‌ ಗರ್ಲ್‌’ನ ಪಾತ್ರ ತಮಗೆ ದೊರೆತಿದೆ ಎಂಬ ಖುಷಿ ಅವರದ್ದು. ಹಿನ್ನೆಲೆ ಸಂಗೀತ ನೀಡಿದ ರವಿ ಬಸ್ರೂರ್‌, ಛಾಯಾಗ್ರಾಹಕ ಮೋಹನ್‌, ಸಂಕಲನಕಾರ ವೆಂಕಿ ಹಾಜರಿದ್ದರು. ನಟ ಶ್ರೀಮುರಳಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.