ADVERTISEMENT

ಅಲ್ಲಮನೆಂಬ ಬಯಲಿಗೆ ಚಿತ್ರವೆಂಬ ಚೌಕಟ್ಟು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2014, 19:30 IST
Last Updated 4 ಸೆಪ್ಟೆಂಬರ್ 2014, 19:30 IST
ಮೇಘನಾ ರಾಜ್
ಮೇಘನಾ ರಾಜ್   

ಹನ್ನೆರಡನೇ ಶತಮಾನದ ಅನುಭವ ಮಂಟಪದ ಅಧ್ಯಕ್ಷ, ಅನುಭಾವಿ ಅಲ್ಲಮನದ್ದು ಸಾಮಾನ್ಯರ ಗ್ರಹಿಕೆಗೆ ನಿಲುಕದ ವ್ಯಕ್ತಿತ್ವ. ಹರಿವ ನೀರಿನಂತೆ ಆತನ ವ್ಯಕ್ತಿತ್ವದ ಹರವು. ವಚನಗಳಲ್ಲೂ ಅಷ್ಟೇ, ಆತನದ್ದು ರೂಪದ ಭಾಷೆ. ಮಾಯೆಯ ಹೆಸರಿನೊಂದಿಗೆ ತಳಕು ಹಾಕಿಕೊಂಡ ಆತನ ಬದುಕೂ ಒಂದು ಮಾಯೆಯಂತೆ ಕಾಣಿಸುತ್ತದೆ. ಅಲ್ಲಮ ನಮಗೆ ನಿಲುಕಿರುವುದು ಅಮೂರ್ತ ಮತ್ತು ಅಸ್ಪಷ್ಟವಾಗಿಯೇ. ಆತನ ವ್ಯಕ್ತಿತ್ವದ ಬಗ್ಗೆ ಅಪಾರ ಜಿಜ್ಞಾಸೆಗಳು ಇಂದಿಗೂ ಹಾಗೆಯೇ ಉಳಿದಿವೆ.

ಜ್ಞಾನ ಮತ್ತು ವೈರಾಗ್ಯದ ಈ ಅನುಭಾವಿಯ ಬದುಕಿನ ಮಾಯದಾಟಕ್ಕೆ ನಿರ್ದೇಶಕ ಟಿ.ಎಸ್‌. ನಾಗಾಭರಣ ‘ಅಲ್ಲಮ’ ಎನ್ನುವ ಚಿತ್ರ ಚೌಕಟ್ಟು ಕೊಡುವ ತುಡಿತದಲ್ಲಿದ್ದಾರೆ. ಅವರ ಮಾತುಗಳಲ್ಲೇ ಹೇಳುವುದಾದರೆ ‘ಇದೊಂದು ಐತಿಹಾಸಿಕ ಪ್ರಯತ್ನವಷ್ಟೇ; ಪ್ರಯೋಗವಲ್ಲ’. ಅಲ್ಲಮ ವ್ಯಕ್ತಿತ್ವಕ್ಕೆ ಅನ್ವರ್ಥವಾಗಿ ‘ಬಯಲೆಂಬ ಬೆರಗು’ ಎನ್ನುವ ಅಡಿಬರಹವೂ ಇದೆ. ನಾಗಾಭರಣ ತಮ್ಮ ತುಡಿತದ ಕಾರ್ಯರೂಪಕ್ಕೆ ಕಟ್ಟಿರುವ ಚಿತ್ರತಂಡವೂ ಬಲಿಷ್ಠವಾಗಿದೆ. ಹರಿ ಎಲ್‌. ಖೋಡೆ ನಿರ್ಮಾಪಕರಾದರೆ, ಕಲಾನಿರ್ದೇಶನ ಶಶಿಧರ ಅಡಪ, ಛಾಯಾಗ್ರಹಕ ಜಿ.ಎಸ್.ಭಾಸ್ಕರ್, ಸಂಗೀತಗಾರ ಬಾಪು ಪದ್ಮನಾಭ ಈ ಪ್ರಯತ್ನಕ್ಕೆ ತೆರೆಯ ಹಿಂದೆ ಕೈ ಜೋಡಿಸಿರುವರು. ಸಿದ್ದಗಂಗಯ್ಯ ಕಂಬಾಳ್ ಸಂಶೋಧನ ಸಾಹಿತ್ಯ ಒದಗಿಸಿದ್ದಾರೆ.

‘ಸುಮಾರು ಒಂದೂವರೆ ವರುಷದ ಹಿಂದೆ ಅಲ್ಲಮ–ಬಸವಣ್ಣನವರನ್ನು ಇಟ್ಟುಕೊಂಡು ‘ಯುಗೇ ಯುಗೇ’ ಸಿನಿಮಾ ಮಾಡಲು ಹೊರಟೆ. ಇನ್ನೇನು ಚಾಲನೆ ಸಿಕ್ಕಬೇಕು ಎನ್ನುವ ವೇಳೆಗೆ ಅದು ನಿಂತು ಹೋಯಿತು. ಆಗಲೇ ಅನಿಸಿತ್ತು ಬಹುಶಃ ಮುಂದೆ ಇದಕ್ಕಿಂತಲೂ ದೊಡ್ಡ ಅವಕಾಶವಿರಬೇಕು ಎಂದು. ನಾನು ಅಲ್ಲಮನ ಕಥೆಯ ಆಲೋಚನೆಯಲ್ಲಿದ್ದೆ. ಹರಿ ಖೋಡೆ ಅವರು ಸಿನಿಮಾ ಮಾಡೋಣ ಎಂದರು. ಒಮ್ಮೆ ಭೇಟಿಯಾದೆ. ಅಲ್ಲಮನ ಕುರಿತು ಸಿನಿಮಾ ಮಾಡುವ ಆಲೋಚನೆಯನ್ನು ಮುಂದಿಟ್ಟರು. ಇಬ್ಬರದ್ದು ಒಂದೇ ಆಲೋಚನೆ; ಸ್ವಗರ್ಕ್ಕೆ ಮೂರೇ ಗೇಣು. ಒಂದೂವರೆ ವರುಷಗಳ ಶ್ರಮ ಈ ಆರು ತಿಂಗಳಲ್ಲಿ ಸಾಕಾರಗೊಂಡಿದೆ. ಅಲ್ಲಮ ನಿರ್ಮಾಪಕರ ಆಶಯ’ ಎಂದರು ನಾಗಾಭರಣ.

‘ಅಲ್ಲಮನ 35 ವಚನಗಳನ್ನು ಬಳಸಿಕೊಳ್ಳಲಾಗಿದ್ದು, ಒಂಬತ್ತು ಹಾಡುಗಳಿಗೆ ಮತ್ತು ಉಳಿದವು ಸಂಭಾಷಣೆಗಳಿಗೆ ಉಪಯೋಗಿಸಿಕೊಳ್ಳಲಾಗಿದೆ. ಇಂದಿನ ಕನ್ನಡದಲ್ಲಿ ಚಿತ್ರಭಾಷೆ ಇರುತ್ತದೆ. ಕೆಲವು ಬೆರಗಿನ ವಚನಗಳನ್ನು ಸಂಗೀತಕ್ಕೆ ಬೇಕಾದಂತೆ ಬದಲಿಸಿಕೊಳ್ಳುತ್ತೇವೆ’ ಎಂದು ನಾಗಾಭರಣ ‘ಅಲ್ಲಮ’ ತಮ್ಮ ಚಿತ್ರಗ್ರಹಿಕೆಗೆ ನಿಲುಕುತ್ತಿರುವುದನ್ನು ತಿಳಿಸಿದರು. ‘ಅಲ್ಲಮ’ನಿಗೆ ಬಂಡವಾಡ ತೊಡಗಿಸಿರುವ ಉದ್ಯಮಿ ಹರಿ ಎಲ್‌.ಖೋಡೆ ‘ಅಲ್ಲಮ’ ತಮ್ಮ ಮನ ಕದಡಿದ್ದನ್ನು  ವಿವರಿಸಿದರು. 

‘ಅಲ್ಲಮ ಮಹಾನ್ ತತ್ವಜ್ಞಾನಿ. ವಚನಗಳ ಕುರಿತು ಕೆಲಸ ಮಾಡಿರುವ ವಿದ್ಯಾಶಂಕರ್, ಜಿ.ಎಸ್. ಸಿದ್ಧಲಿಂಗಯ್ಯ, ಚಿದಾನಂದಮೂರ್ತಿ ಅವರ ಜತೆ ಚರ್ಚೆ ನಡೆಸಲಾಗಿದೆ. ಅಲ್ಲಮನ ತಾತ್ವಿಕ ನಿಲುವನ್ನು ನಾವು ಕಂಡುಕೊಳ್ಳುತ್ತಿದ್ದರೂ ಆತನ ಜೀವನವನ್ನು ಮುಟ್ಟಲು ಸಾಧ್ಯವಾಗಿಲ್ಲ. ಶೇ 80ರಷ್ಟು ವಚನಗಳು ಈಗಲೂ ಅರ್ಥವಾಗಿಲ್ಲ. ಹರಿಹರ, ಚೆನ್ನಪ್ಪ ಕವಿ, ಭೀಮಕವಿ ಆತನ ಬಗ್ಗೆ ಭಿನ್ನವಾಗಿ ಹೇಳಿದ್ದಾರೆ. ‘ಅಲ್ಲಮ’ ಯಾರ ಕೈಗೂ ಸಿಕ್ಕಿಲ್ಲ’ ಎಂದರು ಸಾಹಿತಿ ಸಿದ್ದಲಿಂಗಯ್ಯ ಕಂಬಾಳು. ಅವರು ಚಿತ್ರದ ಸಂಭಾಷಣೆ, ಸಂಶೋಧನೆಯ ಮೇಲೆ ಕೆಲಸ ಮಾಡಿದ್ದಾರೆ.

ಅಮೂರ್ತ ಅಲ್ಲಮನಿಗೆ ಮೂರ್ತ­ರೂಪವಾಗಿ ನಟ ಧನಂಜಯ್ ಕಾಣಿಸಿಕೊಂಡರೆ, ನರ್ತಕಿ ಮಾಯಾದೇವಿಯ ಪಾತ್ರದಲ್ಲಿ ಮೇಘನಾ ರಾಜ್ ನಟಿಸುತ್ತಿದ್ದಾರೆ. ‘ಭರಣ ಸರ್ ನಿರ್ದೇಶನದ ‘ಹಯವದನ’ ನಾಟಕದಲ್ಲಿ ಪಾಲ್ಗೊಳ್ಳಲು ಇಷ್ಟಪಟ್ಟಿದ್ದೆ. ಈಗ ಇಂಥ ದೊಡ್ಡ ಚಿತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ’ ಎಂದು ಸಂತಸಪಟ್ಟರು ಮೇಘನಾ ರಾಜ್. ಛಾಯಾಗ್ರಾಹಕ ಜಿ.ಎಸ್‌. ಭಾಸ್ಕರ್, ಕಲಾ ನಿರ್ದೇಶಕ ಶಶಿಧರ ಅಡಪ, ಸಂಗೀತ ನಿರ್ದೇಶಕ ಬಾಪು ಪದ್ಮನಾಭ್, ಸಂಶೋಧನೆ, ಸಂಭಾಷಣೆ ಮತ್ತು ಸಾಹಿತ್ಯಕ್ಕೆ ಕೈ ಜೋಡಿಸಿರುವ ಎನ್‌.ಎಸ್‌. ಶ್ರೀಧರಮೂರ್ತಿ ಮತ್ತು ಶ್ರೀಪತಿ ಮಂಜನಬೈಲು ‘ಅಲ್ಲಮ’ನ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.