ADVERTISEMENT

ಅವಳ ‘ಖುಷಿ’ಯಲಿ ಮೇಘನಾ

ಸುಶೀಲಾ ಡೋಣೂರ
Published 7 ಡಿಸೆಂಬರ್ 2017, 19:30 IST
Last Updated 7 ಡಿಸೆಂಬರ್ 2017, 19:30 IST
ಮೇಘನಾ ಗೌಡ.
ಮೇಘನಾ ಗೌಡ.   

ತುಂಟ ನಗು, ತರಲೆ ಮಾತು, ದಿಟ್ಟ ನೋಟ, ಒಂಚೂರು ತಲೆಹರಟೆ... ಇಂಥದ್ದೊಂದು ಬಬ್ಲಿ ಬಬ್ಲಿ ಪಾತ್ರದೊಂದಿಗೆ ‘ಖುಷಿ’ಯಾಗಿ ಕನ್ನಡ ವೀಕ್ಷಕರ ಮನ ಗೆದ್ದ ಚಿತ್ರದುರ್ಗದ ಚೆಲುವೆ ಮೇಘನಾ ಗೌಡ. ಸಣ್ಣ ಅಂತರದ ನಂತರ ಈಗ ‘ಮಾನಸ’ ಆಗಿ ಬಂದಿದ್ದು, ಶೂಟಿಂಗ್‌ ವೇಳೆ ಸಮಯ ಮಾಡಿಕೊಂಡು ಮಾತಿಗಿಳಿದರು.

ಈಗಲೂ ಜನ ನನ್ನ ಖುಷಿ ಅಂತಲೇ ಗುರ್ತಿಸ್ತಾರೆ. ನಾನೀಗ ‘ಮಾನಸ’ ಅಂತ ನೆನಪಿಸುತ್ತಿರುತ್ತೇನೆ. ಕನ್ನಡದ ಈ ಎರಡೂ ಧಾರಾವಾಹಿಗಳು ನನಗೆ ಎರಡು ವಿಭಿನ್ನ ಅನುಭವಗಳನ್ನು ಕಟ್ಟಿಕೊಟ್ಟಿವೆ. ಕಲಾವಿದರು ಬಯಸುವುದೇ ಇಂಥ ಅವಕಾಶಗಳನ್ನು.

ಅದು ಅರಳು ಹುರಿದಂತೆ ಮಾತಾಡುವ ಪಾತ್ರ. ಇದು ಸಂಪೂರ್ಣ ಗಾಂಭೀರ್ಯತೆ ಇರುವ, ವಯಸ್ಸಿಗಿಂತ ಹೆಚ್ಚು ಪ್ರೌಢಿಮೆ ತೋರುವ ಪಾತ್ರ. ಎರಡೂ ಪಾತ್ರಕ್ಕೂ ನನ್ನದೇ ಆದ ನೆಲೆಯಲ್ಲಿ ನ್ಯಾಯ ನೀಡಿದ್ದೇನೆ.

ADVERTISEMENT

‘ಅರಗಿಣಿ’ ನನ್ನ ಮೊದಲ ಧಾರಾವಾಹಿ. ಅದಾದ ನಂತರ ಮುಂದೇನು ಎನ್ನುವ ಚಿಂತೆ ಕಾಡಲೇ ಇಲ್ಲ. ಒಂದು ಮುಗಿಯುತ್ತಿದ್ದಂತೆ ಮತ್ತೊಂದು ಅವಕಾಶಗಳು ಬಂದವು. ಕಲಾವಿದನಿಗೆ ಭಾಷೆಯ ಹಂಗಿರಬಾರದು. ಆದರೆ, ಕನ್ನಡಕ್ಕೆ ಯಾವತ್ತಿದ್ದರೂ ಮೊದಲ ಆದ್ಯತೆ. ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ನಟಿಸಿದೆ. ಇದೀಗ ಮತ್ತೆ ಕನ್ನಡ ಕರೆಯಿತು. ವಾಪಸಾದೆ... ‘ಮಾನಸ’ ಆಗಿ ಪ್ರತ್ಯಕ್ಷಳಾಗಿದ್ದೇನೆ.

ತನ್ನ ಮನೆಯವರಿಗಾಗಿ ತನ್ನ ಜೀವನವನ್ನೇ ಮುಡುಪಿಟ್ಟ ಮಾನಸಗೆ ತಂಗಿ ಎಂದರೆ ಪ್ರಾಣ. ಆಕೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ. ಆದರೆ ನಂತರ ಅದೇ ತಂಗಿಯ ಕೆಂಗಣ್ಣಿಗೆ ಗುರಿಯಾಗಿ ಮೌನವೇದನೆ ಅನುಭವಿಸಬೇಕಾಗುತ್ತದೆ. ಇಂಥದ್ದೊಂದು ಮೌಲ್ಯವಿರುವ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ, ಯಶಸ್ವಿಯಾಗಿ ನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆ ಇದೆ.

ಸಮಯ ಸಾಲುತ್ತಿಲ್ಲ
ಯಾವಾಗಲೂ ಶೂಟಿಂಗ್‌ನಲ್ಲೇ ಇರೋದ್ರಿಂದ ನನ್ನ ಪಾತ್ರಕ್ಕೆ ನಾನೇ ಧ್ವನಿ ನೀಡಲು ಸಮಯ ಸಾಲುತ್ತಿಲ್ಲ. ಅರಗಿಣಿಯಲ್ಲಿ ನಾನೇ ಧ್ವನಿ ನೀಡಿದ್ದೆ. ಆದರೆ ಮಾನಸಳ ಪಾತ್ರಕ್ಕೆ ಬೇರೆಯವರು ದನಿ ನೀಡುತ್ತಿದ್ದಾರೆ. ಜನಕ್ಕೆ ಈ ವ್ಯತ್ಯಾಸ ಗೊತ್ತಾಗ್ತಾ ಇದೆ. ಧ್ವನಿ ಬದಲಾಗಿದೆಯಲ್ಲ ಅಂತ ಕೇಳ್ತಾ ಇದ್ದಾರೆ.

ತೆಲುಗು –ತಮಿಳಿನಲ್ಲಿಯೂ ನನಗೆ ಬೇರೆಯವರೇ ಧ್ವನಿ ನೀಡುತ್ತಾರೆ. ತೆಲುಗಿನಲ್ಲಿ ಕಾವ್ಯಾ ಅಂತ ಡಬ್ಬಿಂಗ್‌ ಕಲಾವಿದೆ ಇದ್ದಾರೆ. ಅವರ ಧ್ವನಿ ನನಗೆ ಚೆನ್ನಾಗಿ ಒಪ್ಪಿದೆ. ಅಲ್ಲಿನ ವೀಕ್ಷಕರಿಗೆ ನನ್ನ ನಿಜವಾದ ಧ್ವನಿಯ ಪರಿಚಯ ಇಲ್ಲದೇ ಇರುವುದರಿಂದ ವ್ಯತ್ಯಾಸ ಗೊತ್ತಾಗುವುದಿಲ್ಲ. ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ನನ್ನ ಪಾತ್ರಕ್ಕೆ ನಾನೇ ದನಿಯಾಗುವ ಆಸೆ ಇದೆ, ಪ್ರಯತ್ನಿಸುತ್ತೇನೆ.

ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವುದು ಎಂದರೆ ನನಗಿಷ್ಟ. ಅದು ಈ ಕ್ಷೇತ್ರಕ್ಕೆ ಅನಿವಾರ್ಯ ಕೂಡ. ಅದಕ್ಕಾಗಿ ಸಾಕಷ್ಟು ಬೆವರು ಹರಿಸಲೂ ನಾನು ಸಿದ್ಧ. ಕಲೆಯ ಜೊತೆಗೆ ಒಳ್ಳೇ ಫಿಗರ್‌ ಕೂಡ ಮುಖ್ಯ. ಹಾಗಂತ ಊಟ–ತಿಂಡಿ ಬಿಟ್ಟು ಕಷ್ಟಪಡಲ್ಲ. ಕರಿದ ಆಹಾರ ಕಡಿಮೆ ತಿಂತಿನಿ. ಗ್ರಿಲ್‌ ಚಿಕನ್‌ ಅಂದ್ರೆ ತುಂಬಾ ಇಷ್ಟ. ಅಡುಗೆ ಮಾಡೋದ್ರಲ್ಲೂ ನನ್ನದು ಎತ್ತಿದ ಕೈ. ಸಮಯ ಸಿಕ್ರೆ ಚಿಕನ್‌ ಗ್ರೀನ್‌ ಮಸಾಲಾ, ಬಿರಿಯಾನಿ ಮಾಡಿ ಸ್ನೇಹಿತರನ್ನ ಕರಿತಿನಿ. ತಿಂದವರು ಚೆನ್ನಾಗಿದೆ ಅಂತ ಹೇಳ್ತಾರೆ...

ಜೀವನ ಅಂದ್ರೆ ಹೀಗೇ ಅಂತ ಹೇಳೋಕಾಗಲ್ಲ. ಅದು ಬರೀ ಹೂವಿನ ಹಾಸಿಗೆಯಂತೂ ಅಲ್ಲ. ಕೆಲವೊಮ್ಮೆ ಮುಳ್ಳುಗಳೂ ಕಾಲಿಗೆ ಸಿಕ್ಕಿಹಾಕಿಕೊಳ್ಳುವುದುಂಟು. ಆದರೆ, ಅಂಥದ್ದಕ್ಕೆಲ್ಲ ನಾನು ಕುಸಿಯುವುದಿಲ್ಲ. ಮೇಲೆದ್ದು ಮುಂದೆ ನಡೆಯುತ್ತೇನೆ.

ಹಾಂ, ಅಂದಹಾಗೆ ಇಷ್ಟು ಗಟ್ಟಿಗಿತ್ತಿಯಾಗಿರೊ ನಾನೂ ಒಂದೊಮ್ಮೆ ಬದುಕಿನ ಬಿರುಗಾಳಿಗೆ ಸಿಕ್ಕು ಹೈರಾಣಾ ಗಿದ್ದೆ. ಆಗೆಲ್ಲ ನನ್ನ ಕುಟುಂಬವೇ ನನಗೆ ಆತ್ಮಸ್ಥೈರ್ಯ ತುಂಬಿದ್ದು. ಇಂಥ ಸಮಯದಲ್ಲಿ ನನ್ನ ಜೊತೆ ನಿಲ್ಲೋರು ನನ್ನ ಅಕ್ಕ ಹಾಗೂ ಭಾವ. ಜೀವನ ಹೇಗಿದೆಯೊ ಹಾಗೆ ಒಪ್ಪಿಕೊಳ್ಳಬೇಕು. ಹೇಗೆ ಬರುತ್ತೊ ಹಾಗೆ ಹೋಗಬೇಕು. ನಾವು ಬಯಸಿದ್ದೆಲ್ಲವೂ ಸಿಗಲ್ಲ.

ಮುಂದಿನ ಕನಸು ದೊಡ್ಡ ಬಜೆಟ್‌ನ ಐತಿಹಾಸಿಕ ಧಾರಾವಾಹಿ ಯೊಂದರ ಭಾಗವಾಗಲಿ ದ್ದೇನೆ. ಬಾಹುಬಲಿ ತಂಡ ದಿಂದ 14 ಭಾಷೆಗಳಲ್ಲಿ ಧಾರಾವಾಹಿ ಸೆಟ್ಟೇರಲಿದೆ. ಅದರಲ್ಲಿ ನನ್ನದು ಖಳನಾಯಕಿಯ ಪಾತ್ರ. ಅದಕ್ಕಾಗಿ ಸಿದ್ಧತೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.