ADVERTISEMENT

ಆನಿಮೇಷನ್‌ನಲ್ಲಿ ಸಾಯಿಬಾಬಾ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಆನಿಮೇಶನ್ ಸಿನಿಮಾಗಳೆಂದರೆ ಮಕ್ಕಳಿಗೆ ಬಲು ಇಷ್ಟ. ಆ ಆಸಕ್ತಿಯನ್ನು ಗಮನಿಸಿ, ಭಕ್ತಿಯನ್ನು ಚಿತ್ರದ ಮೂಲಕ ಮಕ್ಕಳಿಗೆ ಹೇಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂ.ಆರ್. ಬಾಲಕೃಷ್ಣ. ಅವರೇ ನಿರ್ಮಿಸಿ, ನಿರ್ದೇಶಿಸಿದ ‘ಶಿರಡಿ ಶ್ರೀ ಸಾಯಿಬಾಬಾ’ ಆನಿಮೇಟೆಡ್ ಸಿನಿಮಾ ಇದೇ 31ರಂದು ತೆರೆ ಕಾಣಲಿದೆ.

‘ಮೀಡಿಯಾ ಟೆಕ್‌ ವರ್ಕ್‌’ ಎಂಬ ಕಂಪೆನಿ ನಡೆಸುತ್ತಿರುವ ಅವರು, ಸಿನಿಮಾಕ್ಕೆ ಸಂಬಂಧಿಸಿದ ಹಲವು ಕೆಲಸಗಳನ್ನು ಮಾಡುತ್ತಿರುತ್ತಾರೆ. ಅದರಲ್ಲೂ ಆನಿಮೇಶನ್‌ ಕಥೆಗಳನ್ನು ನಿರ್ಮಾಣ ಮಾಡುವುದರಲ್ಲಿ ಪರಿಣಿತರು. ಯಾವುದೋ ಒಂದು ಯೋಜನೆಗೆ ಸಂಬಂಧಿಸಿದಂತೆ ಆನಿಮೇಶನ್‌ ಮಾಡುತ್ತಿರುವಾಗ ಸಾಯಿಬಾಬಾ ಕುರಿತ ಸಿನಿಮಾವನ್ನು ಆನಿಮೇಶನ್‌ದಲ್ಲಿ ಯಾಕೆ ಮಾಡಬಾರದು ಎಂಬ ಯೋಚನೆ ಹೊಳೆಯಿತು. ತಡ ಮಾಡದೇ ತಂತ್ರಜ್ಞರನ್ನು ಕರೆದು, ಸಮಾಲೋಚನೆ ನಡೆಸಿ ಯೋಜನೆ ಕೈಗೆತ್ತಿಕೊಂಡರು.

ಹಾಗೆಂದು ಇದು ಅಷ್ಟು ಸುಲಭದ ಕೆಲಸವೂ ಅಲ್ಲ ಎನ್ನುತ್ತಾರೆ ಬಾಲಕೃಷ್ಣ. ಕಥೆ, ಚಿತ್ರಕಥೆ  ಸಿದ್ಧಪಡಿಸಿದ ಬಳಿಕ ಅದನ್ನು ಸಾಯಿಬಾಬಾ ಭಕ್ತ ಮಂಡಳಿ ಮುಂದೆ ಇಟ್ಟು, ಅಗತ್ಯ ಸಲಹೆ– ಸೂಚನೆ ಪಡೆಯಲಾಗಿದೆ. ಇದರ ಜತೆ ಪರಿಣಿತರ ಮಾರ್ಗದರ್ಶನವನ್ನೂ ತೆಗೆದುಕೊಳ್ಳಲಾಗಿದೆ. ಹೀಗೆ 2007ರಲ್ಲಿ ಶುರುವಾದ ಕೆಲಸ, ಮೂರು ವರ್ಷಗಳ ಬಳಿಕ ಮುಕ್ತಾಯವಾಗಿದೆ. ‘ಒಟ್ಟು 50 ಲಕ್ಷ ರೂಪಾಯಿ ವೆಚ್ಚವಾಗಿದೆ. ಎಂಬತ್ತು ತಂತ್ರಜ್ಞರು ಸೇರಿಕೊಂಡು ಕೆಲಸ ಮಾಡಿದ್ದೇವೆ’ ಎಂಬ ಮಾಹಿತಿಯನ್ನು ಬಾಲಕೃಷ್ಣ ನೀಡಿದರು.

ಸಾಯಿಬಾಬಾ ಮಾಡಿರುವ ಪವಾಡಗಳು ಮುಖ್ಯವಾಗಿರುವ ಚಿತ್ರದಲ್ಲಿ, ಬಾಬಾ ಬಾಲಕನಾಗಿದ್ದಾಗಿನ ಕೆಲವು ವಿಶಿಷ್ಟ ಘಟನೆಗಳನ್ನು ಸೇರಿಸಲಾಗಿದೆ. ಗಣೇಶ ದೇಸಾಯಿ ಸಂಗೀತ ನೀಡಿದ್ದಾರೆ. ಸದ್ಯಕ್ಕೆ ಬೆಂಗಳೂರಿನ ಒಂದೇ ಚಿತ್ರಮಂದಿರದಲ್ಲಿ ‘ಸಾಯಿಬಾಬಾ’ ತೆರೆಗೆ ತರುವ ಉದ್ದೇಶವಿದ್ದು, ಮಲ್ಟಿಪ್ಲೆಕ್ಸ್‌ಗಳ ಜತೆಗೂ ಮಾತುಕತೆ ನಡೆದಿದೆ. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ತ್ಯಾಗರಾಜನಗರ ಸಾಯಿಮಂದಿರದ ಅಧ್ಯಕ್ಷ ಶೇಷಾದ್ರಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.