ADVERTISEMENT

ಇದು ಹೃದಯಗಳ ‘ಜಿಲ್ ಜಿಲ್’

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2015, 19:47 IST
Last Updated 29 ನವೆಂಬರ್ 2015, 19:47 IST

ಮನುಷ್ಯನ ಭಾವನೆಗಳಲ್ಲಿ ನಿರಂತರ ಬದಲಾವಣೆಗಳಾಗುತ್ತವೆ. ಆ ಬದಲಾಗುವ ಭಾವನೆಗಳನ್ನು ಪದಗಳಲ್ಲಿ ವರ್ಣಿಸುವುದಾದರೆ ‘ಜಿಲ್ ಜಿಲ್’. ಮಧು ನಿರ್ದೇಶನನದ ‘ಜಿಲ್ ಜಿಲ್’ ಚಿತ್ರದ ಆಡಿಯೊ ಮತ್ತು ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಬಹುಪಾಲು ಯುವ ಮತ್ತು ಹೊಸ ತಂಡ ಕೂಡಿರುವ ‘ಜಿಲ್ ಜಿಲ್’ ಹೃದಯಗಳ ವಿಷಯ ಹೇಳುವ ಚಿತ್ರ. ಇದಕ್ಕೆ ಅನ್ವರ್ಥ ಎನ್ನುವಂತೆ ಒನ್ ಲೈಫ್ ಮತ್ತು ಒನ್ ಲವ್ ಅಡಿಬರಹವಿದೆ. 

ಬದುಕು ಮುಖ್ಯ ಎನ್ನುವ ನಾಯಕ–ಪ್ರೀತಿ ಮುಖ್ಯ ಎನ್ನುವ ನಾಯಕಿ. ಈ ಇಬ್ಬರ ನಡುವಿನ ಕಥನಕ್ಕೆ ಮತ್ತೊಂದಿಷ್ಟು ಬೇರೆ ಬೇರೆ ಅಂಶಗಳನ್ನು ಹೊಸೆದು ‘ಜಿಲ್ ಜಿಲ್’ ಸಿದ್ಧಮಾಡಿದ್ದಾರಂತೆ ಮಧು. ಇದು ಅವರ ಮೊದಲ ನಿರ್ದೇಶನ. ‘ಬಜೆಟ್ ಮತ್ತು ನಟರ ಸಮಸ್ಯೆ ನನಗೆ ಎದುರಾಗಿತ್ತು. ಕಥೆ ಚೆನ್ನಾಗಿದ್ದರೆ ಜನ ಸ್ವೀಕರಿಸುತ್ತಾರೆ. ನಾನು ಎರಡು ವರುಷಗಳಿಂದ ಕಥೆ ಮಾಡಿಕೊಂಡಿದ್ದೇನೆ. ಇಲ್ಲಿನ ಒಂದೊಂದು ಪಾತ್ರಗಳು ಒಂದೊಂದು ಭಾವನೆಗಳ ಪ್ರತೀಕವಾಗಿ ಕಾಣಿಸುತ್ತವೆ’ ಎಂದರು ಮಧು.

ಮೂಲತಃ ನೃತ್ಯ ಪಟುವಾದ ಧನಂಜಯ್ ಚಿತ್ರದ ಮೂಲಕ ನಾಯಕನ ಪಟ್ಟ ಧರಿಸುತ್ತಿದ್ದಾರೆ. ಶಾರುಖ್ ಖಾನ್‌ ನಟನೆಯ ‘ಚೆನ್ನೈ ಎಕ್ಸ್‌ಪ್ರೆಸ್’ ಮತ್ತು ತಮಿಳಿನ ‘ಪರದೇಸಿ’ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದ ಪೂವಿಶಾ ‘ಜಿಲ್ ಜಿಲ್’ ಮೂಲಕ ಕನ್ನಡಕ್ಕೂ ಪ್ರವೇಶಿಸುತ್ತಿದ್ದಾರೆ.

ಈ ಹೊಸ ತಂಡದ ಬೆನ್ನುತಟ್ಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ವೆಂಕಟೇಶ್ ಪ್ರಸಾದ್ ಬೆಳಗುಲಿ. ‘ನಿರ್ದೇಶಕ ಮಧು ಅವರ ಬದ್ಧತೆ ಮತ್ತು ಸಿನಿಮಾ ಆಸಕ್ತಿಯನ್ನು ಗಮನಿಸಿ ಈ ಪ್ರಯತ್ನಕ್ಕೆ ಕೈ ಜೋಡಿಸಿದೆ’ ಎಂದು ಅವರು ಹೇಳುತ್ತಾರೆ. ಗಾಯಕ ಅಜಯ್ ವಾರಿಯರ್, ಬರಹಗಾರ ಭಂಗಿ ರಂಗ ಮತ್ತು ಅಂಧ ಮಕ್ಕಳು ಚಿತ್ರದ ಆಡಿಯೊ ಬಿಡುಗಡೆ ಮಾಡಿದರು. ರಾಮನಗರ, ಕೋಲಾರ ಮತ್ತಿತರ ಕಡೆಗಳಲ್ಲಿ ‘ಜಿಲ್ ಜಿಲ್‌’ನ ಚಿತ್ರೀಕರಣವಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.