ADVERTISEMENT

ಉಪ್ಪಿ ಯು–ಟರ್ನ್‌!

ಪ್ರಜಾವಾಣಿ ವಿಶೇಷ
Published 18 ಸೆಪ್ಟೆಂಬರ್ 2014, 19:30 IST
Last Updated 18 ಸೆಪ್ಟೆಂಬರ್ 2014, 19:30 IST

‘ಅಂಕುಡೊಂಕಾದ ಒಂದು ಗೆರೆ ಥಟ್‌ ಅಂತ ಎಳೆಯಬಹುದು. ಆದರೆ ಅದರಂಥದ್ದೇ ಇನ್ನೊಂದು ಗೆರೆ ಎಳೆಯಬೇಕೆಂದರೆ ಬಲು ಕಷ್ಟ...’
- ತೆಲುಗಿನ ‘ಕಿಕ್‌’ ಚಿತ್ರವನ್ನು ರಿಮೇಕ್‌ ಮಾಡುವುದು ಎಷ್ಟು ಕಷ್ಟ ಎನ್ನುವುದನ್ನು ಉಪೇಂದ್ರ ವ್ಯಾಖ್ಯಾನಿಸಿದ್ದು ಹೀಗೆ. ಸುರೇಂದ್ರ ರೆಡ್ಡಿ ನಿರ್ದೇಶನದಲ್ಲಿ ಐದು ವರ್ಷಗಳ ಹಿಂದೆ ಬಿಡುಗಡೆಯಾದ ‘ಕಿಕ್’ ಸೂಪರ್‌ ಹಿಟ್‌ ಸಿನಿಮಾಗಳ ಸಾಲಿಗೆ ಸೇರಿತ್ತು.

ಅದೀಗ ಸಾಧು ಕೋಕಿಲಾ ನಿರ್ದೇಶನದಲ್ಲಿ ‘ಸೂಪರ್‌ ರಂಗ’ ಆಗಿ ಇಂದು (ಸೆ. 19) ಬಿಡುಗಡೆಯಾಗಿದೆ. ‘ಬ್ರಹ್ಮ’ ಬಳಿಕ ತೆರೆ ಕಾಣುತ್ತಿರುವ ತಮ್ಮ ಅಭಿನಯದ ಈ ಚಿತ್ರ, ತೆಲುಗು ಸಿನಿಮಾಕ್ಕಿಂತ ಹೆಚ್ಚು ಕಿಕ್‌ ಕೊಡಲಿದೆ ಎಂಬ ವಿಶ್ವಾಸವನ್ನು ಉಪೇಂದ್ರ ಅವರು ‘ಸಿನಿಮಾ ರಂಜನೆ’ ಜತೆ ಹಂಚಿಕೊಂಡರು.

*  ‘ಸೂಪರ್‌ ರಂಗ’ದಲ್ಲಿರುವ ವಿಶೇಷವೇನು?
‘ಕಿಕ್‌’ನಂಥ ಸಿನಿಮಾ ಮಾಡೋದು ಕಷ್ಟ. ಅದರ ರಿಮೇಕ್‌ ಇನ್ನೂ ಕಷ್ಟ! ಆದರೆ ಇಲ್ಲಿ ಪ್ರತಿಭಾವಂತ ಕಲಾವಿದರು ಹಾಗೂ ತಂತ್ರಜ್ಞರನ್ನು ಹಾಕಿಕೊಂಡು ಚಿತ್ರ ಮಾಡಲಾಗಿದೆ. ಮೂಲಚಿತ್ರದಷ್ಟೇ ವೈಭವ ಇಲ್ಲೂ ಕಾಣಿಸುತ್ತಿದೆ. ಮಲೇಷ್ಯಾ ಹಾಗೂ ಸ್ಲೊವೇನಿಯಾದ ಸುಂದರ ಸ್ಥಳಗಳಲ್ಲಿ ಶೂಟಿಂಗ್‌ ಆಗಿದೆ. ಚಿತ್ರಕಥೆ, ಸಂಭಾಷಣೆ, ಹಾಡುಗಳು ಎಲ್ಲದರಿಂದ ಪ್ರೇಕ್ಷಕನಿಗೆ ಫುಲ್ ಖುಷಿ ಸಿಗಲಿದೆ.

* ‘ಕಿಕ್‌’ಗಿಂತ ಈ ‘ರಂಗ’ ಸೂಪರ್‌ ಆಗಿದ್ದಾನೆ ಅಂದಾಯ್ತಲ್ಲ?
ಛೇ ಛೇ! ನಾವು ಯಾವುದನ್ನೂ ಹೋಲಿಕೆ ಮಾಡಬಾರದು. ನಮ್ಮ ಜೀವನ ಹಾಳಾಗಿರೋದೇ ಒಂದಕ್ಕೊಂದು ಹೋಲಿಕೆ ಮಾಡಿದ್ದರಿಂದ! ಈ ಸಿನಿಮಾವನ್ನು ನೋಡುತ್ತ ನೋಡುತ್ತ ಎಂಜಾಯ್ ಮಾಡಬಹುದು. ವಾಸ್ತವವಾಗಿ ‘ಕಿಕ್’ ಯಾವುದರಲ್ಲಿ ಸಿಗುತ್ತದೆ ಹೇಳಿ..? ನಮಗೆ ಏನು ಸಿಕ್ಕರೂ ಅದು ದೊಡ್ಡ ಕಿಕ್ ಅನಿಸುವುದಿಲ್ಲ. ಆದರೆ ನಮ್ಮಿಂದ ಇನ್ನೊಬ್ಬರಿಗೆ ಏನಾದರೂ ಸಿಕ್ಕು ಅವರು ಖುಷಿಯಾದರೆ ಅದು ‘ಕಿಕ್’. ಆ ವಿಚಾರವೇ ‘ಸೂಪರ್‌ ರಂಗ’ ಸಿನಿಮಾದ ಹೈಲೈಟ್.

* ಬಲು ಕಷ್ಟಪಟ್ಟು ಡಾನ್ಸ್‌ ಮಾಡಿದ್ದೀರಂತೆ?
ಅಯ್ಯೋ..! ಅದನ್ನು ಮಾತ್ರ ಕೇಳಬೇಡಿ. ಹಾಡಿನ ಶೂಟಿಂಗ್‌ ಇದ್ದರೆ ನನಗೆ ಯಾಕೋ ಒಳ್ಳೆಯ ಮೂಡ್‌ ಇರುವುದೇ ಇಲ್ಲ. ಹಾಡು, ಡಾನ್ಸ್ ಅಂದರೆ ನನಗೆ ಮುಜುಗರ. ಅದರಲ್ಲೂ ಈ ಸಿನಿಮಾಕ್ಕೆಂದು ಫಾರಿನ್‌ನಲ್ಲಿ ಡಾನ್ಸ್‌ ಮಾಡುವುದೆಂದರೆ ಹೇಗಿರಬೇಕು, ನೀವೇ ಹೇಳಿ... ನೃತ್ಯ ನಿರ್ದೇಶಕ ಇಮ್ರಾನ್ ಬಹಳ ಕಷ್ಟಪಟ್ಟು ನನ್ನಿಂದ ಡಾನ್ಸ್ ಮಾಡಿಸಿಬಿಟ್ಟಿದ್ದಾರೆ.

ADVERTISEMENT

* ಎಲ್ಲಿಯವರೆಗೆ ಬಂದಿದೆ ‘ಉಪ್ಪಿ2’?
ಈಗಾಗಲೇ 45 ದಿನ ಶೂಟಿಂಗ್ ಮಾಡಿದ್ದೇವೆ. ಇನ್ನೂ ಅಷ್ಟೇ ದಿನ ಚಿತ್ರೀಕರಣ ಮಾಡಬೇಕಿದೆ. ಸಣ್ಣಪುಟ್ಟ ಭಾಗ ಮುಗಿಸಿದ್ದೇವೆ. ಹೊರಾಂಗಣ ಹಾಗೂ ವಿದೇಶದಲ್ಲಿನ ಪ್ರಮುಖ ಭಾಗ ಬಾಕಿಯಿದೆ. ಅದನ್ನು ಮುಗಿಸಲು ಯಾವುದೇ ಗಡುವು ಹಾಕಿಕೊಂಡಿಲ್ಲ. ಈಗಿನ ಸಿನಿಮಾಗಳನ್ನು ಪೂರ್ಣಗೊಳಿಸಿ, ಬಳಿಕ ಅದರತ್ತ ಗಮನ ಹರಿಸುವೆ. ‘ಉಪ್ಪಿ2’ ಕಥೆ ತುಂಬ ವಿಶೇಷ ಅನ್ನುವ ಹಾಗಿದೆ. ಹೀಗಾಗಿ ಸ್ವಲ್ಪ ಎಚ್ಚರಿಕೆಯಿಂದಲೇ ಅದನ್ನು ಮಾಡಬೇಕಿದೆ. ಇನ್ನು ಶ್ರೀನಿವಾಸ ರಾಜು ನಿರ್ದೇಶನದಲ್ಲಿ ‘ಬಸವಣ್ಣ’ ಸಿನಿಮಾ ಕೂಡ ಚೆನ್ನಾಗಿ ಬಂದಿದೆ. ಅದಕ್ಕೂ ಸಾಕಷ್ಟು ಖರ್ಚು ಮಾಡಲಾಗಿದೆ. ಡಬ್ಬಿಂಗ್ ಬಾಕಿ ಉಳಿದಿದೆ. ಶೀರ್ಷಿಕೆ ವಿವಾದ ಪರಿಹಾರವಾಗಬೇಕಿದೆ.

* ‘ಉಪ್ಪಿ2’ ಚಿತ್ರಕ್ಕೆಂದೇ ಶರೀರ ದಂಡಿಸಿ ಸಿದ್ಧಪಡಿಸಿಕೊಳ್ಳುತ್ತಿದ್ದೀರಂತೆ? ಅದು 6–ಪ್ಯಾಕ್ ಅಥವಾ 8–ಪ್ಯಾಕ್..?
ಅದಕ್ಕೆ ಉತ್ತರ ಸಿಗಬೇಕೆಂದರೆ ಸಿನಿಮಾ ಬಿಡುಗಡೆವರೆಗೆ ಕಾಯಬೇಕು. ಮೊದಲೇ ಹೇಳಿಬಿಟ್ಟರೆ, ಸಿನಿಮಾದಲ್ಲಿ ನಾನು ಹಾಗೆ ಕಾಣಿಸದೇ ಹೋದಾಗ ನೀವು ಏನೇನೋ ಅನ್ನಬಾರದಲ್ಲ? ಈಗಂತೂ ಪ್ಯಾಕ್ಸ್ ಟ್ರೆಂಡ್ ನಡೀತಾ ಇದೆ. ಆದರೆ ನಮ್ಮದು ಹುಟ್ಟಿದಾಗಿನಿಂದ ಈವರೆಗೂ ಒರಿಜಿನಲ್ ಪ್ಯಾಕ್. ನನ್ನ ದೇಹ ನೋಡಿ... ಇದು ಯೂನಿವರ್ಸಲಿ ಮೇಂಟೇನ್ಡ್ ಪ್ಯಾಕ್!

* ಮೈಸೂರಿನಲ್ಲಿ ಎಚ್‌ಐವಿ ಪೀಡಿತ ಮಗುವೊಂದನ್ನು ಈಚೆಗಷ್ಟೇ ದತ್ತು ಸ್ವೀಕರಿಸಿದ್ದೀರಿ...
ನಮ್ಮ ದೇ ಆದ ಒಂದು ಚಾರಿಟಬಲ್ ಟ್ರಸ್ಟ್ ಇದೆ. ಅದರ ಮೂಲಕ ಹಲವಾರು ಕಾರ್ಯಕ್ರಮ ಮಾಡುತ್ತಿರುತ್ತೇವೆ. ಆದರೆ ಮಗುವಿನ ದತ್ತು ಸ್ವೀಕಾರ ಪ್ಲಾನ್ ಮಾಡಿದ್ದಲ್ಲ. ಆ ಮಗುವನ್ನು ನೋಡಿ ಸಂಕಟ ಆಯಿತು. ಏನೂ ತಪ್ಪು ಮಾಡದ ಮೂರು ವರ್ಷದ ಮಗು. ಪಾಪ, ಅದು ಇನ್ನೂ ಜಗತ್ತನ್ನೇ ನೋಡಿಲ್ಲ. ಅಂಥ ಒಂದೆರಡು ಸಾವಿರ ಮಕ್ಕಳು ಇವೆಯಂತೆ. ನಾವು ಒಂದು ಮಗುವನ್ನು ದತ್ತು ಪಡೆದೆವು. ಇಂಥ ಕಾರ್ಯಕ್ರಮಕ್ಕೆ ನಾನು ಯಾವತ್ತೂ ಒಲ್ಲೆ ಅಂದಿಲ್ಲ; ಅನ್ನೋದಿಲ್ಲ.

* ಮುಂದಿನ ಯೋಜನೆಗಳ ಬಗ್ಗೆ ಏನು ಯೋಚನೆ ನಡೆದಿದೆ?
ನನ್ನ ನಿಲುವು ಏನೆಂದರೆ, ಮಾಡಬೇಕಾದ ಕೆಲಸವನ್ನು ಸುಮ್ಮನೇ ಮಾಡಿಕೊಂಡು ಹೋಗಬೇಕು ಎನ್ನುವುದು. ಮುಂದಿನದೆಲ್ಲ ಪ್ರೇಕ್ಷಕನಿಗೆ ಬಿಟ್ಟಿದ್ದು. ಕುಛ್ ಬನ್‌ನೇ ಕಾ ಮತ್ ಸೋಚೋ; ಕುಛ್ ಕರನೇ ಕಾ ಸೋಚೋ. ಬನ್‌ನೇ ಮೇ ಕುಛ್ ಮಜಾ ನಹೀ; ಕರ್‌ನೇ ಮೇ ಮಜಾ ಹೈ!

* ಹಾಗಿದ್ದರೆ ಏನನ್ನೂ ನಿರೀಕ್ಷೆ ಮಾಡುವುದಿಲ್ಲವೇ?
ಎಕ್ಸ್‌ಪೆಕ್ಟ್ ಮಾಡೋದನ್ನು ಬಿಟ್ಟು ಬಿಟ್ಟಿದೀನಿ; ಬರೀ ಅಕ್ಸೆಪ್ಟ್ ಮಾಡೋದನ್ನು ಕಲಿತಿದ್ದೀನಿ..! ನನ್ನ ಅಭಿಮಾನಿಗಳೂ ಸೇರಿದಂತೆ ಎಲ್ಲರಿಗೂ ನನ್ನ ಮನವಿ ಇಷ್ಟೇ: ಅಕ್ಸೆಪ್ಟ್ ಮಾಡಿ; ಎಕ್ಸ್‌ಪೆಕ್ಟ್ ಮಾಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.