ADVERTISEMENT

ಎದೆಯಿಂದ ಎದೆಗೆ...

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

‘ಈ ದಿಲ್ ಹೇಳಿದೆ ನೀ ಬೇಕಂತ’ ಸಿನಿಮಾ ಇಂದು (ಅಕ್ಟೋಬರ್ 31) ತೆರೆಕಾಣುತ್ತಿದೆ. ಅದಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ರತಂಡದಲ್ಲಿ ಎದ್ದುಕಾಣಿಸಿದ್ದು ಸಿನಿಮಾದ ಗೆಲುವಿನ ಕುರಿತ ಆತ್ಮವಿಶ್ವಾಸ. 

ಹಿರಿಯ ನಟ ಶಿವರಾಜ್ ಕುಮಾರ್ ಅಭಿಯನದ ‘ಬೆಳ್ಳಿ’ ಚಿತ್ರ ಸಹ ಇಂದೇ ತೆರೆ ಕಾಣುತ್ತಿದೆ. ದೊಡ್ಡ ಸಿನಿಮಾ ತೆರೆಕಾಣುತ್ತಿರುವ ಸಂದರ್ಭದಲ್ಲೂ ತಮ್ಮ ಚಿತ್ರವನ್ನು ತೆರೆಕಾಣಿಸುವ ಎದೆಗಾರಿಕೆಯನ್ನು ‘ದಿಲ್‌’ ಬಳಗ ಪ್ರದರ್ಶಿಸುತ್ತಿದೆ. ಈ ಆತ್ಮವಿಶ್ವಾಸಕ್ಕೆ ಒಳ್ಳೆಯ ಚಿತ್ರವನ್ನು ಪ್ರೇಕ್ಷಕರು ಬೆಂಬಲಿಸುವರು ಎನ್ನುವ ಚಿತ್ರತಂಡದ ನಂಬಿಕೆಯೇ ಕಾರಣವಾಗಿದೆ.

ನಿರ್ಮಾಪಕದ್ವಯರಾದ ಪ್ರಭಾಕರ್ ಮತ್ತು ಎಸ್‌. ಶ್ರೀಧರ್– ‘ಕಥೆ, ಚಿತ್ರಕಥೆ ಉತ್ತಮವಾಗಿದೆ’ ಎಂದರು. ಶ್ರೀಧರ್ ತಮ್ಮ ಚಿತ್ರದ ಯಶಸ್ಸಿನ ಬಗ್ಗೆ ಭರವಸೆಯ ಮಾತನಾಡಿದರು. ‘ಶುಕ್ರವಾರ ಮಧ್ಯಾಹ್ನದ ನಂತರ ನೀವು (ಮಾಧ್ಯಮದವರು) ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಖಂಡಿತಾ ವ್ಯಕ್ತಪಡಿಸುತ್ತೀರಿ. ದುಡ್ಡಿನ ಬಗ್ಗೆ ಆಲೋಚಿಸುವುದಕ್ಕಿಂತ ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು’ ಎಂದರು. 50ರಿಂದ 70 ಚಿತ್ರಮಂದಿರಗಳಲ್ಲಿ ತಮ್ಮ ಸಿನಿಮಾವನ್ನು ತೆರೆ ಕಾಣಿಸುವ ಯೋಜನೆ ಅವರದ್ದು.
ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಅವರಿಗೆ ಈ ಚಿತ್ರದ 25 ಸಾವಿರ ಆಡಿಯೊ ಸಿ.ಡಿ ಮಾರಾಟವಾಗಿರುವುದು ಖುಷಿ ಕೊಟ್ಟಿದೆ.

ಅವಿನಾಶ್ ನರಸಿಂಹರಾಜು ‘ಈ ದಿಲ್‌...’ ಚಿತ್ರದ ನಾಯಕ. ತಮ್ಮ ವೃತ್ತಿ ಬದುಕಿನ ಎಂಟನೇ ಚಿತ್ರದ ಬಗ್ಗೆ ಅವರು ಅಪಾರ ನಿರೀಕ್ಷೆ ಮತ್ತು ಭರವಸೆ ಹೊಂದಿದ್ದಾರೆ. ‘ನನಗೆ ಇಲ್ಲಿಯವರೆಗೂ ಬಾಕ್ಸಾಫೀಸಿನಲ್ಲಿ ಹೇಳಿಕೊಳ್ಳುವಂಥ ಗೆಲುವು ದೊರೆತಿಲ್ಲ. ಆ ಕಾರಣಕ್ಕೆ ಇದು ನನಗೆ ಹೊಸ ಚಿತ್ರವಾಗಿ ಕಾಣಲಿದೆ’ ಎಂದ ಅವರು– ‘ಸಿಂಪಲ್ ಎಫೆಕ್ಟಿವ್ ಲವ್ ಸ್ಟೋರಿ’ ಎಂದು ಈ ಸಿನಿಮಾವನ್ನು ಬಣ್ಣಿಸಿದರು.

ಮೊದಲ ಬಾರಿ ನಿರ್ದೇಶಕನ ಕ್ಯಾಪು ತೊಟ್ಟಿರುವ ಕೆ.ಟಿ.ಎಂ. ಶ್ರೀನಿವಾಸ್‌, ತಮಗೆ ಈ ಅವಕಾಶವನ್ನು ಕೊಟ್ಟ ನಿರ್ಮಾಪಕರಿಗೆ ಬಹುಪರಾಕ್ ಹೇಳಿದರು. ತಮ್ಮ ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಲೇ ‘ಬೆಳ್ಳಿ’ ತೆರೆ ಕಾಣುತ್ತಿರುವುದರಿಂದ ತಮಗೆ ಹೆಚ್ಚು ಸಹಕಾರ ನೀಡಬೇಕು ಎಂದು ಮಾಧ್ಯಮದವರನ್ನು ಕೋರಿದರು. ಒಟ್ಟು 1.98 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಿಸಲಾಗಿದೆಯಂತೆ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ನಟರಾದ ನಾಗೇಂದ್ರ ಶಾ, ಮಿತ್ರ ಅವರೂ ‘ಈ ದಿಲ್ ಹೇಳಿದೆ ನೀ ಬೇಕಂತ’ ಪ್ರೇಕ್ಷಕನ ಮನವನ್ನು ತಟ್ಟಲಿದೆ ಎನ್ನುವ ಅಭಿಪ್ರಾಯ ಹೊರ ಹಾಕಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT