ADVERTISEMENT

ಕನಸಿನ ರಾಣಿ ತೆರೆಗೆ ಬಂದಳು...

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ಚಿತ್ರ ಸಿದ್ಧವಾಗಿದ್ದರೂ ತೆರೆಗೆ ತರಲು ಏನೇನೋ ಅಡ್ಡಿ ಆತಂಕ ಎದುರಾಗುತ್ತವೆ. ‘ಸಪ್ನೊಂಕಿ ರಾಣಿ’ ಸಿನಿಮಾದ ಕಥೆ ಕೂಡ ಅದೇ. ‘ನಮ್ಮ ಸಿನಿಮಾದಲ್ಲಿ ಹೀರೊ–ಹೀರೊಯಿನ್ ಅಂತೇನಿಲ್ಲ. ಕಥೆಯೇ ಹೀರೊ’ ಎಂದು ಹೇಳುವ ನಿರ್ದೇಶಕ ಅರುಣ್ ಅವರಲ್ಲಿ ತಮ್ಮ ಸಿನಿಮಾದ ಕಥೆ ಕುರಿತು ಹೆಚ್ಚು ನಿರೀಕ್ಷೆಯಿದೆ. ಇಷ್ಟಪಟ್ಟು, ಹಾಗೆಯೇ ಕಷ್ಟಪಟ್ಟು ಸಿನಿಮಾ ಮಾಡಿರುವ ಅವರಿಗೆ, ‘ಈ ಸಿನಿಮಾ ಪ್ರೇಕ್ಷಕರನ್ನು ಖಂಡಿತ ಕಾಡುತ್ತದೆ’ ಎಂಬ ವಿಶ್ವಾಸವೂ ಇದೆ.

ದೊಡ್ಡ ಬಜೆಟ್‌ ಸಿನಿಮಾ ಮಾಡಬೇಕು ಎಂಬ ದೊಡ್ಡ ದೊಡ್ಡ ಆಸೆಗಳು ಅವರಿಗಿಲ್ಲ. ‘ಒಂದೊಳ್ಳೆ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದೇವೆ. ಇದರಲ್ಲಿ ಕಥೆಯೇ ನಾಯಕನಾಗಿರುವುದರಿಂದ, ಚಿತ್ರ ನೋಡಿ ಹೊರಬರುವವರು ಕಥೆ ಹೀಗೂ ಇರಬಹುದಾ ಎಂದು ಯೋಚಿಸುತ್ತಾರೆ’ ಎನ್ನುತ್ತಾರೆ ಅರುಣ್. ತಂತ್ರಜ್ಞರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿರುವ ಅವರಿಗೆ ಸಿನಿಮಾ ನಿರ್ದೇಶನ ಮಾಡಬೇಕೆಂಬ ತುಡಿತ ಸಾಕಷ್ಟಿತ್ತು. ಅದು ‘ಸಪ್ನೊಂಕಿ ರಾಣಿ’ ಮೂಲಕ ಈಡೇರಿದೆಯಂತೆ.

ಅರುಣ್ ಕೆಲಸದಲ್ಲಿ ಭಾಗಿಯಾಗಿರುವ ಇನ್ನೊಬ್ಬ ನಿರ್ದೇಶಕ ಪ್ರಸಾದ್, ಸಿನಿಮಾ ಯಶಸ್ಸು ಪಡೆಯಲು ಕಾರಣವಾಗುವ ಅಂಶಗಳನ್ನು ಪಟ್ಟಿ ಮಾಡುತ್ತಾರೆ. ಪ್ರಸಾದ್ ಪ್ರಕಾರ ಮಾಧುರ್ಯ ತುಂಬಿದ ಹಾಡುಗಳು, ಕುತೂಹಲ ಕೆರಳಿಸುವ ಕಥೆ, ಕಣ್ಣಿಗೆ ಹಬ್ಬ ಉಂಟು ಮಾಡುವ ಛಾಯಾಗ್ರಹಣ, ಕಾಮಿಡಿ ಸೇರಿದಂತೆ ಎಲ್ಲ ಭಾವನೆಗಳ ಸಂಗಮ ‘...ರಾಣಿ’ಯಲ್ಲಿದೆ.

‘ತಡವಾದರೂ ಚಿಂತೆಯಿಲ್ಲ; ಹೊಸ ಕನಸುಗಳನ್ನು ತೆರೆ ಮೇಲೆ ತರಲಿದ್ದೇವೆ’ ಎಂಬ ನುಡಿ ನಾಯಕ ಸೃಜನ್ ಅವರದು. ಚಿತ್ರ ಬಿಡುಗಡೆ ಅಂದರೆ ಒಂಥರ ಹೆರಿಗೆ ನೋವು ಇದ್ದಂತೆ ಎಂದು ಸೃಜನ್ ಬಣ್ಣಿಸಿದರು. ನಿರ್ದೇಶಕರಾದ ಅರುಣ್ ಹಾಗೂ ಪ್ರಸಾದ್‌ಗೆ ದೂರದೃಷ್ಟಿ ಇದೆ ಎಂದು ಮೆಚ್ಚುಗೆ ಸೂಚಿಸಿದರು.

ಸೃಜನ್‌ ಜತೆ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ಐಶ್ವರ್ಯ ಸಿಂಧೋಗಿ ಅವರದು ಕಾಲೇಜು ಹುಡುಗಿ ಪಾತ್ರ. ಹಾಗೆ ನೋಡಿದರೆ ಇದು ಅವರ ಮೊದಲ ಸಿನಿಮಾ; ಆದರೆ ಇದಕ್ಕಿಂತ ಮೊದಲೇ ಎರಡು ಚಿತ್ರಗಳು ಬಿಡುಗಡೆಯಾಗಿವೆ.

ನಿರ್ದೇಶಕರಿಂದ ಹಿಡಿದು ಚಿತ್ರತಂಡದ ಎಲ್ಲರದೂ ಒಂದೇ ತೆರನಾದ ಮನೋಭಾವ ಇದ್ದುದರಿಂದ ಸಿನಿಮಾ ನಿರ್ಮಾಣ ಸುಲಭವಾಯಿತು ಎಂದು ನಿರ್ಮಾಪಕ ರಾಜಣ್ಣ ಬಣ್ಣಿಸಿದರು. ಚಿತ್ರವನ್ನು ಇದೇ 31ರಂದು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿರುವುದಾಗಿ ವಿತರಕ ರಮೇಶ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.