ADVERTISEMENT

ಗೋಪಾಲಕಿಯಾದ ಪ್ರಿಯಾಮಣಿ

ಪ್ರಜಾವಾಣಿ ವಿಶೇಷ
Published 3 ಜುಲೈ 2015, 15:44 IST
Last Updated 3 ಜುಲೈ 2015, 15:44 IST

*ವಿಜಯ್ ಜೊತೆ ನೀವೂ ದನ ಕಾಯ್ತೀರಂತೆ?
‘ದನ ಕಾಯೋನು’ ನನಗೆ ಯೋಗರಾಜ್ ಭಟ್ ಹಾಗೂ ವಿಜಯ್ ಇಬ್ಬರ ಜೊತೆಯೂ ಮೊದಲ ಚಿತ್ರ. ಜಗದಂಬಾ ನನ್ನ ಪಾತ್ರದ ಹೆಸರು. ಹೆಸರು ಕೇಳಿದರೇ ಇದೊಂದು ಹಳ್ಳಿ ಹುಡುಗಿ ಪಾತ್ರ ಎನಿಸುತ್ತದೆ. ನಾನು ಹಳ್ಳಿ ಹುಡುಗಿಯಾಗಿದ್ದರೂ ಪೊಲೀಸ್ ಕಾನ್‌ಸ್ಟೆಬಲ್ ಆಗುವ ಆಸೆ ಇರುತ್ತದೆ. ವಿಜಿ ದನ ಕಾಯೋನಾದರೆ ನಾನು ಹಸು ಕಾಯೋಳು. ನಮ್ಮಿಬ್ಬರ ನಡುವೆ ಯಾವಾಗಲೂ ಕಾದಾಟಕ್ಕೆ ಏನಾದರೊಂದು ವಿಷಯ ಇದ್ದೇ ಇರುತ್ತೆ. ಹಾಗಂತ ನನ್ನ ಪಾತ್ರ ಸೂತ್ರದ ಬೊಂಬೆಯಲ್ಲ. ಸಾಕಷ್ಟು ಮಹತ್ವ ಇದೆ.

*‘ನಾಟಿಕೋಳಿ’ಯಿಂದ ನೀವು ಹೊರಬಂದಿದ್ದೀರಂತೆ?
ನಾನು ‘ನಾಟಿಕೋಳಿ’ ಚಿತ್ರವನ್ನು ಒಪ್ಪಿಕೊಂಡೇ ಇಲ್ಲ. ನಿರ್ದೇಶಕರು ಒಮ್ಮೆ ನನ್ನ ಹತ್ತಿರ ಮಾತನಾಡಬೇಕು ಎಂದಿದ್ದರಷ್ಟೇ. ಸರಿ ಅಂದಿದ್ದೆ. ಆಮೇಲೆ ಆ ಭೇಟಿಯೇ ನಡೆದಿಲ್ಲ. ಅದರ ಹೊರತಾಗಿ ಯಾವ ಮಾತುಕತೆಯೂ ಆಗಿಲ್ಲ. ಇಷ್ಟಕ್ಕೇ ಹಲವು ರೀತಿಯಲ್ಲಿ ಸುದ್ದಿ ಹಬ್ಬಿದವು. ಒಂದುವೇಳೆ ಅವರು ಮತ್ತೆ ಬಂದು ಕೇಳಿದರೆ, ನನಗೆ ಕಥೆ ಹಿಡಿಸಿದರಷ್ಟೇ ಮುಂದಿನ ಮಾತುಕತೆ.

*‘ವ್ಯೂಹ’ ಹಾಗೂ ಕೋಮಲ್ ಜೊತೆಗಿನ ಒಂದು ಚಿತ್ರ ಮುಗಿದು ಹಲವು ದಿನಗಳೇ ಆದವಲ್ಲ?
ಯಾವುದೋ ಕಾರಣದಿಂದ ‘ವ್ಯೂಹ’ ಬಿಡುಗಡೆ ತಡವಾಗಿದೆ. ಅದು ತುಂಬಾ ಒಳ್ಳೆಯ ಚಿತ್ರ. ನಾನು ತನಿಖಾಧಿಖಾರಿಯಾಗಿ ನಟಿಸಿದ್ದೇನೆ. ಯುವಜನರಿಗೆ ಚಿತ್ರ ಹತ್ತಿರವಾಗುತ್ತದೆ. ನಾನೂ ಬಿಡುಗಡೆಗೆ ಕಾಯುತ್ತಿದ್ದೇನೆ. ಕೋಮಲ್ ಜೊತೆ ಅಭಿನಯಿಸಿದ್ದು ಹಾರರ್ ಕಾಮಿಡಿ ಚಿತ್ರ. ನನ್ನ ಗಮನಕ್ಕೆ ಬಂದಂತೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಅದರ ಚಿತ್ರೀಕರಣವೂ ಪೂರ್ಣಗೊಂಡಿದೆ. ಇತ್ತೀಚೆಗೆ ಹಾರರ್ ಚಿತ್ರಗಳು ಹೆಚ್ಚಾಗಿ ಬರುತ್ತಿವೆ. ನಾನು ಮೊದಲ ಬಾರಿ ಹಾರರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ.

*ಅಂತರ್ಜಾಲದಲ್ಲಿ ತಡಕಾಡಿದರೆ ನಿಮ್ಮ ಹೆಸರಲ್ಲಿ ಏಳೆಂಟು ಚಿತ್ರಗಳಿವೆ. ನಿಜಾನಾ?
ಅಂತರ್ಜಾಲದಲ್ಲಿ ನನ್ನ ಬಗ್ಗೆ ನನಗೇ ಗೊತ್ತಿರದ ಮಾಹಿತಿಗಳೆಲ್ಲ ಇರುತ್ತವೆ. ಅವೆಲ್ಲ ಸುಳ್ಳು. ವಿಕಿಪೀಡಿಯದಲ್ಲಿ ‘ಅಂಗುಲೀಕ’, ‘ಕಾಮಿನಿ’, ‘ರಂಗಸಾನಿ’ ಸಿನಿಮಾಗಳೆಲ್ಲ ಇವೆ. ‘ಅಂಗುಲೀಕ’ದ ಮಾತುಕತೆ ನಡೆದಿತ್ತು. ಆದರೆ ಈಗ ಆ ಚಿತ್ರ ಮಾಡುತ್ತಿಲ್ಲ. ಮಲಯಾಳಂನ ‘ಯೆಸ್, ಐ ಆ್ಯಾಮ್’ ಚಿತ್ರದ ಕಥೆಯೂ ಕೇಳಿದ್ದೆ. ಕಥೆ ಹಿಡಿಸದ ಕಾರಣ ಅದನ್ನೂ ಒಪ್ಪಿಕೊಂಡಿಲ್ಲ. ಸದ್ಯ ‘ದನ ಕಾಯೋನು’ ಮತ್ತು ಮಲಯಾಳಂನ ಎರಡು ಚಿತ್ರಗಳಲ್ಲಿ ಮಾತ್ರ ನಾನು ತೊಡಗಿಕೊಂಡಿರುವುದು. ಉಳಿದವವುಗಳ ಬಗ್ಗೆ ನನಗೆ ಗೊತ್ತಿಲ್ಲ.

*ಸಿನಿ ಪಯಣದಲ್ಲಿ ನಿಮ್ಮ ಆಕಾಂಕ್ಷೆಗಳು ಪೂರೈಸಿವೆಯಾ?
ಎಲ್ಲ ಆಸೆಗಳು ಪೂರ್ಣಗೊಂಡಿವೆ ಅನ್ನಲಾಗದು. ಆದರೆ ನನ್ನ ಎಲ್ಲ ಪಾತ್ರಗಳೂ ನನಗೆ ಖುಷಿ ಕೊಟ್ಟಿವೆ. ಸಿಕ್ಕಾಪಟ್ಟೆ ಕಲಿತಿದ್ದೇನೆ. ಇನ್ನೂ ಕಲಿಯೋದಿದೆ. ಪೂರ್ತಿ ಹಾಸ್ಯ ಮತ್ತು ಖಳನಾಯಕಿಯ ಪಾತ್ರದಲ್ಲಿ ನಟಿಸಬೇಕು ಎಂಬ ಆಸೆ ಇದೆ. ಒಟ್ಟಾರೆ ನನ್ನ ಪಯಣದ ಬಗ್ಗೆ ನನಗೆ ತೃಪ್ತಿ ಇದೆ.

* ಬಹುತಾರಾಗಣದ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ?
ಅಂಥ ಪ್ರಯತ್ನ ನಡೆಯಬೇಕು. ಕನ್ನಡದಲ್ಲಿ ಈ ಅಭ್ಯಾಸ ಕಡಿಮೆ ಇವೆ. ಏನೇ ಆದರೂ ಪಾತ್ರ ಗಟ್ಟಿಯಾಗಿದ್ದಾಗಲೇ ಅದಕ್ಕೊಂದು ಅರ್ಥ. ಸುಮ್ಮನೇ ಬಹುತಾರಾಗಣದ ಚಿತ್ರ ಮಾಡಬೇಕೆಂದು ಮಾಡುವುದು ವ್ಯರ್ಥ. ಅಂಥ ಒಳ್ಳೆಯ ಪಾತ್ರಗಳು ನನಗೆ ಬಂದರೆ ಖಂಡಿತ ಮಾಡ್ತೀನಿ. ಏಕೆಂದರೆ ನಾಳೆ ಜನ ನನ್ನನ್ನು ನೆನಪಿಟ್ಟುಕೊಳ್ಳುವುದು ನನ್ನ ಪಾತ್ರದಿಂದಲೇ.

* ಈಗಷ್ಟೇ ತೀರ್ಪುಗಾರರಾಗಿ ‘ಡಾನ್ಸಿಂಗ್ ಸ್ಟಾರ್’ ಮುಗಿಸಿದ್ದೀರಿ. ಆ ಒಟ್ಟು ಅನುಭವ ಹೇಗಿತ್ತು?
ಒಳ್ಳೆಯ ಅನುಭವ. ಮಲಯಾಳಂನಲ್ಲಿ ‘ಡೀ ಫಾರ್ ಡಾನ್ಸ್’ ಷೋ ಮಾಡ್ತಿದ್ದೀನಿ. ಕನ್ನಡದಲ್ಲಿ ಮೊದಲ ಬಾರಿ ರಿಯಾಲಿಟಿ ಷೋ ಮೂಲಕ ಜನರನ್ನು ತಲುಪುವ ಅವಕಾಶ ಇದು. ಎಂಜಾಯ್ ಮಾಡಿದ್ದೇನೆ. ಬಹಳಷ್ಟು ಜನ ನೋಡಿ ಪ್ರಶಂಸಿಸಿದ್ದಾರೆ. ‘ಡಾನ್ಸಿಂಗ್ ಸ್ಟಾರ್ ಜ್ಯೂನಿಯರ್ಸ್’ ಷೋನಲ್ಲೂ ಇರ್ತೀನಿ. ಈಗ ಬೇರೆ ಷೋಗಳಿಗೂ ಆಹ್ವಾನ ಬಂದಿದೆ.

* ತಾರಾ ಮೌಲ್ಯವಿರುವ ಕಲಾವಿದರು ರಿಯಾಲಿಟಿ ಷೋಗಳಲ್ಲಿ ಭಾಗವಹಿಸಬಾರದು ಎಂಬ ನಿರ್ಮಾಪಕರ ಕೂಗಿಗೆ ನಿಮ್ಮ ಪ್ರತಿಕ್ರಿಯೆ ಏನು?
ಯಾಕೆ ಮಾಡಬಾರದು? ಟೀವಿ ಕೂಡ ಜನಪ್ರಿಯ ಮಾಧ್ಯಮ. ವಾಹಿನಿಗಳಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಮಾಡಬಾರದು ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಇಷ್ಟಕ್ಕೂ ನಾವು ಇಡೀ ವರ್ಷ ಷೋಗಳಲ್ಲೇ ಮುಳುಗಿರುವುದಿಲ್ಲ. ಚಿತ್ರಗಳನ್ನೂ ಮಾಡ್ತೀವಿ. ಕಲಾವಿದರಾಗಿ ನಾವು ನಮ್ಮ ವೃತ್ತಿಯನ್ನು ನಿಭಾಯಿಸುತ್ತಿರುತ್ತೇವೆ ಅಷ್ಟೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.