ADVERTISEMENT

ಚೇತನ್‌ಗೆ ಮರುಕಳಿಸಿದ ‘ಆ ದಿನಗಳು’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2016, 19:30 IST
Last Updated 20 ಅಕ್ಟೋಬರ್ 2016, 19:30 IST
ಚೇತನ್‌ಗೆ ಮರುಕಳಿಸಿದ ‘ಆ ದಿನಗಳು’
ಚೇತನ್‌ಗೆ ಮರುಕಳಿಸಿದ ‘ಆ ದಿನಗಳು’   

ಕಾದಂಬರಿ ಆಧರಿಸಿದ ಬಹುತೇಕ ಸಿನಿಮಾಗಳು ನಿರ್ದಿಷ್ಟ ವರ್ಗದ ಪ್ರೇಕ್ಷಕರಿಗೆ ಸೀಮಿತವಾದವು ಎಂಬ ಅಭಿಪ್ರಾಯಗಳು ಕೇಳಿಬರುವುದು ಸಾಮಾನ್ಯ. ಆದರೆ, ಕಥೆ ಯಾವುದೇ ಕಾಲದ್ದಾದರೂ ಕಮರ್ಷಿಯಲ್ ಅಂಶಗಳನ್ನಿಟ್ಟುಕೊಂಡು ಈಗಿನ ಕಾಲಕ್ಕೆ ಒಗ್ಗಿಸಿ ಹೇಳಿದರೆ ಖಂಡಿತ ಪ್ರೇಕ್ಷಕರನ್ನು ಸೆಳೆಯುತ್ತವೆ. ಆ ರೀತಿ ಗೆದ್ದಿರುವ ಚಿತ್ರಗಳ ನಿದರ್ಶನ ನಮ್ಮ ಕಣ್ಣ ಮುಂದಿದೆ. ಇಂತಹ ಯಶಸ್ಸಿನ ಸೂತ್ರಗಳನ್ನಿಟ್ಟುಕೊಂಡು ತಯಾರಾಗುತ್ತಿರುವ ಚಿತ್ರ ‘ನೂರೊಂದು ನೆನಪು’.

ಮರಾಠಿ ಲೇಖಕ ಸುಹಾಸ್ ಶಿರ್ವಾಲ್ಕರ್ ಅವರ ‘ದುನಿಯಾ ದಾರಿ’ ಕಾದಂಬರಿ ಆಧರಿಸಿ ಮರಾಠಿಯಲ್ಲಿ ತಯಾರಾಗಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಚಿತ್ರ ನೋಡಿ ಪ್ರೇರಿತರಾದ ಉದ್ಯಮಿ ಮನೀಶ್ ದೇಸಾಯಿ, ಮರಾಠಿ ಚಿತ್ರವನ್ನು ಕನ್ನಡದಲ್ಲಿ ‘ನೂರೊಂದು ನೆನಪು’ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ. ಅವರ ಈ ಯತ್ನಕ್ಕೆ ಸ್ನೇಹಿತರಾದ ಸೂರಜ್ ದೇಸಾಯಿ ಮತ್ತು ಮಂಜುನಾಥ್ ಸಾಥ್ ನೀಡಿದ್ದು, ‘3 ಲಯನ್ಸ್’ ಬ್ಯಾನರಿನಡಿ ಚಿತ್ರ ತಯಾರಾಗುತ್ತಿದೆ.

80ರ ದಶಕದ ಕಾಲೇಜು ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಎಂ. ಕುಮರೇಶ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರರಂಗದ ಸಖ್ಯದ ಜತೆಗೆ, ಕಿರುಚಿತ್ರಗಳನ್ನು ನಿರ್ಮಿಸಿರುವ ಅವರು ಮೊದಲ ಸಲ ಹಿರಿತೆರೆಯ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ‘ಕಾಲೇಜು ಜೀವನ, ಸ್ನೇಹ, ಪ್ರೀತಿಗಳ ಸುತ್ತ ಕಥೆ ಸಾಗುತ್ತದೆ. ಕಥೆಗಾಗಿ 80ರ ದಶಕವನ್ನು ಪರದೆ ಮೇಲೆ ಮರುಸೃಷ್ಟಿಸಲಾಗಿದೆ’ ಎಂದರು ಕುಮರೇಶ್.

ನಾಲ್ಕೈದು ವರ್ಷದಿಂದ ಚಿತ್ರರಂಗದಿಂದ ದೂರವುಳಿದು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ‘ಆ ದಿನಗಳು’ ಖ್ಯಾತಿಯ ಚೇತನ್ ಚಿತ್ರದ ನಾಯಕ. ‘ಈ ಸಿನಿಮಾ ಇಂದಿನ ತಲೆಮಾರಿಗೆ ಹೊಸದೆನಿಸಿದರೆ, ಹಿಂದಿನ ತಲೆಮಾರಿನವರನ್ನು ನೆನಪಿನಾಳಕ್ಕೆ ಕರೆದೊಯ್ಯುತ್ತದೆ. 80ರ ದಶಕದ ಕಾಲೇಜು ಹುಡುಗನ ಪಾತ್ರ ಖುಷಿ ಕೊಟ್ಟಿದೆ’ ಎಂದು ಹೇಳಿದರು.

ಮೇಘನಾ ರಾಜ್ ಚಿತ್ರದ ನಾಯಕಿಯಾಗಿದ್ದು, ಎರಡನೇ ನಾಯಕನಾಗಿ ರಾಜವರ್ಧನ್ ಕಾಣಿಸಿಕೊಂಡಿದ್ದಾರೆ. ಕಿರುತೆರೆ ನಟಿಯರಾದ ಅರ್ಚನಾ ಮತ್ತು ಸುಷ್ಮಿತಾ ಜೋಷ್ ಕೂಡ ತಾರಾಬಳಗದಲ್ಲಿದ್ದಾರೆ.

ಬೆಳಗಾವಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಸಂಗೀತ ನಿರ್ದೇಶಕ ಯಾರೆಂಬುದು ಇನ್ನೂ ಅಂತಿಮಗೊಂಡಿಲ್ಲ. ಎಸ್‌.ಕೆ. ರಾವ್ ಛಾಯಾಗ್ರಹಣ, ಲಾರೆನ್ಸ್ ಕಿಶೋರ್ ಸಂಕಲನ, ಪ್ರವೀಣ್ ಚಿತ್ರಕಥೆ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.