ADVERTISEMENT

ದೀಪಿಕಾಗೆ ನಿರ್ಮಾಣದ ಕನಸು

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 19:59 IST
Last Updated 30 ನವೆಂಬರ್ 2015, 19:59 IST

ನಟಿ ದೀಪಿಕಾ ಪಡುಕೋಣೆ ಭವಿಷ್ಯದ ದಿನಗಳಲ್ಲಿ ಚಿತ್ರ ನಿರ್ಮಾಣ ಮಾಡುವ ಆಕಾಂಕ್ಷೆ ಹೊಂದಿರುವುದಾಗಿ ತಿಳಿಸಿದ್ದಾರೆ. ನನಗೆ ಹಣ ಗಳಿಸುವುದಕ್ಕಿಂತ, ನನ್ನ ಅದೃಷ್ಟ ಪರೀಕ್ಷೆ ಮಾಡಬೇಕಿದೆ. ಆ ಕಾರಣಕ್ಕಾಗಿ ಚಿತ್ರ ನಿರ್ಮಾಣ ಮಾಡುತ್ತೇನೆ ಎಂದು ದೀಪಿಕಾ ಹೇಳಿದ್ದಾರೆ.

29 ವರ್ಷದ ಈ ನಟಿ ರಣಬೀರ್ ಕಪೂರ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ‘ತಮಾಷಾ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದೆ.

‘ನನಗೆ ಚಿತ್ರ ನಿರ್ಮಾಣದ ಸಾಹಸಕ್ಕೆ  ಇಳಿಯಬೇಕು ಎನ್ನುವ ಆಸೆಯಿದೆ. ಸ್ವಲ್ಪ ದಿನಗಳ ಮಟ್ಟಿಗಾದರೂ  ನಿರ್ಮಾಪಕಿ ಎನ್ನಿಸಿಕೊಳ್ಳಬೇಕು. ನನ್ನಲ್ಲಿ ನಿರ್ಮಾಪಕಿಯಾಗುವ ಅರ್ಹತೆಗಳಿವೆ ಎಂಬುದು ನನ್ನ ಭಾವನೆ. ನನಗೆ ಸಂಘಟಿಸಿ, ಆಯೋಜಿಸುವ ಗುಣವಿದೆ. ಹಾಗಾಗಿ ಚಿತ್ರ ನಿರ್ಮಾಣ ಮಾಡಿದರೆ ನಾನು ಗೆಲ್ಲಬಹುದು ಎಂಬ ನಂಬಿಕೆ ಇದೆ’ ಎಂದು ದೀಪಿಕಾ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.

‘ಚಿತ್ರ ನಿರ್ಮಾಣದ ತಾಂತ್ರಿಕ ಅಂಶಗಳ ಕುರಿತು ನನಗೆ ಅಷ್ಟಾಗಿ ತಿಳಿದಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಆಳವಾಗಿ ಅರಿತು ಪ್ರೇಕ್ಷಕರಿಗೆ ಇಷ್ಟವಾಗುವಂತಹ ಚಿತ್ರಗಳನ್ನು ನೀಡುತ್ತೇನೆ. ‘ಪೀಕು’, ‘ಲವ್ ಆಜ್‌ ಕಲ್‍, ‘ಕಾಕ್‌ಟೈಲ್’ ಮತ್ತು ‘ತಮಾಷಾ’ದಂತಹ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬುದು ನನ್ನ ಬಯಕೆ. ಕಾರಣ ಈ ಚಿತ್ರಗಳು ನಮ್ಮ ಮನಸ್ಸಿಗೆ ಹತ್ತಿರವಾಗಿದ್ದವು. ಅಲ್ಲದೇ ಈ ಚಿತ್ರಗಳು ನನ್ನ ಪಾಲಿಗೆ ವಿಶೇಷ ಚಿತ್ರಗಳಾಗಿವೆ’ ಎಂದು ದೀಪಿಕಾ ತಿಳಿಸಿದ್ದಾರೆ.

ಈ ಹಿಂದೆ ನಟೀಮಣಿಯರಾದ ಅನುಷ್ಕಾ ಶರ್ಮಾ, ಶಿಲ್ಪಾ ಶೆಟ್ಟಿ ಕುಂದ್ರಾ, ದಿಯಾ ಮಿರ್ಜಾ, ಲಾರಾ ದತ್ತಾ ಮುಂತಾದವರು ನಟನೆಯಿಂದ ನಿರ್ಮಾಣದತ್ತ ಮುಖ ಮಾಡಿರುವ ಉದಾಹರಣೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.