ADVERTISEMENT

ನಾನೀಗಲೂ ಚೂಸಿ...

ಪದ್ಮನಾಭ ಭಟ್ಟ‌
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಸಿಂಧೂ ಲೋಕನಾಥ್‌
ಸಿಂಧೂ ಲೋಕನಾಥ್‌   

‘ಲೈಫು ಇಷ್ಟೇನೆ’ ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾದ ಸಿಂಧೂ ಲೋಕನಾಥ್‌ ಬಣ್ಣದ ಬದುಕಿಗೀಗ ಎಂಟು ವರ್ಷ. ಅವರೀಗ ವೃತ್ತಿ ಮತ್ತು ವೈಯಕ್ತಿಕ ಬದುಕುಗಳಲ್ಲಿಯೂ ಎರಡನೇ ಇನ್ನಿಂಗ್ಸ್‌ನ ಹೊಸ್ತಿಲಲ್ಲಿದ್ದಾರೆ. ಎರಡು ವರ್ಷಗಳ ನಂತರ, ಸಿಂಧೂ ನಾಯಕಿಯಾಗಿ ನಟಿಸಿರುವ ಸಿನಿಮಾ (ವಿಕ್ರಮ್‌ ಯೋಗಾನಂದ್‌ ನಿರ್ದೇಶನದ ‘ಹೀಗೊಂದು ದಿನ’) ಬಿಡುಗಡೆಯಾಗುತ್ತಿದೆ. ಇದು ಅವರ ಮದುವೆಯ ನಂತರ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಕೂಡ ಹೌದು. ‘ಹಿಂದು ಮುಂದೂ ಎಂದೆಂದೂ ನಾನಿರೋದು ಹೀಗೆ’ ಎನ್ನುವ ಅವರ ಜತೆಗಿನ ಮಾತುಕತೆಯ ಅಕ್ಷರರೂಪ ಇಲ್ಲಿದೆ.

ಎಂಟು ವರ್ಷಗಳ ಅಭಿನಯ ಬದುಕಿನ ಹಾದಿಯನ್ನೊಮ್ಮೆ ಹೊರಳಿ ನೋಡಿದಾಗ ಏನನಿಸುತ್ತದೆ?
ನಾನು ಬದುಕಿನಲ್ಲಿ ಯಾವುದನ್ನೂ ಪ್ಲ್ಯಾನ್‌ ಮಾಡಿದವಳಲ್ಲ. ಈವತ್ತಿಗೂ ‘ಐದು ವರ್ಷಗಳ ನಂತರ ನೀವು ಹೇಗಿರುತ್ತೀರಿ?’ ಎಂದು ಹೇಳಿದರೆ ಗೊತ್ತಿಲ್ಲ ಎಂದೇ ಹೇಳುತ್ತೇನೆ.

ನಮ್ಮ ಬದುಕಿನಲ್ಲಿ ಎಲ್ಲಿಗೆ ತಲುಪಬೇಕು ಎಂದು ನಿಶ್ಚಿತವಾಗಿರುತ್ತದೆಯೋ ಅಲ್ಲಿಗೆ ಹೇಗಾದರೂ ಹೋಗಿಯೇ ಹೋಗುತ್ತೇವೆ ಎನ್ನುವುದು ನನ್ನ ನಂಬಿಕೆ. ನಾನು ಎಲ್ಲಿಯೋ ಇದ್ದವಳು. ಟಾಮ್‌ ಬಾಯ್‌ ಥರ ಇದ್ದವಳು. ಸಿನಿಮಾ ನಾಯಕಿ ಆಗುತ್ತೇನೆ ಎಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಅದು ತಂತಾನೆಯೇ ಆಯ್ತು. ಮೊದಲ ಸಿನಿಮಾ ಮಾಡಿದಾಗಲೂ ಅವಕಾಶ ಬಂತು, ನಟಿಸಿದೆ ಅಷ್ಟೆ. ಅದರಾಚೆಗೆ ಇಲ್ಲಿಯೇ ಉಳಿದುಕೊಳ್ಳಬೇಕು, ತುಂಬಾ ಸಿನಿಮಾ ಮಾಡಬೇಕು ಎಂದೆಲ್ಲ ನಿಶ್ಚಯ ಮಾಡಿಕೊಂಡಿರಲಿಲ್ಲ. ಈಗಲೂ ಅಂದುಕೊಂಡಿಲ್ಲ. ಒಂದರ ಹಿಂದೆ ಮತ್ತೊಂದು ಅವಕಾಶಗಳು ಸಿಗುತ್ತಲೇ ಹೋದವು. ಈವತ್ತಿಗೆ ನಟನಾಬದುಕಿಗೆ ಬಂದು ಎಂಟು ವರ್ಷಗಳು ಕಳೆದಿವೆ. ಈ ಪಯಣ ಅದ್ಭುತವಾಗಿತ್ತು. ಸಾಕಷ್ಟು ಸಲ ಬಿದ್ದಿದ್ದೀನಿ, ಹಾಗೆಯೇ ಎದ್ದಿದ್ದೇನೆ. ಈ ಆಟ ನಡೆಯುತ್ತಲೇ ಇದೆ. ನಾನ್ಯಾವತ್ತೂ ನೋಡಿರದ, ಅನುಭವಿಸಿರದ ಹಲವು ಪಾತ್ರಗಳಲ್ಲಿ ನಟಿಸಿದೆ. ಅದರ ಖುಷಿಯೇ ಬೇರೆ...

ADVERTISEMENT

‘ಹೀಗೊಂದು ದಿನ’ ಸಿನಿಮಾ ಬಗ್ಗೆ ಹೇಳಿ?
ಇದೊಂದು ಮಹಿಳಾ ಪ್ರಧಾನ ಚಿತ್ರ. ಈ ರೀತಿಯ ಪಾತ್ರ ಮಾಡುತ್ತಿರುವುದು ಇದೇ ಮೊದಲು. ಈ ಚಿತ್ರಕ್ಕೆ ನಾಯಕ ಇಲ್ಲ. ಪೂರ್ತಿ ಪ್ರಯೋಗಾತ್ಮಕ ಚಿತ್ರವಿದು. ಯಾವುದೇ ಕಟ್‌ ಇಲ್ಲದ ಚಿತ್ರ. ಪಾತ್ರವೂ ತುಂಬ ಸವಾಲಿನದ್ದು. ಯಾಕೆಂದರೆ ಇಡೀ ಸಿನಿಮಾದ ಜವಾಬ್ದಾರಿ ಆ ಹುಡುಗಿಯ ಪಾತ್ರದ ಮೇಲಿದೆ. ಪ್ರತಿ ದೃಶ್ಯದಲ್ಲಿಯೂ ಫ್ರೇಮಿನಲ್ಲಿಯೂ ಅವಳಿರುತ್ತಾಳೆ. ಇದೊಂದು ಟ್ರಾವೆಲ್‌ ಸಿನಿಮಾ. ಒಂದೊಂದು ದೃಶ್ಯವನ್ನೂ ಪೂರ್ತಿ ತಾಲೀಮು ಮಾಡಿಕೊಂಡು ಅಭಿನಯಿಸುವುದು ದೊಡ್ಡ ಸವಾಲು.

ಸಂಭಾಷಣೆ, ಆಂಗಿಕ ಅಭಿನಯ, ಎದುರಿನ ನಟರ ಭಾವಾಭಿವ್ಯಕ್ತಿ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಅಭಿನಯಿಸಬೇಕು. ಮಧ್ಯದಲ್ಲಿ ಎಲ್ಲಿಯಾದರೂ ತಪ್ಪಿದರೆ ಮತ್ತೆ ದೃಶ್ಯದ ಆರಂಭದಿಂದಲೇ ಚಿತ್ರೀಕರಣ ಪ್ರಾರಂಭಿಸಬೇಕಿತ್ತು. ಈ ಎಲ್ಲವನ್ನೂ ಎದುರಿಸಿದ್ದು ಒಂದು ಒಳ್ಳೆಯ ಅನುಭವ ನೀಡಿದೆ. ಈ ಚಿತ್ರದಿಂದ ನನ್ನ ಆತ್ಮವಿಶ್ವಾಸ ಹೆಚ್ಚಿದೆ.

ನಿಮ್ಮ ಮದುವೆ ಕೂಡ ಎಲ್ಲರಿಗೂ ಅನಿರೀಕ್ಷಿತವೇ ಆಗಿತ್ತು. ಮದುವೆ ಎನ್ನುವುದು ನಿಮ್ಮ ಬದುಕಿನಲ್ಲಿ ಏನಾದರೂ ಬದಲಾವಣೆ ತಂದಿದೆಯಾ?
ನಾನು ಯಾವತ್ತೂ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕನ್ನು ಬೆರೆಸುವುದಿಲ್ಲ. ಹಾಗೆಯೇ ವೈಯಕ್ತಿಕ ಬದುಕಿನ ಯಾವ ಘಟನೆಗಳು ವೃತ್ತಿ ಬದುಕಿನ ಮೇಲೆ ಪ್ರಭಾವ ಬೀರುವುದಿಲ್ಲ. ಮನೆಯಿಂದ ಹೊರಗಡೆ ಬಂದ ತಕ್ಷಣ ಕೆಲಸ. ಕೆಲಸ ಮುಗಿಸಿ ಮನೆಗೆ ಹೋದ ತಕ್ಷಣ ಮನೆ. ನಾನು ಮೊದಲೂ ಹಾಗೆಯೇ ಇದ್ದಿದ್ದು. ಇಂದಿಗೂ ಆ ವಿಷಯದಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಅಡುಗೆ ಮನೆಯಲ್ಲಿ ಚೂರು ಕೆಲಸ ಜಾಸ್ತಿ ಆಗಿದೆ ಅಷ್ಟೆ. ಅದನ್ನು ಮಾಡಲೇಬೇಕು. ವೈಯಕ್ತಿಕ ಮತ್ತು ವೃತ್ತಿ ಬದುಕನ್ನು ಸಮದೂಗಿಸಿಕೊಂಡು ಹೋಗಲು ಕಲಿತಿದ್ದೇನೆ.


ಸಿಂಧೂ ಲೋಕನಾಥ್‌

ಈಗ ಸಿನಿಮಾ ಆಯ್ಕೆಯಲ್ಲಿ ನಿಮ್ಮ ಆದ್ಯತೆಗಳು ಬದಲಾಗಿವೆಯೇ?
ನಾನು ಮೊದಲಿನಿಂದಲೂ ನಟನೆಗೆ ಹೆಚ್ಚಿನ ಅವಕಾಶ ಇರುವಂಥ ಪಾತ್ರಗಳನ್ನೇ ಆಯ್ದುಕೊಂಡು ನಟಿಸಿದವಳು. ಮುಂದೆಯೂ ನನ್ನ ಆದ್ಯತೆ ಅದೇ ಇರುತ್ತದೆ. ಹಾಗಂತ ನಾನು ಬರೀ ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತೇನೆ ಎಂದಲ್ಲ. ನಟನಾ ಕೌಶಲ ಅಭಿವ್ಯಕ್ತಿಪಡಿಸುವ ಅವಕಾಶ ಇರಬೇಕು ಅಷ್ಟೆ. ಇಷ್ಟು ದಿನ ಯಾವ ರೀತಿಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೆನೋ ಅಂಥ ಪಾತ್ರಗಳನ್ನೇ ಇನ್ನು ಮುಂದೆಯೂ ಒಪ್ಪಿಕೊಂಡು ನಟಿಸುತ್ತೇನೆ. ಮದುವೆಗೂ ಮುಂಚೆ ಇರುವ ನಿರ್ಬಂಧಗಳೇ ಈಗಲೂ ಇವೆ. ಆಗ ಎಷ್ಟು ಚೂಸಿಯಾಗಿದ್ದೇನೋ ಈಗಲೂ ಅಷ್ಟೇ ಇದ್ದೇನೆ. ನನಗೆ ಇಷ್ಟವಾದ ಪಾತ್ರಗಳಲ್ಲಿ ಈಗಲೂ ನಟಿಸುತ್ತೇನೆ.

ಮದುವೆಯಾದ ತಕ್ಷಣ ನಾಯಕಿಯರ ವೃತ್ತಿಬದುಕು ಮುಗಿಯಿತು ಎನ್ನುವ ಭಾವನೆ ಚಿತ್ರರಂಗದಲ್ಲಿದೆ. ಈ ಕುರಿತು ನಿಮಗೆ ಏನನಿಸುತ್ತದೆ?
ನಿಜ. ನನಗೂ ಅಂಥ ಅನುಭವ ಆಗಿದೆ. ಯಾವುದಾದರೂ ನಾಯಕಿ ಮದುವೆಯಾಗುತ್ತಿದ್ದಾರೆ ಎಂದರೆ ‘ಯಾಕಿಂಥ ನಿರ್ಧಾರ ತೆಗೆದುಕೊಂಡರು?’ ಎಂದು ಮಾಧ್ಯಮಗಳಲ್ಲಿ ಪ್ರಶ್ನೆ ಎಸೆಯುತ್ತಾರೆ. ಇದ್ಯಾಕೆ ಹೀಗೆ? ಅಂಥ ಅಪರಾಧ ಏನಿದೆ ಅದರಲ್ಲಿ? ಮದುವೆಯಾಗುವುದು ಎಲ್ಲರೂ ಖುಷಿಪಡುವ ಸಂದರ್ಭ. ಇಡೀ ಜಗತ್ತೇ ಅದನ್ನು ಒಂದು ಸಂತಸದ ಸನ್ನಿವೇಶವಾಗಿ ಪರಿಗಣಿಸಿರುವಾಗ ಸೆಲೆಬ್ರಿಟಿಗಳಿಗೆ ಮಾತ್ರ ಯಾಕೆ ಮದುವೆ ಎನ್ನುವುದು ತಲೆನೋವು ಎನ್ನುವಂತಾಗಬೇಕು? ಮದುವೆ ಆಗಬೇಕಾ? ಆದರೆ, ವೃತ್ತಿಜೀವನ ಮುಗಿದುಹೋಗುತ್ತದಾ? ಇಷ್ಟೆಲ್ಲ ಯೋಚಿಸುವುದರ ಜತೆಗೆ ಮದುವೆ ಆಗಿದ್ದೇವೆ ಎಂದು ಹೇಳಿಕೊಳ್ಳಲು ತುಂಬಾ ಒದ್ದಾಡುತ್ತೇವೆ ನಾವು. ಯಾಕೆಂದರೆ ಅವಕಾಶಗಳು ತಪ್ಪಿಹೋಗುತ್ತವೆ. ನಾಯಕರಿಗೆ ಈ ಪರಿಸ್ಥಿತಿ ಇರುವುದಿಲ್ಲ. ಐವತ್ತು ವರ್ಷ ಆದರೂ, ಎರಡು ಮೂರು ಮದುವೆಯಾದರೂ ಅವರು ನಾಯಕರಾಗಿಯೇ ಮುಂದುವರಿಯುತ್ತಿರುತ್ತಾರೆ.

ನನ್ನ ಮದುವೆ ಆದ ಮೇಲೆ ಎಷ್ಟೋ ಜನ ಕರೆ ಮಾಡಿ ‘ಮೇಡಂ ನಿಮಗೆ ಮದುವೆ ಆಯ್ತಲ್ವಾ? ನೀವಿನ್ನು ಸಿನಿಮಾ ಮಾಡಲ್ಲ ಅನಿಸುತ್ತೆ. ಧಾರಾವಾಹಿಯಲ್ಲಿ ನಟಿಸುತ್ತೀರಾ?’ ಎಂದು ಕೇಳುತ್ತಿದ್ದಾರೆ. ನಾನ್ಯಾವಾಗ ಹಾಗೆ ಹೇಳಿದೆ? ಅವರೇ ಹೇಗೆ ಇವೆಲ್ಲ ನಿರ್ಧಾರ ಮಾಡುತ್ತಾರೆ? ಈ ಪರಿಸ್ಥಿತಿ ಎಲ್ಲಿಂದ ಬಂತು? ಚಿತ್ರರಂಗದ ಕಡೆಯಿಂದಲಾ? ಕಲಾವಿದರ ಕಡೆಯಿಂದಲಾ? ಗೊತ್ತಿಲ್ಲ. ನಾನು ಹೇಳುವುದು ಇಷ್ಟೆ. ನಿಮ್ಮ ಪಾತ್ರಗಳಿಗೆ ನಾವು ಹೊಂದುತ್ತೇವಾ ಇಲ್ಲವಾ? ಅಷ್ಟೇ ಮುಖ್ಯ ಅಲ್ಲವೇ? ನಮ್ಮ ವೈಯಕ್ತಿಕ ಜೀವನದ ವಿವರಗಳು ಯಾಕೆ ಅಷ್ಟು ಮಹತ್ವದ ಪಾತ್ರ ವಹಿಸಬೇಕು?

‘ಐ ಆ್ಯಮ್‌ 30’ ಎಂಬ ಕಿರುಚಿತ್ರಕ್ಕೆ ಕಥೆ ಬರೆದು ನೀವೇ ನಟಿಸಿ, ನಿರ್ಮಿಸುತ್ತಿದ್ದೀರಿ. ಇದಕ್ಕೆ ಪ್ರೇರಣೆ ಏನು?
ನಾನು ಖಾಲಿಯಾಗಿದ್ದಾಗ ಸಾಕಷ್ಟು ಯೋಚನೆಗಳು ಮನಸ್ಸಿಗೆ ಬರುತ್ತವೆ. ಅಂಥದ್ದೇ ಸಮಯದಲ್ಲಿ ಹೊಳೆದ ಕಥೆ ಇದು. ವಿಕಾಸ್‌ ಎನ್ನುವವರು ನಿರ್ದೇಶನ ಮಾಡಿದ್ದಾರೆ. ಮೂವತ್ತು ವರ್ಷ ಅನ್ನುವುದು ಎಲ್ಲರಿಗೂ ಮದುವೆಯ ಡೆಡ್‌ಲೈನ್‌. ಅಯ್ಯೋ ಮೂವತ್ತಾಗೋಯ್ತಾ? ಮದ್ವೆ ಆಗಿಲ್ವಾ? ಎಂದು ದೊಡ್ಡ ಅಪರಾಧ ಮಾಡಿದಂತೆ ಪ್ರಶ್ನಿಸುತ್ತಾರೆ. ಅಮೆರಿಕಕ್ಕೆ ವೀಸಾ ಕೊಡಬೇಕಾದರೂ ಇದೇ ಪ್ರಶ್ನೆ ಮಾಡುತ್ತಾರೆ. ಈ ಮನಸ್ಥಿತಿಯನ್ನೇ ಇಟ್ಟುಕೊಂಡು ನನ್ನ ಮತ್ತು ನನ್ನ ಸ್ನೇಹಿತೆಯರ ಬದುಕಿನಲ್ಲಾದ ಅನುಭವಗಳನ್ನು ಸೇರಿಸಿ ಕಿರುಚಿತ್ರ ಮಾಡಿದ್ದೇವೆ.

ಕಥೆ ಬರೆಯುವುದು ನನಗೊಂದು ಚಟ. ನನಗೆ ಬೀಳುವ ಕನಸುಗಳ ಬಗ್ಗೆ ಸಾಕಷ್ಟು ಕಥೆ ಬರೆದಿದ್ದೇನೆ. ನೋಡೋಣ ನನ್ನ ಕಥೆ ಯಾವತ್ತಾದರೂ ಸಿನಿಮಾ ಆದರೂ ಆಗಬಹುದು.
**
ಮದುವೆ ಎನ್ನುವುದು ಎಲ್ಲರೂ ಖುಷಿಪಡುವ ಸಂದರ್ಭ. ಇಡೀ ಜಗತ್ತೇ ಅದನ್ನು ಒಂದು ಸಂತಸದ ಸನ್ನಿವೇಶವಾಗಿ ಪರಿಗಣಿಸಿರುವಾಗ ಸೆಲೆಬ್ರಿಟಿಗಳಿಗೆ ಮಾತ್ರ ಯಾಕೆ ಮದುವೆ ಎನ್ನುವುದು ತಲೆನೋವು ಎನ್ನುವಂತಾಗಬೇಕು?
– ಸಿಂಧೂ ಲೋಕನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.