ADVERTISEMENT

ನಾನು ಸ್ವೀಟ್‌ ಹಾವು ‘ನಾಗಿಣಿ’

ಕಿರುತೆರೆ

ಕೆ.ಎಚ್.ಓಬಳೇಶ್
Published 7 ಡಿಸೆಂಬರ್ 2017, 19:30 IST
Last Updated 7 ಡಿಸೆಂಬರ್ 2017, 19:30 IST
ದೀಪಿಕಾ ದಾಸ್‌
ದೀಪಿಕಾ ದಾಸ್‌   

ನಾನು ವಿಷದ ಹಾವಲ್ಲ; ಸ್ವೀಟ್‌ ಹಾವು’ ಎಂದು ಮಾತಿಗಿಳಿದರು ‘ನಾಗಿಣಿ’ ಧಾರಾವಾಹಿಯ ಅಮೃತಾ ಪಾತ್ರಧಾರಿ ದೀಪಿಕಾ ದಾಸ್‌. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ಇಚ್ಛಾಧಾರಿ ನಾಗಿಣಿಯಾಗಿ ನಟಿಸುವ ಮೂಲಕ ಅವರು ಮನೆ ಮಾತಾಗಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ‘ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಫ್ಯಾಮಿಲಿ ವಾರ್‌’ನ ಗ್ರಾಂಡ್‌ ಫಿನಾಲೆಯಲ್ಲೂ ಗೆಲುವಿನ ನಗೆ ಬೀರಿರುವ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

* ಅರ್ಜುನ್‌ ಮೇಲೆ ಶೇಷಾಳಿಗೆ ಪ್ರೀತಿ ಮೂಡಿದೆ. ಮುಂದೆ ಅಮೃತಾಳ ಪಾಡೇನು?
ಹ್ಹಹ್ಹಹ್ಹ... ನಾನೇ ದ್ವಿಪಾತ್ರ ಮಾಡುತ್ತಿದ್ದೇನೆ. ಈ ಪ್ರಶ್ನೆಗೆ ನಾನೇ ಉತ್ತರಿಸಬೇಕಿದೆ. ಶೇಷಾಳದ್ದು ಕಥೆಗೆ ಪೂರಕವಾದ ಪಾತ್ರ. ರುದ್ರನ ಸಂಹಾರವಾಗಿದೆ. ಅಮೃತಾಳ ಎದುರಿಗೆ ಸಮರ್ಥವಾದ ಪಾತ್ರ ಸೃಷ್ಟಿಸುವ ಅಗತ್ಯವಿತ್ತು. ಹಾಗಾಗಿ, ಶೇಷಾಳ ಪಾತ್ರ ಸೃಜಿಸಲಾಗಿದೆ. ಜತೆಗೆ, ಪಾತ್ರಕ್ಕೆ ಭಾವುಕತೆಯ ಸ್ಪರ್ಶ ನೀಡಲಾಗಿದೆ. ಇದರಿಂದ ಧಾರಾವಾಹಿ ಪ್ರೇಕ್ಷಕರನ್ನು ಹಿಡಿದಿಟ್ಟಿದೆ. ಸದ್ಯಕ್ಕೆ ಆಕೆಗೆ ಅರ್ಜುನ್‌ ಬೇಕು. ಅಮೃತಾಳಿಗೆ ನಾಗಮಣಿ ಬೇಕು.

ADVERTISEMENT

* ಬೈರವನ ಪಾತ್ರದ ಬಗ್ಗೆ ಹೇಳಿ.
ಕಥೆಯ ಆಧಾರಸ್ತಂಭಗಳಲ್ಲಿ ಬೈರವನ ಪಾತ್ರವೂ ಒಂದಾಗಿದೆ. ಅಮೃತಾ ಬೈರವನನ್ನು ನೋಡಿದ್ದಾಳೆ. ಆದ್ರೆ, ಆತ ಅವಳನ್ನು ನೋಡಿಲ್ಲ. ಕಥೆಯಲ್ಲಿ ಪ್ರತಿ ಪಾತ್ರವೂ ವಿಶೇಷತೆಯಿಂದ ಕೂಡಿದೆ. ಧಾರಾವಾಹಿಯಲ್ಲಿ ಏನು ಬೇಕಾದರೂ ಸಂಭವಿಸಬಹುದು. ಹಾಗಾಗಿ, ಮುಂದೆ ಯಾರ ಸಂಹಾರವಾಗುತ್ತದೆ ಎಂದು ಹೇಳುವುದು ಕಷ್ಟ.

*‘ನಾಗಿಣಿ’ ಪಾತ್ರದ ನಟನೆಗೆ ಮಾನಸಿಕ ಸಿದ್ಧತೆ ಹೇಗೆ ಮಾಡಿಕೊಳ್ಳುತ್ತೀರಿ?
ಟಿ.ವಿ.ಗಳಲ್ಲಿ ಈಗ ಅತ್ತೆ–ಸೊಸೆ ನಡುವಿನ ಸಂಬಂಧ ಹೇಳುವ ಧಾರಾವಾಹಿಗಳೇ ಹೆಚ್ಚಾಗಿ ಪ್ರಸಾರವಾಗುತ್ತಿವೆ. ನಾಗಿಣಿ ಪೌರಾಣಿಕ ಹಿನ್ನೆಲೆ ಹೊಂದಿರುವ ಧಾರಾವಾಹಿ. ನನ್ನ ಪಾತ್ರ ಇಷ್ಟೊಂದು ಪ್ರಸಿದ್ಧಿ ತಂದುಕೊಡುತ್ತದೆಂದು ನಾನು ಅಂದಾಜಿಸಿರಲಿಲ್ಲ. ಅಂತಹ ಆಸೆಯೂ ನನಗಿರಲಿಲ್ಲ.‌ ಈ ಪಾತ್ರದ ನಟನೆಗೂ ಮೊದಲು ಸಾಕಷ್ಟು ಪೌರಾಣಿಕ ಪಾತ್ರಗಳನ್ನು ನೋಡಿದೆ. ಇದರ ಜತೆಗೆ ತನ್ನತನ ಅಳವಡಿಸಿಕೊಂಡಿದ್ದರಿಂದ ನಾಗಿಣಿ ಪಾತ್ರದ ನಿರ್ವಹಣೆಗೆ ಸಹಕಾರಿಯಾಯಿತು.

*ಡ್ಯಾನ್ಸ್‌ ಷೋನ ಫ್ಯಾಮಿಲಿ ವಾರ್‌ ಗ್ರಾಂಡ್‌ ಫಿನಾಲೆಯ ಅನುಭವ ಹೇಗಿತ್ತು?
ಪದಗಳಲ್ಲಿ ಫಿನಾಲೆಯ ಅನುಭವ ಹಿಡಿದಿಡಲು ಸಾಧ್ಯವಿಲ್ಲ. ಸ್ಪರ್ಧೆಯಲ್ಲಿ ಗೆಲ್ಲಬೇಕೆಂಬುದು ನಮ್ಮ ಗುರಿಯಾಗಿತ್ತು. ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದೆವು. ಒಂದೆಡೆ ಸ್ಪರ್ಧೆಗಾಗಿ ಐದು ದಿನಗಳ ಕಾಲ ತಾಲೀಮು ನಡೆಸಬೇಕಿತ್ತು. ಮತ್ತೊಂದೆಡೆ ಹಗಲು– ರಾತ್ರಿ ಎನ್ನದೆ ಧಾರಾವಾಹಿಯ ಶೂಟಿಂಗ್‌ ಕೂಡ ಮಾಡಬೇಕಿತ್ತು. ಸಾಕಷ್ಟು ತೊಂದರೆ ಎದುರಿಸಿದೆ. ಗೆದ್ದಾಗ ಎಲ್ಲಾ ನೋವು ಮರೆಯಾಯಿತು. ನಾನು ಮತ್ತು ದೀಕ್ಷಿತ್ ಹೊಂದಾಣಿಕೆ ಕಾಯ್ದುಕೊಂಡ ಪರಿಣಾಮ ಗೆಲುವು ದಕ್ಕಿತು.

*ನಾಗಿಣಿ ಪಾತ್ರದ ವೈಭವೀಕರಣ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲವೇ?
ಧಾರಾವಾಹಿಯ ಪಾತ್ರಗಳ ಅನುಕರಣೆ ಸರಿಯಲ್ಲ. ಅನುಕರಣೆಗೆ ಮುಂದಾದ ಮಗುವೊಂದು ಮೃತಪಟ್ಟಿರುವ ಘಟನೆ ಬಗ್ಗೆ ಕೇಳಿದ್ದೇನೆ. ಪಾತ್ರಗಳ ವೈಭವೀಕರಣ ಚಿಣ್ಣರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವುದು ಸ್ಪಷ್ಟ. ಆದರೆ, ನಾಗಿಣಿ ಧಾರಾವಾಹಿಯ ವೀಕ್ಷಕರಲ್ಲಿ ಮಕ್ಕಳು ಇದ್ದಾರೆ. ಮಕ್ಕಳಿಂದ ಪೋಷಕರು ಧಾರಾವಾಹಿ ವೀಕ್ಷಿಸುತ್ತಾರೆ. ನಾಗಿಣಿಯನ್ನು ತೋರಿಸಿ ಮಕ್ಕಳನ್ನು ಹೆದರಿಸುವುದು ಸಲ್ಲದು. ನಾಗಿಣಿ ಹೊರಚಾಚುವ ನಾಲಿಗೆಯು ಕಾಲ್ಪನಿಕ ಎಂಬ ಬಗ್ಗೆ ಚಿಣ್ಣರಿಗೆ ತಿಳಿಹೇಳಬೇಕು.

*ಸಿನಿಮಾಗಳಲ್ಲಿ ನಟನೆಗೆ ಅವಕಾಶ ಬಂದಿಲ್ಲವೇ?
ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಸಿನಿಮಾದಲ್ಲಿ ಆಫರ್‌ಗಳು ಬಂದಿವೆ. ಆದರೆ, ಈ ಧಾರಾವಾಹಿಗೆ ಕಮಿಟ್‌ ಆಗಿದ್ದೇನೆ. ಹಾಗಾಗಿ, ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಅವಕಾಶ ಒಪ್ಪಿಕೊಂಡರೆ ಸಿನಿಮಾ ಮತ್ತು ಧಾರಾವಾಹಿ ನಡುವೆ ಹೊಂದಾಣಿಕೆ ಮಾಡುವುದು ಕಷ್ಟ. ಆದ್ರೆ, ನನಗೆ ಸಿನಿಮಾ ಕೆರಿಯರ್ ಬೇಕು. ನಾಗಿಣಿಯನ್ನು ಒಂದು ಹಂತಕ್ಕೆ ಕೊಂಡೊಯ್ದ ಬಳಿಕ ಹಿರಿತೆರೆಯಲ್ಲಿ ಸಕ್ರಿಯವಾಗುವ ಆಸೆ. ಜನವರಿಯಿಂದ ಸಿನಿಮಾಗಳಲ್ಲೂ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದೇನೆ.

*ನಿಮ್ಮ ಹವ್ಯಾಸಗಳೇನು?
ನೃತ್ಯ ಎಂದರೆ ನಂಗಿಷ್ಟ. ಬಿಡುವಿನ ವೇಳೆ ಸಿನಿಮಾ ನೋಡುತ್ತೇನೆ. ‍ಪುಸ್ತಕಗಳನ್ನು ಕೂಡ ಓದುತ್ತೇನೆ. ಶಾಂತವಾಗಿ ಇರಲು ಇಷ್ಟಪಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.