ADVERTISEMENT

ಬಂತು ಗಣೇಶನ ಹಬ್ಬ!

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST
ಬಂತು ಗಣೇಶನ ಹಬ್ಬ!
ಬಂತು ಗಣೇಶನ ಹಬ್ಬ!   
‘ಗಣೇಶ್‌ ನೀವು ನಿಮ್ಮ ವಯಸ್ಸಿಗಿಂತ ಹತ್ತು ವರ್ಷ ಚಿಕ್ಕವರಾಗಿ ಕಾಣ್ತಿದೀರಿ’ – ‘ಪಟಾಕಿ’ ಚಿತ್ರದ ‘ಮನಸೆ ಮನಸೆ..’ ಹಾಡನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಬಸಂತ್‌ ಕುಮಾರ್‌ ಪಾಟೀಲ್‌ ಹೀಗೆಂದಾಗ ವೇದಿಕೆಯೆದುರು ಕೂತಿದ್ದ ಗೋಲ್ಡನ್‌ಸ್ಟಾರ್‌ ಮುಖದಲ್ಲಿ ನಗುವೊಂದು ಅರಳಿತು.
 
ಪಾಟೀಲರ ಮಾತಿನಲ್ಲಿ ಅತಿಶಯೋಕ್ತಿಯ ಜತೆ ಕೊಂಚ ಸತ್ಯವೂ ಬೆರೆತಿತ್ತು. ಗಣೇಶ್‌ ಮೊದಲಿಗಿಂತ ಹೆಚ್ಚು ಸ್ಲಿಮ್‌ ಆ್ಯಂಡ್‌ ಟ್ರಿಮ್‌ ಆಗಿದ್ದರು. ಅದು ‘ಪಟಾಕಿ’ ಚಿತ್ರದ ಹಾಡುಗಳಲ್ಲಿಯೂ ಪ್ರತಿಬಿಂಬಿತವಾಗಿತ್ತು. ಚಿತ್ರದ ನಾಲ್ಕು ಹಾಡುಗಳಲ್ಲಿಯೂ ಸಿಡಿಯುವ ಪಟಾಕಿಯ ಗುಣವೇ ಎದ್ದು ಕಾಣುತ್ತಿತ್ತು. 
 
ಚಿನ್ನೇಗೌಡ, ಸಾ.ರಾ. ಗೋವಿಂದು, ನಿವೃತ್ತ ಲೋಕಾಯುಕ್ತ ಅಧಿಕಾರಿ ಸತ್ಯನಾರಾಯಣ, ಹೀಗೆ ಗಣ್ಯರ ದಂಡೇ ಅಂದಿನ ಸಂಜೆಯ ಕಾರ್ಯಕ್ರಮದಲ್ಲಿ ಒಟ್ಟಾಗಿತ್ತು. 
 
ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರ ಮುಖದಲ್ಲಿ ಹಾಡುಗಳ ಬಿಡುಗಡೆಗೂ ಮೀರಿದ ಖುಷಿಯೊಂದು ನೆಲೆಸಿತ್ತು. ಅದಕ್ಕೆ ಕಾರಣ ಅಂದೇ ಅವರ ಜನ್ಮದಿನ. 
 
ತೆಲುಗಿನ ‘ಪಟಾಸ್‌’ ಚಿತ್ರದ ರಿಮೇಕ್‌ ಆಗಿರುವ ‘ಪಟಾಕಿ’ಯಲ್ಲಿ ಗಣೇಶ್‌ ಪೊಲೀಸ್‌ ಅಧಿಕಾರಿಯಾಗಿ ಮಿಂಚಲಿದ್ದಾರೆ. ಅವರ ಜತೆ ಪೊಲೀಸ್‌ ಪಾತ್ರಗಳಿಗೆ ಅನ್ವರ್ಥಕವೇ ಆಗಿರುವ ಸಾಯಿಕುಮಾರ್‌ ಕೂಡ ಖಾಕಿ ಖದರ್‌ ತೋರಿಸಲಿದ್ದಾರೆ. ಮೂಲ ಸಿನಿಮಾವನ್ನು ಕನ್ನಡದ ಗುಣಕ್ಕೆ ತಕ್ಕಂತೆ ಒಗ್ಗಿಸಿ ನಿರ್ದೇಶಿಸುವ ಹೊಣೆಯನ್ನು ಮಂಜು ಸ್ವರಾಜ್‌ ನಿರ್ವಹಿಸಿದ್ದಾರೆ.
 
‘ಅರ್ಜುನ್‌ ಜನ್ಯ ತುಂಬ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ಈ ಸಿನಿಮಾ ಇಡೀ ತಂಡದ ಪ್ರಯತ್ನ. ಎಲ್ಲರ ಶ್ರಮ ಮತ್ತು ಬೆಂಬಲದಿಂದಾಗಿ ಚೆನ್ನಾಗಿ ಬಂದಿದೆ. ಸಿನಿಮಾ ಗೆದ್ದೇ ಗೆಲ್ಲುತ್ತದೆ’ ಎಂಬ ವಿಶ್ವಾಸ ಮಂಜು ಅವರಿಗಿದೆ. ಅರ್ಜುನ್‌ ಜನ್ಯ ಕೂಡ – ‘ಸಿನಿಮಾ ಮೂಲಕ್ಕಿಂತ ನೂರು ಪಟ್ಟು ಚೆನ್ನಾಗಿ ಕನ್ನಡ ಸಿನಿಮಾ ಬಂದಿದೆ. ಇದು ದೊಡ್ಡ ಹಿಟ್‌ ಆಗುತ್ತದೆ’ ಎಂದು ಭವಿಷ್ಯ ನುಡಿದರು.
 
ತಮ್ಮ ಇದುವರೆಗಿನ ವೃತ್ತಿಬದುಕಿನಲ್ಲಿ ಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಂಡ ತೃಪ್ತಿ ಗಣೇಶ್‌ ಅವರದು. ‘ಈ ಸಿನಿಮಾದ ಪಾತ್ರ ಥ್ರಿಲ್ಲಿಂಗ್‌ ಅನುಭವ ನೀಡಿದೆ. ಅಷ್ಟೇ ಚಾಲೆಂಜಿಂಗ್‌ ಕೂಡ ಆಗಿತ್ತು.
 
ಸಾಮಾನ್ಯವಾಗಿ ನಾನು ನನ್ನ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವುದಿಲ್ಲ. ಆದರೆ ಈ ಚಿತ್ರಕ್ಕೆ ಜನರು ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ನೋಡಲಿಕ್ಕಾಗಿ ಬಿಡುಗಡೆಯಾದಾಗ ಚಿತ್ರಮಂದಿರದಲ್ಲಿಯೇ ನೋಡಲು ನಿರ್ಧರಿಸಿದ್ದೇನೆ’ ಎಂದರು ಗಣೇಶ್.
 
ಸಾಯಿಕುಮಾರ್‌ ಜತೆ ಪೊಲೀಸ್‌ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದೂ ಅವರಿಗೆ ಖುಷಿ ತಂದಿದೆ. ತೆಲುಗಿನ ‘ಪಟಾಸ್‌’ ಸಿನಿಮಾದಲ್ಲಿ ನಿರ್ವಹಿಸಿದ್ದ ಪಾತ್ರವನ್ನೇ ‘ಪಟಾಕಿ’ಯಲ್ಲಿಯೂ ನಿರ್ವಹಿಸಲಿದ್ದಾರೆ ಸಾಯಿಕುಮಾರ್‌.
 
‘ಪೊಲೀಸ್‌ ಮತ್ತು ಪೊಲೀಸ್‌ ವ್ಯವಸ್ಥೆಯ ಬಗೆಗಿನ ಸಿನಿಮಾ ಇದು. ಮನರಂಜೆಯ ಜತೆಗೇ ಭಾವುಕತೆಯನ್ನೂ ಕಟ್ಟಿಕೊಡುವ ಕಥೆ ಇದರಲ್ಲಿದೆ. ಮಂಜು ಸ್ವರಾಜ್‌ ಅದನ್ನು ಕನ್ನಡದ ನೆಲಕ್ಕೆ ಒಗ್ಗುವಂತೇ ಮರುರೂಪಿಸಿದ್ದಾರೆ’ ಎಂದರು ಸಾಯಿಕುಮಾರ್‌.
 
ನಿರ್ಮಾಪಕ ಎಸ್‌.ವಿ. ಬಾಬು ಸಹ ನಿರ್ದೇಶಕರನ್ನು ಹೊಗಳುವುದಕ್ಕಾಗಿಯೇ ತಮ್ಮ ಮಾತನ್ನು ಸೀಮಿತಗೊಳಿಸಿದರು. ನಾಯಕಿ ರನ್ಯಾ ರಾವ್‌ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.