ADVERTISEMENT

ಬಿ-ಟೌನ್ ಪಥ್ಯಗಳು

ಬಿ-ಟೌನ್ ಪಥ್ಯಗಳು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 19:30 IST
Last Updated 16 ಸೆಪ್ಟೆಂಬರ್ 2014, 19:30 IST
ಬಿ-ಟೌನ್ ಪಥ್ಯಗಳು
ಬಿ-ಟೌನ್ ಪಥ್ಯಗಳು   

ಸೆಲೆಬ್ರಿಟಿಗಳೆಂದರೆ ಸೌಂದರ್ಯ ಹಾಗೂ ಫಿಟ್‌ನೆಸ್‌ಗಾಗಿ ಏನನ್ನಾದರೂ ಮಾಡುವವರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಬಹುತೇಕ ಬಾಲಿವುಡ್‌ ತಾರೆಯರ ಫಿಟ್‌ನೆಸ್ ಮತ್ತು ಬ್ಯೂಟಿ ಸೀಕ್ರೇಟ್ ಅಡಗಿರುವುದು ಅವರ ಊಟ–ಉಪಹಾರದಲ್ಲಿ. ಯಾರಿಗೆ ಏನಿಷ್ಟ, ಯಾರು ಎಷ್ಟು ಚೂಸಿ, ಯಾರು ಏನೇನು ತಿನ್ನುತ್ತಾರೆ ಇಲ್ಲಿ ನೋಡಿ...

ನಲವತ್ತರ ನಂತರವೂ ಈಗ ತಾನೆ 16 ದಾಟಿದ ಪೋರಿಯಂತಹ ಬಳಕುವ ದೇಹಸಿರಿ ಕಾಪಾಡಿಕೊಂಡು ಬಂದ ಶಿಲ್ಪಾ ಶೆಟ್ಟಿ ಅವರ ಬೆಳಗು ಆರಂಭವಾಗುವುದು ಒಂದು ಕಪ್ ಬಿಸಿ ಬಿಸಿ ಚಹಾದ ಮೂಲಕ. ನಂತರ ಪ್ರೋಟೀನ್ ಶೇಕ್, ಎರಡು ಖರ್ಜೂರ, ಎಂಟು ಕಪ್ಪು ಒಣದ್ರಾಕ್ಷಿ ಸೇವಿಸುತ್ತಾರೆ. ಮಧ್ಯಾಹ್ನ ರೋಟಿ ಜೊತೆ ಬೆಣ್ಣೆ, ತರಕಾರಿಗಳು, ಕೋಳಿ, ದಾಲ್ ಬೇಕು. ರಾತ್ರಿಯ ಊಟಕ್ಕೆ ದಾಳಿಂಬೆ ಅಥವಾ ಸೇಬು ಲೆಟ್ಯುಸ್ ಸಲಾಡ್ ಸಾಕು.

ಹಾಟ್ ಸ್ಟಾರ್ ಬಿಪಾಶಾ ಅವರ ಬೆಳಗು ಆರಂಭವಾಗುವುದು ಒಂದು ಗ್ಲಾಸ್ ಬಿಸಿ ನೀರಿನ ಸೇವನೆಯಿಂದ. ನಂತರ ಚಹಾ ಸೇವಿಸಿ, ಸ್ವಲ್ಪ ಸಮಯದ ಬಳಿಕ ರಾತ್ರಿ ನೆನೆಸಿಟ್ಟ ಬಾದಾಮಿ ತಿನ್ನುತ್ತಾರೆ. ತಿಂಡಿಗೆ ಬೇಯಿಸಿದ ಎಂಟು ಮೊಟ್ಟೆಗಳ ಬಿಳಿಭಾಗ, ಮಶ್ರೂಮ್ ಟೋಸ್ಟ್, ಗಂಜಿ ಯಾವುದಾದರೂ ಆಗುತ್ತದೆ. ಮಧ್ಯಾಹ್ನದ ಊಟಕ್ಕೆ ಹಸಿರು ತರಕಾರಿಗಳು, ಬೇಳೆ, ಸುಟ್ಟ ಕೋಳಿ ಅಥವಾ ಮೀನು, ಹಸಿರು ಸಲಾಡ್ ಮತ್ತು ಸೋಯಾ ರೋಟಿ.

ರಾತ್ರಿಯ ಊಟವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸುವ ಬಿಪಾಶಾ, ಕೋಸುಗಡ್ಡೆ / ಶತಾವರಿ / ಪಾಲಕ್ / ಚಿಕನ್ ಸೂಪ್ ಅಥವಾ ಸುಟ್ಟ ಮೀನು ಅಥವಾ ಕೋಳಿ ಮತ್ತು ಸ್ವಲ್ಪ ಸಿಹಿ ಸಲಾಡ್‌ಗೆ ಆದ್ಯತೆ ನೀಡುತ್ತಾರೆ.

ದೀಪಿಕಾ ಪಡಕೋಣೆ ಅವರಿಗೆ ಪುದಿನಾ ಚಟ್ನಿ ಜೊತೆಗೆ ಸಾದಾ ದೋಸೆ ಎಂದರೆ ಬಹಳ ಇಷ್ಟ. ಉಪ್ಮಾ ಅಥವಾ ಇಡ್ಲಿ ಜೊತೆಗೆ ಮೇಯಿಸಿದ ಮೊಟ್ಟೆಯ ಬಿಳಿ ಭಾಗ ತಿಂದರೆ ಬೆಳಗಿನ ಉದರ ಪೋಷಣೆ ಮುಗಿಯುತ್ತದೆ. ಮಧ್ಯಾಹ್ನಕ್ಕೆ ರೋಟಿ ಜೊತೆಗೆ ಯಾವುದಾದರೂ ತರಕಾರಿ ಪಲ್ಯ, ದಾಲ್, ರಾಯ್ತಾ ಹಾಗೂ ಸಲಾಡ್ ಬೇಕು. ರಾತ್ರಿ ಊಟಕ್ಕೆ ಹಬೆಯಲ್ಲಿ ಬೇಯಿಸಿದ ತರಕಾರಿಗಳು ಹಾಗೂ ಗಂಜಿಯಂತಹ ಲಘು ಆಹಾರ ಏನಾದರೂ ಸರಿ. ಆದರೆ ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಇಷ್ಟ.

ಆಹಾರಪ್ರಿಯರ ಪಟ್ಟಿಯಲ್ಲಿ ಮೊದಲು ಬಂದು ನಿಲ್ಲುವ ಹೆಸರು ಕರೀನಾ ಕಪೂರ್ ಎನ್ನುವುದು ಸಿಕ್ರೇಟ್ ಆಗಿ ಏನೂ ಉಳಿದಿಲ್ಲ. ಕಾಫಿ ಅಥವಾ ಚಹಾದ ಬಳಿಕ ಯೋಗಾರ್ಟ್ ಜೊತೆಗೆ ಎರಡು ಪರೋಟ ಸೇವಿಸುತ್ತಾರೆ. ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಚಪಾತಿ, ಸಾಕಷ್ಟು ಹಸಿರು ತರಕಾರಿ ಹಾಗೂ ದಾಲ್ ಸಾಕಾಗುತ್ತದೆ.

ಮಲೈಕಾ ಅರೋರಾ ಖಾನ್ ಒಂದು ಗ್ಲಾಸ್ ಉಗುರು ಬಿಸಿ ನೀರಿನ ಜೊತೆಗೆ ಜೇನುತುಪ್ಪ ಅಥವಾ ಲಿಂಬೆ ಸೇರಿಸಿ ಕುಡಿದು, ನಂತರ ಆಯಾ ಅವಧಿಯಲ್ಲಿ ಹೇರಳವಾಗಿ ಸಿಗುವ ಒಂದು ಬೌಲ್ ಹಣ್ಣುಗಳ ಸಲಾಡ್ ಹಾಗೂ ಉಪ್ಮಾ ಅಥವಾ ಇಡ್ಲಿ ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಮಧ್ಯಾಹ್ನದ ಊಟಕ್ಕೆ ಕಂದು ಅಥವಾ ಕೆಂಪು ಗೋವಾ ಅಕ್ಕಿಯ ಅನ್ನ, ತರಕಾರಿಗಳು, ಚಿಕನ್ ಅಥವಾ ಮೀನು ಮತ್ತು ಒಂದು ಬೌಲ್ ಮೊಳಕೆ ಕಾಳುಗಳು ಬೇಕು. ರಾತ್ರಿಗೆ ಸಲಾಡ್ ಹಾಗೂ ಸೂಪ್ ಆದರೆ ಸಾಕು.

ಸಿಕ್ಸ್‌ಪ್ಯಾಕ್‌ ಮಂತ್ರದಿಂದ ಅಭಿಮಾನಿಗಳ ಮನಸ್ಸು ಕದ್ದ ಜಾನ್ ಅಬ್ರಹಾಂ ಅವರ ಬೆಳಗಿನ ತಿಂಡಿಯ ಪಟ್ಟಿಯಲ್ಲಿ ಭರ್ತಿ ಒಂದು ಗ್ಲಾಸ್ ತಾಜಾ ಹಣ್ಣಿನ ಜ್ಯೂಸ್, ಆರು ಮೊಟ್ಟೆಗಳ ಬಿಳಿಭಾಗ, ಬಟರ್ ಟೋಸ್ಟ್, ಬರೋಬ್ಬರಿ 10 ಬಾದಾಮಿ ಇದ್ದೇ ಇರುತ್ತವೆ. ಊಟದ ಸಮಯಕ್ಕೆ ಬಂದರೆ ಚಪಾತಿ, ಲೆಂಟಿಲ್ ಸೂಪ್ ಅಥವಾ ದಳ ಮತ್ತು ಬೇಯಿಸಿದ ಪಾಲಕ್‌ಗೆ ಆದ್ಯತೆ. ರಾತ್ರಿ ಹೊತ್ತು ಹೆಚ್ಚಾಗಿ ಸೂಪ್ ಮಾತ್ರವೇ ಸಾಕು.

ಇನ್ನು ತಿಂಡಿ ಆಹಾರದ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲದ, ಅದಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಳ್ಳದವರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ಸುನಿಲ್ ಶೆಟ್ಟಿ ಹೆಸರುಗಳಿವೆ. ಪ್ರಿಯಾಂಕಾ ಚೋಪ್ರಾಗೆ ಜಂಕ್ ಫುಡ್ ಎಂದರೆ ಎರಡು ಹೊಟ್ಟೆ. ಆದಾಗ್ಯೂ ಬೆಳಗಿನ ಹೊತ್ತು ರೋಟಿ ಜೊತೆಗೆ ತರಕಾರಿಗಳು, ಸೂಪ್, ಸಲಾಡ್ ಹಾಗೂ ಸಾಕಷ್ಟು ಹಣ್ಣು ಸೇವಿಸುತ್ತಾರೆ. ಆಗಾಗ ಜಂಕ್ ಫುಡ್ ತಿನ್ನುವುದರಿಂದ ಅದನ್ನು ಬ್ಯಾಲನ್ಸ್ ಮಾಡಲು ರಾತ್ರಿ ಹೊತ್ತು ಜ್ಯೂಸ್ ಮೊರೆಹೋಗುವುದಿದೆ. ಸುನಿಲ್ ಶೆಟ್ಟಿ ಹೆಚ್ಚು ಕ್ಯಾಲೊರಿ ಇರುವ ಆಹಾರ ತೆಗೆದುಕೊಳ್ಳುತ್ತಾರೆ

(ಪ್ರತಿದಿನ ಹೆಚ್ಚೂ ಕಡಿಮೆ 1,500ದಿಂದ 2,000 ಕ್ಯಾಲೊರಿ). ಏನು ತಿನ್ನಬೇಕು, ಏನು ತಿನ್ನಬಾರದು ಎಂಬ ಬಗ್ಗೆ ಅವರೂ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಬೆಳಿಗಿನ ತಿಂಡಿಗೆ ಬ್ರೌನ್ ಬ್ರೆಡ್ ಹಾಗೂ ಮೊಟ್ಟೆ, ಊಟಕ್ಕೆ ಚಪಾತಿ, ಸಲಾಡ್, ತರಕಾರಿ ಪಲ್ಯ, ಕಾಳಿನ ಪಲ್ಯ ಆಗುತ್ತದೆ. 

ಹೃತಿಕ್ ರೋಷನ್ ಕೂಡ ಯಾವುದೇ ನಿರ್ದಿಷ್ಟ ಆಹಾರ ಪದ್ಧತಿಯನ್ನು ಅನುಸರಿಸುವುದಿಲ್ಲ. ಆದರೆ ತೈಲಯುಕ್ತ ಹಾಗೂ ಕರಿದ ಆಹಾರದ ಬಗ್ಗೆ ಸದಾ ಗಮನ ಹರಿಸುತ್ತಾರೆ. ದಿನಕ್ಕೆ ಐದಾರು ಬಾರಿ ಲಘು ಆಹಾರ ಸೇವಿಸುವ ಹೃತಿಕ್, ತಾಜಾ ಹಣ್ಣು ಹಾಗೂ ತರಕಾರಿಯನ್ನು ಹೆಚ್ಚಾಗಿ ಸೇವಿಸುತ್ತಾರೆ. ವಾರದಲ್ಲಿ ಒಂದು ದಿನ ಅವರು ಬರೀ ಹಣ್ಣುಗಳನ್ನಷ್ಟೆ ತಿನ್ನುತ್ತಾರೆ.

ಇಪ್ಪತ್ತರ ತರುಣನಂತೆ ಕಂಗೊಳಿಸುವ 48ರ ನಾಯಕ ಸಲ್ಮಾನ್ ಖಾನ್ ಜಂಕ್ ಫುಡ್‌ನಿಂದ ದೂರ. ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವನ್ನು ಅವರು ಸಂಪೂರ್ಣವಾಗಿ ನಿರಾಕರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT