ADVERTISEMENT

ಮಳೆ ಮಾತು ಮಳೆ ಋತು

ಗಣೇಶ ವೈದ್ಯ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST
ನೇಹಾ ಶೆಟ್ಟಿ
ನೇಹಾ ಶೆಟ್ಟಿ   

* ನಿಮ್ಮನ್ನು ‘ಮಳೆಹುಡುಗಿ’ ಎಂದು ಕರೆಯಬೇಕೋ ‘ಮಳೆಹುಡುಗಿ 2’ ಎಂದೋ?
‘ಮಳೆಹುಡುಗಿ’ ಬಿರುದು ಈಗಾಗಲೇ ಒಬ್ಬರಿಗೆ ಸಿಕ್ಕಿದೆ. ಅವರು ಅದನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಹಾಗಾಗಿ ನನಗೆ ‘ಮಳೆಹುಡುಗಿ 2’ ಸೂಕ್ತ ಎನ್ನಿಸುತ್ತದೆ.

* ಮುಂದೆ ‘ಮುಂಗಾರು ಮಳೆ 2’ಕ್ಕಿಂತ ಒಳ್ಳೆಯ ಸಿನಿಮಾ, ಪಾತ್ರ ಸಿಕ್ಕಾಗ ಆ ಚಿತ್ರದ ಪಾತ್ರದ ಮೂಲಕ ಗುರ್ತಿಸಿಕೊಳ್ಳುತ್ತೀರೋ ಅಥವಾ ಆಗಲೂ ‘ಮಳೆಹುಡುಗಿ’ ಎಂದೇ ಗುರ್ತಿಸಿಕೊಳ್ಳಲು ಬಯಸುತ್ತೀರೋ?
ಇದು ನನ್ನ ಇಷ್ಟದ ಪ್ರಶ್ನೆಯಲ್ಲ. ನನ್ನ ಮುಂದಿನ ಸಿನಿಮಾ ನೋಡಿ ಜನರು ಹೇಗೆ ಗುರ್ತಿಸಿದರೂ ಸಂತೋಷದಿಂದ ಒಪ್ಪುತ್ತೇನೆ. ಸದ್ಯ ‘ಮಳೆಹುಡುಗಿ’ ಎನ್ನುತ್ತಿರುವುದಂತೂ ತುಂಬಾ ಖುಷಿ ಕೊಟ್ಟಿದೆ.

* ‘ಮುಂಗಾರು ಮಳೆ’ ಎಷ್ಟು ಬಾರಿ ನೋಡಿದ್ದೀರಿ?
‘ಮುಂಗಾರು ಮಳೆ’ ಬಿಡುಗಡೆ ಆದಾಗ ನಾನು ನಾಲ್ಕನೇ ತರಗತಿ. ಸುಮಾರು ಸಲ ಆ ಚಿತ್ರ ನೋಡಿದ್ದೆ. ಎಷ್ಟು ಬಾರಿ ಎಂಬುದು ಗೊತ್ತಿಲ್ಲ. ಚಿತ್ರ ಬಿಡುಗಡೆಯಾಗಿ ಹತ್ತು ವರ್ಷಗಳಾದರೂ ಇನ್ನೂ ಅದರ ದೃಶ್ಯಗಳು ತಲೆಯಲ್ಲಿ ಕೂತಿವೆ. ಆ ಸಿನಿಮಾ ನೋಡಿ ಅತ್ತಿರುವಷ್ಟು ಬೇರೆ ಯಾವ ಚಿತ್ರಕ್ಕೂ ಅತ್ತಿಲ್ಲ. ನಾನು ಹೇಳಿದೆ ಎಂದು ಸ್ನೇಹಿತೆಯರೂ ‘ಮುಂಗಾರು ಮಳೆ’ ನೋಡಿದ್ದರು.

* ಆಗ ನಿಮಗೆ ಸಿನಿಮಾ ಕ್ಷೇತ್ರಕ್ಕೆ ಬರುತ್ತೇನೆ ಎಂದು ಗೊತ್ತಿತ್ತಾ?
ಆಗಲೇ ಸಿನಿಮಾ ನನ್ನ ಆಸಕ್ತಿ ಆಗಿತ್ತು. ಸಿನಿಮಾದಲ್ಲಿ ನಟಿಸುತ್ತೇನೆ ಎಂಬ ವಿಶ್ವಾಸವಿತ್ತು. ಆದರೆ ‘ಮುಂಗಾರು ಮಳೆ 2’ ಮೂಲಕ ಇಷ್ಟು ದೊಡ್ಡ ಮಟ್ಟದಲ್ಲಿ ಚಿತ್ರರಂಗದ ಪದಾರ್ಪಣೆ ಆಗುತ್ತದೆ ಎಂದುಕೊಂಡಿರಲಿಲ್ಲ.

* ಸಿನಿಮಾ ಪ್ರವೇಶಕ್ಕೆ ಸಿದ್ಧತೆಯನ್ನೂ ಆಗಲೇ ಶುರು ಮಾಡಿದ್ದಿರಾ?
ಆಗ ನಾನು ಎಂಜಿನಿಯರಿಂಗ್ ಓದಿಯೇ ಸಿನಿಮಾಕ್ಕೆ ಬರುವುದು ಎಂದು ನಿರ್ಧರಿಸಿಕೊಂಡಿದ್ದೆ. ವೃತ್ತಿಪರ ನಟನೆಗೆ ತೊಡಗುವ ಮುನ್ನ ತರಬೇತಿ ಪಡೆದರಾಯಿತು ಎಂದುಕೊಂಡಿದ್ದೆ. ಆದರೆ ಪಿಯುಸಿ ಮುಗಿಯುತ್ತಿದ್ದಂತೆ ಅಚಾನಕ್ಕಾಗಿ ‘ಮುಂಗಾರು ಮಳೆ 2’ ಚಿತ್ರದ ಅವಕಾಶ ಬಂತು. ನಂತರ ಶಶಾಂಕ್ ಸರ್, ಶ್ವೇತಾ ಎಂಬುವವರ ಹತ್ತಿರ ನಟನೆಯ ತರಬೇತಿ ಕೊಡಿಸಿದರು. ಡಾನ್ಸ್ ಮೊದಲೇ ಗೊತ್ತಿತ್ತು.

* ‘ಮುಂಗಾರು ಮಳೆ’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು, ಕಲಾವಿದರು ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯ ಕಂಡುಕೊಂಡರು. ಈ ಚಿತ್ರ ನಿಮ್ಮ ಪಾಲಿಗೆ ಹೇಗೆ ವರವಾಗಲಿದೆ?

ಅಷ್ಟು ದೊಡ್ಡ ಹಿಟ್ ಆದ ಚಿತ್ರದ ಎರಡನೇ ಭಾಗದಲ್ಲಿ ನಟಿಸುತ್ತಿದ್ದೇನೆ ಎಂಬುದೇ ನನಗೆ ಬೆಂಚ್‌ಮಾರ್ಕ್ ಇದ್ದಂತೆ. ಈ ಚಿತ್ರ ನನ್ನ ಸಿನಿಮಾ ಪಯಣದ ಹಾದಿಯನ್ನು ಸುಗಮಗೊಳಿಸುತ್ತದೆ ಎಂಬ ನಂಬಿಕೆ ಇದೆ. ನಾನು ಇಷ್ಟು ವಿಶ್ವಾಸದಿಂದ ಹೇಳಿಕೊಳ್ಳುವಂಥದ್ದು ಈ ಚಿತ್ರದಲ್ಲಿ ಏನಿದೆ ಎಂಬುದು ಸಿನಿಮಾ ನೋಡಿದಾಗಲೇ ತಿಳಿಯುತ್ತದೆ.

* ಚಿತ್ರದ ಕಥೆಯು ಕಾದಂಬರಿ ರೂಪ ಪಡೆದಿದೆ. ಆ ಪುಸ್ತಕದ ಮುಖಪುಟದಲ್ಲಿ ಮೂವರು ಹುಡುಗಿಯರ ಚಿತ್ರವಿದೆ. ಅಂದರೆ ಚಿತ್ರದಲ್ಲಿ ನಿಮ್ಮ ಜೊತೆ ಬೇರೆ ನಾಯಕಿಯರೂ ಇದ್ದಾರೆ ಎಂದಾಯ್ತು. ಹಾಗಾದರೆ ನಿಮ್ಮ ಪಾತ್ರಕ್ಕೆ ಎಷ್ಟು ಮಹತ್ವವಿದೆ.
ಚಿತ್ರದಲ್ಲಿ ನಾನು ತುಂಬಾ ಚುರುಕು ಹುಡುಗಿ. ಥ್ರಿಲ್ ಕೊಡುವ ಎಲ್ಲವನ್ನೂ ಎಂಜಾಯ್ ಮಾಡಬೇಕು. ಬೇಸರದಲ್ಲಿರಲು ಇಷ್ಟಪಡುವುದಿಲ್ಲ. ಯಾವಾಗಲೂ ಖುಷಿಯಾಗಿರುತ್ತೇನೆ. ಟೀಸರ್ ನೋಡಿದರೆ ನಾನು ಚಿತ್ರದಲ್ಲಿ ಎಂಥ ಪಾತ್ರ ನಿರ್ವಹಿಸುತ್ತಿದ್ದೇನೆ ಎಂಬುದು ಗೊತ್ತಾಗುತ್ತದೆ. ಆ ಪಾತ್ರಕ್ಕೆ ಇರಬೇಕಿದ್ದ ಮಹತ್ವವಂತೂ ಸಿಕ್ಕಿದೆ.

* ಸಿನಿಮಾ ಅವಕಾಶ ಸಿಕ್ಕ ಕ್ಷಣದ ಬಗ್ಗೆ ಹೇಳಿ.
ಆಗ ನಾನು ಪಿಯುಸಿ ಕೊನೆಯ ಹಂತದಲ್ಲಿದ್ದೆ. ಹಾಗಾಗಿ ಮೊದಲು ಅವಕಾಶವನ್ನು ಒಪ್ಪಿಕೊಂಡಿರಲಿಲ್ಲ. ಮತ್ತೆರಡು ತಿಂಗಳ ನಂತರ ಪತ್ರಿಕೆ ಓದಿದಾಗಲೂ ಚಿತ್ರಕ್ಕೆ ನಾಯಕಿ ಸಿಕ್ಕಿಲ್ಲ ಎಂದು ಗೊತ್ತಾಯಿತು. ಆಗ ಈ ಅವಕಾಶವನ್ನು ಬಿಡಬಾರದು ಎಂದು ನಿರ್ಧರಿಸಿದೆ. ನಿರ್ದೇಶಕರನ್ನು ಭೇಟಿ ಆದ ಮರುದಿನವೇ ಆಯ್ಕೆಯಾದ ಸುದ್ದಿಯೂ ಬಂತು.

* ‘ಮುಂಗಾರು ಮಳೆ’ಯ ನಾಯಕ ಗಣೇಶ್ ಜೊತೆ ನಟಿಸಿದ ಅನುಭವ ಹೇಗಿತ್ತು?
ಗಣೇಶ್ ಅವರಂಥ ನಟನನ್ನು ನಾನು ಬೇರೆಲ್ಲೂ ಕಂಡಿಲ್ಲ. ಅವರು ನಟಿಸುತ್ತಿದ್ದರೆ ನೋಡುಗನನ್ನೂ ಸಿನಿಮಾದಲ್ಲಿ, ತಮ್ಮ ಪಾತ್ರದಲ್ಲಿ ಸೆಳೆದುಕೊಳ್ಳುತ್ತಾರೆ. ಭಾವಪ್ರಧಾನ ದೃಶ್ಯಗಳಲ್ಲಂತೂ ನಾವೂ ಅವರೊಂದಿಗೆ ಹೋಗಿ ಕೂತುಬಿಡೋಣ, ಸಮಾಧಾನಿಸೋಣ ಎನ್ನುವಷ್ಟು ಸಹಜವಾಗಿ ನಟಿಸುತ್ತಾರೆ. ಅವರ ನಟನೆ ನನಗೆ ಖುಷಿ ಕೊಡುತ್ತದೆ. ಹಾಗಾಗಿ ಈ ಚಿತ್ರದ ಅವಕಾಶ ಸಿಕ್ಕ ತಕ್ಷಣ ಗಣೇಶ್ ಅವರೇ ನಾಯಕನಾ ಎಂಬ ಕುತೂಹಲ ಇತ್ತು. ಇಲ್ಲಿನ ಒಂದು ದೃಶ್ಯದಲ್ಲಿ ಅವರು ನಟಿಸುತ್ತಿದ್ದರೆ ನಾನು ಅವರನ್ನು ನೋಡುತ್ತ ತಲ್ಲೀನಳಾಗಿದ್ದೆ. ಎದುರಿಗಿದ್ದ ನಾನು ಅವರಿಗೆ ಪ್ರತಿಕ್ರಿಯಿಸಬೇಕು ಎಂಬುದೇ ಗೊತ್ತಾಗಲಿಲ್ಲ. ಆಮೇಲೆ ಮತ್ತೊಂದು ಟೇಕ್ ತೆಗೆದೆವು.

* ನೀವು ಹಿಂದಿಯಲ್ಲೂ ನಟಿಸುತ್ತೀರಿ ಎಂಬ ಸುದ್ದಿ ಇದೆಯಲ್ಲ?
ಎಲ್ಲ ನಟಿಯರಿಗೂ ಬೇರೆ ಭಾಷೆಗಳಲ್ಲೂ ಅದೃಷ್ಟ ಪರೀಕ್ಷೆ ಮಾಡುವ ಆಸೆ ಇರುತ್ತದೆ. ನನಗೂ ಇದೆ. ಸದ್ಯಕ್ಕಂತೂ ಅಂಥ ಯಾವ ಅವಕಾಶವೂ ಇಲ್ಲ. ಮುಂದೆ ಸಿಕ್ಕರೆ ಖಂಡಿತ ಖುಷಿಪಡುತ್ತೇನೆ. ಈಗ ಕನ್ನಡದಲ್ಲೇ ಅನೇಕ ಅವಕಾಶಗಳು ಬರುತ್ತಿವೆ. ಆದರೆ ಯಾವುದನ್ನೂ ಒಪ್ಪಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT