ADVERTISEMENT

ಮುದ್ದು ಮಕ್ಕಳ ಮೊಗವ ನೋಡುತ...

ಹರವು ಸ್ಫೂರ್ತಿ
Published 16 ನವೆಂಬರ್ 2017, 19:30 IST
Last Updated 16 ನವೆಂಬರ್ 2017, 19:30 IST
‘ನೀಲಿ’ ಧಾರಾವಾಹಿಯಲ್ಲಿ ಕೀರ್ತನಾ
‘ನೀಲಿ’ ಧಾರಾವಾಹಿಯಲ್ಲಿ ಕೀರ್ತನಾ   

‘ಮುದ್ದಾದ ಮಕ್ಕಳು ತೆರೆಯ ಮೇಲೆ ಬಂದು ತೊದಲುತ್ತಾ ಹಾಡಿ, ನೃತ್ಯ ಮಾಡಿದರೆ ಯಾರಿಗೆ ಇಷ್ಟವಾಗುವುದಿಲ್ಲ’– ಹೀಗೆಂದು ಕೇಳುತ್ತಾರೆ ಸ್ಟಾರ್‌ ಸುವರ್ಣ ವಾಹಿನಿಯ ನಾನ್‌ ಫಿಕ್ಷನ್‌ ಮುಖ್ಯಸ್ಥ ತ್ಯಾಗಿ.

ವಾಹಿನಿಗಳು ನಡೆಯೋದೇ ಟಿ.ಆರ್‌.ಪಿ. ಎಂಬ ಸಿದ್ಧಸೂತ್ರದಿಂದ. ಈ ಹಿನ್ನೆಲೆಯಲ್ಲಿ ಒಳ್ಳೆಯ ಕಾರ್ಯಕ್ರಮ ನೀಡುವುದು ಹಾಗೂ ಆ ಮೂಲಕ ಆದಾಯ ತರುವುದು ಸವಾಲಿನ ಕೆಲಸ. ಈ ಕ್ರಿಯಾತ್ಮಕ ಕೆಲಸಗಳಿಗೆ ಮಕ್ಕಳನ್ನೂ ತೆರೆಗೆ ತರಲಾಗುತ್ತಿದೆ.

ಕೆಲವು ಕಾರ್ಯಕ್ರಮಗಳಲ್ಲಿ ಟಿ.ಆರ್‌.ಪಿ.ಗಾಗಿಯೇ ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಮುದ್ದಾದ ಮಕ್ಕಳನ್ನು ಕಂಡರೆ ಎಲ್ಲರಿಗೂ ಇಷ್ಟ. ಮಕ್ಕಳ ಮುಖ ನೋಡಿದಾಗ ಬೇಗ ಮನಸ್ಸು ಕರಗುತ್ತದೆ. ಈ ಒಂದು ಭಾವನಾತ್ಮಕ ಅಂಶವೇ ಸಾಕು. ಮಕ್ಕಳ ಕಾರ್ಯಕ್ರಮ ಜನಪ್ರಿಯತೆ ಗಳಿಸುತ್ತದೆ, ಹೆಚ್ಚು ಜನ ನೋಡಿದರೆ ಒಳ್ಳೆಯ ಟಿ.ಆರ್‌.ಪಿ.ಯೂ ಸಿಗುತ್ತದೆ.

ADVERTISEMENT

ಜೀ ವಾಹಿನಿಯಲ್ಲಿ ಪ್ರಸಾರವಾಗುವ ‘ಡ್ರಾಮಾ ಜೂನಿಯರ್ಸ್‌’ ರಿಯಾಲಿಟಿ ಷೋ ಜನಪ್ರಿಯತೆ ಗಳಿಸಲು ಚಿತ್ರಾಲಿ, ಆಚಿಂತ್ಯ ಸೇರಿದಂತೆ ಹಲವು ಮಕ್ಕಳೇ ಕಾರಣ ಎನ್ನುವುದನ್ನು ಜನರೇ ಹೇಳುತ್ತಾರೆ. ಹಾಗೇ ‘ಸರಿಗಮಪ ಲಿಟಲ್ ಚಾಂಪ್ಸ್‌’ ಕಾರ್ಯಕ್ರಮದಲ್ಲೂ ಆದ್ಯಾ ತೊದಲುತ್ತಾ ಹಾಡೇ ಎಲ್ಲರ ಮನ ಗೆದ್ದಿದ್ದಳು.

‘ಹಿಂದೆ ಉತ್ತಮವಾದ ಕಾರ್ಯಕ್ರಮ ನೀಡುವುದಷ್ಟೇ ಮುಖ್ಯವಾಗಿರುತ್ತಿತ್ತು. ಈಗ ಒಳ್ಳೆಯ ಕಾರ್ಯಕ್ರಮ ನೀಡುವುದರೊಂದಿಗೆ ಅದು ಟಿ.ಆರ್‌.ಪಿ.ಯ‌ನ್ನೂ ಗಳಿಸಬೇಕು ಎಂಬ ಆರೋಗ್ಯಕರ ಸ್ಪರ್ಧಾ ಮನೋಭಾವ ಇದೆ. ಅಲ್ಲದೆ ಖುಷಿ ಹಂಚುವ ಪುಟಾಣಿಗಳನ್ನು ಇಟ್ಟುಕೊಂಡು ಬೇಕಾದಷ್ಟು ಉತ್ತಮ ಪ್ರಯೋಗ ಮಾಡಬಹುದು’ ಎನ್ನುತ್ತಾರೆ ತ್ಯಾಗಿ.

ಧಾರಾವಾಹಿಗಳಲ್ಲಿ ಪುಟಾಣಿಗಳು: ಧಾರಾವಾಹಿ ವಿಚಾರದಲ್ಲಿ ‘ಕಥೆಯೇ ಮುಖ್ಯ’ ಎನ್ನುವುದು ‘ನೀಲಿ’ ಧಾರಾವಾಹಿಯ ನಿರ್ದೇಶಕ ಸತೀಶ್‌ ಕೃಷ್ಣ ಅವರ ಅಭಿಪ್ರಾಯ. ಸಾವಿರಾರು ಕಂತುಗಳನ್ನು ನಿರ್ದೇಶಿಸಿದ ಅನುಭವವಿರುವ ಅವರು, ‘ಧಾರಾವಾಹಿಗೆ ಕಥೆಯೇ ಜೀವಾಳ. ಒಂದೇ ಪಾತ್ರದಿಂದ ಧಾರಾವಾಹಿ ಜನಪ್ರಿಯತೆ ಗಳಿಸುವುದಿಲ್ಲ. ‘ನೀಲಿ’ ಧಾರಾವಾಹಿಯಲ್ಲಿನ ಮಗು ಕೀರ್ತನಾ. ಈ ಪಾತ್ರದ ಸುತ್ತ ಹಲವಾರು ಘಟನೆಗಳನ್ನು ಹೆಣೆದಿರುತ್ತೇವೆ. ಕಥೆ, ಪಾತ್ರ ಒಂದಕ್ಕೊಂದು ಪೂರಕವಾಗಿ ಇರುತ್ತದೆ. ಕ್ರಿಯಾತ್ಮಕ ನಿರ್ಮಾಣದಿಂದ ಧಾರಾವಾಹಿಯ ಜನಪ್ರಿಯತೆ ಹೆಚ್ಚುತ್ತದೆ. ಇದರಿಂದ ಒಳ್ಳೆಯ ಟಿ.ಆರ್‌.ಪಿ.ಯೂ ಸಿಗುತ್ತದೆ’ ಎನ್ನುತ್ತಾರೆ ಸತೀಶ್ ಕೃಷ್ಣ.

‘ಅಗ್ನಿಸಾಕ್ಷಿ’ ಧಾರಾವಾಹಿಯನ್ನು ಇದೇ ವಿಚಾರಕ್ಕೆ ನೆನಪಿಸಿಕೊಳ್ಳಬಹುದು. ಸನ್ನಿಧಿ–ಸಿದ್ಧಾರ್ಥ್ ಅವರ ಮನೆಗೆ ಬರುವ ‘ಆಯುಷಿ’ ಎಂಬ ಮಗುವಿನ ಪಾತ್ರ ಜನಪ್ರಿಯತೆ ಗಳಿಸಿದೆ. ಇದನ್ನೇ ನೆಚ್ಚಿಕೊಂಡು ಆ ಪಾತ್ರವನ್ನು ಡಬ್ಬಲ್‌ ಆ್ಯಕ್ಟಿಂಗ್ ಮಾಡಿಸಿ ‘ಖುಷಿ’ ಎನ್ನುವ ಮತ್ತೊಂದು ಪಾತ್ರವನ್ನೂ ಪರಿಚಯಿಸಿದ್ದಾರೆ. ಪಾತ್ರಗಳ ಜನಪ್ರಿಯತೆಯೂ ಕಥೆಗಳ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ.

‘ಹರಹರ ಮಹಾದೇವ’ ಧಾರಾವಾಹಿಯ ಗಣೇಶ, ಸುಬ್ರಹ್ಮಣ್ಯ ಪಾತ್ರಗಳನ್ನು ಮರೆಯಲು ಸಾಧ್ಯವಿಲ್ಲ. ಡೊಳ್ಳು ಹೊಟ್ಟೆ ಹೊತ್ತು, ಸೊಂಡಿಲೊಳಗಿಂದ ಮಾತನಾಡುತ್ತಿದ್ದ ಚತುರ ಗಣಪನನ್ನು ಟಿ.ವಿ.ಯಲ್ಲೇ ನೋಡಿ ಹಲವು ಜನ ಧನ್ಯರಾದರು. ಗಣೇಶ, ಸುಬ್ರಹ್ಮಣ್ಯ ವಿಶೇಷ ಸಂಚಿಕೆಗಳು ಎಂದಿಗಿಂತ ಹೆಚ್ಚು ಟಿ.ಆರ್‌.ಪಿ ಗಳಿಸಿದ್ದವು.

ಈಚೆಗೆ ಬರುತ್ತಿರುವ ‘ಶನಿ’ ಧಾರಾವಾಹಿಯನ್ನು ಜನರು ಭಕ್ತಿಯಿಂದ ನೋಡುತ್ತಿದ್ದಾರೆ. ಅದರಲ್ಲಿ ಶನಿ ಪಾತ್ರ ಮಾಡಿರುವ ಸುನೀಲ್‌ಕುಮಾರ್‌ ಅಭಿನಯ ಧಾರಾವಾಹಿಗೆ ಜೀವ ತುಂಬುತ್ತಿದೆ.

‘ಮಕ್ಕಳ ತುಂಟತನ, ಚಿನ್ನಾಟ ನೋಡಲು ಎಲ್ಲರಿಗೂ ಇಷ್ಟ. ಆದರೆ, ಈ ಮಕ್ಕಳೇ ನಮ್ಮ ಬಂಡವಾಳ ಅಲ್ಲ. ಮಕ್ಕಳನ್ನು ಇಟ್ಟುಕೊಂಡೇ ಟಿ.ಆರ್‌.ಪಿ. ಗಿಟ್ಟಿಸಿಕೊಳ್ಳುತ್ತೀವಿ ಅಂತ ಏನಿಲ್ಲ. ನಮಗೂ ಮಕ್ಕಳೊಂದಿಗೆ ಕೆಲಸ ಮಾಡಲು ಇಷ್ಟ. ಜನರಿಗೆ ನೋಡಲು ಇಷ್ಟ. ಇದರಿಂದ
ಒಳ್ಳೆಯ ಟಿ.ಆರ್‌.ಪಿ. ಸಿಗುತ್ತಿದೆ’ ಎನ್ನುವುದು ಟಿವಿ ಮಂದಿಯ ಮಾತು.

ಏನಿದು ಟಿ.ಆರ್‌.ಪಿ.
ಟಿ.ಆರ್‌.ಪಿ. ಎಂದರೆ ‘ಟಿವಿ ರೇಟಿಂಗ್ ಪಾಯಿಂಟ್‌’. ಯಾವ ಕಾರ್ಯಕ್ರಮವನ್ನು ಎಷ್ಟು ಹೊತ್ತು; ಎಷ್ಟು ಜನ ನೋಡಿದ್ದಾರೆ ಎಂಬ ಲೆಕ್ಕವನ್ನು ಟಿ.ಆರ್‌.ಪಿ ಹೇಳುತ್ತದೆ. ಒಳ್ಳೆಯ ರೇಟಿಂಗ್ ಸಿಕ್ಕರೆ ವಾಹಿನಿಯ ಜನಪ್ರಿಯತೆಯೂ ಹೆಚ್ಚುತ್ತದೆ. ಸಹಜ ಎನ್ನುವಂತೆ ಹೆಚ್ಚು ಜನ ನೋಡುವ ಕಾರ್ಯಕ್ರಮಕ್ಕೆ ಹೆಚ್ಚು ಜಾಹೀರಾತುಗಳು ಬರುತ್ತವೆ. ಇದರಿಂದ ವಾಹಿನಿಯ ಆದಾಯವೂ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.