ADVERTISEMENT

ರಶ್ಮಿಕಾ ಪ್ರಭಾವಳಿ!

ಪದ್ಮನಾಭ ಭಟ್ಟ‌
Published 7 ಡಿಸೆಂಬರ್ 2017, 19:30 IST
Last Updated 7 ಡಿಸೆಂಬರ್ 2017, 19:30 IST
ರಶ್ಮಿಕಾ ಮಂದಣ್ಣ, ಚಿತ್ರ: ರಾಘವ
ರಶ್ಮಿಕಾ ಮಂದಣ್ಣ, ಚಿತ್ರ: ರಾಘವ   

ಯಾವುದೋ ದೇವತೆಯಿಂದ ಕಡ ಪಡೆದುಕೊಂಡು ಬಂದಂಥ ನಗುವನ್ನು ಸುತ್ತೆಲ್ಲ ಬೆಳಗುವಂತೆ ಚೆಲ್ಲುತ್ತ, ಅವಳು ಬೆನ್ನ ತುಂಬೆಲ್ಲ ಹರಡಿಕೊಂಡು ಕಣ್ಣ ಮೇಲೂ ಸುರಿಯುತ್ತಿರುವ ನಯ ಕೂದಲನ್ನೊಮ್ಮೆ ಹಿಂದಕ್ಕೆ ಜರುಗಿಸಿಕೊಂಡರೆ ಎದುರಿಗಿದ್ದವರ ಮನಸ್ಸು ತಂತಾನೆಯೇ ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ/ ಅಂದಾನೋ ಅದೃಷ್ಟಾನೋ ಮುಂದೆ ಕೂತಿದೆ’ ಎಂದು ಗುನುಗಿಕೊಳ್ಳುತ್ತದೆ.

ಹೀಗೆ ಅಂದ ಮತ್ತು ಅದೃಷ್ಟಗಳು ಕೈಹಿಡಿದು ನಡೆಸಿ ಕನ್ನಡ ಚಿತ್ರರಂಗಕ್ಕೆ ಕರೆದುಕೊಂಡು ಬಂದ ಚೆಲುವೆ ರಶ್ಮಿಕಾ ಮಂದಣ್ಣ. ಇಂದಿಗೂ ಅವರು ಅಭಿಮಾನಿಗಳ ಎದೆಯಲ್ಲಿ ಸಾನ್ವಿ ಜೋಸೆಫ್‌ ಆಗಿಯೇ ಸ್ಥಾಪಿತರಾಗಿದ್ದಾರೆ. ಅವರು ಚಿತ್ರರಂಗಕ್ಕೆ ಅಡಿಯಿಟ್ಟಿದ್ದು ಕಳೆದ ವರ್ಷ ಡಿಸೆಂಬರ್‌ನಲ್ಲಿ.

ಒಂದು ವರ್ಷದಲ್ಲಿ ರಶ್ಮಿಕಾ ಎಷ್ಟು ದೂರ ಸಾಗಿದ್ದಾರೆ ಎಂಬುದಕ್ಕೆ ಈ ಡಿಸೆಂಬರ್‌ ಪುರಾವೆಯಂತಿದೆ. ಹೌದು. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಮೂರು ಸಿನಿಮಾಗಳು ಒಂದರ ಹಿಂದೆ ಒಂದರಂತೆ ಬಿಡುಗಡೆಗೆ ಸಜ್ಜಾಗಿವೆ! ಅವುಗಳಲ್ಲಿ ಒಂದು ತೆಲುಗು ಭಾಷೆ ಸಿನಿಮಾ. ಮೂರೂ ಸಿನಿಮಾಗಳು ಈ ತಿಂಗಳಲ್ಲಿಯೇ ತೆರೆಗೆ ಬರುವ ಸಾಧ್ಯತೆಗಳೂ ದಟ್ಟವಾಗಿವೆ.

ADVERTISEMENT

ಎ. ಹರ್ಷ ನಿರ್ದೇಶನದ ಪುನೀತ್‌ ರಾಜಕುಮಾರ್‌ ಅವರ ಜತೆ ರಶ್ಮಿಕಾ ತೆರೆ ಹಂಚಿಕೊಂಡಿರುವ ‘ಅಂಜನೀಪುತ್ರ’ ಸಿನಿಮಾ ಈ ತಿಂಗಳ 22ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ. ಅದೇ ರೀತಿ ಗಣೇಶ್‌ ಜತೆ ನಟಿಸಿರುವ ಸುನಿ ನಿರ್ದೇಶನದ ‘ಚಮಕ್‌’ ಮತ್ತು ತೆಲುಗಿನಲ್ಲಿ ವೆಂಕಿ ನಿರ್ದೇಶನದ ‘ಚಲೋ’ ಸಿನಿಮಾ ಕೂಡ ಇದೇ ತಿಂಗಳ ತೆರೆಗೆ ಬರುವ ಪ್ರಯತ್ನದಲ್ಲಿವೆ.

ಈ ಎಲ್ಲ ಕಾರಣಕ್ಕಾಗಿ ಡಿಸೆಂಬರ್‌ ರಶ್ಮಿಕಾ ಅವರಿಗೆ ಅದೃಷ್ಟದ ತಿಂಗಳಷ್ಟೇ ಅಲ್ಲ, ಅದೃಷ್ಟ ಪರೀಕ್ಷೆಯ ತಿಂಗಳೂ ಹೌದು. ಈ ಖುಷಿ ಮತ್ತು ಆತಂಕ ಅವರ ಮಾತಿನಲ್ಲಿಯೂ ವ್ಯಕ್ತವಾಗುತ್ತಿತ್ತು.

*‘ಕಿರಿಕ್‌ ಪಾರ್ಟಿ’ ಸಿನಿಮಾ ನಂತರ ನಿಮ್ಮ ಯಾವುದೇ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಈಗ ಮೂರು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆಯಲ್ಲ...
ವರ್ಷಪೂರ್ತಿ ಕೆಲಸ ಮಾಡ್ತಾನೇ ಇದ್ದೆ. ಆದರೆ ಈಗ ಡಿಸೆಂಬರ್‌ನಲ್ಲಿ ಆ ಚಿತ್ರಗಳು ಬಿಡುಗಡೆ ಆಗ್ತಿವೆ. ಏನೋ ನನ್ನ ಹಣೆಬರಹದಲ್ಲಿ ಈ ಮೂರು ಚಿತ್ರಗಳು ಡಿಸೆಂಬರ್‌ನಲ್ಲಿ ಬಿಡುಗಡೆ ಆಗಬೇಕು ಅಂತ ಇರಬೇಕಷ್ಟೆ. ನಾನು ನನ್ನ ನಟನಾವೃತ್ತಿ ಆರಂಭಿಸಿದ್ದೂ ಕಳೆದ ವರ್ಷ ಡಿಸೆಂಬರ್‌ನಲ್ಲಿಯೇ. ಅದನ್ನೆಲ್ಲ ನೆನಪಿಸಿಕೊಂಡು ತುಂಬ ಎಕ್ಸೈಟ್‌ ಆಗಿದ್ದೇನೆ. ಆದರೆ ಅಷ್ಟೇ ಭಯವೂ ಇದೆ. ಯಾಕೆಂದರೆ ಜನರು ಯಾವ ರೀತಿ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಇದು ನನಗೆ ಪ್ಲಸ್ಸೂ ಆಗಬಹುದು, ಮೈನಸ್ಸೂ ಆಗಬಹುದು.

* ಮೂರು ಬೇರೆ ಬೇರೆ ರೀತಿಯ ಸಿನಿಮಾಗಳು. ಅವುಗಳಲ್ಲಿ ನಿಮ್ಮ ಪಾತ್ರಗಳು ಹೇಗಿವೆ?
‘ಚಲೋ’ ಕಾಲೇಜ್‌ ಪ್ರೇಮಕಥೆ. ಕಾಲೇಜಿನಿಂದ ಕುಟುಂಬಕ್ಕೆ ಕಥೆ ಹೊರಳಿಕೊಳ್ಳುತ್ತದೆ. ‘ಚಮಕ್‌’ ಸಿನಿಮಾ ಇಂದಿನ ಆಧುನಿಕ ಜಗತ್ತಿನಲ್ಲಿನ ದಂಪತಿಯ ಕಥೆ. ಅವರ ನಡುವಿನ ಪ್ರೇಮ, ತಪ್ಪು ತಿಳಿವಳಿಕೆಗಳ ಸುತ್ತಲೇ ಹೆಣೆದಿರುವ ಸಿನಿಮಾ. ‘ಅಂಜನೀಪುತ್ರ’ ಪಕ್ಕಾ ಕಮರ್ಷಿಯಲ್‌ ಲವ್‌ ಸ್ಟೋರಿ. ಅದರಲ್ಲಿ ಹೈ ಕ್ಲಾಸ್‌ ಸಿಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ.

* ಈ ಮೂರೂ ಭಿನ್ನ ಪಾತ್ರಗಳನ್ನು ಜನರು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆಯೇ?
ಅದನ್ನು ಹೇಳುವುದು ಕಷ್ಟ. ‘ಕಿರಿಕ್‌ ಪಾರ್ಟಿ’ಯಲ್ಲಿನ ಪಾತ್ರ ಜನರಿಗೆ ತುಂಬ ಇಷ್ಟವಾಗಿತ್ತು. ಇನ್ನೂ ಎಲ್ಲರೂ ನನ್ನನ್ನು ಸಾನ್ವಿ ಅಂತಲೇ ಕರೀತಾರೆ. ಹಾಗೆಂದು ಬರಿ ಅಂಥದ್ದೇ ಪಾತ್ರ ಮಾಡಿಕೊಂಡಿರಲು ಸಾಧ್ಯವಾಗುವುದಿಲ್ಲವಲ್ಲ. ನಾವು ಕಲಾವಿದರು. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತೇವೆ. ಈಗ ನಾನು ಭಿನ್ನ ಪಾತ್ರಗಳನ್ನು ಮಾಡುತ್ತಿದ್ದೇನೆ. ಜನರು ಅದಕ್ಕೆ ತೆರೆದುಕೊಂಡಿದ್ದಾರಾ ಎಂಬುದು ನನಗಿನ್ನೂ ಗೊತ್ತಿಲ್ಲ.

ವೈಯಕ್ತಿಕವಾಗಿ ನನಗೆ ಮಾತ್ರ ಪ್ರತಿ ಸಿನಿಮಾ ಬಿಡುಗಡೆಯಾಗುವಾಗಲೂ ಅದು ನನ್ನ ಮೊದಲ ಸಿನಿಮಾ ಅಂತಲೇ ಅನಿಸುತ್ತಿರುತ್ತದೆ.

*ಈ ಮೂರು ಸಿನಿಮಾಗಳಲ್ಲಿ ವೈಯಕ್ತಿಕವಾಗಿ ತುಂಬ ವಿಶೇಷ ಅನಿಸಿದ ಪಾತ್ರ ಯಾವುದು?
ಮೂರೂ ನನ್ನ ಸಿನಿಮಾಗಳೇ. ಮೂರೂ ಪಾತ್ರಗಳೂ ಇಷ್ಟವಾಗಿರುವ ಕಾರಣಕ್ಕೆ ಒಪ್ಪಿಕೊಂಡಿದ್ದೇನೆ. ನಾನು ತುಂಬ ತಯಾರಿ ಮಾಡಿಕೊಂಡು ಶ್ರಮವಹಿಸಿ ಮಾಡಿರುವ ಸಿನಿಮಾ ‘ಚಮಕ್‌’. ‘ಚಲೋ’ ಸಿನಿಮಾದಲ್ಲಿ ತೆಲುಗು ಭಾಷೆ ಕಲಿಯಬೇಕಿತ್ತು, ಡಬ್ಬಿಂಗ್ ಮಾಡಬೇಕಿತ್ತು. ಅವೆಲ್ಲವನ್ನೂ ಎಂಜಾಯ್‌ ಮಾಡಿದ್ದೇನೆ. ‘ಅಂಜನೀಪುತ್ರ’ ಸರಳವಾದ ಪಾತ್ರ. ಆದರೂ ವಿಶೇಷವಾದದ್ದೇ.

*ಮೂರು ಭಿನ್ನ ಶೈಲಿಯ ನಿರ್ದೇಶಕರ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ನಂಗೆ ಮೂರೂ ನಿರ್ದೇಶಕರೂ ಸಾಕಷ್ಟು ಸ್ವಾತಂತ್ರ್ಯ ಕೊಟ್ಟಿದ್ದರು. ಹರ್ಷ ಅವರ ನೃತ್ಯ ಸಂಯೋಜನೆ ನನಗೆ ಯಾವಾಗಲೂ ತುಂಬ ಇಷ್ಟ. ಈಗ ‘ಅಂಜನೀಪುತ್ರ’ದಲ್ಲಿ ಅವರ ಜತೆ ಕೆಲಸ ಮಾಡಿದಾಗ ಸಿನಿಮಾವನ್ನೂ ನೃತ್ಯಸಂಯೋಜನೆಯಷ್ಟೇ ಶ್ರದ್ಧೆಯಿಂದ ಮಾಡುತ್ತಾರೆ ಎಂಬುದು ತಿಳಿಯಿತು. ‘ಚಲೊ’ ನಿರ್ದೇಶಕ ವೆಂಕಿ ಅವರಿಗೆ ಇದು ಮೊದಲ ಸಿನಿಮಾ.

ಅವರು ಸಿನಿಮಾವನ್ನು ನೋಡುವ ರೀತಿಯೇ ಬೇರೆ. ‘ಚಮಕ್‌’ ನಿರ್ದೇಶಕ ಸುನಿ ತುಂಬ ಪ್ರಯೋಗಶೀಲ ನಿರ್ದೇಶಕ. ನಾನು ಹೀಗೆಲ್ಲ ಅಭಿನಯಿಸಬಹುದು ಅಂತ ನನಗೇ ಗೊತ್ತಿರಲಿಲ್ಲ. ಅವರ ಜತೆ ಇನ್ನೂ ನೂರು ಸಿನಿಮಾ ಮಾಡಬೇಕು ಎಂಬ ಆಸೆ ನನ್ನದು.

* ಒಂದು ಸಿನಿಮಾದ ಪಾತ್ರಕ್ಕೆ ನೀವು ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೀರಿ?
ಸಂಭಾಷಣೆಗಳು ತೆರೆಯ ಮೇಲೆ ಬಾಯಿಪಾಠ ಮಾಡಿ ಹೇಳಿದಂತಿರಬಾರದು. ಅದು ತುಂಬ ಸಹಜವಾಗಿ ಬರಬೇಕು. ಅದೊಂದನ್ನೇ ನಾನು ತಯಾರಿ ಮಾಡಿಕೊಳ್ಳುವುದು. ಉಳಿದಂತೆ ನಿರ್ದೇಶಕರು ಹೇಳಿದ ಹಾಗೆ ನಟಿಸುತ್ತೇನೆ ಅಷ್ಟೆ.

* ಈ ಮಧ್ಯೆ ರಶ್ಮಿಕಾ ನಟನೆಯನ್ನು ನಿಲ್ಲಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತಲ್ಲ...
ನಾನು ನಟನೆ ಮಾಡುವುದನ್ನು ಯಾರೂ ತಡೆಯುತ್ತಿಲ್ಲ. ನಾನ್ಯಾಕೆ ನಟನೆ ನಿಲ್ಲಿಸಲಿ? ‘ನಿನ್ನನ್ನು ತೆರೆಯ ಮೇಲೆ ನೋಡಿ ಸಾಕಾಯ್ತು. ನಟಿಸಿದ್ದು ಸಾಕು’ ಎಂದು ಜನರು ಹೇಳಿದರೆ ಆಗ ಚಿತ್ರರಂಗ ಬಿಡುತ್ತೇನೆ. ಅಲ್ಲಿಯವರೆಗೂ ನಾನು ನಟನೆಯನ್ನು ಬಿಡುವುದಿಲ್ಲ.

* ರಕ್ಷಿತ್‌ ಶೆಟ್ಟಿ ಅವರ ಜತೆ ಮದುವೆ ನಿಶ್ಚಿತಾರ್ಥ ಆದ ಮೇಲೆ ನಿಮ್ಮ ವೃತ್ತಿಬದುಕಿನಲ್ಲಿ ಯಾವುದಾದರೂ ವ್ಯತ್ಯಾಸವಾಗಿದೆಯೇ?
ನಾನು ಚಿತ್ರರಂಗದಲ್ಲಿ ಇರಿಸಿದ ಮೊದಲ ಹೆಜ್ಜೆಯಿಂದಲೂ ರಕ್ಷಿತ್‌ ನನ್ನ ಜತೆಗೇ ಇದ್ದಾರೆ. ಆದ್ದರಿಂದ ಮದುವೆ ನಿಶ್ಚಿತಾರ್ಥ ಆಗಿದ್ದು ವೃತ್ತಿಬದುಕಿನಲ್ಲಿ ಹೆಚ್ಚಿನ ವ್ಯತ್ಯಾಸವನ್ನೇನೂ ತಂದಿಲ್ಲ.

* ನೀವು ಮತ್ತು ರಕ್ಷಿತ್‌ ಇಬ್ಬರೂ ಸದ್ಯಕ್ಕೆ ಚಿತ್ರರಂಗದಲ್ಲಿ ತುಂಬ ಬ್ಯುಸಿಯಾಗಿದ್ದೀರಿ? ಈ ಕೆಲಸದ ನಡುವೆ ನಿಮ್ಮ ಪ್ರೇಮಾಲಾಪಕ್ಕೆ ಸಮಯ ಹೊಂದಿಸಿಕೊಳ್ಳುವುದು ಕಷ್ಟ ಆಗುತ್ತಿಲ್ಲವೇ?
ಸಮಯ ಸಿಗುವುದು ಸ್ವಲ್ಪ ಕಷ್ಟವೇ. ಆದರೆ ನಾವಿಬ್ಬರೂ ಆಗಾಗ ಸಮಯ ಮಾಡಿಕೊಳ್ಳುತ್ತೇವೆ. ನಾನು ಆಗಾಗ ಅವರ ಕಚೇರಿಗೆ ಹೋಗುತ್ತೇನೆ. ಭೇಟಿಯಾಗುತ್ತೇವೆ. ಅಷ್ಟು ಸಮಯ ಸಿಗುತ್ತದೆ. ಆದರೆ ಕಡಿಮೆ ಅಷ್ಟೆ.

*
ನಾವು ಎಷ್ಟು ಕಷ್ಟಪಟ್ಟು ಕೆಲಸ ಮಾಡಿದರೂ ಜನರ ಮುಂದೆ ಹೋದಾಗ ಅವರು ಎಂಜಾಯ್‌ ಮಾಡುವುದನ್ನು ನೋಡಿದಾಗ, ನಗುನಗುತ್ತ ಸ್ವಾಗತಿಸಿದಾಗ ನಮ್ಮ ಶ್ರಮ ಸಾರ್ಥಕ ಅನಿಸುತ್ತದೆ. ಜನರ ಆ ಪ್ರೀತಿಗೋಸ್ಕರವೇ ಅಲ್ಲವೇ ನಾವು ಕೆಲಸ ಮಾಡುವುದು?
–ರಶ್ಮಿಕಾ ಮಂದಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.