ADVERTISEMENT

‘ರಾಜಕುಮಾರ’ನಿಗೆ ಹಾಡುಗಳ ಪರಾಕ್!

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 19:30 IST
Last Updated 9 ಮಾರ್ಚ್ 2017, 19:30 IST
ಪ್ರಿಯಾ ಆನಂದ್, ಪುನೀತ್ ರಾಜಕುಮಾರ್
ಪ್ರಿಯಾ ಆನಂದ್, ಪುನೀತ್ ರಾಜಕುಮಾರ್   

ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಜಗ್ಗೇಶ್, ಯಶ್, ರಾಧಿಕಾ ಪಂಡಿತ್, ರಂಗಾಯಣ ರಘು, ಅವಿನಾಶ್, ವಿನಯ್ ರಾಜಕುಮಾರ್, ಭಾರ್ಗವಿ ನಾರಾಯಣ್, ಮನದೀಪ್ ರಾಯ್ – ಇಷ್ಟೆಲ್ಲ ‘ತಾರಾಗಣ’ ಮೇಳೈಸಿದ್ದು ‘ರಾಜಕುಮಾರ’ನ ಆಸ್ಥಾನದಲ್ಲಿ.

ಆಸ್ಥಾನದ ರಾಜಕುಮಾರ ಪುನೀತ್ ಹಾಗೂ ವಿ. ಹರಿಕೃಷ್ಣ ಕಾರ್ಯಕ್ರ,ಮದ ಕೇಂದ್ರಬಿಂದು. ಅದು ಸಂತೋಷ್ ಆನಂದರಾಮ್ ನಿರ್ದೇಶನದ, ಪುನೀತ್ ರಾಜಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರದ ಹಾಡುಗಳ ಅನಾವರಣದ ವೇದಿಕೆ.

‘ಕಥೆ ಒಪ್ಪಿಗೆ ಆದ ನಂತರ ಈ ಶೀರ್ಷಿಕೆ ಇಟ್ಟಿದ್ದು. ಚಿತ್ರಕ್ಕೂ ರಾಜಕುಮಾರ್ ಅವರಿಗೂ ಯಾವುದೇ ಸಂಬಂಧವಿಲ್ಲ. ರಾಜಕುಮಾರ ಎಂಬುದು ನಮ್ಮ ಸಿನಿಮಾದಲ್ಲಿ ವ್ಯಕ್ತಿ ಸೂಚಕ ಅಲ್ಲ, ಬದಲಾಗಿ ವ್ಯಕ್ತಿತ್ವ ಸೂಚಕ. ಅಣ್ಣಾವ್ರು ಬಿಟ್ಟು ಹೋದ ಮೌಲ್ಯಗಳನ್ನು ಚಿತ್ರದಲ್ಲಿವೆ’ ಎಂದು ನಿರ್ದೇಶಕ ಸಂತೋಷ್ ಸ್ಪಷ್ಟಪಡಿಸಿದರು. ಆ ಮೂಲಕ ಇದು ವರನಟ ರಾಜಕುಮಾರ್ ಅವರ ಬಗೆಗಿನ ಚಿತ್ರವೇ ಎಂಬ ಅನುಮಾನಕ್ಕೆ ತೆರೆ ಎಳೆದರು.

ಪುನೀತ್ ರಾಜಕುಮಾರ್ ಮಾತನಾಡುತ್ತ, ಚಿತ್ರದಲ್ಲಿನ ತಮ್ಮ ಸಹಕಲಾವಿದರ ಹೆಸರನ್ನು ನೆನಪಿಸಿಕೊಳ್ಳುವುದು ಕಷ್ಟ ಎನ್ನುತ್ತ ಒಂದು ಚೀಟಿಯನ್ನೇ ತೆಗೆದು ಓದಿದರು. ಅನಂತನಾಗ್, ಪ್ರಕಾಶ್ ರಾಜ್, ದತ್ತಣ್ಣ, ಅಚ್ಯುತಕುಮಾರ್, ಸಾಧು ಕೋಕಿಲ, ಚಿಕ್ಕಣ್ಣ, ಹೊನ್ನವಳ್ಳಿ ಕೃಷ್ಣ, ಸಿದ್ಲಿಂಗು ಶ್ರೀಧರ್ – ಹೀಗೆ ವೇದಿಕೆ ಮೇಲಿದ್ದವರ ಹೆಸರನ್ನೂ ಸೇರಿಸಿ ಪುನೀತ್ ಹೇಳುತ್ತಾ ಹೋದರು.

‘ಇಷ್ಟು ಒಳ್ಳೆಯ ಸಿನಿಮಾ ಮಾಡಿರುವ ಖುಷಿ ಒಂದು ಕಡೆಯಾದರೆ, ಅಪ್ಪಾಜಿ ಹೆಸರಿನಲ್ಲಿ ಸಿನಿಮಾ ಮಾಡಿದಾಗ ನಿರೀಕ್ಷೆಯೂ ದೊಡ್ಡ ಮಟ್ಟದಲ್ಲಿರುತ್ತದೆ. ಅದಕ್ಕೆ ಭಯವೂ ಆಗುತ್ತಿದೆ’ ಎಂದರು ಪುನೀತ್. ತಮಿಳು ನಟಿ ಪ್ರಿಯಾ ಆನಂದ್ ನಾಯಕಿಯಾಗಿ ಪುನೀತ್‌ಗೆ ಸಾಥ್ ನೀಡಿದ್ದಾರೆ.

‘ಹಿನ್ನೆಲೆ ಸಂಗೀತ ಸಂಯೋಜಿಸುವಾಗ ನನಗೆ ಮನೆಯ ನೆನಪು ಕಾಡುತ್ತಿತ್ತು. ಅಂಥದ್ದೊಂದು ಕೌಟುಂಬಿಕ ಕಥೆ ಇರುವ ಈ ಚಿತ್ರದಲ್ಲಿ ಸಂಗೀತವೂ ಒಂದು ಪಾತ್ರವೇ’ ಎಂದರು ಸಂಗೀತ ನಿರ್ದೇಶಕ ವಿ. ಹರಿಕೃಷ್ಣ. ಸಂತೋಷ್ ಆನಂದರಾಮ್, ಯೋಗರಾಜ್ ಭಟ್ ಮತ್ತು ಗೌಸ್‌ಪೀರ್ ಹಾಡುಗಳನ್ನು ಬರೆದಿದ್ದಾರೆ.

ADVERTISEMENT

ವಿಜಯ್ ಪ್ರಕಾಶ್, ಸೋನು ನಿಗಮ್, ಪುನೀತ್ ರಾಜಕುಮಾರ್, ಶಶಾಂಕ ಶೇಷಗಿರಿ, ಸಂತೋಷ್ ವೆಂಕಿ, ಪ್ರಿಯಾ ಹೇಮೇಶ್ ಹಾಡಿದ್ದಾರೆ. ಸಂತೋಷ್ ಬರೆದ ‘ಬೊಂಬೆ ಹೇಳುತೈತೆ’ ಹಾಡು ವಿಜಯ್ ಪ್ರಕಾಶ್ ದನಿಯಲ್ಲಿ ಜೀವ ಪಡೆದಿದೆ.

ಯುಗಾದಿಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದರು. ಆಸ್ಟ್ರೇಲಿಯ, ಮಲೇಷ್ಯಾ, ಗೋವಾ, ಕಾಶಿ, ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಇದೆ.

ಹಾಡು, ಟ್ರೈಲರ್ ಅನಾವರಣವದ ನಂತರ ಬೊಂಬೆಯನ್ನು ಕೊಟ್ಟು ಅತಿಥಿಗಳನ್ನು ಬೀಳ್ಕೊಡುವ ಸಂದರ್ಭಕ್ಕೆ ಸರಿಯಾಗಿ ವರುಣ ರಾಯನೂ ತಂಪೆರೆದಿದು ಚಿತ್ರತಂಡದ ಮೊಗದಲ್ಲಿ ನಗುವರಳಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.