ADVERTISEMENT

ವಿನು ತುಳು ಪ್ರೇಮದ ‘ಮದಿಪು’

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ದಕ್ಷಿಣ ಕನ್ನಡದಲ್ಲಿ ತುಳು ಚಿತ್ರಗಳ ಮಾರುಕಟ್ಟೆ ಬೆಳೆಯುತ್ತಿದ್ದಂತೆ ತುಳು ಚಿತ್ರಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜೊತೆಗೆ ತನ್ನ ಮಾರುಕಟ್ಟೆಯನ್ನೂ ವಿಸ್ತರಿಸುವ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಹೊಸ ಚಿತ್ರ ‘ಮದಿಪು’ ಪತ್ರಿಕಾಗೋಷ್ಠಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು.

ಧಾರಾವಾಹಿಗಳಲ್ಲಿ ಕಲಾ ನಿರ್ದೇಶಕನಾಗಿದ್ದ ಚೇತನ್ ಮುಂಡಾಡಿ ‘ಮದಿಪು’ ಮೂಲಕ ಮೊದಲ ಬಾರಿ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ತುಳು ಭಾಷೆಯಲ್ಲಿ ‘ಮದಿಪು’ ಎಂದರೆ ಅಭಯ, ಆಶೀರ್ವಾದ, ಪ್ರಸಾದ ಎಂಬ ಅರ್ಥ ಬರುತ್ತದೆ. ದಕ್ಷಿಣ ಕನ್ನಡದ ಕಲೆ, ಸಂಸ್ಕೃತಿ, ಧಾರ್ಮಿಕ ವಿಧಿ ವಿಧಾನಗಳ ಹಿನ್ನೆಲೆಯನ್ನಿಟ್ಟುಕೊಂಡು ತಯಾರಾಗುತ್ತಿರುವ ಚಿತ್ರ ‘ಮದಿಪು’.

ಭೂತಾರಾಧನೆ, ಭೂತಕೋಲ ಕಟ್ಟುವ ವ್ಯಕ್ತಿಯ ಮನಸ್ಥಿತಿ, ಆ ವ್ಯಕ್ತಿ ಆ ಆಚರಣೆಯಿಂದ ದೂರಾಗುವುದು ಎಲ್ಲ ಚಿತ್ರಕಥೆಯಲ್ಲಿನ ಮುಖ್ಯ ಅಂಶಗಳು. ಇದರ ಸುತ್ತ ಸುಳಿದಾಡುವ ಪಾತ್ರಗಳಾಗಿ ಸರ್ದಾರ್‌ ಸತ್ಯ, ಎಂ.ಕೆ. ಮಠ, ಸೀತಾಕೋಟೆ, ಇಳಾ ವಿಟ್ಲ ಮುಂತಾದವರಿದ್ದಾರೆ. ಸದ್ಯ ಸಾಕಷ್ಟು ಬ್ಯೂಸಿ ಆಗಿರುವ ಸತ್ಯ, ಚಿತ್ರಕ್ಕೆ ಒಪ್ಪಿಕೊಂಡ ನಂತರ ಮೊದಲು ಕಲಿತ ತುಳು ಶಬ್ದ ‘ಮಲ್ಪುಗಾ ಎಡ್ಡ ಮಲ್ಪುಗಾ’ (ಮಾಡೋಣ ಚೆನ್ನಾಗಿ ಮಾಡೋಣ).

ವಿನು ಬಳಂಜ, ಚೇತನಾ ತೀರ್ಥಹಳ್ಳಿ, ದಿಲಾವರ್ ರಾಮದುರ್ಗ, ದಯಾನಂದ ಕತ್ತಲ್‌ಸಾರ್ ಕಥಾ ವಿಸ್ತರಣೆ ತಂಡದಲ್ಲಿದ್ದರೆ, ಜೋಗಿ ಸಂಭಾಷಣೆ ಬರೆದಿದ್ದಾರೆ. ಆಳವಾದ ಕಥಾವಸ್ತುವಿರುವ ಇದೊಂದು ತುಳು ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನ ಎನ್ನುತ್ತಾರೆ ವಿನು ಬಳಂಜ.

ಚಿತ್ರಕ್ಕೆ ವಿ.ಮನೋಹರ್ ಸಂಗೀತ ನಿರ್ದೇಶನ ಮಾಡಿದ್ದು ಮೊದಲ ಬಾರಿ ‘ಪಾಡ್ದನ’ ಶೈಲಿಯಲ್ಲಿ ಸಂಗೀತ ಸಂಯೋಜಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ಅವರಲ್ಲಿ ಸಂಭ್ರಮವಿದೆ. ಇದೇ ಶೈಲಿಯಲ್ಲಿ ಮೂವತ್ತು ಚಿಕ್ಕ ಚಿಕ್ಕ ತುಣುಕುಗಳಿಗೆ ಮಟ್ಟು ಹಾಕಿದ್ದಾರಂತೆ ಮನೋಹರ್. ಆಗಸ್ಟ್ ಐದರಿಂದ ಚಿತ್ರೀಕರಣ ಆರಂಭವಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.