ADVERTISEMENT

ಶ್ರಾವ್ಯ ನಾಯಕಾರಾಧನೆ!

ವಿಶಾಖ ಎನ್.
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
‘ಭರತ್ ಅನೆ ನೇನು’ ಚಿತ್ರದಲ್ಲಿ ಮಹೇಶ್ ಬಾಬು
‘ಭರತ್ ಅನೆ ನೇನು’ ಚಿತ್ರದಲ್ಲಿ ಮಹೇಶ್ ಬಾಬು   

ವಿದೇಶದಲ್ಲಿ ಓದು ಪೂರೈಸಿ ಬರುವ ನಾಯಕ ದಿಢೀರನೆ ಮುಖ್ಯಮಂತ್ರಿ ಆಗಿಬಿಡುತ್ತಾನೆ. ಅವನು ಸ್ಫುರದ್ರೂಪಿ. ಅವಿವಾಹಿತ. ನಡೆ ನೇರ. ಟ್ರಾಫಿಕ್ ಸಮಸ್ಯೆಗೆ ದೊಡ್ಡ ಮೊತ್ತದ ಜುಲ್ಮಾನೆ ವಿಧಿಸಿ ಜನರ ಅಂತರಂಗ ಶುದ್ಧಿಯ ಮಂತ್ರ ಪಾಡುವವ. ಜನರ ಬೇಡಿಕೆಗೆ ತಕ್ಕಂತೆ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್‌ ಮಾಧ್ಯಮದ ಕಲಿಕೆಗೆ ಒತ್ತುನೀಡುವ ಪ್ರಾಯೋಗಿಕ ಯೋಜನೆಯನ್ನೂ ಕ್ಷಣಮಾತ್ರದಲ್ಲಿ ಶುರುಮಾಡಬಲ್ಲವ. ಗ್ರಾಮ ಪಂಚಾಯ್ತಿಗಳ ಬಲವರ್ಧನೆ ಕೂಡ ಚಿಟಿಕೆ ಹೊಡೆದಷ್ಟು ಸುಲಭವಾಗಿಸಬಲ್ಲ ಚಾಣಾಕ್ಷ. ಕೆಲಸದಲ್ಲಿ ಶ್ರದ್ಧೆ. ಕಚೇರಿಗೆ ಹೋಗುವುದರಲ್ಲಂತೂ ಬಲು ಶಿಸ್ತು. ಇಡೀ ಅಧಿಕಾರಶಾಹಿ, ಮಂತ್ರಿಮಂಡಲ, ವಿರೋಧ ಪಕ್ಷ ಎಲ್ಲ ಒತ್ತಡಗಳನ್ನು ‘ಸ್ಕಿನ್ ಟೈಟ್ ಫಾರ್ಮಲ್ ಬಟ್ಟೆ’ ತೊಟ್ಟೇ ಸದಾ ಎದುರಿಸುವಷ್ಟು ಎದೆಗಾರಿಕೆ. ಬಸ್ ತಂಗುದಾಣದಲ್ಲಿ ನಿಂತ ಸಹಜ ಸುಂದರಿಯ ಮೊದಲ ನೋಟದ ಪ್ರೇಮಿ. ಆ ಪ್ರೀತಿಯನ್ನು ರಾಜಕಾರಣಕ್ಕೆ ಎಳೆತಂದಾಗಲೂ ಸೆಟೆದು ನಿಂತು ಉತ್ತರ ಕೊಡಬಲ್ಲ ದಿಟ್ಟ.

ಹೀಗೆ ನಾಟಕೀಯ ಅಂಶಗಳಿರುವ ಕಥೆಯನ್ನು ಜನಪ್ರಿಯ ಸೂತ್ರದಲ್ಲಿ ಕಟ್ಟಿದ್ದಾರೆ ನಿರ್ದೇಶಕ ಕೊರಟಾಲ ಶಿವ. ವ್ಯವಸ್ಥೆ ಬದಲಿಸಬೇಕೆಂಬ ಮಧ್ಯಮವರ್ಗದ ಜನರ ಮಹಾಕನಸಿನ ಬೀಜಗಳನ್ನು ನೆಲದ ಮೇಲೆ ಚೆಲ್ಲಿ, ಚಿತ್ರಕಥೆಯ ಫಸಲು ತೆಗೆದ ಕೆಲವು ನಿರ್ದೇಶಕರು ನಮ್ಮ ನಡುವೆ ಇದ್ದಾರೆ. ತಮಿಳು ನಿರ್ದೇಶಕ ಶಂಕರ್ ಆ ಸಾಲಿನಲ್ಲಿ ಮೊದಲು ನಿಲ್ಲುತ್ತಾರೆ. ಅವರಷ್ಟಲ್ಲದಿದ್ದರೂ ದೊಡ್ಡದಾಗಿ ಯೋಚಿಸುವ ಉಮೇದು ಇರುವ ನಿರ್ದೇಶಕ ಕೊರಟಾಲ. ಈ ಸಿನಿಮಾ ‘ಮುದಲ್‌ವನ್’ ಚಿತ್ರದ ಆತ್ಮವನ್ನು ನೆನಪಿಸುತ್ತದೆ. ಆದರೂ ಜಾಡಿನಿಂದ ಹೊರತೇ ಆದ ಶಿಲ್ಪವೊಂದು ಕಾಣುತ್ತದೆ.

ನಾಯಕ ಮಹೇಶ್ ಬಾಬು ಒಬ್ಬರನ್ನೇ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿರುವ ಚಿತ್ರಕಥೆಯಲ್ಲಿ ಹದವರಿತ ಬಿಲ್ಡಪ್ ಇದೆ. ಬೋರ್ ಹೊಡೆಸದಂಥ ಭಾಷಣಗಳಿವೆ. ದೃಶ್ಯದಲ್ಲಿ ವೇಗ ಕಡಿಮೆ ಆಗುತ್ತಿದೆಯೇನೋ ಅನಿಸುವಷ್ಟರಲ್ಲಿ ಹಿಡಿದು ಕೂರಿಸುವ ಹಿನ್ನೆಲೆ ಸಂಗೀತದ ಓಘ, ಕ್ಯಾಮೆರಾ ಚಲನೆಗಳ ಚಾಕಚಕ್ಯತೆ. ರವಿ ಕೆ. ಚಂದ್ರನ್ ತಿರು ಕ್ಯಾಮೆರಾ ಅವರ ಹೆಸರಿನಂತೆಯೇ ಅಗತ್ಯ ಇರುವ ಕಡೆ ತಿರುಗಾಡಿದೆ. ಮಹೇಶ್ ಬಾಬು ಚುರುಕುಕಣ್ಣುಗಳ ಮೇಲೆ ಪದೇ ಪದೇ ನೆಲೆಗೊಳ್ಳುವ ಅದರ ಉದ್ದೇಶವೂ ನಾಯಕನಿಗೆ ‘ಉಘೇ ಉಘೇ’ ಹೇಳುವುದೇ ಆಗಿದೆ.

ADVERTISEMENT

ಚಕಚಕನೆ ಸಾಗುವ ಸಿನಿಮಾ ಕಣ್ಣೆವೆಯಿಕ್ಕದಂತೆ ನೋಡಿಸಿಕೊಳ್ಳುವುದು ಮಹೇಶ್ ಬಾಬು ನಡೆ, ನಿಲುವು, ನೋಟದಿಂದ. ಸ್ನಿಗ್ಧ ಸೌಂದರ್ಯದ ನಾಯಕಿ ಕೈರಾ ಅಡ್ವಾಣಿಗೆ ಹಾಡುಗಳಲ್ಲಷ್ಟೇ ಹೆಚ್ಚು ಕೆಲಸ. ದೇವಿಶ್ರೀ ಪ್ರಸಾದ್ ಸಂಗೀತದಲ್ಲಿರುವುದು ಶ್ರಾವ್ಯ ನಾಯಕಾರಾಧನೆ. ಪ್ರಕಾಶ್ ರಾಜ್, ರವಿಶಂಕರ್ ತರಹದ ಮಾಗಿದ ನಟರ ಇರುವಿಕೆಯನ್ನೂ ತಗ್ಗಿಸಿ, ನಾಯಕನನ್ನು ಮೆರೆಸಿರುವ ನೂರಾಎಪ್ಪತ್ತಮೂರು ನಿಮಿಷಗಳ ಸಿನಿಮಾದಲ್ಲಿ ಅಪ್ಪಟ ತೆಲುಗು ಸೂತ್ರಕ್ಕೆ ಜೈ ಎನ್ನಬೇಕು; ಅದರಲ್ಲಿನ ತಲೆಮೇಲೆ ಹೊಡೆದಂತೆ ಕೇಳುವ ಸಂಭಾಷಣೆಗೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.