ADVERTISEMENT

ಸನ್ನಿ ಈ ಬಾರಿ ‘ಸೇಸಮ್ಮ’

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST
ಸನ್ನಿ ಲಿಯಾನ್‌
ಸನ್ನಿ ಲಿಯಾನ್‌   

ಪ್ರಚಾರ ತಂತ್ರಗಳಲ್ಲಿ ಸದಾ ಮುಂದಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್. ಈ ಬಾರಿ ತಮ್ಮ ನಿರ್ದೇಶನದ ‘ಲವ್ ಯೂ ಆಲಿಯ’ ಚಿತ್ರಕ್ಕೆ ಬಾಲಿವುಡ್ ನಟಿ ಸನ್ನಿ ಲಿಯಾನ್‌ರನ್ನು ಕುಣಿಸುವ ಮೂಲಕ ಮತ್ತೊಂದು ಹಂತದ ಪ್ರಚಾರ ಕೈಗೊಂಡಿದ್ದಾರೆ. ಇಂದ್ರಜಿತ್ ಸಿನಿಮಾಕ್ಕಾಗಿ ಸನ್ನಿ ಬರ್ತಾರೆ ಅನ್ನುವುದು ನಿಮಗೂ ಗೊತ್ತು. ಆದರೆ ಈಗಾಗಲೇ ಸನ್ನಿ ಬೆಂಗಳೂರಿಗೆ ಬಂದು ಸೊಂಟ ಬಳುಕಿಸಿ ಹೋಗಿಯಾಗಿದೆ. ಚಿಕ್ಕ ಪಾತ್ರವನ್ನೂ ಅವರು ನಿರ್ವಹಿಸಿದ್ದಾರೆ.

ಕಳೆದ ವಾರ ನಾಲ್ಕು ದಿನಗಳ ಕಾಲ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸನ್ನಿ ಮತ್ತು ಸೃಜನ್ ಲೋಕೇಶ್ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಇದೊಂದು ಹಾಡಿನ ಚಿತ್ರೀಕರಣ ಪೂರ್ಣವಾದರೆ ಕುಂಬಳಕಾಯಿ ಹೊಡೆಯುವುದೇ ಎಂಬುದು ಇಂದ್ರಜಿತ್ ಮಾತು. ಜೊತೆಗೆ ‘ಸೃಜನ್ ಇದ್ದ ಕಾರಣ ಈ ಹಾಡಿಗೆ ಮತ್ತಷ್ಟು ಮೌಲ್ಯ ಬಂದಿದ್ದು’ ಎಂದು ಸ್ನೇಹಿತ ಸೃಜನ್ ಬೆನ್ನುತಟ್ಟುವುದನ್ನೂ ಅವರು ಮರೆಯುವುದಿಲ್ಲ. ತಮ್ಮ ಜೀವನದ ಉತ್ತಮ ಚಿತ್ರಗಳ ಸಾಲಲ್ಲಿ ‘ಲವ್ ಯೂ ಆಲಿಯ’ ಕೂಡ ಆಗುತ್ತದೆ ಎಂಬುದು ಅವರ ಭರವಸೆ.

ಕಳೆದ ಬಾರಿ ‘ಡಿಕೆ’ ಚಿತ್ರಕ್ಕೆ ‘ಸೇಸಮ್ಮಾ ಸೇಸಮ್ಮಾ’ ಹಾಡಿಗೆ ಹೆಜ್ಜೆ ಹಾಕಿದ್ದ ಸನ್ನಿ ಈ ಬಾರಿ ‘ಕಾಮಾಕ್ಷಿ ಕಾಮಾಕ್ಷಿ’ ಹಾಡಿಗೆ ಸೃಜನ್ ಜತೆ ಸೊಂಟ ಬಳುಕಿಸಿದ್ದಾರೆ. ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದ ಸೃಜನ್ ಗೆಲುವಿನಲ್ಲಿದ್ದಂತೆ ಕಂಡರೂ ಸನ್ನಿ ಮಾತ್ರ ಕುಣಿದು ಸುಸ್ತಾದವರಂತೆ ಕಾಣುತ್ತಿದ್ದರು. ಅದಕ್ಕೇ ಇರಬಹುದೇನೋ, ಅವರ ಮಾತು ಕೂಡ ಚುಟುಕಾಗಿಯೇ ಇತ್ತು. ‘ಈ ನಾಲ್ಕು ದಿನಗಳು ತುಂಬಾ ಸ್ಪೆಷಲ್ ಆಗಿದ್ದವು’ ಎಂದ ಅವರು, ಸೃಜನ್ ಹೇಳಿಕೊಟ್ಟ ‘ನಾನು ಸನ್ನಿ ಲಿಯೋನ್, ಎಲ್ರಿಗೂ ನಮಸ್ಕಾರ’ ಎಂದಷ್ಟೇ ಹೇಳಿ ಮೈಕ್ ಹಸ್ತಾಂತರಿಸಿದರು. ಸನ್ನಿ ವರಸೆ ನೋಡಲು ಬಂದವರಿಗೆ ನಿರಾಸೆಯಾಗಿತ್ತು.

ಹೊಸ ಕೇಶ ವಿನ್ಯಾಸದಲ್ಲಿ ಮಿಂಚುತ್ತಿದ್ದ ಸೃಜನ್, ಸನ್ನಿಯನ್ನು ಕೊಂಡಾಡಿದರು. ‘ಹಾಡಿನ ಸಾಹಿತ್ಯ ಸರಳ ಮತ್ತು ಕ್ಯಾಚಿ ಆಗಿದ್ದು ಎಲ್ಲರ ಬಾಯಲ್ಲೂ ನಲಿದಾಡಲಿದೆ’ ಎನ್ನುತ್ತಾರೆ ಸೃಜನ್. ಈ ಹಾಡಿಗೆ ಪ್ರದೀಪ್ ಅವರ ನೃತ್ಯ ನಿರ್ದೇಶನವಿದ್ದು, ಸಂತೋಷ್‌ರೈ ಪಾತಾಜೆ ಛಾಯಾಗ್ರಹಣ ಮತ್ತು ಮೋಹನ್ ಕಲಾ ನಿರ್ದೇಶನವಿದೆ. ನಿರ್ಮಾಪಕ ಸ್ಯಾಮಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.