ADVERTISEMENT

ಸೊಸೆಯೊಬ್ಬಳು, ಆರು ಅತ್ತೆಯರು!

ಪದ್ಮನಾಭ ಭಟ್ಟ‌
Published 18 ಸೆಪ್ಟೆಂಬರ್ 2014, 19:30 IST
Last Updated 18 ಸೆಪ್ಟೆಂಬರ್ 2014, 19:30 IST

‘‘ಕಳೆದ ನಾಲ್ಕು ತಿಂಗಳಿಂದ ಹೊಸ ಹುಡುಗರ ತಂಡ ಕಟ್ಟಿಕೊಂಡು ಜೀ  ಕನ್ನಡವನ್ನು ಮತ್ತೆ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದೇವೆ. ಇದರ ಅಂಗವಾಗಿ ‘ವೀಕೆಂಡ್‌ ವಿತ್‌ ರಮೇಶ್‌’ ಸೇರಿದಂತೆ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಆರಂಭಿಸಿದ್ದೇವೆ’ –ಹೀಗೆಂದು ಘೋಷಿಸಿದವರು ಜೀ ಕನ್ನಡ ಪ್ರೊಗ್ರಾಮಿಂಗ್‌ ಹೆಡ್‌ ರಾಘವೇಂದ್ರ ಹುಣಸೂರು.

ಅದು ಜೀ ಕನ್ನಡ ವಾಹಿನಿಯಲ್ಲಿ ಇದೇ 22ರಿಂದ ಆರಂಭವಾಗುತ್ತಿರುವ ಹೊಸ ಧಾರಾವಾಹಿ ‘ಶ್ರೀರಸ್ತು ಶುಭಮಸ್ತು’ ಪತ್ರಿಕಾಗೋಷ್ಠಿ. ಬೆಂಗಳೂರಿನ ಏಟ್ರಿಯಾ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಈ ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ಅವರು ಜೀ ಕನ್ನಡ ತನ್ನ ರೂಪು ರೇಷೆಗಳನ್ನು ಬದಲಿಸಿಕೊಳ್ಳುತ್ತಿರುವ ಬಗ್ಗೆ ಸೂಚನೆ ನೀಡಿದರು.

‘ಶ್ರೀರಸ್ತು ಶುಭಮಸ್ತು ಕೂಡ ಈ ಬದಲಾವಣೆಯ ಅಂಗವಾಗಿದ್ದು, ನಾವು ಯೋಜಿಸಿರುವ ಹೊಸ ಕತೆ–ಹೊಸ ಥರದ ನಿರೂಪಣೆ ಈ ಧಾರಾವಾಹಿಯ ಮೂಲಕ ಆರಂಭವಾಗುತ್ತಿದೆ’ ಎಂದು ವಿವರಣೆ ನೀಡಿದರು. ‘‘ಈ ಧಾರಾವಾಹಿಗೆ ಅಡಿಬರಹವಿಲ್ಲ. ಬದಲಿಗೆ ‘ಆರು ಅತ್ತೆಯಂದಿರು ಅರ್ಪಿಸುವ’ ಎಂಬ ತಲೆಬರಹ ಕೊಟ್ಟಿದ್ದೇವೆ. ಇದು ಮತ್ತೊಂದು ಅತ್ತೆ ಸೊಸೆ ಕತೆಯೇ. ಆದರೆ ಟಿಪಿಕಲ್‌ ಅತ್ತೆ ಸೊಸೆಯ ಜಗಳ ಇಲ್ಲಿಲ್ಲ. ಆರು ಜನ ಅತ್ತೆ ಮತ್ತು ಒಬ್ಬಳು ಸೊಸೆ ಇರುತ್ತಾರೆ’ ಎಂದು ಕತೆಯ ಎಳೆಯನ್ನು ಬಿಚ್ಚಿಟ್ಟರು.

ಜೀ ಮರಾಠಿ ತಂಡದ ಕತೆಯ ನಿರ್ಮಾಣ ಮತ್ತು ನಿರ್ದೇಶನದ ಹೊಣೆಗಾರಿಕೆಯನ್ನು ಶ್ರುತಿ ನಾಯ್ಡು ನಿರ್ವಹಿಸುತ್ತಿದ್ದಾರೆ.

ಧಾರಾವಾಹಿಯ ಬಗ್ಗೆ ಮಾತನಾಡಿದ ಅವರು– ‘ಸಾಮಾನ್ಯವಾಗಿ ಧಾರಾವಾಹಿ ಅಂದಾಕ್ಷಣ ಅದು ಹೆಂಗಸರು ನೋಡುವುದು ಎಂಬ ಭಾವನೆ ನಮ್ಮಲ್ಲಿದೆ. ಆದರೆ ಶ್ರೀರಸ್ತು ಶುಭಮಸ್ತು ಹಾಗಲ್ಲ. ಇದು ಹೆಂಗಸರಿಗಿಂತ ಗಂಡಸರೇ ನೋಡಬೇಕಾದ ಧಾರಾವಾಹಿ. ಇದೇ ಈ ಧಾರಾವಾಹಿಯ ವೈಶಿಷ್ಟ್ಯ’ ಎಂದರು.

ನವೀನ್‌ ಮಹಾದೇವ್‌ ಅವರು ನಾಯಕನಾಗಿರುವ ಈ ಧಾರಾವಾಹಿಯಲ್ಲಿ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ವೇತಾ ಆರ್‌. ಪ್ರಸಾದ್‌ ನಾಯಕಿ.  ‘ನಾಯಕಿಯ ಆಯ್ಕೆಗಾಗಿ ಸುಮಾರು 300 ಹುಡುಗಿಯರನ್ನು ಸಂದರ್ಶಿಸಿ ನಂತರ ಶ್ವೇತಾ ಅವರನ್ನು ಆಯ್ಕೆ ಮಾಡಿದ್ದೇವೆ. ಅವರಲ್ಲಿರುವ ಆತ್ಮವಿಶ್ವಾಸ ನನ್ನನ್ನು ಸೆಳೆಯಿತು. ಇದು ಮೊದಲ ಪಾತ್ರ ಎಂಬುದು ಗಮನಕ್ಕೇ ಬರದಂತೆ ಅವರು ನಟಿಸಿದ್ದಾರೆ’ ಎಂದು ಶ್ರುತಿ ಹೊಗಳಿದರು.

‘ಕಾಮಿನೀಧರನ್‌, ಮಾಲತಿ ಸರದೇಶಪಾಂಡೆ, ಸುಧಾ ಬೆಳವಾಡಿ, ಹೊನ್ನವಳ್ಳಿ ಕೃಷ್ಣ, ಯಶವಂತ ಸರದೇಶಪಾಂಡೆ, ಶೋಭಾ ರಾಘವೇಂದ್ರ, ಸುದೇಶ್‌ ರಾವ್‌ ಹೀಗೆ ಈ ಧಾರಾವಾಹಿಯಲ್ಲಿ ಹಿರಿಯ ಕಲಾವಿದರ ದಂಡೇ ಇದೆ. ಅಲ್ಲದೇ ಹರಿಕೃಷ್ಣ ಅವರು ಮೊದಲ ಬಾರಿಗೆ ಕಿರುತೆರೆ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಸಂಗೀತದ ಮಟ್ಟು ಹಾಕಿದ್ದಾರೆ. ಧಾರಾವಾಹಿ ಈಗಾಗಲೇ ಜನರ ಗಮನ ಸೆಳೆದಿದ್ದು ಗೆಲ್ಲುವ ನಂಬಿಕೆ ಬಂದಿದೆ’ ಎಂದರು.

‘ನಮ್ಮ ವಾಹಿನಿಗೆ ಈ ಧಾರಾವಾಹಿ ಹೊಸ ಬಣ್ಣ–ರುಚಿ ತುಂಬಲಿದೆ. ಇಂದಿನ ದಿನ ಬರುತ್ತಿರುವ ಎಲ್ಲ ಧಾರಾವಾಹಿಳಿಗಿಂತ ಶ್ರೀರಸ್ತು ಶುಭಮಸ್ತುವಿನ ಕತೆ ತುಂಬಾ ಭಿನ್ನವಾಗಿದೆ. ಎಲ್ಲಾ ವಯೋಮಾನದ ನೋಡುಗರನ್ನು ತಲುಪುವ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು ಜೀ ಕನ್ನಡ ವಾಹಿನಿಯ ಬ್ಯುಸಿನೆಸ್‌ ಹೆಡ್‌ ಸಿಜು ಪ್ರಭಾಕರನ್‌. ಅಂದ ಹಾಗೆ ಸೆಪ್ಟೆಂಬರ್‌ 22ರಿಂದ ಸೋಮವಾರದಿಂದ ಶನಿವಾರದ ವರೆಗೆ ಸಂಜೆ 7 ಗಂಟೆಗೆ ಶ್ರೀರಸ್ತು ಶುಭಮಸ್ತು ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT