ADVERTISEMENT

ಹಾರರ್‌ ಮತ್ತು ಥ್ರಿಲ್ಲರ್ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಹಾರರ್‌ ಮತ್ತು ಥ್ರಿಲ್ಲರ್ ಸಮ್ಮಿಲನ
ಹಾರರ್‌ ಮತ್ತು ಥ್ರಿಲ್ಲರ್ ಸಮ್ಮಿಲನ   

‘ಹಾರರ್‌ ಮತ್ತು ಥ್ರಿಲ್ಲರ್‌ ಎರಡೂ ಪ್ರಕಾರಗಳನ್ನೂ ಕಸಿ ಮಾಡಿ ‘ಅನ್ವೇಷಿ’ ಸಿನಿಮಾ ಮಾಡಿದ್ದೇವೆ’ ಎಂದರು ನಿರ್ದೇಶಕ ವೇಮಗಲ್‌ ಜಗನ್ನಾಥರಾವ್‌. ‘ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬ ಸಿಕ್ಸ್ತ್‌ ಸೆನ್ಸ್‌ ಬಗ್ಗೆ ಲೇಖನ ಬರೆಯುವ ಸಂದರ್ಭದಲ್ಲಿ ಅವನಿಗೆ ಕೆಲವು ಅತಿಮಾನುಷ ಅನುಭವಗಳು ಆಗುತ್ತವೆ. ಆ ಅನುಭವಗಳು ಈ ಸಿನಿಮಾದ ಕಥೆಯನ್ನು ಬೆಳೆಸುತ್ತದೆ’ ಎಂದ ಅವರು ಅದಕ್ಕಿಂತ ಒಂಚೂರು ಸುಳಿವನ್ನೂ ಬಿಟ್ಟುಕೊಡಲಿಲ್ಲ. ಈ ಚಿತ್ರಕ್ಕೆ ‘ಕಣ್ಣಾ ಮುಚ್ಚೆ ಕಾಡೇ ಗೂಡೇ..’ ಎಂಬ ಅಡಿಬರಹವೂ ಇದೆ.

ಚಿತ್ರದ ಸಿ.ಡಿ. ಬಿಡುಗಡೆ ಮಾಡಲು ಕಿರಿಕ್‌ ಕೀರ್ತಿ ಹಾಜರಿದ್ದರು. ತಂಡಕ್ಕೆ ಶುಭ ಹಾರೈಸುವುದಕ್ಕಿಂತ ಹೆಚ್ಚೇನೂ ಅವರು ಹೇಳಲಿಲ್ಲ. ಚಿತ್ರದ ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದ ಹೇಮಂತ್‌ ಸಹ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಕಾರ್ಯಕ್ರಮಕ್ಕೂ ಮುನ್ನ ಚಿತ್ರದ ಎರಡು ಹಾಡುಗಳು ಮತ್ತು ಟ್ರೇಲರ್‌ ತೋರಿಸಲಾಯಿತು.

ನಂತರ ಮಾತಿಗೆ ನಿಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ ಅವರು ವಿಶ್ಲೇಷಣೆಯ ಮೂಡಿನಲ್ಲಿದ್ದರು.

ADVERTISEMENT

‘ಯಾವುದೇ ನಿರ್ಮಾಪಕ ಒಂದು ಚಿತ್ರಕ್ಕೆ ಹಣ ಹೂಡುವಾಗ ತನ್ನ ಹಣ ವಾಪಸ್ಸು ಬರುತ್ತದೆ ಎಂಬ ನಂಬಿಕೆಯಲ್ಲಿರುತ್ತಾನೆ. ಆದರೆ ಇಂದಿನ ಕೆಲವು ನಿರ್ದೇಶಕರು ಹಣ ಬರುವುದಿಲ್ಲ ಎಂಬುದು ನನಗೆ ತಿಳಿದಿದೆ ಎಂದೂ ಹೇಳಿಯೇ ಸಿನಿಮಾ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಹಾಗೆಯೇ ಇಂದಿನ ಚಿತ್ರಕರ್ಮಿಗಳಲ್ಲಿ ಅವಸರದ ಕೆಲಸಗಾರರೇ ಹೆಚ್ಚು. ಯಾವುದನ್ನೂ ಯೋಜಿಸಿಕೊಂಡು ಮಾಡುವುದಿಲ್ಲ. ಸೆಟ್‌ನಲ್ಲಿ ಕೂತು ಡೈಲಾಗ್‌ ಬರೆಯುತ್ತಾರೆ’ ಎಂದರು. ‘ಟೈಟಲ್‌ ಚೆನ್ನಾಗಿದ್ದರೆ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ಇಂದಿನ ಹಲವು ಸಿನಿಮಾಗಳು ಕೆಟ್ಟ ಟೈಟಲ್‌ ಕಾರಣದಿಂದಲೇ ಸೋತಿವೆ’ ಎಂದ ಅವರು ‘ಮಾರ್ಚ್‌ 22’ ಸಿನಿಮಾದ ಉದಾಹರಣೆಯನ್ನೂ ನೀಡಿದರು.

ಮಂಗಳೂರು, ಕಾರವಾರ, ಹೊನ್ನಾವರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮುಖ್ಯ ಪಾತ್ರಗಳಲ್ಲಿ ತಿಲಕ್ ಮತ್ತು ರಘು ಭಟ್‌ ನಟಿಸಿದ್ದಾರೆ. ಆದರೆ ಅವರ ಪಾತ್ರದ ಕುರಿತೂ ಚಿತ್ರತಂಡದಿಂದ ಹೆಚ್ಚಿನ ಮಾಹಿತಿ ಸಿಗಲಿಲ್ಲ.

ಅನು ಅಗರ್‌ವಾಲ್‌ ಮತ್ತು ರಮ್ಯಾ ಬಾರ್ನಾ ಚಿತ್ರದ ನಾಯಕಿಯರಾಗಿ ನಟಿಸಿದ್ದಾರೆ. ದಿಶಾ ಪೂವಯ್ಯ ಈ ತ್ರಿಕೋನ ಪ್ರೇಮಕಥೆಯಲ್ಲಿ ಒಂದು ಕುತೂಹಲಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.