ADVERTISEMENT

ಹೊಸ ಹುಡುಗರ ಕನಸಿನ ‘ಹೊಂಬಣ್ಣ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2016, 19:30 IST
Last Updated 20 ಅಕ್ಟೋಬರ್ 2016, 19:30 IST
ರಕ್ಷಿತ್‌ ತೀರ್ಥಹಳ್ಳಿ
ರಕ್ಷಿತ್‌ ತೀರ್ಥಹಳ್ಳಿ   

ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೊ ಅಂಗಳಕ್ಕೆ ಅಂದಿನ ಬೆಳಗು ಹೊಸ ಕಳೆಯೊಂದನ್ನು ತಂದಿತ್ತು. ಬಿಳಿ ಪಂಚೆ, ಮೇಲೆ ತಿಳಿಹಳದಿ ಅಂಗಿ, ತಲೆಯ ಮೇಲೆ ಅಡಕೆ ಹಾಳೆಕೊಟ್ಟೆಯ ಟೋಪಿ ಧರಿಸಿದ ಒಂದಿಷ್ಟು ಯುವಕರು ಅತ್ತಿಂದಿತ್ತ ಓಡಾಡುತ್ತ ಸಂಭ್ರಮಿಸುತ್ತಿದ್ದರು.

ಅವರ ಚಿಗುರು ಮೀಸೆ, ಕುರುಚಲು ಗಡ್ಡ ಎಳೆಬಿಸಿಲಿಗೆ ಹೊಳೆಯುತ್ತಿತ್ತು. ಮಲೆನಾಡ ಶೈಲಿಯಲ್ಲಿ ಸೆರಗನ್ನು ಅಡ್ಡಕಟ್ಟಿಕೊಂಡ ಒಂದಿಬ್ಬರು ಹುಡುಗಿಯರೂ ಆ ಗುಂಪಿನ ಮಧ್ಯ ಎದ್ದು ಕಾಣುತ್ತಿದ್ದರು. ಅವರೆಲ್ಲರ ಕಣ್ಣಿನಲ್ಲಿಯೂ  ‘ಹೊಂಬಣ್ಣ’ ಮಿನುಗುತ್ತಿತ್ತು.

ಅದು ರಕ್ಷಿತ್‌ ತೀರ್ಥಹಳ್ಳಿ ನಿರ್ದೇಶನದ ‘ಹೊಂಬಣ್ಣ’ ಸಿನಿಮಾದ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ. ಪಂಚೆ ತೊಟ್ಟ ಹುಡುಗರ ನೇಟಿವಿಟಿಯನ್ನು ನೋಡುತ್ತಲೇ ಒಂದೂಕಾಲು ತಾಸು ಕಾದು ಕಾದು ಕಣ್ಣಲ್ಲಿ ಅಸಹನೆಯ ಕೆಂಬಣ್ಣ ಮೂಡುವ ಹೊತ್ತಿಗೆ ಕಾರ್ಯಕ್ರಮ ಆರಂಭವಾಯಿತು.

ಆರಂಭದಲ್ಲಿ ‘ಘಟ್ಟದಾ ಮೇಲೇರಿ..’ ಎಂಬ ಹಾಡಿನ ವಿಡಿಯೊ ತೋರಿಸಲಾಯಿತು. ಮಲೆನಾಡ ಹಸಿರಸೆರಗು ಹೊದ್ದ ಗುಡ್ಡದ ಸಾಲುಗಳು, ನಡುವೆ ಹೆಬ್ಬಾವಿನಂತೆ ಹರಿದ ಡಾಂಬರು ರಸ್ತೆಯ ವೈಮಾನಿಕ ನೋಟಗಳ ದೃಶ್ಯ ವೈಭವ ಮತ್ತು ಜೋಗಿ ಸುನಿತಾ ಅವರ ಶಾರೀರ ಶ್ರೀಮಂತಿಕೆಯಿಂದ ಹಾಡು ಗಮನ ಸೆಳೆಯಿತು.

ಚಿತ್ರದಲ್ಲಿರುವ ಏಳು ಹಾಡುಗಳಿಗೆ ವಿನು ಮನಸು ಸಂಗೀತ ಹೊಸೆದಿದ್ದಾರೆ. ಆರು ಹಾಡುಗಳಿಗೆ ನಿರ್ದೇಶಕ ರಕ್ಷಿತ್‌ ತೀರ್ಥಹಳ್ಳಿ ಅವರೇ ಸಾಹಿತ್ಯ ಬರೆದಿದ್ದರೆ, ‘ಫೇಸ್‌ಬುಕ್‌’ನ ಆರು ಜನಪ್ರಿಯ ಕವಿಗಳನ್ನು ಸೇರಿಸಿ ಇನ್ನೊಂದು ಪದ್ಯ ಬರೆಸುವ ವಿಭಿನ್ನ ಪ್ರಯತ್ನವನ್ನೂ ಮಾಡಿದ್ದಾರೆ.

ಮಾತಿಗೆ ನಿಂತ ರಕ್ಷಿತ್‌ ಅವರ ಮಾತಿನಲ್ಲಿ ಎದೆಯ ಮೇಲೆ ಹೊತ್ತುಕೊಂಡಿದ್ದ ಕೂಸನ್ನು ಈಗಷ್ಟೇ ಇಳಿಸಿದ ಹಗುರ ಭಾವವಿತ್ತು. ‘ಹೊಂಬಣ್ಣ ಸಿನಿಮಾ ನಮ್ಮೆಲ್ಲರ ಕನಸು. ಈ ಕನಸಿಗಾಗಿ ಸಾಕಷ್ಟು ಕಷ್ಟಪಟ್ಟಿದ್ದೀವಿ. ಹಲವಾರು ಏರಿಳಿತಗಳನ್ನು ಕಂಡಿದ್ದೇವೆ. ಆದರೆ ನಾವೇ ಇಷ್ಟಪಟ್ಟುಕೊಂಡು ಮಾಡಿದ ಕೆಲಸವಾಗಿದ್ದರಿಂದ ಅವ್ಯಾವವೂ ಕಷ್ಟ ಎಂದು ನಮಗೆ ಅನಿಸಲೇ ಇಲ್ಲ’ ಎಂದರು.

ಶಿವಮೊಗ್ಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಅರಣ್ಯ ಒತ್ತುವರಿಯ ವಾಸ್ತವ ಸಮಸ್ಯೆಗೆ ‘ಹೊಂಬಣ್ಣ’ ಎಂಬ ಹೆಸರಿನಲ್ಲಿ ಸಿನಿಮಾದ ಫ್ರೇಮ್‌ ತೊಡಿಸಿದ್ದಾರೆ ರಕ್ಷಿತ್‌.  ‘ಇದುವರೆಗೆ ಯಾರೂ ಅರಣ್ಯ ಒತ್ತುವರಿ ಸಮಸ್ಯೆಯನ್ನೇ ಪ್ರಧಾನವಾಗಿಸಿಕೊಂಡು ಸಿನಿಮಾ ಮಾಡಿಲ್ಲ’ ಎನ್ನುತ್ತಲೇ ಇದು ಗ್ರಾಮೀಣ ಬದುಕಿನ ರೈತ ಕಥನ ಎಂದು ಎಳೆಯನ್ನು ಬಿಚ್ಚಿಟ್ಟರು.

‘ಭಾರತ ಕೃಷಿ ಪ್ರಧಾನ ದೇಶ. ತನ್ನ ಭೂಮಿಯನ್ನು ರೈತ ಸ್ವಂತ ಮಗುವಿನ ಹಾಗೆ ನೋಡಿಕೊಳ್ಳುತ್ತಾನೆ. ಒಮ್ಮೆಲೆ ಯಾರೋ ಬಂದು ಆ ಭೂಮಿಯ ಮೇಲೆ ನಿನಗೆ ಹಕ್ಕಿಲ್ಲ ಎಂದರೆ ಹೇಗಿರುತ್ತದೆ? ರೈತನ ಅಂಥ ಅತಂತ್ರ ಸ್ಥಿತಿಯನ್ನು ನಮ್ಮ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ಸಿನಿಮಾ ಸುಳಿಯನ್ನು ಬಿಟ್ಟುಕೊಟ್ಟ ಅವರು, ‘ನಾವು ಸಿನಿಮಾದಲ್ಲಿ ರೈತರ ಸಂಘರ್ಷವನ್ನು ತೋರಿಸಿದ್ದೇವೆ.

ಆದರೆ ನಿಜವಾದ ಹೀರೊಗಳು ನಾವಲ್ಲ ಇವರು’ ಎಂದು ವೇದಿಕೆಯ ಮೇಲೆ ಕೂತಿದ್ದ ಎಚ್‌.ಎಸ್‌ ದೊರೈಸ್ವಾಮಿ, ಕಡಿದಾಳ್‌ ಶಾಮಣ್ಣ ಮತ್ತು ಕೋಡಿಹಳ್ಳಿ ಚಂದ್ರಶೇಖರ್‌ ಅವರತ್ತ ಮುಖ ಮಾಡಿದರು.

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸುಬ್ಬು ಮಾತನಾಡಿ, ‘ಈ ಸಿನಿಮಾದಲ್ಲಿ ಮಲೆನಾಡಿನ ರೈತನ ಪರಿಸ್ಥಿತಿಯ ಜತೆಗೆ ಅಲ್ಲಿನ ಸಂಸ್ಕೃತಿ ಮತ್ತು ಪರಿಸರವನ್ನೂ ಸಮೃದ್ಧವಾಗಿ ತೋರಿಸಲಾಗಿದೆ’ ಎಂದರು.

ಇನ್ನೊಬ್ಬ ನಟ ಧನು ಗೌಡ, ಸಿನಿಮಾದ ಡೈಲಾಗ್‌ ಒಂದನ್ನು ಹೇಳಿ ರಂಜಿಸಿದರು. ‘ಹೊಂಬಣ್ಣ’ಕ್ಕೆ ಹಣ ಹೂಡಿದ ರಾಮಕೃಷ್ಣ ನಿಗಡೆ ಹೊಸ ಹುಡುಗರ ಪ್ರಯೋಗವನ್ನು ಶ್ಲಾಘಿಸಿ ಮಾತು ಮುಗಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೈಸ್ವಾಮಿ ‘ಹೊಸ ಪೀಳಿಗೆಯ ಹುಡುಗರು ರೈತರ ಸಮಸ್ಯೆಯ ವಿಷಯ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದು ಶ್ಲಾಘನಾರ್ಹ’ ಎಂದರು.

ಶಾಂತವೇರಿ ಗೋಪಾಲಗೌಡರ ಪ್ರೇರಣೆಯಿಂದ ತಾವು ಕಾಲೇಜು ನೌಕರಿ ಬಿಟ್ಟು ಕೃಷಿ ಕ್ಷೇತ್ರಕ್ಕೆ ಇಳಿದ ದಿನಗಳನ್ನು ನೆನಪಿಸಿಕೊಂಡ ಕಡಿದಾಳ್‌ ಶಾಮಣ್ಣ, ‘ಸಿನಿಮಾ ಮಾಧ್ಯಮದ ಮೂಲಕ ರೈತರ ಸಮಸ್ಯೆ ಬಿಂಬಿತವಾಗಬೇಕು. ನಮ್ಮೂರಿನ ಹುಡುಗರು ಇಂಥ ಪ್ರಯತ್ನಕ್ಕೆ ಕೈಹಾಕಿದ್ದಕ್ಕೆ ಸಂತೋಷವಾಗುತ್ತದೆ’ ಎಂದರು.

ಸಿನಿಮಾದ ಒಂದು ದೃಶ್ಯದಲ್ಲಿ ನಟಿಸಿರುವ ಕೋಡಿಹಳ್ಳಿ ಚಂದ್ರಶೇಖರ್‌ ಕೂಡ ತಂಡಕ್ಕೆ ಶುಭ ಹಾರೈಸಿದರು. ಚಿತ್ರಸಾಹಿತಿ ಕವಿರಾಜ್‌, ನಟ ನೀನಾಸಮ್‌ ಅಶ್ವತ್ಥ್‌ ಉಪಸ್ಥಿತರಿದ್ದರು. ನವೆಂಬರ್‌ ಎರಡನೇ ವಾರದಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಚಿತ್ರತಂಡಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.